ಬೆಂಗಳೂರು,ಮಾರ್ಚ್,24,2025 (www.justkannada.in): ಸುಲಲಿತ ಉದ್ಯಮ ನೀತಿಗೆ ಸಂಬಂಧಿಸಿದ ಸುಧಾರಣಾ ಕ್ರಮಗಳ ಜಾರಿಗೆ ವೇಗ ನೀಡಲು ಕರ್ನಾಟಕ ರಾಜ್ಯ ಸರ್ಕಾರವು ಉನ್ನತ ಮಟ್ಟದ ಸಭೆಯಲ್ಲಿ ನಿರ್ಧರಿಸಿದೆ.
ಉದ್ದಿಮೆ ಹಾಗೂ ಕೈಗಾರಿಕೆಗಳು ಅನುಸರಿಸಬೇಕಾದ ನಿಯಮಾವಳಿಗಳ ಸಂಖ್ಯೆ ಕಡಿತಗೊಳಿಸುವ ಮತ್ತು ನಿಯಂತ್ರಣ ಮುಕ್ತಗೊಳಿಸುವುದರ ಸಂಬಂಧ ಕೇಂದ್ರ ಸರ್ಕಾರವು ರಾಜ್ಯಕ್ಕೆ ಹಲವು ಮಾರ್ಗಸೂಚಿಗಳನ್ನು ನೀಡಿದೆ. ಇವುಗಳ ಜಾರಿ ಬಗ್ಗೆ ಚರ್ಚಿಸಲು ಕೇಂದ್ರ ಸರ್ಕಾರದ ಕಾರ್ಯಪಡೆಯ ಸದಸ್ಯರಾಗಿರುವ ಮನೋಜ್ ಜೋಶಿ, ಐಎಎಸ್- ಕೇಂದ್ರ ಸರ್ಕಾರದ ಭೂ ಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಅವರ ನೇತೃತ್ವದಲ್ಲಿನ ತಂಡವು ರಾಜ್ಯಕ್ಕೆ ಭೇಟಿ ನೀಡಿತ್ತು. ಈ ತಂಡದ ಸದಸ್ಯರ ಜೊತೆಗೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸುಲಲಿತ ಉದ್ಯಮ ನೀತಿ ಜಾರಿಗೆ ತರುವ ಸಂಬಂಧ ರಾಜ್ಯ ಸರ್ಕಾರಗಳು ಅನುಸರಿಸಬೇಕಾದ ಕ್ರಮಗಳ ಕುರಿತು ನಿಗಾವಹಿಸಲು ಕೇಂದ್ರ ಸರ್ಕಾರವು ಕಾರ್ಯಪಡೆಯೊಂದನ್ನು ರಚಿಸಿದೆ. ಈ ಮಾರ್ಗಸೂಚಿಗಳ ಬಗ್ಗೆ ರಾಜ್ಯ ಸರ್ಕಾರದ ಜೊತೆ ಚರ್ಚಿಸಲು ಕೇಂದ್ರದ ನಿಯೋಗವು ರಾಜ್ಯಕ್ಕೆ ಭೇಟಿ ನೀಡಿತ್ತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು, ಕರ್ನಾಟಕ ರಾಜ್ಯ ಸರ್ಕಾರವು ಈ ನಿಟ್ಟಿನಲ್ಲಿ ಕೈಗೊಂಡಿರುವ ಹಲವಾರು ಸುಧಾರಣಾ ಕ್ರಮಗಳನ್ನು ಕೇಂದ್ರ ಸರ್ಕಾರದ ತಂಡಕ್ಕೆ ಮನವರಿಕೆ ಮಾಡಿಕೊಟ್ಟರು. ಇತರ ಮಾರ್ಗಸೂಚಿ ಕ್ರಮಗಳನ್ನೂ ಜಾರಿಗೊಳಿಸಲು ರಾಜ್ಯ ಸರ್ಕಾರವು ಬದ್ಧವಾಗಿದೆ ಎಂದು ಭರವಸೆ ನೀಡಿದರು.
ಭೂಮಿಯ ಬಳಕೆ, ಕಟ್ಟಡ ನಕ್ಷೆ ಅನುಮೋದನೆ, ಕಟ್ಟಡ ನಿರ್ಮಾಣ ಪರವಾನಗಿ, ಕಾರ್ಮಿಕ ಸುಧಾರಣಾ ಕ್ರಮಗಳು, ಕೈಗಾರಿಕೆಗಳಿಗೆ ಸಂಬಂಧಿಸಿದ ಅವಶ್ಯಕ ಸೇವೆಗಳು ಹಾಗೂ ಇತರ ಅನುಮತಿಗಳನ್ನು ಸರಳೀಕರಣಗೊಳಿಸುವ ಬಗ್ಗೆ ಚರ್ಚಿಸಿ ಅನುಸರಣೆ ಹೊರೆಗಳನ್ನು ಈಗಾಗಲೇ ಗಮನಾರ್ಹವಾಗಿ ತಗ್ಗಿಸಲಾಗಿದೆʼ ಎಂದು ತಿಳಿಸಿದರು.
ಆದ್ಯತಾ ವಲಯಗಳಲ್ಲಿ ರಾಜ್ಯ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆಗಳನ್ನು ನೀಡಿದ ಮನೋಜ್ ಜೋಶಿ ಅವರು, ಉದ್ಯಮ ಸ್ನೇಹಿ ಕೈಗಾರಿಕಾ ನೀತಿ ಅನುಸರಿಸಲು ಕರ್ನಾಟಕ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕ್ರಮಗಳು ಮತ್ತು ಬದ್ಧತೆಯನ್ನು ಶ್ಲಾಘಿಸಿದರು.
ಕೈಗಾರಿಕಾ ಉದ್ದೇಶಕ್ಕೆ ಲಭ್ಯ ಇರುವ ಭೂಮಿಯ ಬಳಕೆ ಕುರಿತ ನಿಯಮಾವಳಿಗಳ ಸರಳೀಕರಣ, ರಾಜ್ಯದಲ್ಲಿ ಕೈಗಾರಿಕೆಗಳಿಗೆ ಲಭ್ಯ ಇರುವ ಭೂಮಿಯ ಭೌಗೋಳಿಕ ಮಾಹಿತಿ ವ್ಯವಸ್ಥೆ, ಕಟ್ಟಡ ಮತ್ತು ನಿರ್ಮಾಣ ನಿಯಂತ್ರಣ, ಕಟ್ಟಡ ಪರವಾನಗಿ, ನಿರ್ದಿಷ್ಟ ಕೈಗಾರಿಕೆಗಳಲ್ಲಿ ಸದ್ಯಕ್ಕೆ ಜಾರಿಯಲ್ಲಿ ಇರುವ ಮಹಿಳೆಯರ ನೇಮಕಾತಿ ಮೇಲಿನ ನಿರ್ಬಂಧ ತೆರವು, ಎಲ್ಲ ಕಾರ್ಖಾನೆಗಳಲ್ಲಿ ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶ ನೀಡುವುದು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡುವ ಪ್ರಮಾಣಪತ್ರದ ವಿಳಂಬಕ್ಕೆ ಕಡಿವಾಣ, ಕಾರ್ಖಾನೆ ಹಾಗೂ ಅಂಗಡಿ ಮುಂಗಟ್ಟುಗಳ ಪರವಾನಗಿ ಮತ್ತು ನವೀಕರಣ ನಿಯಮಗಳ ಸರಳೀಕರಣ, ವಿದ್ಯುತ್ ಹಾಗೂ ನೀರಿನ ಸಂಪರ್ಕ ತ್ವರಿತಗೊಳಿಸುವಿಕೆ, ಮಾಲಿನ್ಯರಹಿತ ಕೈಗಾರಿಕೆಗಳ ಮರುವರ್ಗೀಕರಣ, ರಾಜ್ಯ ಸರ್ಕಾರ ಒದಗಿಸುವ ಎಲ್ಲ ಸೇವೆಗಳನ್ನು ರಾಜ್ಯಮಟ್ಟದ ಏಕಗವಾಕ್ಷಿ ವ್ಯವಸ್ಥೆಗೆ ಒಳಪಡಿಸುವುದು, ವಿವಿಧ ಇಲಾಖೆಗಳ ಮಧ್ಯೆ ಸಮನ್ವಯತೆ ಸಾಧಿಸುವುದು ಮುಂತಾದ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಕೈಗೊಂಡ ಶಿಫಾರಸ್ಸುಗಳ ಜಾರಿಗೆ ರಾಜ್ಯ ಮಟ್ಟದ ಕಾರ್ಯಪಡೆ ರಚಿಸಲಾಗಿದೆ. ಪಾರದರ್ಶಕ ಮತ್ತು ದಕ್ಷ ನಿಯಂತ್ರಣ ಕ್ರಮಗಳನ್ನು ರೂಪಿಸುವುದು ಸರ್ಕಾರದ ಉದ್ದೇಶವಾಗಿದೆ. ಈ ಮೂಲಕ ಕರ್ನಾಟಕವನ್ನು ಆರ್ಥಿಕ ಪ್ರಗತಿಯ ಪ್ರಮುಖ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಐಎಎಸ್ -ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ಉಮಾ ಮಹಾದೇವನ್,, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಸೆಲ್ವಕುಮಾರ್, ಕೈಗಾರಿಕಾ ಅಭಿವೃದ್ಧಿ ಆಯುಕ್ತರಾದ ಗುಂಜನ್ ಕೃಷ್ಣ , ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ದೀಪಾ ಚೋಳನ್ ಮತ್ತಿತರರು ಸಭೆಯಲ್ಲಿ ಮಾತನಾಡಿದರು.
Key words: Easy Business Policy, Government, speed up, implementation, reform measures