ಮೈಸೂರು,ಮಾರ್ಚ್,17,2021(www.justkannada.in): ಪ್ರಬಲವಾಗಿರುವ ಸಮುದಾಯಗಳಿಗೆ ಹಿಂದುಳಿದ ವರ್ಗಗಳ ಪ್ರವರ್ಗದ ಪಟ್ಟಿಯಲ್ಲಿ ಮೀಸಲಾತಿ ನೀಡುವುದನ್ನು ವಿರೋಧಿಸಬೇಕಿದೆ. ಜನರು ಹೋರಾಟದ ಜತೆಗೆ ಕಾನೂನು ಹೋರಾಟವನ್ನೂ ಆರಂಭಿಸಬೇಕಿದೆ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಸಮಾಲೋಚನಾ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಮೈಸೂರಿನ ಜಲದರ್ಶಿನಿಯಲ್ಲಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ, ಜಿಲ್ಲಾ ಕುಂಬಾರರ ಸಂಘ, ಜಿಲ್ಲಾ ಸವಿತಾ ಸಮಾಜ, ಜಿಲ್ಲಾ ಭಗೀರಥ ಉಪ್ಪಾರರ ಸಂಘ, ಜಿಲ್ಲಾ ವಿಶ್ವಕರ್ಮ ಮಹಾ ಮಂಡಲ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಸಂಯುಕ್ತಾಶ್ರಯದಲ್ಲಿ ಮೀಸಲಾತಿ ಸಮಾಲೋಚನಾ ಸಭೆ ನಡೆಯಿತು.
ಸಭೆಯಲ್ಲಿ ಪ್ರೊಫೆಸರ್ ಗಳಾದ ಕೆಎಸ್ ಭಗವಾನ್, ಬಿಪಿ ಮಹೇಶ್ ಚಂದ್ರಗುರು, ಕಾಳೇಗೌಡ ನಾಗವಾರ, ಮಾಜಿ ಮೇಯರ್‌ಗಳು ಸೇರಿದಂತೆ ಹಲವರು ಭಾಗಿಯಾಗಿದ್ದರು. ಸಭೆಯಲ್ಲಿ ಮೀಸಲಾತಿ ಕುರಿತು ಚರ್ಚೆ ನಡೆಯಿತು.
ಬಲಾಢ್ಯರು ಮೀಸಲಾತಿಗೆ ಹೋರಾಟ ಮಾಡುತ್ತಿದ್ದಾರೆ, ಇದಕ್ಕೆ ಪ್ರತಿಯಾಗಿ ಹೋರಾಟ ಆರಂಭಿಸಲೇಬೇಕಿದೆ. ಪ್ರಬಲವಾಗಿರುವ ಸಮುದಾಯಗಳಿಗೆ ಹಿಂದುಳಿದ ವರ್ಗಗಳ ಪ್ರವರ್ಗದ ಪಟ್ಟಿಯಲ್ಲಿ ಮೀಸಲಾತಿ ನೀಡುವುದನ್ನು ವಿರೋಧಿಸಬೇಕಿದೆ. ಜನರು ಹೋರಾಟದ ಜತೆಗೆ ಕಾನೂನು ಹೋರಾಟವನ್ನೂ ಆರಂಭಿಸಬೇಕಿದೆ ಎಂದು ಸಮುದಾಯದ ಮುಖಂಡರು ತಿಳಿಸಿದರು.
ಕೆಲವು ಸಮುದಾಯಗಳು ಮೀಸಲಾತಿಗಾಗಿ ಬೇಡಿಕೆ ಇಟ್ಟಿವೆ. ಇದು ಕೇವಲ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿರುವ ಜಾತಿಗಳಿಗೆ ಸೀಮಿತವಾಗಿ ಪರಿಣಾಮ ಬೀರುವುದಿಲ್ಲ. ಪರಿಶಿಷ್ಟ ಜಾತಿ, ಪಂಗಡಗಳ ಜನರಿಗೂ ಇದರಿಂದ ತೊಂದರೆ ಆಗಲಿದೆ. ಈಗಿರುವ ಮೀಸಲಾತಿಯನ್ನ ನೋಡಿದಾಗ ವೈಜ್ಞಾನಿಕವಾದ ಹಂಚಿಕೆ ಇಲ್ಲ. ಇವತ್ತಿನ ಸರ್ಕಾರ ಎಲ್ಲದರಲ್ಲೂ ಗೊಂದಲ ಸೃಷ್ಟಿಸಿ, ಉಳ್ಳವರಿಗೆ ಸಹಕಾರ ನೀಡುತ್ತಿದೆ. ಇದರಿಂದ ಹಿಂದುಳಿದವರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕೂಡಲೇ ಮೀಸಲಾತಿ ವಿಚಾರವಾಗಿ ಆಗುತ್ತಿರುವ ತೊಂದರೆಗಳ ಬಗ್ಗೆ ಸರ್ಕಾರಕ್ಕೆ ಎಚ್ಚರಿಕೆ ನೀಡುವ ಕೆಲಸವಾಗಬೇಕಿದೆ ಎಂದು ಮುಖಂಡರುಗಳ ಅಭಿಪ್ರಾಯ ವ್ಯಕ್ತಪಡಿಸಿದರು.
Key words: government- about -difficulties – reservation- issue- Opinion – meeting-mysore