ಬೆಂಗಳೂರು:ಜೂ-4;(www.justkannada.in) ಶೀಘ್ರದಲ್ಲೇ ಸರ್ಕಾರಿ ಪದವಿ ಕಾಲೇಜಿನಲ್ಲಿ ಖಾಲಿ ಇರುವ 3,800 ಉಪನ್ಯಾಸಕ ಹುದ್ದೆ ಭರ್ತಿಮಾಡಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ರಾಜ್ಯದ 412 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿಯಿರುವ 396 ಪ್ರಾಂಶುಪಾಲರ ಹುದ್ದೆಗಳಲ್ಲಿ ಶೇ.50ರಷ್ಟು ಹುದ್ದೆ ಭರ್ತಿಗೆ ಆರ್ಥಿಕ ಇಲಾಖೆ ಈಗಾಗಲೇ ಅನುಮೋದನೆ ನೀಡಿದೆ. ಹಾಗೆಯೇ ಖಾಲಿ ಇರುವ 3,800 ಉಪನ್ಯಾಸಕರ ಭರ್ತಿಗೂ ಅನುಮತಿ ಕೋರಿದ್ದೇವೆ. ಆರ್ಥಿಕ ಇಲಾಖೆಯಿಂದ ಅನುಮತಿ ಸಿಕ್ಕ ನಂತರ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಆರಂಭಿಸಲಿದ್ದೇವೆ ಎಂದರು.
ಈ ವರ್ಷ ಉಪನ್ಯಾಸಕರು ಹಾಗೂ ಪ್ರಾಂಶುಪಾಲರ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿಕೊಳ್ಳಲಾಗುವುದು. ಬೋಧಕೇತರ ಸಿಬ್ಬಂದಿ ನೇಮಕದ ಪ್ರಸ್ತಾವನೆ ಇನ್ನೂ ಆರ್ಥಿಕ ಇಲಾಖೆಗೆ ಕಳುಹಿಸಿಲ್ಲ ಎಂದು ಹೇಳಿದರು.
ಬೆಂಗಳೂರು ವಿವಿ ತ್ರಿಭಜನೆಯ ನಂತರ ಸರ್ಕಾರದಿಂದ ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ಉತ್ತರ ವಿವಿಗೆ ಅನುದಾನ ಹೋಗಿಲ್ಲ. ಈಗ ಅನುದಾನ ಹಂಚಿಕೆಗೆ ಬೇಕಾದ ಅವಕಾಶವನ್ನು ಆರ್ಥಿಕ ಇಲಾಖೆ ಮೂಲಕ ಪಡೆದಿದ್ದು, ರೂಸಾ ಅನುದಾನದಲ್ಲಿ ವಿವಿಗಳಿಗೆ ಹಣ ಒದಗಿಸಲಾಗುವುದು ಎಂದರು.
ಪದವಿ ವಿದ್ಯಾರ್ಥಿಗಳಿಗೆ ನೀಡಬೇಕಿರುವ ಲ್ಯಾಪ್‌ಟಾಪ್ ಟೆಂಡರ್ ನಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಹಂಚಿಕೆ ಸಾಧ್ಯವಾಗಿಲ್ಲ. ಹೊಸದಾಗಿ ಟೆಂಡರ್ ಪ್ರಕ್ರಿಯೆ ನಡೆಸಿ, ಎಲ್ಲ ಅರ್ಹ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡುವ ಸಂಬಂಧ ಮುಂದಿನ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.