ಬೆಂಗಳೂರು ಜೂನ್ ,16,2022(www.justkannada.in): ಅರಣ್ಯದ ಒತ್ತುವರಿಯನ್ನು ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆಯನ್ನು ನೀಡುವಂತೆ ಅರಣ್ಯ ಅಭಿವೃದ್ದಿ ನಿಗಮದ ಅಧಿಕಾರಿಗಳು ಹಾಗೂ ನೌಕರರಿಗೆ ನಿಗಮದ ಅಧ್ಯಕ್ಷೆ ತಾರಾ ಅನುರಾಧ ಕರೆ ನೀಡಿದರು.
ಇಂದು ಬೆಂಗಳೂರಿನಲ್ಲಿ ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಸುವರ್ಣ ಮಹೋತ್ಸವದ ಹಿನ್ನಲೆಯಲ್ಲಿ ಆಯೋಜಿಸಿದ್ದ “ಸೈಕಲ್ ಜಾಥಾ” ಗೆ ಚಾಲನೆ ನೀಡಿ ಮಾತನಾಡಿದರು. ಕರ್ನಾಟಕ ಅರಣ್ಯ ಅಭಿವೃದ್ದಿ ನಿಗಮದ ಉದ್ದೇಶಗಳಲ್ಲಿ ಅರಣ್ಯ ಒತ್ತುವರಿಯನ್ನು ತಡೆಯುವುದು ಬಹಳ ಪ್ರಮುಖವಾದ ಅಂಶ. ಕಾಡಿನ ಅಂಚಿನ ಪ್ರದೇಶಗಳಲ್ಲಿ ರಬ್ಬರ್ ಹಾಗೂ ನೀಲಗಿರಿ ಮರಗಳನ್ನು ಬೆಳೆಸುವ ಮೂಲಕ ಅತಿಕ್ರಮಣ ಒತ್ತುವರಿಯನ್ನು ತಡೆಗಟ್ಟುವ ಮಹತ್ವದ ಕಾರ್ಯ ನಿಗಮದ್ದಾಗಿದೆ. ಈ ಹಿನ್ನಲೆಯಲ್ಲಿ ನಿಗಮಕ್ಕೆ ಅರಣ್ಯ ಇಲಾಖೆಯ ವತಿಯಿಂದ ನೀಡಲಾಗಿರುವ ಅರಣ್ಯದ ಅಂಚಿನ ಪ್ರದೇಶಗಳು ಹಾಗೂ ಅಗತ್ಯವಿರುವಂತಹ ಕಡೆಗಳಲ್ಲಿ ಒತ್ತುವರಿಯನ್ನು ತೆರವುಗೊಳಿಸುವ ಹಾಗೂ ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚಿನ ಆದ್ಯತೆ ನೀಡುವಂತೆ ಕರೆ ನೀಡಿದರು.
ಕರ್ನಾಟಕ ರಾಜ್ಯದಲ್ಲಿ ನೀಲಗೀರಿ ಮರಗಳನ್ನು ಬೆಳೆಸುವುದನ್ನ ನಿಷೇದಿಸಲಾಗಿದೆ. ಇದರಿಂದ ನಮ್ಮ ನಿಗಮದ ಮೂಲ ಹಾಗೂ ಪ್ರಮುಖ ಆದಾಯ ಕುಂಠಿತವಾಗಿದೆ. ನೀಲಗಿರಿ ಮರಗಳನ್ನು ಕಾಡಿನ ಅಂಚಿನಲ್ಲಿ ಬೆಳೆಸುವ ಮೂಲಕ ಒತ್ತುವರಿಯನ್ನು ತಡೆಯಲಾಗುತ್ತಿತ್ತು. ಅಲ್ಲದೆ, ಕಾಲಕಾಲಕ್ಕೆ ಅವುಗಳನ್ನು ವ್ಯವಸ್ಥಿತವಾಗಿ ಕಟಾವು ಮಾಡುವ ಮೂಲಕ ಒತ್ತುವರಿಗೆ ಅವಕಾಶ ಇಲ್ಲದಂತೆ ಮಾಡಲಾಗುತ್ತಿತ್ತು. ಬೇರೆ ರೀತಿಯ ಮರಗಳನ್ನು ಬೆಳೆಸುವ ಪ್ರಯತ್ನ ಸಾಗುತ್ತಿದ್ದರೂ ಆದಾಯದಲ್ಲಿ ಅಭಿವೃದ್ದಿ ಕಾಣುತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.
ನಿಗಮದ ವ್ಯವಸ್ಥಾಪಕ ನಿರ್ದೇಶರಾದ ರಾಧಾದೇವಿ ಐ.ಎಫ್.ಎಸ್ ಮಾತನಾಡಿ, ಅರಣ್ಯ ಅಭಿವೃದ್ದಿಯ ವಿಷಯದಲ್ಲಿ ನಮ್ಮ ನಿಗಮ ಉತ್ತಮ ಸಾಧನೆ ತೋರಿಸಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸೈಕಲ್ ಜಾಥದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಐ.ಎಫ್.ಎಸ್ ಆರ್ ಕೆ ಸಿಂಗ್, ನಿಗಮದ ಉಪಾಧ್ಯಕ್ಷ ರೇವಣಪ್ಪ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು. ಕಬ್ಬನ್ ಪಾರ್ಕ್ ನಲ್ಲಿ ನಡೆದ ಜಾಥಾದಲ್ಲಿ ನೂರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.
Key words: Golden Jubilee -Karnataka -Forest –Development- Corporation-tara anuradha