ಮೈಸೂರು,ಮೇ,20,2021(www.justkannada.in): ಕೊರೋನಾ , ಲಾಕ್ ಡೌನ್ ಹಿನ್ನೆಲೆಯಲ್ಲಿ ಸರ್ಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್ ಆನೆ ಬಾಯಿಗೆ ಅರೆಕಾಸಿನ ಮಜ್ಜಿಗೆಯಂತೆ. ಇದು ಅಷ್ಟು ಪ್ರಯೋಜನವಾಗುವುದಿಲ್ಲ ಎಂದು ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಟೀಕಿಸಿದ್ದಾರೆ.
ಸರ್ಕಾರದ ವಿಶೇಷ ಪ್ಯಾಕೇಜ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕಿಡಿಕಾರಿರುವ ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್, ಯಾರಿಗೂ ಎಟುಕದ, ಯಾರಿಗೂ ದಕ್ಕದ,ಯಾರನ್ನು ಕನಿಷ್ಠ ತೃಪ್ತಿಗೊಳಿಸದ ಬರೀ ಅಕ್ಷರಗಳಲ್ಲಿ ಮೂಡಿಬಂದಿರುವ ಬಿಜೆಪಿ ಪ್ಯಾಕೇಜ್ ಅನ್ನು ಬಲೂನಿನಂತೆ ಊದಿದ್ದಾರೆ. ಇದರ ಒಳಗೆ ಯಾವುದೇ ಮಹತ್ತರವಾದ, ಈ ಸಂಕಷ್ಟದಲ್ಲಿ ಜನೋಪಕಾರಕ್ಕೆ ದಕ್ಕುವ ಪ್ಯಾಕೇಜ್ ಇದು ಅಲ್ಲವೇ ಅಲ್ಲ. ಇದೇನಿದ್ದರೂ ಜನರಲ್ಲಿ ಸುಳ್ಳು ಭರವಸೆ ಮೂಡಿಸುವ ಮೂಲಕ ಅವರ ಸಂಕಷ್ಟಗಳನ್ನು ಹೆಚ್ಚಿಸುವುದೇ ಆಗಿದೆ ಎಂದು ಲೇವಡಿ ಮಾಡಿದ್ದಾರೆ.
ಬಿಜೆಪಿ ಸರ್ಕಾರ ಹೊರತು ಯಾವುದೇ ಸರ್ಕಾರ ಈ ರೀತಿಯ ಬೇಕಾಬಿಟ್ಟಿ ಪ್ಯಾಕೇಜನ್ನು ಘೋಷಿಸುತ್ತಿರಲಿಲ್ಲ. ಆದರೆ ಮೋದಿ ಅಂತಹ ಏಕೈಕ ಮಹಾನ್ ನಾಯಕನನ್ನು ಹೊಂದಿರುವ ಹೊಂದಿರುವುದಾಗಿ ಹೇಳುವ ಬಿಜೆಪಿ ಖಾಲಿ ಡಬ್ಬದಲ್ಲಿ ಕಲ್ಲುಹಾಕಿ ಬರೀ ಸದ್ದುಮಾಡುವ ಕೆಲಸವನ್ನಷ್ಟೇ ಮಾಡಿದೆ. ಕಟ್ಟಡ ಕೂಲಿ ಕಾರ್ಮಿಕರಿಗಾಗಿಯೇ ಮೀಸಲಿಟ್ಟ ಹಣವನ್ನು ಪ್ಯಾಕೇಜ್ ಮೂಲಕ ಹಂಚುವುದರಿಂದ ಕನಿಷ್ಠ ಹಣವನ್ನು ನೀಡಿ ,ಕೂಲಿ ಕಾರ್ಮಿಕರಿಗೂ ಅನ್ಯಾಯ ಮಾಡಿದೆ. ಇತರ ವರ್ಗಗಳಿಗೂ ವಂಚಿಸಿರುವುದು ಸ್ಪಷ್ಟವಾಗಿದೆ ಎಂದು ಹೆಚ್.ಎ ವೆಂಕಟೇಶ್ ಹರಿಹಾಯ್ದಿದ್ದಾರೆ.
ಕುಟುಂಬದ ನಾಲ್ಕು ಜನ ರೂ2000 ಗಳಲ್ಲಿ ಈ ಸಂಕಷ್ಟದ ದಿನಗಳನ್ನು ಎದುರಿಸಲು ಸಾಧ್ಯವೆ? ಯಡಿಯೂರಪ್ಪರ ನಾಯಕತ್ವದ ಬಿಜೆಪಿ ಸರ್ಕಾರ ,ಬರೀ ಸುಳ್ಳು ಹೇಳಿಕೆಗಳನ್ನು ಮಾಧ್ಯಮಗಳಲ್ಲಿ ನೀಡುವ ಮೂಲಕ ಪ್ರಚಾರ ಪಡೆಯುವ ಹುನ್ನಾರ ನಡೆಸಿದೆ. ಸರ್ಕಾರಕ್ಕೆ ನಿಜವಾಗಲೂ ಕೋವಿಡ್-19 ಮಹಾಮಾರಿಯ ಅಬ್ಬರ, ಆರ್ಭಟದ ಈ ಸಮಯದಲ್ಲಿ ಕನಿಷ್ಠ ಕಾಳಜಿ ಇದ್ದರೂ, ಈ ರೀತಿಯ ಪ್ಯಾಕೇಜ್ ಘೋಷಿಸಿ ಪ್ರಚಾರಗಿಟ್ಟಿಸುವ ಅವಶ್ಯಕತೆ ಇರಲಿಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಕಳೆದ ಸಂದರ್ಭದಲ್ಲಿ ನೀಡಿದ ಪ್ಯಾಕೇಜ್ ಏನಾಯಿತು? ಸರ್ಕಾರ ಎಷ್ಟು ಫಲಾನುಭವಿಗಳಿಗೆ ತಲುಪಿಸಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಹೆಚ್ ಎ ವೆಂಕಟೇಶ್ ಆಗ್ರಹಿಸಿದ್ದಾರೆ.
ತೊಂದರೆಗೆ ಒಳಗಾಗಿರುವ ಲಕ್ಷಾಂತರ ಕುಟುಂಬಗಳು ಈಗ ಆರ್ಥಿಕವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವನ್ನು ನಿರೀಕ್ಷಿಸುತ್ತಿರುವ ಈ ಸಮಯದಲ್ಲಿ, ಸರ್ಕಾರ ಘೋಷಿಸಿರುವ ಈ ಪ್ಯಾಕೇಜ್ ಆನೆ ಬಾಯಿಗೆ ಅರೆಕಾಸಿನ ಮಜ್ಜಿಗೆ .ಇದು ಅಷ್ಟು ಪ್ರಯೋಜನವಾಗುವುದಿಲ್ಲ. ಬಹುಶ:ಸಂಕಷ್ಟಕ್ಕೆ ಒಳಗಾಗಿರುವ ಜನತೆಯೇ ಈ ಪ್ಯಾಕೇಜ್ ಅನ್ನು ಧಿಕ್ಕರಿಸುವುದರಲ್ಲಿ ಯಾವುದೇ ಅನುಮಾನವಿಲ್ಲ .ಅದಕ್ಕೆ ಕಾರಣ, ಪ್ಯಾಕೇಜ್ ಪಡೆಯಲು ಸರ್ಕಾರ ರೂಪಿಸಿರುವ ನಿಯಮಗಳು ಎಂದು ಹೆಚ್.ಎ ವೆಂಕಟೇಶ್ ಟೀಕಿಸಿದ್ದಾರೆ.
Key words: government –corona-package-KPCC spokesperson -HA Venkatesh- criticized-mysore