ಅವರೊಬ್ಬರಿದ್ದರು, ಕುಮಾರಪ್ಪ…
—–
ಬೀದರ್ ನಲ್ಲಿ ಆಗಲೇ ಬಿಸಿಲು ಬುಸುಗುಟ್ಟಲು ಆರಂಭಿಸಿತ್ತು.
ಮುಗಿಲು ನೋಡಿದರೆ ಸಾಕು ತಲೆ ಸುತ್ತಿ ಬೀಳುವಂತಹ ಬಿಸಿಲು.
ಥೇಟ್ ನಮ್ಮ ಹೊಟ್ಟೆಯೂ ಆ ದಿನ ಇನ್ನಿಲ್ಲದಂತೆ ಹಾಗೇ ಬಸುಗುಡಲು ಆರಂಭಿಸಿತ್ತು.
ಬೀದರ್ ನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಸಮಾರಂಭವನ್ನು ಹಮ್ಮಿಕೊಂಡಿತ್ತು.
ಆ ಸಾಲಿನಲ್ಲಿ ನಾನೂ ಸಹಾ ಅಕಾಡೆಮಿಯ ಸದಸ್ಯ.
ಹೀಗಾಗಿ ಗುಲ್ಬರ್ಗದಲ್ಲಿದ್ದ ನಾನು ಬೀದರ್ ಗೆ ಹೋಗಿ ಈ ಪ್ರಶಸ್ತಿ, ಬಹುಮಾನ ವಿಜೇತರ ಜೊತೆ ಸೇರಿಕೊಂಡಿದ್ದೆ. ಪ್ರಶಸ್ತಿ ಸಮಾರಂಭ ಅದ್ಧೂರಿಯಾಗಿ ಮುಗಿಯಿತು.
ರಾಜ್ಯದ ನಾನಾ ಮೂಲೆಗಳಿಂದ ಬಂದ ವಿದ್ವತ್ ಕ್ಷೇತ್ರದ ದಿಗ್ಗಜರನ್ನು ಮರ್ಯಾದೆಯಾಗಿ ಬೀಳ್ಕೊಡಬೇಕು ಅಂತ ಅಲ್ಲಿದ್ದ ರಾಜಕೀಯ ಧುರೀಣರೊಬ್ಬರಿಗೆ ಅನಿಸಿಬಿಟ್ಟಿತು.
ಹಾಗಾಗಿ ಮಾರನೆಯ ದಿನ ಬೆಳ್ಳಂಬೆಳಗ್ಗೆ ‘ತಿಂಡಿಗೆ ಬಂದುಬಿಡಿ’ ಎಂದು ಆಹ್ವಾನ ಕೊಟ್ಟರು. ನಾವೂ ನಮ್ಮೊಳಗಿದ್ದ ಹಸಿವೆಂಬ ಬ್ರಹ್ಮರಾಕ್ಷಸನಿಗೆ ಸಾಕಷ್ಟು ಸಮಾಧಾನ ಮಾಡಿಯೇ ಅಲ್ಲಿಗೆ ಕರೆದುಕೊಂಡು ಹೋಗಿದ್ದೆವು.
ಆ ಮನೆಯ ಅಂಗಳದಲ್ಲಿ ಆಹಾ! ಥರಾವರಿ ತಿಂಡಿಗಳು. ‘ಮಾಯಾಬಜಾರ್’ನಲ್ಲಿ ಥರಾವರಿ ಭಕ್ಷಗಳಾದರೆ ಬೀದರ್ ನಗರಿಯಲ್ಲಿ ಥರಾವರಿ ತಿಂಡಿ.
ಹೊಟ್ಟೆಯೊಳಗೆ ಎಲ್ಲಿಯೋ ಮೂಲೆಯಲ್ಲಿದ್ದ ಹಸಿವಿಗೆ ಇನ್ನಷ್ಟು ಆವೇಶ ಬಂದಿತ್ತು. ಸರಿ ಅಲ್ಲಿ ಹಾಕಿದ್ದ ಕುರ್ಚಿಯಲ್ಲಿ ಆರಾಮವಾಗಿ ಲೋಕೋಪಚಾರ ಮಾತಾಡುತ್ತಾ ಕುಳಿತುಕೊಂಡೆವು.
ಹತ್ತು ನಿಮಿಷ, ಇಪ್ಪತ್ತು, ಮುವತ್ತು ಉಹುಂ ತಿಂಡಿ ಕೊಡುವ ಲಕ್ಷಣವೇ ಕಾಣಲಿಲ್ಲ.
ಇನ್ನೂ ಹತ್ತು ನಿಮಿಷ ಕಾದದ್ದಾಯ್ತು. ತಿಂಡಿಯೇನೋ ಸಾಲಂಕೃತವಾಗಿ ಟೇಬಲ್ ಮೇಲಿದೆ. ತಿನ್ನುವವರೂ ಇದ್ದಾರೆ. ಬಡಿಸುವವರೂ ಸಜ್ಜಾಗಿದ್ದಾರೆ. ಆದರೆ ಕೊಡಲು ಮಾತ್ರ ಸಿದ್ಧವಿಲ್ಲ.
ನನ್ನೊಳಗಿದ್ದ ಪತ್ರಕರ್ತ ಇದನ್ನು ಪ್ರಶ್ನಿಸದೆ ಸುಮ್ಮನಿರುವುದಿಲ್ಲ ಎಂದು ಎದ್ದೇಬಿಟ್ಟ.
ಪ್ರಶ್ನಿಸಲಾಗಿ ‘ಸಾಹೇಬರು ಇನ್ನೇನು ಬಂದು ಬಿಡುತ್ತಾರೆ. ಬರ್ತಿದ್ದ ಹಾಗೇ ತಿಂಡಿ ಶುರು’ ಎಂದರು.
ಪಾಪ ಅಂತ ಇನ್ನೂ ಹತ್ತು ನಿಮಿಷ ಕಾದೆವು. ಉಹುಂ! ಅಭ್ಯಾಗತರ ಪತ್ತೆಯೇ ಇಲ್ಲ.
ಪ್ರತಿಭಾ ನಂದಕುಮಾರ್ ನನ್ನನ್ನೂ, ನಾನು ಅವರನ್ನು ಕಣ್ಣಲ್ಲೇ ಪ್ರಶ್ನಿಸಿಕೊಂಡದ್ದಾಯ್ತು.
‘ಅಯ್ಯೋ, ನಮ್ಮ ಹೊಟ್ಟೆ, ನಮ್ಮ ತಿಂಡಿ ನಡೀರಿ’ ಅಂತ ಹೇಳಿದವರೇ ಪ್ರತಿಭಾ ಸಭ್ಯಸ್ಥರ ಸೋಗನ್ನು ಕಿತ್ತು ಮೂಲೆಗೆಸೆದು ತಟ್ಟೆ ಎತ್ತಿಕೊಂಡು ‘ಬಡಿಸದಿದ್ದರೆ ಕತ್ತೆ ಬಾಲ’ ಎಂಬಂತೆ ತಾವೇ ತಿಂಡಿ ಹಾಕಿಕೊಳ್ಳಲು ಶುರು ಮಾಡಿದರು.
ಅವರ ಹಿಂದೆ ನಾನಿದ್ದೆ. ಇನ್ನಾರೂ ಇಂತ ಧೈರ್ಯ ಮಾಡಲ್ಲ ಅಂತ ನನಗಂತೂ ಖಚಿತವಾಗಿತ್ತು.
ಹಾಗಂದುಕೊಂಡೇ ಹಿಂದೆ ತಿರುಗಿದರೆ ಅಲ್ಲಿ ಇನ್ನೂ ಒಬ್ಬರು.
ಅರೆ! ಇವರಾರು ನಮ್ಮಂತೆ ಇದ್ದ ವ್ಯವಸ್ಥೆಗೆ ಸೆಡ್ಡು ಹೊಡೆದು ನಿಂತವರು ಅಂತ ನೋಡಿದೆ.
ನನ್ನನ್ನೂ, ಪ್ರತಿಭಾರನ್ನೂ ನೋಡಿದರೆ ಯಾರೂ ನಮ್ಮನ್ನು ಸಭ್ಯಸ್ಥರು ಎಂದು ಕರೆಯುವ ಸಾಧ್ಯತೆಯೇ ಇಲ್ಲ.
ಆದರೆ ಇವರು ನಿಜಕ್ಕೂ ಸಭ್ಯಸ್ಥರು. ಆದರೆ ಒಳಗೆ ಪ್ರತಿಭಟನೆಯ ದೊಡ್ಡ ಕಾವನ್ನೇ ಇಟ್ಟುಕೊಂಡವರು.
ನಾನು ಅವರ ತಟ್ಟೆ ಹಿಡಿದ ಕೈಯನ್ನೇ ಕುಲುಕಿ ‘ನಿಮ್ಮ ಹೆಸರು?’ ಎಂದೆ ಅವರು ಅಷ್ಟೇ ತಣ್ಣಗೆ ‘ಬಾಂಡ್, ಜೇಮ್ಸ್ ಬಾಂಡ್’ ಎನ್ನುವ ರೀತಿಯಲ್ಲಿ ಕುಮಾರಪ್ಪ, ಜಿ. ಕುಮಾರಪ್ಪ ಎಂದರು.
‘ಓಹ್! ಕುಮಾರಪ್ಪ’ ಎಂದುಕೊಂಡೆ.
ಯಾಕೆಂದರೆ ಆ ವೇಳೆಗೆ ಕುಮಾರಪ್ಪ ನನ್ನ ಲೋಕಕ್ಕೆ ಪ್ರವೇಶಿಸಿ ದಶಕಗಳೇ ಉರುಳಿದ್ದವು.
1985 ರ ಆಸುಪಾಸಿನಲ್ಲಿ ಸದಾ ಬಂಡಾಯಗಾರ ಆರ್ ಜಿ ಹಳ್ಳಿ ನಾಗರಾಜ್ ‘ಅನ್ವೇಷಣೆ’ ಎಂಬ ಸಾಹಿತ್ಯ ಪತ್ರಿಕೆ ಹುಟ್ಟು ಹಾಕಿದ್ದ.
ಚಿತ್ರದುರ್ಗದ ರಾಮಗೊಂಡನಹಳ್ಳಿಯ ನಾಗರಾಜ್ ಅದೇ ಚಿತ್ರದುರ್ಗದವರು ಎನ್ನುವ ಕಾರಣಕ್ಕೆ ಕುಮಾರಪ್ಪ ತೀರಾ ಪರಿಚಿತರು.
ಹೀಗಾಗಿ ನಾವೆಲ್ಲರೂ ಸೇರಿದ್ದಾಗ ಆಗಾಗ ಕುಮಾರಪ್ಪ ಮಾತಿನಲ್ಲಿ ಬಂದು ಹೋಗುತ್ತಿದ್ದರು.
ಇದರೊಟ್ಟಿಗೇ ಅವರು ಕಲ್ಕತ್ತದಲ್ಲಿದ್ದಾರೆ ಎನ್ನುವುದು ಇನ್ನೂ ಆ ಕಾಲಕ್ಕೆ ಮೂರೂ ಮುಕ್ಕಾಲು ವಾಸಿ ಲೋಕ ಕಾಣದ ನಮಗೆ ದೊಡ್ಡದಾಗಿ ಕಾಣುತ್ತಿತ್ತು.
ಜೊತೆಗೆ ಕಲ್ಕತ್ತ ಎನ್ನುವುದು ನಮಗೆ ಕ್ರೆಮ್ಲಿನ್ ನಂತೆ ಕಾಣಿಸುತ್ತಿದ್ದರಿಂದಲೂ, ಅಲ್ಲಿದ್ದ ಕುಮಾರಪ್ಪ ನಮಗೆ ಥೇಟ್ ಗೊರ್ಬಚೇವ್ ರಂತೆಯೂ ಅನಿಸಿ ಕುಮಾರಪ್ಪ ಎಂಬ ಕುಮಾರಪ್ಪ ಅವರನ್ನು ನಾನು ಎಂದೂ ಕಾಣದಿದ್ದರೂ ಅವರು ‘ನಮ್ಮೊಡನಿಲ್ಲದಿದ್ದರೂ ನಮ್ಮಂತೆಯೇ’ ಆಗಿ ಹೋಗಿದ್ದರು.
ಅಂತಹ ಕುಮಾರಪ್ಪ ಈಗ ನಮ್ಮ ಜೊತೆ ‘ತಿಂಡಿ ತಿಂದೇ ಸೈ ಸತ್ಯಾಗ್ರಹ’ಕ್ಕೆ ತಟ್ಟೆ ಹಿಡಿದು ನಿಂತಿದ್ದರು.
ಹೀಗೆ ಆ ಕಲ್ಕತ್ತದ ಕುಮಾರಪ್ಪನವರು. ಬೆಂಗಳೂರಿನ ನಾನೂ, ನಮ್ಮಿಬ್ಬರಿಗೂ ಗೊತ್ತಿಲ್ಲದ ಬೀದರ್ ನಲ್ಲಿ ಹೊಟ್ಟೆಯ ಕಾರಣಕ್ಕಾಗಿ ಒಂದಾಗಿದ್ದೆವು.
ಹಾಗೆ ಹೇಳಿದರೆ ಅದು ಖಂಡಿತಾ ಸುಳ್ಳು.
ಯಾಕೆಂದರೆ ನಾವಿಬ್ಬರೂ ಮತ್ತೊಂದು ಹಸಿವಿನ ಕಾರಣಕ್ಕೂ ಒಂದಾಗಿದ್ದೆವು.
ಅದು ಪುಸ್ತಕದ ಹಸಿವು.
ಕುಮಾರಪ್ಪ ಈ ವಿಷಯದಲ್ಲಿ ಮಾತ್ರ ನಿಜಕ್ಕೂ ಒಬ್ಬ ಮಾದರಿ ಅಭ್ಯಾಗತ.
ಖಂಡಿತಾ ನಮಗೆ ಒಂದಿಷ್ಟು ತಡಮಾಡದೆ, ತಟ್ಟೆ ಎತ್ತಿಕೊಂಡು ವರಾತ ಹಚ್ಚದಂತೆ ನಮ್ಮ ಬಳಿಗೇ ಬಂದು ಬೇಕು ಬೇಕಾದ್ದನ್ನೆಲ್ಲಾ ಬಡಿಸಿದ ಅಭ್ಯಾಗತ.
ಕುಮಾರಪ್ಪ ಸ್ವಂತ ಬರೆದದ್ದನ್ನು ಒತ್ತಟ್ಟಿಗಿಟ್ಟು ನೋಡಿದರೂ ಅವರು ಬಂಗಾಳಿಯಿಂದ ಕನ್ನಡಕ್ಕೆ ಮಾಡಿರುವ ಅನುವಾದದ ಕೃತಿಗಳೇ 25 ಕ್ಕಿಂತ ಹೆಚ್ಚು.
ನಮ್ಮ ಹೊಟ್ಟೆ ತುಂಬಲು ಇನ್ನೇನು ಬೇಕು.
ನಾವು ಕಾಲೇಜಿನಲ್ಲಿ ಓದುವ ಕಾಲಕ್ಕೇ ‘ಲೋಕಾಯತ’ದ ಹುಚ್ಚು ಹತ್ತಿಸಿಕೊಂಡು ದೇವಿಪ್ರಸಾದ ಚಟ್ಟೋಪಾದ್ಯಾಯರನ್ನ ಆವಾಹಿಸಿಕೊಂಡಿದ್ದ ನಮಗೆ ಕುಮಾರಪ್ಪ ಅವರು ಚಟ್ಟೋಪಾಧ್ಯಾಯರ ‘ಮಾತೆಯರು ಮಾನ್ಯರಾಗಿದ್ದಾಗ’ ಕೃತಿ ಕೈಗಿತ್ತರು.
ಶಾಲೆಯಲ್ಲಿ ಓದಿದ್ದ ಟ್ಯಾಗೂರರ ‘ಕಾಬೂಲಿವಾಲಾ’ ಕೃತಿಯಿಂದಲೂ, ಆ ನಂತರ ಅಫಘಾನಿಸ್ತಾನದ ವಿದ್ಯಮಾನಗಳಿಂದಲೂ ಆ ದೇಶವನ್ನು ಕಣ್ಣುಬಿಟ್ಟುಕೊಂಡು ನೋಡುತ್ತಿದ್ದಾಗ ಕುಮಾರಪ್ಪ ‘ಕಾಬೂಲಿವಾಲಾನ ಬೆಂಗಾಳಿ ಹೆಂಡತಿ’ ಕೃತಿಯನ್ನು ಕೈಗಿಟ್ಟರು.
ಇಷ್ಟೆಲ್ಲದರ ಮಧ್ಯೆ ಮಹಾಶ್ವೇತಾದೇವಿ ನಮಗೆ ತೀರಾ ಹತ್ತಿರವಾಗಿ ಹೋಗಿದ್ದರು. ಅವರ ಬಂಡುಕೋರತನದ ಕಾರಣಕ್ಕಾಗಿ.
ಅವರ ‘ದೋಪ್ಡಿ ಮತ್ತು ಇತರ ಕಥೆಗಳ’ನ್ನು ಓದಿ ಮಹಾಶ್ವೇತಾದೇವಿ ಅವರ ಇನ್ನಷ್ಟು ಕೃತಿಗಳನ್ನು ಓದುವ ತಹತಹದಲ್ಲಿದ್ದಾಗ ಅವರ ಕಾದಂಬರಿಗಳನ್ನು ಕೊಟ್ಟರು.
ಆ ವೇಳೆಗೇ ಬೇಬಿ ಹಲ್ದರ್ ಸುದ್ದಿಯಾಗಿದ್ದಳು. ಬಂಗಾಲಿಯೊಬ್ಬನ ಮನೆಯಲ್ಲಿದ್ದು ಮನೆಗೆಲಸ ಮಾಡಿಕೊಂಡಿದ್ದಾಕೆ ತನ್ನ ಮನೆಯ ಹಿರಿಯನೊಬ್ಬನ ಪ್ರೋತ್ಸಾಹದಿಂದ ಕಸಬರಿಕೆ ಹಿಡಿದ ಜೊತೆ ಜೊತೆಯಲ್ಲಿಯೇ ಲೇಖನಿಯನ್ನೂ ಹಿಡಿದಳು.
ಆ ಬೇಬಿ ಹಲ್ದರ್ ಬರೆದ ಬದುಕಿನ ಕಥೆ ‘ನೋವು ತುಂಬಿದ ಬದುಕು’ವನ್ನು ಇಂಗ್ಲಿಷ್ ನಲ್ಲಿ ಓದಿ ಮುಗಿಸುವ ವೇಳೆಗಾಗಲೇ ಕುಮಾರಪ್ಪ ಆ ಕೃತಿಯನ್ನೂ ಕನ್ನಡಕ್ಕೆ ತಂದಾಯ್ತು.
ಹೌದಲ್ಲಾ! ‘ಎಲ್ಲೋ ದೂರದಿ ಜಿನುಗುವ ಹನಿಗಳೆ ಬನ್ನಿ ಬನ್ನಿ ಬಿರುಮಳೆಯಾಗಿ, ತುಂಬಲಿ ತುಳುಕಲಿ ಬತ್ತಿದ ಹೊಳೆಕೆರೆ ಹೊಸ ಹಸಿರೇಳಲಿ ನವುರಾಗಿ’ ಎಂಬ ಜಿ ಎಸ್ ಎಸ್ ಕವಿತೆ ಓದುವಾಗಲೆಲ್ಲಾ ನನಗೆ ಕುಮಾರಪ್ಪ ಯಾಕೆ ನೆನಪಾಗಬೇಕು.
ಅಲ್ಲಿ ಅಷ್ಟು ದೂರವಿದ್ದು ಜಿನುಗುತ್ತಿದ್ದ ಕುಮಾರಪ್ಪ ಎಂಬ ಮಳೆ ಕನ್ನಡಕ್ಕೆ ಕೊಟ್ಟ ಅಷ್ಟೊಂದು ಕೃತಿಗಳಿಂದಾಗಿಯೇ ಇರಬೇಕು ಈ ಲೋಕದಲ್ಲೂ ಹೊಸ ಹಸಿರೆದ್ದಿತೇನೋ ಎನ್ನುವಂತಾಗುತ್ತದೆ.
ಹೀಗೆಲ್ಲಾ ಆಗುತ್ತಿರುವಾಗಲೇ ನಾನು ‘ಈಟಿವಿ’ ಕನ್ನಡದ ಸುದ್ದಿ ವಿಭಾಗಕ್ಕೆ ಮುಖ್ಯಸ್ಥನಾಗಿ ಹೋದೆ.
ಅಲ್ಲಿದ್ದ ಅಷ್ಟೂ ವರ್ಷಗಳಲ್ಲಿ ನನಗೆ ಖುಷಿಕೊಟ್ಟ ಕಾರ್ಯಕ್ರಮಗಳಲ್ಲೊಂದು ‘ಬುಕ್ ಟಾಕ್’.
‘ಪುಸ್ತಕಗಳು ಮಾತಾಡುತ್ತವೆ’ ಎಂದು ಬಲವಾಗಿ ನಂಬಿದ್ದವನು ನಾನು. ಹಾಗಾಗಿ ‘ಬುಕ್ ಟಾಕ್’ ಆರಂಭಿಸಿದೆ.
ಆ ಕಾರ್ಯಕ್ರಮ ಬರೀ ಪುಸ್ತಕ ಪರಿಚಯದ ತಾಣವಾಗಿರಲಿಲ್ಲ. ಎಲ್ಲೆಲ್ಲಿಗೋ ನಮ್ಮ ಕ್ಯಾಮರಾ ಕಣ್ಣು ಹರಿದು ಪುಸ್ತಕ ದಾಹ ತಣಿಸುವ ಕೆಲಸಕ್ಕೆ ಕೈ ಹಾಕಿತ್ತು.
ಆಗ ನನಗೆ ನೆನಪಾದವರೇ ಜಿ.ಕುಮಾರಪ್ಪ.
ಕುಮಾರಪ್ಪ ಅವರ ಬಗ್ಗೆ ಅನೇಕರು ಕೇಳಿದ್ದರು. ಅಲ್ಲಿಗೆ ಹೋದವರಿಗಂತೂ ಕುಮಾರಪ್ಪ, ಚಂಪಾ ಭಾಷೆ ಬಳಸಿ ಹೇಳುವುದಾದರೆ ‘ಪ್ರೇಕ್ಷಣೀಯ’ ವ್ಯಕ್ತಿಯೇ ಸೈ.
ಅಷ್ಟು ಬಿಟ್ಟರೆ ಕುಮಾರಪ್ಪ ಅವರ ಲೈಬ್ರರಿ, ಅವರ ಲೋಕ ನೋಡಿದವರು ತೀರಾ ತೀರಾ ಕಡಿಮೆ.
ಹಾಗಾಗಿ ಅವರ ಬೆನ್ನತ್ತುವ ನಿರ್ಧಾರಕ್ಕೆ ಬಂದೆ.
ಈಟಿವಿ ಬೆಂಗಾಲಿ ಚಾನಲ್ ಮುಖ್ಯಸ್ಥ ಸಿದ್ಧಾರ್ಥ ದಾ ಕೈ ಕುಲುಕಿದೆ. ಹೀಗೀಗೆ ಕಲ್ಕತ್ತ ಎಂದರೆ ನಮಗೆ ಕುಮಾರಪ್ಪ ಎಂದು ವಿವರಿಸಿದೆ. ಅವರ ಮನೆ, ಲೈಬ್ರರಿ, ಅವರು ಓಡಾಡುವ ಜಾಗ ಎಲ್ಲಾ ಶೂಟ್ ಆಗಬೇಕು ಅವರ ಸಂದರ್ಶನ ಬೇಕು ಎಂದೆ.
ಕೇಳಿದ ಮೇಲೆ ‘ಇಲ್ಲ’ ಎನಿಸಿಕೊಳ್ಳುವ ಆಸಾಮಿಯೇ ನಾನಲ್ಲವಾದ ಕಾರಣ ಅವರು ‘ಓಕೆ’ ಎನ್ನಲೇಬೇಕಾಯಿತು.
ಅವರು ಕಲ್ಕತ್ತಾದ ಕಚೇರಿಗೆ ಪೋನೆತ್ತಿಕೊಂಡರು.
‘ಕುಮಾರಪ್ಪ, ನ್ಯಾಷನಲ್ ಲೈಬ್ರರಿ’ ಎನ್ನುತ್ತಿದ್ದಂತೆ ಆ ಕಡೆಯಿಂದ ನನಗೆ ಖಂಡಿತಾ ಗೊತ್ತಿಲ್ಲದ ಬೆಂಗಾಲಿ ಭಾಷೆಯಲ್ಲಿ ಪಟ ಪಟ ಪಟ ಮಾಹಿತಿ ಉದುರಿತ್ತು.
ಸಿದ್ದಾರ್ಥ ಸರ್ಕಾರ್ ಅವರೇ ದಂಗಾಗಿ ಹೋಗಿದ್ದರು. He is very well known person there ಅಂತ ನನ್ನ ಮುಖ ನೋಡಿದರು.
‘ಕುಮಾರಪ್ಪ ಅಂದ್ರೆ ಸುಮ್ನೇನಾ’ ಅನ್ನೋ ಥರಾ ನಾನೂ ಮುಖಾ ಮಾಡಿದೆ.
ಆಮೇಲೆ ಬೆಂಗಾಳಿ ಚಾನಲ್ ನ ಕ್ಯಾಮೆರಾ ಅವರ ಮನೆಗೂ, ಲೈಬ್ರರಿಗೂ ನುಗ್ಗಿ ಸವಿಸ್ತಾರವಾಗಿ ಶೂಟ್ ಮಾಡಿ ನನ್ನೆಡೆಗೆ ಕಳಿಸಿಕೊಟ್ಟಿತು.
ಅದು ಕನ್ನಡ ಚಾನಲ್ ನ ಹುಡುಗರ ಕೈಗೆ ಸಿಕ್ಕು ಅಭಿಮಾನದಿಂದ ಎಡೆಟ್ ಆಗಿ ‘ಬುಕ್ ಟಾಕ್’ನಲ್ಲಿ ಪ್ರಸಾರವೂ ಆಯಿತು.
ಕುಮಾರಪ್ಪ ಪೋನ್ ಮಾಡಿದರು. ಅವರ ದನಿಯಲ್ಲಿ ಇನ್ನಿಲ್ಲದಂತ ಮುಜುಗರ ಇತ್ತು.
ಅತ್ತ ಅವರ ಊರಲ್ಲೂ, ಇತ್ತ ಕಲ್ಕತ್ತದಲ್ಲೂ ಅವರು ಕಾಣಿಸಿಕೊಂಡಿದ್ದ ಕಾರಣ ಲೆಕ್ಕವಿಲ್ಲದಷ್ಟು ಜನ ಅವರಿಗೆ ಫೋನಾಯಿಸಿ ಅವರು ಮಾತು ಬಾರದಂತಾಗಿದ್ದರು.
ಇದಾದ ಮೇಲೆ ನಾನು ಅವರೂ ಆಗೀಗ ಮಾತನಾಡಿಕೊಳ್ಳುತ್ತಲೇ ಇದ್ದೆವು.
ಅವರ ಜೊತೆ ಮಾತನಾಡಿದಾಗಲೆಲ್ಲಾ ನನಗೆ ಒಂದು ವಿಶಿಷ್ಟತೆ ಕಾಣುತ್ತಿತ್ತು
ಅವರು ಕಲ್ಕತ್ತದ ಬಗ್ಗೆ ಮಾತನಾಡಿದ್ದೇ ಇಲ್ಲ ಎನ್ನುವಷ್ಟು ಕಡಿಮೆ. ಆದರೆ ಅವರ ಮಾತು ಅವರ ಊರು, ಕೇರಿ, ಆ ಹಸಿರು, ಆ ಉಸಿರು ಈ ಬಗ್ಗೆಯೇ..
ದಶಕಗಳ ಕಾಲ ಊರ ಹೊರಗಿದ್ದ ಕುಮಾರಪ್ಪನವರೊಳಗೆ ಅವರಿಗೇ ಗೊತ್ತಾಗದಂತೆ ಅವರ ಊರು ಇನ್ನಿಲ್ಲದಂತೆ ಬೆಳೆಯುತ್ತಿತ್ತು.
ಅದು ಸರಿಯಾಗಿ ಗೊತ್ತು ಮಾಡಿಕೊಳ್ಳಲು ಆಗಿದ್ದು ನನಗೆ ಮಾತ್ರ. ಯಾಕೆಂದರೆ ಆ ವೇಳೆಗೆ ನಾನೂ ಊರು ಬಿಟ್ಟು 15 ವರ್ಷ ಆಗುತ್ತಾ ಬಂದಿತ್ತು. ನನ್ನೊಳಗೆ ನನ್ನ ಬೆಂಗಳೂರು ಕುತುಬ್ ಮಿನಾರ್ ನಷ್ಟು ಎತ್ತರಕ್ಕೆ ಬೆಳೆಯುತ್ತಲೇ ಇತ್ತು.
ಹಾಗಿರುವಾಗಲೇ ಒಂದು ದಿನ ಕುಮಾರಪ್ಪ ನನಗೆ ಪೋನ್ ಮಾಡಿದರು.
ನಿಮ್ಮ ‘ನನ್ನೊಳಗಿನ ಹಾಡು ಕ್ಯೂಬಾ’ ಬೆಂಗಾಳಿಗೆ ತರುತ್ತಿದ್ದೇನೆ ಎಂದರು.
ಆಹಾ! ‘ಎನಗೆ ಬರುತಿದೆ ಜಗದ ಮುದ, ಕುಣಿದಲ್ಲದೆ ನಾ ತಾಳೆನಿದ..’ ಎಂದು ‘ಗೋಕುಲ ನಿರ್ಗಮನ’ದ ಕೃಷ್ಣನಿಗೆ ಅನಿಸಿದಂತೆಯೇ ನನಗೂ ಆಗಿ ಹೋಯ್ತು.
ಏಕೆಂದರೆ ನನ್ನ ಕ್ಯೂಬಾ ಪ್ರವಾಸ ಕಥನ ಮಲಯಾಳಂ ಹಾಗೂ ಬೆಂಗಾಲಿಯಲ್ಲಿ ಬರಬೇಕು ಎನ್ನುವುದು ನನ್ನ ತೀರಾ ದೊಡ್ಡ ಆಸೆಗಳಲ್ಲೊಂದಾಗಿತ್ತು.
ಏಕೆಂದರೆ ಆ ಬೆಂಗಾಲಿ, ಆ ಮಲೆಯಾಳಿಗಳಿಗೂ ಆ ಕ್ಯೂಬಾಕ್ಕೂ ಇನ್ನಿಲ್ಲದ ನಂಟು. ಅವರು ಓದಿದರೇ ನನ್ನ ಪ್ರವಾಸ ಸಾರ್ಥಕ ಎಂದುಕೊಂಡಿದ್ದೆ.
ಕುಮಾರಪ್ಪ ಹಾಗೆ ಹೇಳಿದಾಗ ಇಲ್ಲಿಂದಲೇ ಒಂದು ದೊಡ್ಡ ನಮಸ್ಕಾರ ಮಾಡಿದೆ.
ಆಮೇಲೆ ಕುಮಾರಪ್ಪ ಪೋನ್ ಮಾಡುತ್ತಲೇ ಹೋದರು.
ಪುಸ್ತಕ ಓದಿ ಅದರಲ್ಲಿ ನಾನು ಅಡಗಿಸಿಟ್ಟಿದ್ದ ಅರ್ಥವನ್ನು ಚರ್ಚಿಸಿ ‘ಬಂಗಾಲಿಯಲ್ಲಿ ನನಗೆ ಬರೆಯಲು ಅಷ್ಟು ಗೊತ್ತಿಲ್ಲ. ಹಾಗಾಗಿ ನಾನು ಅನುವಾದಿಸಿದ್ದನ್ನು ಬರೆದುಕೊಳ್ಳುವವರು ಒಬ್ಬರು ಬೇಕು ಅವರ ತಲಾಶ್ ನಲ್ಲಿದ್ದೇನೆ. ಅವರು ಸಿಕ್ಕ ತಕ್ಷಣ ಕ್ಯೂಬಾಗೆ ಬೆಂಗಾಲಿ ಲೇಪ ಸಿದ್ಧ’ ಎಂದರು.
ಆಹಾ! ಎಂದು ನಾನೂ ಖುಷಿಯಾದೆ.
ಆಮೇಲೆ ಸಾಕಷ್ಟು ಸಲ ನಾವು ಮಾತನಾಡಿದ್ದೇವೆ. ಅವರು ಬಂಗಾಳಕ್ಕೆ ಬರುವಂತೆ ನನಗೆ ಸಾವಿರದ ಮೇಲೊಂದುಬಾರಿ ಆಹ್ವಾನ ಕೊಟ್ಟದ್ದೂ, ನಾನು ‘ಓಹೋ ಅದಕ್ಕೇನಂತೆ’ ಎಂದ್ದದ್ದೂ, ಅದು ಆಗದ್ದು ಹೋಗದ್ದು ಎನ್ನುವುದು ನಮ್ಮಿಬ್ಬರಿಗೂ ಗೊತ್ತಿದ್ದದ್ದೂ ಹೀಗೆ ಕಾಲ ಸರಿಯುತ್ತಾ ಹೋಯಿತು.
ದಿಢೀರನೆ ಬಂದ ಒಂದು ಫೋನ್ ಕರೆ ‘ಕುಮಾರಪ್ಪ ಇಲ್ಲ’ ಎನ್ನುವ ಸುದ್ದಿ ಹೊತ್ತು ತಂದಿತು.
ಕುಮಾರಪ್ಪ ನಾನೂ ಭೇಟಿ ಮಾಡಿದ್ದು ಒಮ್ಮೆ ಮಾತ್ರ- ಹಸಿವು ಮುರಿಯಲು.
ಆ ನಂತರ ಮಾತನಾಡಿದ್ದು ನೂರಾರು ಬಾರಿ ಅದೂ ಹಸಿವು ಮುರಿಯಲು- ಓದಿನ ಹಸಿವು ಮುರಿಯಲು.
ಅವರೂ ನಾನೂ ಗಾಳಿ ತರಂಗವೆಂಬ ಕುದುರೆ ಏರಿ ಬೇಟಿ ಮಾಡಿದ್ದೇ ಹೆಚ್ಚು.
ಈಗ ನನ್ನ ಕ್ಯೂಬಾ ಪುಸ್ತಕ ನನ್ನೆದುರು ಕಂಡಾಗಲೆಲ್ಲಾ ನನಗೆ ಕುಮಾರಪ್ಪ ನೆನಪಿಗೆ ಬರುತ್ತಾರೆ.
ಹೌದಲ್ಲಾ ‘ನನ್ನ ಕ್ಯೂಬಾ ಅನುವಾದ ಮಾಡುವವರೆಗೆ ನಿಮ್ಮನ್ನು ಹೋಗಲು ಬಿಡುವುದಿಲ್ಲ’ ಎಂದು ನಾನು ಅವರಿಗೆ ಅಡ್ಡ ನಿಲ್ಲಬಹುದಿತ್ತಲ್ಲ ಮತ್ತು ಅವರು ಎಂದಿಗೂ ಅದನ್ನು ಅನುವಾದ ಮಾಡಿ ಮುಗಿಸದಂತೆಯೂ ನೋಡಿಕೊಳ್ಳಬಹುದಿತ್ತಲ್ಲ…???