ಬೆಂಗಳೂರು,ನವೆಂಬರ್,29,2023(www.justkannada.in): ಬೆಂಗಳೂರಿಗೆ ಮೂಲ ಸೌಕರ್ಯ ಒದಗಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಸಚಿವ ಅಶ್ವಥ್ ನಾರಾಯಣ್ ಟೀಕಿಸಿದರು.
ಉದ್ಯಮಿ ಮೋಹನ್ದಾಸ್ ಪೈ ಎಕ್ಸ್ನಲ್ಲಿ ಮಾಡಿರುವ ಪೋಸ್ಟ್ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಎನ್ ಅಶ್ವಥ್ ನಾರಾಯಣ್, ತಂತ್ರಜ್ಞಾನ ಮತ್ತು ಆವಿಷ್ಕಾರಗಳಿಗೆ ಎಲ್ಲರಿಗೂ ಬೆಂಗಳೂರು ಬೇಕು, ಆದರೆ ಮೂಲ ಸೌಕರ್ಯ ಒದಗಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕರ್ನಾಟಕದಲ್ಲಿ ಭ್ರಷ್ಟಾಚಾರ ಸಹಿಸಲಾಗದ ಮಟ್ಟಿಗಿದೆ. ಬಿಲ್ಡರ್ ಗಳು ಇಂದು ಕಟ್ಟಡಗಳನ್ನು ಕಟ್ಟಲು ಸಿದ್ಧರಿಲ್ಲ. ಹೀಗಾಗಿ ಎಲ್ಲರಿಗೂ ಹೈದರಾಬಾದ್ ಆಕರ್ಷಣೀಯವಾಗಿದೆ ಎಂದು ಹೇಳಿದರು.
ವ್ಯಾಪಾರಕ್ಕೆ, ವ್ಯವಹಾರಕ್ಕೆ ಹೈದರಾಬಾದ್ ಉತ್ತಮ ಸ್ಥಳವೆಂಬಂತಾಗಿದೆ. ಬೆಂಗಳೂರಿನಲ್ಲಿ 100 ಸ್ಕ್ವೇರ್ಫೀಟ್ ನಿರ್ಮಾಣವಾದರೆ ಹೈದರಾಬಾದ್ನಲ್ಲಿ 1000 ಸ್ಕ್ವೇರ್ಫೀಟ್ ನಿರ್ಮಾಣವಾಗುತ್ತಿದೆ. ಇಲ್ಲಿ ಒಂದು ಪಟ್ಟು ಕಟ್ಟಡ ನಿರ್ಮಾಣವಾದರೆ ಅಲ್ಲಿ ಹತ್ತು ಪಟ್ಟು ಕಟ್ಟಡಗಳು ಏಳುತ್ತಿವೆ, ಸರ್ಕಾರದ ನಿರ್ಲಕ್ಷ್ಯದಿಂದ ಬೆಂಗಳೂರು ನಗರಕ್ಕೆ ಕಂಟಕವಾಗಿದೆ. ಹೀಗಾಗಿ ಸಿದ್ದರಾಮಯ್ಯ ಹಾಗೂ ಅವರ ಸಚಿವ ಸಂಪುಟ ಎಚ್ಚೆತ್ತುಕೊಳ್ಳಬೇಕು, ಉದ್ಯಮಿ ಮೋಹನ್ ದಾಸ್ ಪೈ ಅವರ ಅಭಿಪ್ರಾಯ ಸೂಕ್ತವಾಗಿದೆ. ದೇಶಕ್ಕೆ ಭರವಸೆದಾಯಕವಾದ ನಗರ ಬೆಂಗಳೂರು, ಇದನ್ನು ಉಳಿಸುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಅಶ್ವಥ್ ನಾರಾಯಣ್ ಸಲಹೆ ನೀಡಿದರು.
ಬೆಂಗಳೂರಿನ ಐಟಿ ಸ್ಥಾನಮಾನವನ್ನು ಹೈದರಾಬಾದ್ ಸಿಂಹಾಸನದಿಂದ ಕೆಳಗಿಳಿಸುತ್ತಿದೆ. ಕಳೆದ 10 ವರ್ಷಗಳಿಂದ ಬೆಂಗಳೂರನ್ನು ಕಡೆಗಣಿಸಲಾಗುತ್ತಿದೆ, ನಗರವನ್ನು ಸುಧಾರಿಸಲು ಮುಂದಾದರೂ ಹೆಚ್ಚಿನ ಆಸಕ್ತಿಯನ್ನು ಸರ್ಕಾರ ತೋರಿಸಲಿ ಎನ್ನುವುದು ನನ್ನ ಆಶಾಭಾವನೆ ಎಂದು ಎಕ್ಸ್ ಪೋಸ್ಟ್ ನಲ್ಲಿ ಉದ್ಯಮಿ ಮೋಹನ್ದಾಸ್ ಪೈ ತಿಳಿಸಿದ್ದರು.
Key words: Government – completely -failed – providing -infrastructure –Bangalore- Aswath Narayan.