ಮೈಸೂರು, ನವೆಂಬರ್ 27, 2022 (www.justkannada.in): ಪತ್ನಿಯೇ ತನಗೆ ಸೇರಿದ ಚಿನ್ನಾಭರಣ ಕಳವು ಮಾಡಿದ್ದಾರೆ ಎಂದು ಆರೋಪಿಸಿ ಪತಿ ಪೊಲೀಸ್ ಠಾಣೆ ಮಟ್ಟಿಲೇರಿದ್ದಾರೆ.
ಚಿನ್ನಾಭರಣ ಕಳವು ಸಂಬಂಧ ವೃದ್ಧರೊಬ್ಬರು ನೀಡಿದ ಯ ದೂರನ್ನು ಮೈಸೂರಿನ 6ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಆದೇಶದ ಮೇರೆಗೆ ವಿವಿ ಮಠಂ ಠಾಣೆ ಪೊಲೀಸರು ದಾಖಲಿಸಿಕೊಂಡಿದ್ದಾರೆ.
ವಿಜಯನಗರ 2ನೇ ಹಂತದ ನಿವಾಸಿ ಎಂ.ರಘು ಕಾರಿಯಪ್ಪ (70) ಅವರು ಶಿಕ್ಷಕಿಯಾಗಿರುವ ತಮ್ಮ ಪತ್ನಿ ಜಾಸ್ಮಿನ್ ಆರ್.ಕಾರಿಯಪ್ಪ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಪತ್ನಿ ಜಾಸ್ಮಿನ್ ಕಾರಿಯಪ್ಪ 5 ವರ್ಷದಿಂದ ಮಾನಸಿಕ ಕಿರುಕುಳ ನೀಡಿ ತಮ್ಮನ್ನು ಹದ್ದುಬಸ್ತಿನಲ್ಲಿಟ್ಟು ಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ರಘು ಕಾರಿಯಪ್ಪ ದೂರಿನಲ್ಲಿ ತಿಳಿಸಿದ್ದಾರೆ. 2022ರ ಏ.15ರಂದು ತಾವು ಗೋಕುಲಂ 3ನೇ ಹಂತದಲ್ಲಿ ವಾಸವಿದ್ದು, ತಾವು ಸ್ನಾನಕ್ಕೆ ಹೋಗಿದ್ದಾಗ ಅಲ್ಲೇರಾದಲ್ಲಿದ್ದ ತಮಗೆ ಸೇರಿದ 1 ನವರತ್ನ ಉಂಗುರ, 1 ಚಿನ್ನದ ಬಳೆ, 4 ಚಿನ್ನದ ಉಂಗುರಗಳು, 2 ಚಿನ್ನದ ನಾಣ್ಯ, 1 ಚಿನ್ನದ ಸರ, 1 ದೊಡ್ಡ ಬಳೆ ಹಾಗೂ ಮಾಣಿಕ್ಯ ಕಿವಿ ಉಂಗುರಗಳನ್ನು ಪತ್ನಿ ಕಳವು ಮಾಡಿದ್ದಾರೆ. ಈ ವಿಚಾರ ಕೇಳಿದಾಗ ತಾನೇ ಚಿನ್ನಾಭರಣ ತೆಗೆದುಕೊಂಡಿರುವುದಾಗಿ ಹೇಳಿ ಕೊಲೆ ಬೆದರಿಕೆ ಹಾಕಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ತಾವು ಏ.16ರಂದು ವಿವಿಪುರಂ ಠಾಣೆಗೆ ದೂರು ನೀಡಿ, ಮೇ 12ರಂದು ಹಿಂಬರಹ ಪಡೆದಿರುವುದಾಗಿ ರಘು ಕಾರಿಯಪ್ಪ ತಮ್ಮ ದೂರಿನಲ್ಲಿ ಹೇಳಿದ್ದಾರೆ. ಪತ್ನಿಗೆ ಜು.16ರಂದು ವಕೀಲರ ಮೂಲಕ ನೋಟಿಸ್ ನೀಡಿದ್ದು, ಆಕೆ ಅಭರಣಗಳನ್ನು ಹಿಂತಿರುಗಿಸುವುದಾಗಿ ಜು.22 ರಂದು ಉತ್ತರಿಸಿದ್ದರೂ ಈವರೆಗೂ ನೀಡಿಲ್ಲ ಎಂದು ರಘು ಕಾರಿಯಪ್ಪ ವಿವಿಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.