ಬೆಂಗಳೂರು,ಜೂನ್,30,2022(www.justkannada.in): ಪಠ್ಯ ಪುಸ್ತಕ ತಿದ್ದುಪಡಿಯ ಕುರಿತಾದ ಸರ್ಕಾರದ ಕ್ರಮ ಅರಾಜಕ ನಿಲುವಿನದ್ದು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಲೋಪ ದೋಷಗಳಾಗಿವೆ ಎಂದು ಸರ್ಕಾರ ಕೊನೆಗೂ ಒಪ್ಪಿಕೊಂಡಿದೆ. 1 ರಿಂದ 10 ನೆ ತರಗತಿಯವರೆಗಿನ ಕನ್ನಡ ಭಾಷಾ ಪಠ್ಯ ಪುಸ್ತಕ, ಸಮಾಜ ವಿಜ್ಞಾನ ಪಠ್ಯ ಪುಸ್ತಕ ಹಾಗೂ ಸೀಮಿತ ತರಗತಿಗಳ ಪರಿಸರ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಒಟ್ಟು 83 ಕಡೆ ತಿದ್ದುಪಡಿಗಳನ್ನು ಮಾಡಲಾಗಿದೆ ಎಂಬ ಮಾಹಿತಿ ಇದೆ.
ಮಾಡಿರುವ ತಿದ್ದುಪಡಿಗಳಲ್ಲಿ ಬಹುತೇಕ ವಿವರಗಳು ಜೀವ ವಿರೋಧಿ ನಿಲುವಿನಿಂದ ಕೂಡಿವೆ ಎಂಬುದು ನಾಡಿನ ಶಿಕ್ಷಣ ತಜ್ಞರುಗಳ ಅಭಿಪ್ರಾಯವಾಗಿದೆ. ಆದರೆ ಸರ್ಕಾರ ತನ್ನ ಆದೇಶದಲ್ಲಿ ಏಳೆಂಟು ತಿದ್ದುಪಡಿಗಳನ್ನಷ್ಟೆ ಮಾಡಿ ತಿಪ್ಪೆ ಸಾರಿಸುವ ಕೆಲಸ ಮಾಡುತ್ತಿದೆ. ಇದು ಸರಿಯಾದ ಕ್ರಮವಲ್ಲ ಎಂದು ಆಕ್ಷೇಪಿಸಿದರು.
ರೋಹಿತ್ ಚಕ್ರತೀರ್ಥ ಸಮಿತಿ ಮಾಡಿರುವ ಶಿಫಾರಸ್ಸುಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ತಜ್ಞರುಗಳು ಪರಿಶೀಲನೆ ಮಾಡಿ ಆ ವಿವರಗಳು ನಾಡಿನ ಜ್ಞಾನ ಪರಂಪರೆಗೆ ಅನುಗುಣವಾಗಿವೆಯೆ? ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುತ್ತವೆಯೆ? ರಾಷ್ಟ್ರೀಯ, ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿವೆಯೆ? ಮಕ್ಕಳಿಗೆ ಕಲಿಸುವ ಸಂಗತಿಗಳು ದೇಶದ ಹಾಗೂ ಜಗತ್ತಿನ ವಿವಿಧ ಜ್ಞಾನ ಶಾಖೆಗಳ ವಿದ್ವಾಂಸರುಗಳು ಒರೆಗೆ ಹಚ್ಚಿ, ಪರಿಶೀಲಿಸಿ ಸರ್ವ ಸಮ್ಮತಿಯ ಅಭಿಪ್ರಾಯಕ್ಕೆ ಬರಲಾಗಿದೆಯೆ? ಎಂಬ ಅಂಶಗಳೆಲ್ಲ ಮೊದಲು ಇತ್ಯರ್ಥವಾಗಬೇಕಾಗುತ್ತದೆ.
ಇಲ್ಲದಿದ್ದರೆ ಯುಪಿಎಸ್ಸಿ, ಕೆಪಿಎಸ್ಸಿ ಮುಂತಾದ ಪರೀಕ್ಷಾ ಪ್ರಾಧಿಕಾರಗಳು ನಡೆಸುವ ಪರೀಕ್ಷೆಗಳಲ್ಲಿ ಹಾಗೂ ಜಗತ್ತಿನ ಬೇರೆ ಬೇರೆ ಕಾಲೇಜು/ ವಿಶ್ವ ವಿದ್ಯಾಲಯಗಳಿಗೆ ಕಲಿಯಲು ಇಚ್ಛಿಸುವವರು ಸತ್ಯ ಸಂಗತಿಗಳಿಗೆ ವಿರುದ್ಧವಾದ ಅಂಶಗಳನ್ನು ಬರೆದು ಅಲ್ಲಿನ ಪರೀಕ್ಷೆಗಳಲ್ಲಿ ಪಾಸು ಮಾಡಲು ಸಾಧ್ಯವಿಲ್ಲ.
ಆದ್ದರಿಂದ ಸಮಗ್ರ ತಿದ್ದುಪಡಿಗಳನ್ನು ಪರಿಶೀಲನೆ ಮಾಡಿದ ನಂತರವೆ ಮಕ್ಕಳಿಗೆ ವಿತರಿಸಬೇಕು. ಪ್ರಸ್ತುತ ಸರ್ಕಾರ ಮಾಡಿರುವ ದುರುದ್ದೇಶದ ಅವಾಂತರಗಳನ್ನು ಪುಸ್ತಕಗಳಲ್ಲಿ ಸರಿಪಡಿಸದೆ ಎಸ್ಡಿ ಎಂಸಿಗಳು ಸ್ವತಃ ಝೆರಾಕ್ಸ್ ಮಾಡಿ ಮಕ್ಕಳಿಗೆ ವಿತರಿಸಲು ಹೇಳುತ್ತಿರುವುದು ಅರಾಜಕವಾದ ನಡೆಯಾಗಿದೆ ಎಂದು ಸಿದ್ಧರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದ್ದರಿಂದ ಕೂಡಲೆ ಅವಾಂತರಕಾರಿಯಾಗಿರುವ ಪುಸ್ತಕಗಳನ್ನು ವಾಪಸ್ಸು ಪಡೆದು, ಈ ಎಲ್ಲ ಅವಾಂತರಗಳು ಸರಿಯಾಗುವವರೆಗೆ ಬರಗೂರು ಸಮಿತಿಯು ಸಿದ್ಧಪಡಿಸಿದ್ದ ಪಠ್ಯ ಪುಸ್ತಕಗಳನ್ನೆ ಮುಂದುವರೆಸಬೇಕೆಂದು ಹಾಗೂ ಈ ಅವಾಂತರಗಳಿಗೆಲ್ಲ ಕಾರಣ ಕರ್ತರಾಗಿರುವವರೆಲ್ಲರಿಂದ ನಷ್ಟ ವಸೂಲಿ ಮಾಡಿ, ಕಾನೂನು ರೀತಿಯ ಕ್ರಮ ತೆಗೆದುಕೊಳ್ಳಬೇಕೆಂದು ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.
Key words: Government-action -textbook -correction – anarchist-Siddaramaiah