ಕರ್ನಾಟಕವನ್ನು ಕಾಡಿಸಿ ಹಾಕಿದ
ಇನ್ನೊಂದು ‘ಅರೆ ಬೆತ್ತಲೆ ಸೇವೆ’
—-
‘Why not in page 1?’
ಬೆಂಗಳೂರಿನಿಂದ ಕರೆ ಮಾಡಿದ ಎಚ್.ಎನ್. ಆನಂದ ನನಗೆ ಈ ಪ್ರಶ್ನೆ ಕೇಳಿದರು.
ಗುಲ್ಬರ್ಗಾ ಬ್ಯೂರೋದಿಂದ ಆ ದಿನ ಒಂದು ಮಣ ನ್ಯೂಸ್ ಗಳನ್ನು ಹೊತ್ತುಹಾಕಿದ್ದೆ. ಹಾಗೆ ಕಳಿಸುವಾಗ ಇಂತಿಂಥ ಪೇಜ್ ಗೆ ಇಂಥದು ಬಂದರೆ ಚೆನ್ನ ಎಂದು ಸಜೆಸ್ಟ್ ಮಾಡುವುದೂ ನನ್ನ ‘ತಲೆ ಹರಟೆ’ಯಾಗಿತ್ತು.
ಹಾಗೆ ನಾನು ಒಳಪುಟಕ್ಕೆ ಬಳಸಿಕೊಳ್ಳಿ ಅಂತ ಸಜೆಸ್ಟ್ ಮಾಡಿದ್ದು ಅರೆಬೆತ್ತಲೆ ಸೇವೆಯ ಫೋಟೋವನ್ನು.
ಆಗಲೇ ಆನಂದ ಅವರು ನನಗೆ ಫೋನಾಯಿಸಿದ್ದು. ‘ಸುಧಾ’ದಲ್ಲಿ ಸಾಕಷ್ಟು ಕಾಲ ಸೇವೆ ಸಲ್ಲಿಸಿದ್ದ ಆನಂದ ಆಗ ‘ಪ್ರಜಾವಾಣಿ’ ಎಡಿಟೋರಿಯಲ್ ಡೆಸ್ಕ್ ಹ್ಯಾಂಡಲ್ ಮಾಡುತ್ತಿದ್ದರು.
‘ಇದು ಖಂಡಿತವಾಗಿಯೂ ಪೇಜ್ ಒನ್ ಫೋಟೋ, ಯಾಕೆ ಒಳಪುಟಕ್ಕೆ ಬಳಸಿ ಎನ್ನುತ್ತೀರಿ’ ಎಂದರು.
ನಾನು ಆ ದಿನದ ಇನ್ನಾವುದೋ ಸುದ್ದಿಯ ಬಾಲ ಹಿಡಿದು ಅದು ‘ಪೇಜ್ ಒನ್’ನಲ್ಲಿ ಬರಬೇಕು ಎಂದು ವಕಾಲತ್ತು ಮಾಡುತ್ತಿದ್ದೆ.
ಆನಂದರ ದನಿ ಹೆಚ್ಚು ದೃಢವಾದಾಗ ‘ಸುಧಾ’ದಲ್ಲಿದ್ದವರಿಗೆ ಏನು ಗೊತ್ತಾಗುತ್ತೆ ನ್ಯೂಸ್ ಇಂಪಾರ್ಟೆನ್ಸ್ ಅಂತ ಸುಮ್ಮನಾದೆ.
ನಾಗೇಶ್ ಪೊಳಲಿ ಕಾಲಲ್ಲಿ ಅದ್ಯಾವ ಮಚ್ಚೆ ಇತ್ತೋ ಗೊತ್ತಿಲ್ಲ. ಇದ್ದ ಅಷ್ಟಗಲದ ಗುಲ್ಬರ್ಗವನ್ನು ಆತ ಗರಗರ ಸುತ್ತುತ್ತಿದ್ದ.
ಹಾಗೆ ಒಮ್ಮೆ ಸೂಪರ್ ಮಾರ್ಕೆಟ್ಟಿನಲ್ಲಿ ಹಾದು ಬರುತ್ತಿರುವಾಗ ಅವನಿಗೆ ಕಂಡದ್ದು ಆ ಅರೆಬೆತ್ತಲೆ ಸೇವೆ ದೃಶ್ಯ.
ಅವರು ಯಾರೂ ಬಡವರಲ್ಲ. ಗೀತಾ ನಾಗಭೂಷಣರ ಕಥೆಗಳಲ್ಲಿ ಮೇಲಿಂದ ಮೇಲೆ ಬರುವ ಮಾಪುರ ತಾಯಿಯ ಮಕ್ಕಳೂ ಅಲ್ಲ.
ಸಾಕಷ್ಟು ಶ್ರೀಮಂತರ ಮನೆಯ ಹಿರಿಯ ಹೆಂಗಸೊಬ್ಬರು ಅರೆಬೆತ್ತಲಾಗಿದ್ದರು.
ಸೊಂಟಕ್ಕೆ ಬೇವಿನ ಸೊಪ್ಪಿನ ರಾಶಿಯನ್ನು ಮರೆಮಾಡಿಕೊಂಡು ಉಧೋ, ಉಧೋ ಹೇಳುತ್ತಾ ಸಾಗಿದ್ದರು. ಅವರ ಸುತ್ತ ಮಹಿಳೆಯರ ದೊಡ್ಡ ಗುಂಪು.
ನಾಗೇಶ್ ಪೊಳಲಿಯ ಕ್ಯಾಮೆರಾ ‘ಕ್ಲಿಕ್’ ಎಂದಿತು.
ಮಾರನೆಯ ದಿನ ‘ಪ್ರಜಾವಾಣಿ’ಯ ಮುಖಪುಟದಲ್ಲಿ ಅರೆ ಬೆತ್ತಲೆ ಫೋಟೋ ರಾರಾಜಿಸುತ್ತಿತ್ತು.
ಇನ್ನೂ ಕಣ್ಬಿಟ್ಟು ಹಾಸಿಗೆಯಿಂದ ಎದ್ದಿರಲಿಲ್ಲ. ಮನೆಯ ಫೋನ್ ಒಂದೇ ಸಮ ಕೂಗತೊಡಗಿತು. ‘ಎಲ್ಲಿ ಆದದ್ದು ಬೆತ್ತಲೆ ಸೇವೆ?’ ಎಂಬ ಪ್ರಶ್ನೆ. ಗುಲ್ಬರ್ಗಾ, ಬೆಂಗಳೂರು ಎಲ್ಲೆಡೆಯಿಂದ ಫೋನ್ ಗಳ ಸುರಿಮಳೆ.
ಪತ್ರಕರ್ತನಿಗೆ ಈ ಫೋನ್ ಗಳು ಆರನೆಯ ಪ್ರಜ್ಞೆಯನ್ನು ಎಚ್ಚರಿಸುವ ಸಾಧನ.
ಈ ಫೋಟೋ ಇವತ್ತು ಏನೋ ತಂದಿಡುತ್ತದೆ ಅಂತ ಅನ್ನಿಸಿಹೋಗಿತ್ತು,
ಕಚೇರಿಗೆ ಬಂದು ಇನ್ನೂ ಐದು ನಿಮಿಷ ಆಗಿರಲಿಲ್ಲ. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಸಿ.ರಾಜಪ್ಪ ಫೋನ್ ಮಾಡಿದರು.
ಎಂದಿನಂತೆ ಚಾ ಆಯ್ತಾ, ಕಾಫಿ ಆಯ್ತಾ, ಮಾತಾಡಿ ಮುಗಿಸುವಾಗ ‘ಆ ಫೋಟೋ ಎಲ್ಲಿ ಸಿಕ್ತು’ ಅಂದರು, ಹೀಗೀಗೆ ಅಂದೆ. ನನಗೆ ಫೋಟೋ ಕಳಿಸ್ತೀರಾ ಅಂದ್ರು, ನೆಗೆಟೀವ್ ಇದೆಯಾ ಅಂದರು.
ಎಲ್ಲಕ್ಕೂ ‘ಆಗ್ಲಿ ನೋಡೋಣ. ಅದಕ್ಕೇನ್ರಿ’ ಅಂತಲೇ ನನ್ನ ಉತ್ತರ.
ಇಷ್ಟು ಆಗಿ ಮುಗಿಯುವ ಹೊತ್ತಿಗೆ ಬೆಂಗಳೂರಿಂದ ಇಂಟಲಿಜೆನ್ಸ್ ಡಿಪಾರ್ಟ್ ಮೆಂಟ್ ಕಾಲ್ ‘ಆ ಫೋಟೋ ಎಲ್ಲಿ ಸಿಕ್ತು’ ಅಂತ.
ಪಾಪ, ಕರ್ನಾಟಕ ಸರ್ಕಾರಕ್ಕೆ ಆಗಬಾರದ್ದು ಆಗಿಹೋಗಿತ್ತು. ಒಂದು ಫೋಟೋ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸಿ ಕೂರಿಸಿತ್ತು.
ಮಲ್ಲಿಕಾರ್ಜುನ ಖರ್ಗೆ ಆ ದಿನ ತಾನೇ ಗೃಹಮಂತ್ರಿ ಆಗಿ ಅಧಿಕಾರ ಸ್ವೀಕರಿಸಿದ್ದರು.
ಆ ಸಂತೋಷದಿಂದಲೇ ಪತ್ರಕರ್ತರನ್ನು ಭೇಟಿ ಮಾಡಲು ಉತ್ಸುಕರಾಗಿದ್ದರು.
ಖರ್ಗೆ ಮುಖ ಕಂಡದ್ದೇ ಪತ್ರಕರ್ತರು ಇರಿಸುಮುರಿಸಾಗುವ ಪ್ರಶ್ನೆಗಳ ಬಾಣವನ್ನೇ ಬಿಡಲು ಶುರುಮಾಡಿದ್ದರು.
‘ನೀವು ಗೃಹಮಂತ್ರಿಗಳು, ನಿಮ್ಮ ತವರಿನಲ್ಲೇ ಈ ಸ್ಥಿತಿ ಇದೆ ಅಂದರೆ ರಾಜ್ಯದ ಪರಿಸ್ಥಿತಿ ಏನು’ ಅಂತ ಸೀದಾ ಅವರನ್ನೇ ಕಟಕಟೆಯಲ್ಲಿ ನಿಲ್ಲಿಸಿಬಿಟ್ಟರು.
ಖರ್ಗೆ ಇದನ್ನು ಖಂಡಿತಾ ನಿರೀಕ್ಷಿಸಿರಲಿಲ್ಲ, ತಾನು ಗೃಹ ಸಚಿವನಾದ ಮೊದಲ ದಿನವೇ ಗುಲ್ಬರ್ಗಾದಲ್ಲಿ ಕಾನೂನೇ ಇಲ್ಲ ಎನ್ನುವಂತಾ ಪರಿಸ್ಥಿತಿ ಅವರಿಗೆ ತೀರಾ ಮುಜುಗರ ಉಂಟಮಾಡಿತ್ತು.
ಅದರ ಪರಿಣಾಮ ಆದದ್ದು ಪೊಲೀಸ್ ಇಲಾಖೆ ಮೇಲೆ.
ಪೊಲೀಸ್ ಇಲಾಖೆಗೆ ಪ್ರತಾಪ್ ರೆಡ್ಡಿ ಬಂದು ಇನ್ನೂ ನಾಲ್ಕು ದಿನ ಆಗಿರಲಿಲ್ಲ. ಈ ‘ಅರೆ ಬೆತ್ತಲೆ’ ಫೋಟೋ ಎರಗಿ ಬಂದಿತ್ತು.
ಡಿ.ಸಿ. ರಾಜಪ್ಪ ಎರಡನೇ ಫೋನ್ ಮಾಡುವ ಹೊತ್ತಿಗೆ ನಾನು ಅಲರ್ಟ್ ಆಗಿಬಿಟ್ಟಿದ್ದೆ.
ಯಾವುದೇ ಇನ್ವೆಸ್ಟಿಗೇಟೀವ್ ಜರ್ನಲಿಸ್ಟ್ ಮಾಡುವ ಹಾಗೆ ನನ್ನ ಬಳಿ ಇದ್ದ ಆ ನೆಗೆಟಿವ್ ಕಾಣದ ಸ್ಥಳಕ್ಕೆ ಎತ್ತಂಗಡಿಯಾಗಿಬಿಟ್ಟಿತ್ತು.
ಫೋನ್ ಮಾಡಿದವರಿಗೆ ಇದ್ದ ದಾಖಲೆಗಳನ್ನೇ ಹೊಸಕಿ ಹಾಕಿಬಿಡುವ ದಾಹ ಇದೆ ಎಂದು ಗೊತ್ತಾಗಿಹೋಗಿತ್ತು. ಪೊಲೀಸ್ ಇಲಾಖೆ ಆಚರಣೆಗಳನ್ನಲ್ಲ, ದಾಖಲೆಗಳನ್ನ ಹೊಸಕಿ ಹಾಕುತ್ತದೆ ಅನ್ನುವುದು ಗೊತ್ತಾಗಿ ಹೋಗಿತ್ತು.
ಸಂಜೆ ವೇಳೆಗೆ ಪೊಲೀಸ್ ಇಲಾಖೆಯ ಪ್ರೆಸ್ ಸ್ಟೇಟ್ಮೆಂಟ್ ಪ್ರತಿಯೊಂದು ಪತ್ರಿಕಾ ಕಚೇರಿಗೂ ಬಂದು ಬಿತ್ತು.
ಅದರಲ್ಲಿ ವಿಷಯ ನೇರವಾಗಿತ್ತು. ಗುಲ್ಬರ್ಗಾದಲ್ಲಿ ‘ಬೆತ್ತಲೆ ಸೇವೆ’ ಜರುಗಿಲ್ಲ.
ಬೆಳ್ಳಂಬೆಳಗ್ಗೆ ‘ಪ್ರಜಾವಾಣಿ’ಯಲ್ಲಿ ಫೋಟೋ ಬಂದು, ಅದು ಗೃಹ ಸಚಿವರನ್ನೇ ಅಲ್ಲಾಡಿಸಿಹಾಕಿದ್ದರಿಂದ ಬೇರೆ ಪತ್ರಿಕೆಗಳಿಗೆ ಮುಜುಗರವಾಗಿತ್ತು. ನಮ್ಮ ಪತ್ರಿಕೆಗೆ ಈ ವಿಷಯ ಯಾಕೆ ಸಿಗಲಿಲ್ಲ ಅಂತ.
ಹಾಗಾಗಿ ಗುಲ್ಬರ್ಗಾದ ಎಲ್ಲಾ ವರದಿಗಾರರನ್ನು ಅವರವರ ಸಂಪಾದಕರು ಫೋನ್ ಮಾಡಿ ಗುದ್ದಿ ಹಾಕಿದ್ದರು. ಈ ಕಾರಣಕ್ಕಾಗಿ ಇಂಥದ್ದೊಂದು ಆಗೇ ಇಲ್ಲ ಎಂದು ಸಾಧಿಸಿ ಮುಖ ಉಳಿಸಿಕೊಳ್ಳುವ ಹಟ ಪತ್ರಕರ್ತರಿಗೂ ಎದ್ದು ನಿಂತಿತು.
ಇದಕ್ಕೆ ಸರಿಯಾಗಿ ಸಾಥ್ ಕೊಟ್ಟಿದ್ದು ಪೊಲೀಸರ ಪ್ರೆಸ್ ನೋಟ್. ಮಾರನೆಯ ದಿನ ಎಲ್ಲಾ ಪತ್ರಿಕೆಗಳು ‘ಬೆತ್ತಲೆ ಸೇವೆ ಜರುಗಿಯೇ ಇಲ್ಲ’ ಎಂದು ಸುದ್ದಿ ಪ್ರಕಟಿಸಿ ಸಂಭ್ರಮಿಸಿದರು.
ಆ ಮಧ್ಯೆ ಜಿಲ್ಲಾ ಎಸ್.ಪಿ. ಪ್ರತಾಪ್ ರೆಡ್ಡಿ ಒಂದು ಪ್ರೆಸ್ ಕಾನ್ಫರೆನ್ಸ್ ಕರೆದರು.
ಸ್ವಲ್ಪದಿನದ ಹಿಂದೆಯಷ್ಟೇ ಅವರು ಬೇಟನ್ ಪಡೆದ ಫೋಟೋವನ್ನು ದೊಡ್ಡದಾಗಿ ಪ್ರಕಟಿಸಿಸಿದಾಗ ಅವರಿಂದ ‘ಬ್ಯೂಟಿಫುಲ್’ ಎನಿಸಿಕೊಂಡಿದ್ದ ಪತ್ರಿಕೆ ಈಗ ಗುಲ್ಬರ್ಗಾ ಖಡಕ್ ಮೆಣಸಿನಕಾಯಿ ಆಗಿಹೋಗಿತ್ತು.
ಪತ್ರಿಕಾ ಗೋಷ್ಠಿ ಆರಂಭಿಸಿದ ಅವರು ಹೇಳಿದ ಮೊದಲ ವಾಕ್ಯವೇ ‘ಗುಲ್ಬರ್ಗಾದಲ್ಲಿ ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಎಲ್ಲಿಯೂ ಬೆತ್ತಲೆ ಸೇವೆ ಜರುಗಿಲ್ಲ’ ಅಂತ.
Reading between the lines ಅನ್ನೋದನ್ನ ಪತ್ರಕರ್ತರಿಗೆ ಹೇಳಿಕೊಡಬೇಕೆ?
ಬೆಳಿಗ್ಗೆ ಪೇಪರ್ ಗಳಲ್ಲಿ ಬೆತ್ತಲೆ ಸೇವೆ ಆಗಿಲ್ಲ ಅನ್ನುವ ಸುದ್ದಿ, ಈಗಲೂ ಅದೇ ಮಾತು.
ತಕ್ಷಣ ಅಲ್ಲಿಯೇ ಅವರ ಮಾತನ್ನು ತುಂಡರಿಸಿದ ನಾನು ‘ಅಂದರೆ ಅರೆಬೆತ್ತಲೆ ಸೇವೆ ಆಗಿದೆ ಅಂತಲೇ?’ ಅಂತ ಕೇಳಿದೆ.
ಅವರಿಗೂ ರೇಗಿಹೋಯಿತು, ಸರಿ ದೊಡ್ಡ ದನಿಯಲ್ಲಿ ನಾನು, ಅವರು ವಾದಕ್ಕೆ ಅಣಿಯಾಗುತ್ತಿದ್ದೆವು.
‘ಸೀ ಯು ಟುಮಾರೋ ಇನ್ ಪ್ರಜಾವಾಣಿ’ ಅಂತ ಮನಸ್ಸಿನಲ್ಲಿ ಅಂದುಕೊಂಡವನೇ ಹೊರಬಿದ್ದೆ.
ನಾನೂ, ನಾಗೇಶ್ ಪೊಳಲಿ ಇಬ್ಬರೂ ಚದುರಂಗದ ಕಾಯಿಗಳನ್ನು ನಡೆಸಲು ಸಿದ್ಧರಾಗಿದ್ದೆವು.
ಪೊಳಲಿ ಬರುವ ಮುನ್ನ ‘ಪ್ರಜಾವಾಣಿ’ಗೆ ಫೋಟೋಗ್ರಾಫರ್ ಆಗಿದ್ದ ಭವಾನಿಸಿಂಗ್, ನಮಗೆ ಆಗೀಗ ಫೋಟೋ ಕೊಡುತ್ತಿದ್ದ ಬಿಲ್ಲು ಎಲ್ಲರನ್ನು ಸೇರಿಸಿ ಒಂದೊಂದು ಕಡೆಗೆ ಕಳಿಸಿದ್ದಾಯಿತು.
ನಾನು ಪೊಳಲಿ ಅಪ್ಪನಕೆರೆಯ ಪಕ್ಕದಲ್ಲಿರುವ ದೇವಸ್ಥಾನದ ಬಳಿ ಗೊತ್ತಾಗದಂತೆ ಅಡಗಿ ಕುಳಿತೆವು.
ಗಂಟೆಗಳು ಕಳೆದುಹೋದವು. ಇನ್ನೇನು ಗಂಟು ಮೂಟೆ ಕಟ್ಟಬೇಕು ಅನ್ನುವಾಗ ಬಂತು ನೋಡಿ ಅರೆಬೆತ್ತಲೆ ಮೆರವಣಿಗೆ.
ಮೆರವಣಿಗೆ ಮುಂಭಾಗದಲ್ಲಿ ಒಂದು ಆಡು. ಮೆರವಣಿಗೆ ಸೀದಾ ದೇವಸ್ಥಾನಕ್ಕೆ.
ಪೂಜೆ ಪುನಸ್ಕಾರ ಆದಮೇಲೆ ನಾವು ನೋಡ ನೋಡುತ್ತಿರುವಂತೆಯೇ ‘ಜಮಾಬಂಧಿಗಮಲ್ದಾರ ಬರಲು ನಮ್ಮಲೊಬ್ಬನನು ಕತ್ತ ಕಚ್ಚಕ್ಕೆಂದು ಕತ್ತರಿಸಿ…’ ನಿಸಾರ್ ಕವಿತೆಯ ಸಾಲಿನಂತೆ ಕಚಕ್ಕೆಂದು ಕತ್ತರಿಸಿದರು.
ಪೊಳಲಿ ಅಂದರೆ ಪೊಳಲಿಯೇ. ಫೋಟೋ ಹೇಗೆ ತೆಗೆದನೋ,. ಮತ್ತೆ ನನ್ನ ಮುಂದೆ ಒಂದು ಮಣ ಫೋಟೋ ಹರಡಿದ್ದ.
‘ಬೆತ್ತಲೆಸೇವೆ ನಡೆದಿಲ್ಲ’ ಅಂತ ಪತ್ರಿಕಾ ಗೋಷ್ಠಿ ನಡೆಸಿದ ದಿನವೇ ಇನ್ನೊಂದು ಸುದ್ದಿ ಬೆಂಗಳೂರಿನತ್ತ ಓಡುತ್ತಿತ್ತು. ‘ಮತ್ತೆ ಅರೆಬೆತ್ತಲೆ ಸೇವೆ, ಜೊತೆಗೆ ಪ್ರಾಣಿಹತ್ಯೆ ಕೂಡಾ..’ ಅನ್ನುವ ಹೆಡ್ ಲೈನ್ ನೊಂದಿಗೆ.
ಸುದ್ದಿ ಕಳಿಸಿ ಆಗ ಮುಖ್ಯಸ್ಥರಾಗಿದ್ದ ಶ್ರೀಧರ್ ಆಚಾರ್ ಅವರಿಗೆ ಫೋನ್ ಮಾಡಿದೆ, ‘ಸಾರ್ ಪೇಜ್ ಒನ್ ಗೆ ತಗೊಳ್ಳಿ ಸಾರ್’ ಅಂತ.
‘ಪೇಜ್ ಒನ್ ಗೆ ಹೋಗೋದು ಏನಿದೇರೀ ಅದರಲ್ಲಿ..’ ಅಂದರು.
ನನಗೆ ಪತ್ರಿಕೋದ್ಯಮದ ಎರಡು ಪಾಠಗಳು ಗೊತ್ತಾದವು. ಸುದ್ದಿಯ ಬೆಲೆ ಹೇಗೆ ತಿಳಿಯಬೇಕು ಅಂತ ಒಬ್ಬರು ಕಲಿಸಿದ್ದರು, ಇನ್ನೊಬ್ಬರು ಸುದ್ದಿಯ ಬೆಲೆ ಹೇಗೆ ಕಳೆಯಬೇಕು ಅಂತ.
ಒಳಪುಟಗಳಲ್ಲಿ ಸುದ್ದಿಯಂತೂ ಬಂತು.
ಈ ಬಾರಿ ಪೊಲೀಸ್ ಇಲಾಖೆ ಕೆಲಸ ಮಾಡಿತ್ತು. ದೇವಸ್ಥಾನದ ಎದುರು ಪೊಲೀಸ್ ವ್ಯಾನ್, ಗೋಡೆಯ ಮೇಲೆ ‘ಇಲ್ಲಿ ಸೇವೆಗೆ ಅವಕಾಶವಿಲ್ಲ’ ಎಂಬ ಬರಹ.
ಅಷ್ಟೇ ಅಲ್ಲ, ಅಕ್ಕಪಕ್ಕ ನಡೆಯುತ್ತಿದ್ದ ಪ್ರತೀ ಮದುವೆ ಮನೆ, ಮಂಟಪಕ್ಕೆ ಹೋದ ಪೊಲೀಸರು ಸೇವೆ ಮಾಡುವಂತಿಲ್ಲ ಎಂದು ತಾಕೀತು ಮಾಡಿ ಬಂದಿದ್ದರು.
ವಿಷಯ ಇಷ್ಟೇ, ಮನೆಯಲ್ಲಿ ದೊಡ್ಡಮಗನ ಮದುವೆ ಆದಾಗ ಆತನ ತಾಯಿ ಅರೆಬೆತ್ತಲೆ ಸೇವೆ ಮಾಡಬೇಕು. ಇಲ್ಲಿ ಬಡವ-ಶ್ರೀಮಂತ, ಹಳ್ಳಿ-ಪಟ್ಟಣ ಅಂತ ಭೇದ ಭಾವವೇ ಇಲ್ಲ.
ಹಾಗಾಗಿಯೇ ಮದುವೆ ಸೀಸನ್ ಬಂದರೆ ಸಾಕು ನಗರದ ಅಷ್ಟೂ ರಸ್ತೆಗಳಲ್ಲಿ ಯಾವಾಗ ಬೇಕೆಂದರೆ ಶಹನಾಯಿ ವಾದ್ಯದ ಸಮೇತ ಮೆರವಣಿಗೆ ಹೊರಟೇಬಿಡುತ್ತಿತ್ತು.
ಪತ್ರಕರ್ತನಾದವನಿಗೆ ಮುಖ್ಯವಾಗಿ ಬೇಕಾದದ್ದೇ ಚಾಲೆಂಜ್. ಅಂತಹ ಚಾಲೆಂಜ್ ನಮಗಂತೂ ಸುಖಾಸುಮ್ಮನೆ ಒದಗಿಬಂದಿತ್ತು.
ಸರಿ ಅಪ್ಪನಕೆರೆ ದೇವಸ್ಥಾನ ಕೈಬಿಟ್ಟ ನಾನು, ಪೊಳಲಿ ಗುಲ್ಬರ್ಗಾದ ಇತರ ದೇವಸ್ಥಾನಗಳತ್ತ ಹೊರಟೆವು.
ಅರೆ! ಒಂದಲ್ಲಾ, ಎರಡಲ್ಲಾ ‘ಕಾನೂನು ಸುವ್ಯವಸ್ಥೆ ಸರಿ ಇರುವ’ ನಗರದಲ್ಲಿ ಎಷ್ಟೊಂದು ಮೆರವಣಿಗೆ, ಎಲ್ಲವೂ ಕ್ಯಾಮೆರಾದಲ್ಲಿ ದಾಖಲಾಯಿತು.
ಹತ್ತು ಬೇಕಿದ್ದ ಕಡೆ ಇಪ್ಪತ್ತು, ಇಪ್ಪತ್ತು ಬೇಕಿದ್ದ ಕಡೆ ಎರಡು ರೋಲ್ ಫಿಲಂಗಳು.
ನನ್ನ ಗುಲ್ಬರ್ಗಾ ಅನುಭವಗಳನ್ನೆಲ್ಲ ಒಟ್ಟಿಗೆ ಸೇರಿಸ ಬೇಕೆಂದಿದ್ದೇನೆ. ಹೆಸರು ‘ಡೇಟ್ ಲೈನ್ ಗುಲ್ಬರ್ಗಾ’ ಅಂತ…
—–
ಬೆತ್ತಲೆ ಸೇವೆಯ ವಿರುದ್ಧ ಬರೆದ, ಸಮಾಜದಲ್ಲಿ ದನಿ ಇಲ್ಲದವರನ್ನು ಹೊಸಕಿ ಹಾಕುತ್ತಿದ್ದ ಅಸಂಖ್ಯಾತ ಆಚರಣೆಗಳತ್ತ ನಾಡಿನ ಪ್ರಜ್ಞಾವಂತರ ಗಮನ ಸೆಳೆದ ಆ ತಾಯಿ ಗೀತಾ ನಾಗಭೂಷಣ ಇನ್ನಿಲ್ಲ.
ಅವರ ‘ಮಾಪುರ ತಾಯಿಯ ಮಕ್ಕಳು’ ‘ಹಸಿಮಾಂಸ ಮತ್ತು ಹದ್ದುಗಳು’ ಕೃತಿಗಳೇ ನನಗೆ ಕಲಬುರ್ಗಿ ಜಿಲ್ಲೆಯಲ್ಲಿ ಒಂದು ದಂಧೆಯಂತೆ ಬೆಳೆದುನಿಂತಿದ್ದ ಬೆತ್ತಲೆ ಸೇವೆಯ ಬಗ್ಗೆ ಗಮನ ಹರಿಸಲು ಕಾರಣವಾಗಿದ್ದು.
ಈ ಬರಹ ಗೀತಾ ನಾಗಭೂಷಣ ಅವರಿಗೆ…
—
ಚಿತ್ರ: ಕಲಬುರ್ಗಿ ರೈಲು ನಿಲ್ದಾಣದಲ್ಲಿ ನನ್ನ ಪತ್ರಿಕೋದ್ಯಮ ಸಾಹಸಗಳಿಗೆ ಸದಾ ಬೆಂಗಾವಲಾಗಿದ್ದ ಮಹಿಪಾಲರೆಡ್ಡಿ ಮುನ್ನೂರ್ ಅವರೊಂದಿಗೆ..