ಬೆಂಗಳೂರು, ಅಗಸ್ಟ್ 28,2020(www.justkannada.in): ಶಿಕ್ಷಕರು ತಮ್ಮ ಕೆಲಸಗಳಿಗಾಗಿ ಶಾಲೆಗಳಿಗೆ ರಜೆ ಹಾಕಿ ಇಲಾಖೆಯ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ತಂತ್ರಜ್ಞಾನಾಧಾರಿತ ಶಿಕ್ಷಕ ಮಿತ್ರ-ಆ್ಯಪ್ ಅನ್ನ ಲೋಕಾರ್ಪಣೆ ಮಾಡಲಾಗಿದೆ.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಆಯೋಜಿಸಿರುವ ಶಿಕ್ಷಕ ಮಿತ್ರ- ಆ್ಯಪ್ ಲೋಕಾರ್ಪಣೆ ಮತ್ತು ಮಾನ್ಯ ಶಿಕ್ಷಣ ಸಚಿವರ ಕುರಿತ ವಿಮರ್ಶಾ ಪುಸ್ತಕ “ವಿದ್ಯಾವಿನೀತ” ಮತ್ತು ಮಾನ್ಯ ಸಚಿವರ ಅಂಕಣ ಬರಹದ ಸಂಗ್ರಹ-ಶಿಕ್ಷಣ ಯಾತ್ರೆ – ಪುಸ್ತಕ ಲೋಕಾರ್ಪಣೆಗೊಳಿಸಿ ಕಾರ್ಯಕ್ರಮವನ್ನುದ್ದೇಶಿಸಿ ಮಾತಾನಾಡಿದರು.
ಅತ್ಯಂತ ಸಂತೋಷದಿಂದ ಇಂದು ಶಿಕ್ಷಕ ಮಿತ್ರ ಆ್ಯಪ್ ಲೋಕಾರ್ಪಣೆ ಮತ್ತು ಶಿಕ್ಷಣ ಸಚಿವರು ಹಾಗೂ ಮಿತ್ರರಾದ ಸುರೇಶ್ ಕುಮಾರ್ ಅವರ ವಿದ್ಯಾವಿನೀತ ಮತ್ತು ಅವರ ಅಂಕಣಬರಹದ ಸಂಗ್ರಹ ಶಿಕ್ಷಣಯಾತ್ರೆ ಪುಸ್ತಕವನ್ನು ಬಿಡುಗಡೆ ಮಾಡಿದ್ದೇನೆ. ಶಿಕ್ಷಕರು ತಮ್ಮ ಕೆಲಸಗಳಿಗಾಗಿ ಶಾಲೆಗಳಿಗೆ ರಜೆ ಹಾಕಿ ಇಲಾಖೆಯ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಶಿಕ್ಷಕರುಗಳಿಗೆ ಅನುಕೂಲವಾಗುವಂತೆ 2019-20ರ ಆಯವ್ಯಯದಲ್ಲಿ ನಾನು ಘೋಷಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ತಂತ್ರಜ್ಞಾನಾಧಾರಿತ ಶಿಕ್ಷಕ ಮಿತ್ರ-ಆಪ್ ತಯಾರಿಸಿದೆ ಎಂದು ಸಿಎಂ ಬಿಎಸ್ ವೈ ತಿಳಿಸಿದರು.
ಶಿಕ್ಷಕರು ಮೊಬೈಲ್ ನಲ್ಲಿ ಈ ಆಪ್ ನ್ನು ಡೌನ್ಲೋಡ್ ಮಾಡಿಕೊಂಡು ತಾವು ಕುಳಿತಲ್ಲೇ ತಮ್ಮ ಸೇವಾ ವಿಷಯಗಳನ್ನು, ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ಆ್ಯಪ್ ಮೂಲಕ ನಿರ್ದಿಷ್ಟ ಸಮಸ್ಯೆಗಳನ್ನು ಇಂತಿಷ್ಟು ದಿನಗಳಲ್ಲಿ ಬಗೆಹರಿಸುವ ಬಗ್ಗೆ ಕಾಲಾವಧಿ ನಿರ್ಧರಿಸಲಾಗಿದೆ. ಇನ್ನು ಮುಂದೆ ಶಿಕ್ಷಕರ ಅಲೆದಾಟಕ್ಕೆ ಆಪ್ ಸೇವೆಯ ಮೂಲಕ ಇತಿಶ್ರೀ ಹಾಡಲಾಗುತ್ತಿದೆ. ಈ ಬಾರಿಯಿಂದ ಸಾರ್ವತ್ರಿಕ ವರ್ಗಾವಣೆ ಅರ್ಜಿಯನ್ನು ಸಹ ಈ ಶಿಕ್ಷಕ ಮಿತ್ರ- ಆಪ್ ಮೂಲಕವೇ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಿಎಂ ಬಿಎಸ್ ವೈ ವಿವರಿಸಿದರು.
ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರ ಕುರಿತು ನಾಡಿನ ಹಲವಾರು ಲೇಖಕರು ಬರೆದಿರುವ ವಿಮರ್ಶಾ ಕೃತಿ ‘ವಿದ್ಯಾವಿನೀತ ಈ ಪುಸ್ತಕದ ಹೆಸರು ಅವರ ವ್ಯಕ್ತಿತ್ವ, ಸ್ವಭಾವಕ್ಕೆ ಕನ್ನಡಿ ಹಿಡಿದಂತಿದೆ. ಇದು ಅವರ ಗುಣಸ್ವಭಾವಕ್ಕೆ ಅನ್ವರ್ಥವಾಗಿದೆ. ಶಿಕ್ಷಣ ಇಲಾಖೆಯನ್ನು ಒಂದು ಚೌಕಟ್ಟಿಗೆ ಒಳಪಡಿಸಿ ಶಿಕ್ಷಕ ಸ್ನೇಹಿ, ಶಿಕ್ಷಣ ಸ್ನೇಹಿ ಮತ್ತು ವಿದ್ಯಾರ್ಥಿ ಸ್ನೇಹಿಯಾಗಿ ಕೆಲಸ ಮಾಡಿ ಜನಪ್ರಿಯರಾಗಿದ್ದಾರೆ. ಶಿಕ್ಷಕರ ವರ್ಗಾವಣೆ ನೀತಿಯನ್ನು ಸರಳೀಕರಣಗೊಳಿಸಿ ಶಿಕ್ಷಕರಿಗೆ ನೆಮ್ಮದಿ ತಂದಿದ್ದಾರೆ. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಗಳನ್ನು ಕೋವಿಡ್ ವಿಷಮ ಕಾಲಘಟ್ಟದಲ್ಲಿಯೂ ಯಶಸ್ವಿಯಾಗಿ ನಡೆಸಿದ್ದಾರೆ. ಜನಪರ ಕಾಳಜಿಯ ಸುರೇಶ್ ಕುಮಾರ್ ಅವರ ವ್ಯಕ್ತಿತ್ವ, ಇಲಾಖೆಯಲ್ಲಿನ ಅವರ ಸಾಧನೆ,ಅವರ ಸ್ವಭಾವವನ್ನು ಈ ಪುಸ್ತಕದಲ್ಲಿ ತಮ್ಮ ಲೇಖನಗಳ ಮೂಲಕ ಹಂಚಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಣ ಸಚಿವರಾದ ನಂತರ ಇಲಾಖೆಯ ಕುರಿತು ಆಯಾ ಸಂದರ್ಭದಲ್ಲಿ ತಾವು ನಾಡಿನ ವಿವಿಧ ಪತ್ರಿಕೆಗಳಿಗೆ ಬರೆದ ಲೇಖನಗಳ ಸಂಗ್ರಹ ಶಿಕ್ಷಣ ಯಾತ್ರೆ ಪುಸ್ತಕದ ಲೇಖನಗಳು ಶಿಕ್ಷಕರಿಗೆ, ಪೋಷಕರಿಗೆ, ನಾಡಿನ ಜನರಿಗೆ ವಿಶೇಷವಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿಯಾಗಿವೆ. ಒಬ್ಬ ಸಚಿವರು ಹೇಗೆ ಜನಮುಖಿಯಾಗಿ ಕೆಲಸ ಮಾಡಬಹುದೆಂಬುದಕ್ಕೆ ಸುರೇಶ್ ಕುಮಾರ್ ಮಾದರಿಯಾಗಿದ್ದಾರೆ ಸುರೇಶ್ ಕುಮಾರ್ ಅವರ ಸತ್ಕಾರ್ಯಗಳು ಮುಂದುವರೆಯಲಿ ಎಂದು ಸಿಎಂ ಬಿಎಸ್ ವೈ ಹಾರೈಸಿದರು.
Key words: Good news-teachers -CM BS yeddyurappa- shikshaka mitra app