ಬೆಂಗಳೂರು,ಜೂ,26,2020(www.justkannada.in): ಕರ್ನಾಟಕ ಕೈಗಾರಿಕೆಗಳ ಸೌಲಭ್ಯ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ನಿರ್ಧರಿಸಿರವುದನ್ನು ಎಫ್.ಕೆ.ಸಿ.ಸಿ.ಐ. ಸ್ವಾಗತಿಸುತ್ತದೆ ಎಂದು ಎಫ್.ಕೆಸಿಸಿಐ ಅಧ್ಯಕ್ಷ ಸಿ. ಆರ್ ಜನಾರ್ಧನ್ ತಿಳಿಸಿದರು.
ಕರ್ನಾಟಕ ಕೈಗಾರಿಕೆಗಳ ಸೌಲಭ್ಯ ಕಾಯ್ದೆಗೆ ತಿದ್ದುಪಡಿಗೆ ಸರ್ಕಾರ ನಿರ್ಧರಿಸಿರುವ ಕುರಿತು ಪ್ರತಿಕ್ರಿಯಿಸಿರುವ ಸಿ.ಆರ್ ಜನಾರ್ಧನ್, ಕೈಗಾರಿಕೆಗಳಿಗೆ ಡಿ.ಎಲ್.ಎಸ್.ಡಬ್ಲ್ಯು.ಸಿ.ಸಿ., ಎಸ್.ಎಲ್.ಎಸ್.ಡಬ್ಲ್ಯು.ಸಿ.ಸಿ. ಮತ್ತು ಎಸ್.ಹೆಚ್.ಎಲ್.ಸಿ.ಸಿ.ಯಿಂದ ಎಲ್ಲಾ ಅನುಮತಿಯನ್ನು ಪಡೆಯಲು ಅನುವು ಮಾಡಿಕೊಡುವ ಕರ್ನಾಟಕ ಕೈಗಾರಿಕಾ ಸೌಲಭ್ಯ ಕಾಯ್ದೆಗೆ ಕೆಲವು ತಿದ್ದುಪಡಿಗಳನ್ನು ತರಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿರುವುದು ಸ್ವಾಗತಾರ್ಹ. ಆಯಾ ಸಮಿತಿಗಳು ಯೋಜನೆಯನ್ನು ಅನುಮೋದಿಸಿದ ಕೂಡಲೇ ಕೈಗಾರಿಕೆಗಳು ನಿರ್ಮಾಣ ಚಟುವಟಿಕೆಗಳನ್ನು ಪ್ರಾರಂಭಿಸಬಹುದು.
ಜಿಲ್ಲಾ ಮಟ್ಟದ ಸಮಿತಿಗಳನ್ನು ಸಹ ತಿದ್ದುಪಡಿಯ ವ್ಯಾಪ್ತಿಯಲ್ಲಿ ತರಬೇಕೆಂದು ಎಫ್.ಕೆ.ಸಿ.ಸಿ.ಐ. ಸಂಸ್ಥೆಯು ಸರ್ಕಾರವನ್ನು ಕೋರಿತ್ತು. ನಮ್ಮ ಮನವಿಯನ್ನು ಸರ್ಕಾರ ಒಪ್ಪಿಕೊಂಡಿದೆ ಮತ್ತು ಡಿ.ಎಲ್.ಎಸ್.ಡಬ್ಲ್ಯು.ಸಿ.ಸಿ.ಯನ್ನು ಸೇರಿಸಲು ಪರಿಗಣಿಸಿದೆ. ಅನುಮೋದನೆ ಪಡೆದ ಮೂರು ವರ್ಷಗಳ ಅವಧಿಯಲ್ಲಿ ನಿಯಮಾವಳಿಗಳಂತೆ ಅಗತ್ಯವಿರುವ ಪರವಾನಗಿಗಳನ್ನು ಪಡೆಯಲು ಅವಕಾಶ ಮಾಡಿರುವುದರಿಂದ ಬೃಹತ್, ಮಧ್ಯಮ ಮತ್ತು ಸಣ್ಣ ಉದ್ಯಮಗಳೂ ಈ ಅವಧಿಯನ್ನು ಕಟ್ಟಡ ನಿರ್ಮಾಣ ಯಂತ್ರೋಪಕರಣಗಳ ಖರೀದಿ ಹಣಕಾಸು ನಿರ್ವಹಣೆ ಮಾರುಕಟ್ಟೆ ಇತ್ಯಾದಿ ವಿಷಯಗಳನ್ನು ನಿರ್ವಹಿಸಿ, ಉದ್ಯಮವು ತ್ವರಿತಗತಿಯಲ್ಲಿ ಉತ್ಪಾದನೆ ಪ್ರಾರಂಭಿಸಲು ಈ ತಿದ್ದುಪಡಿ ಒಂದು ಐತಿಹಾಸಿಕ ನಿರ್ಧಾರ ಎಂದು ಎಫ್.ಕೆ.ಸಿ.ಸಿ.ಐ ಅಧ್ಯಕ್ಷ ಸಿ.ಆರ್ ಜನಾರ್ಧನ್ ಮೆಚ್ಚುಗೆ ವ್ಯಕ್ತಪಡಿಸಿದರು.
ಚೀನಾದಿಂದ ಸ್ಥಳಾಂತರಗೊಳ್ಳುವ ಹೂಡಿಕೆಗಳನ್ನು ಆಕರ್ಷಿಸಲು ರಾಜ್ಯವು ಪ್ರಯತ್ನಿಸುತ್ತಿರುವ ಸಮಯದಲ್ಲಿ ಮತ್ತು ಸ್ಪರ್ಧಾತ್ಮಕ ಚೀನಾ ಯೋಜನೆಯಡಿ ಹಾಗೂ ಇತರ ದೇಶಗಳಿಂದ ಬಂಡವಾಳ ಆಕರ್ಷಿಸಲು ಸರಳೀಕೃತ ತಿದ್ದುಪಡಿಗಳನ್ನು ತಂದಿದ್ದಕ್ಕಾಗಿ ಮುಖ್ಯಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪರವರು ಮತ್ತು ಮಾನ್ಯ ಬೃಹತ್, ಮಧ್ಯಮ ಕೈಗಾರಿಕಾ ಸಚಿವರಾದ ಜಗದೀಶ್ ಶೆಟ್ಟರ್ ರವರಿಗೆ ಮತ್ತು ಇಲಾಖಾಧಿಕಾರಿಗಳಿಗೆ ಧನ್ಯವಾದಗಳನ್ನ ಅರ್ಪಿಸುವುದಾಗಿ ಸಿ. ಆರ್ ಜನಾರ್ಧನ ತಿಳಿಸಿದರು.
Key words: Government- decision -amend – Karnataka Industries Facilities Act – welcome-FKCCI President -C. R Janardhan.