ಕೊರೋನಾ ನಿಯಂತ್ರಿಸುವಲ್ಲಿ ಸರ್ಕಾರ ವಿಫಲ- ಪ್ರಧಾನಿ ಮೋದಿ, ಸಿಎಂ ಬಿಎಸ್ ವೈ ವಿರುದ್ದ ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ….

ಬೆಂಗಳೂರು,ಮೇ,30,2020(www.justkannada.in):  ರಾಜ್ಯದಲ್ಲಿ ಕೊರೋನಾ ನಿಯಂತ್ರಿಸುವಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಕಿಡಿಕಾರಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಇಂದು ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ದೇಶದ ಜನರು ನರೇಂದ್ರ ಮೋದಿಯವರಿಗೆ ಎರಡನೇ ಅವಧಿಗೆ ಅವಕಾಶ ಕೊಟ್ಟಿದ್ದಾರೆ. ಮೊದಲ ಐದು ವರ್ಷ ಜನತೆಗೆ ನೀಡಿದ್ದ ಪ್ರಮುಖ ಭರವಸೆಗಳನ್ನ ಮೋದಿ ಅವರು ಈಡೇರಿಸಿರಲಿಲ್ಲ. ಸುಳ್ಳುಗಳನ್ನೇ ಹೇಳಿದ್ದರು. ಈಗ ಎರಡನೇ ಅವಧಿಯಲ್ಲಿ ಅದೇ ಸುಳ್ಳುಗಳೇ ಮುಂದುವರೆದಿವೆ.  ಇವರ ಸಾಧನೆ ಏನು ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಮೋದಿ ಅವರು ಭಾವನಾತ್ಮಕ ವಿಚಾರಗಳನ್ನ ಕೈಗೆತ್ತಿಕೊಳ್ಳುತ್ತಿದ್ದಾರೆ.  ರೈತರ ಸಮಸ್ಯೆ, ಆರ್ಥಿಕತೆ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ನಿರುದ್ಯೋಗ ಸಮಸ್ಯೆಗೆ ಪರಿಹಾರ ಏನು ಅಂತಾ ಹೇಳಿಲ್ಲ. ಆರ್ಥಿಕ ಹಿಂಜರಿತದ ಬಗ್ಗೆ ಮಾತಾಡುವುದಿಲ್ಲ. ದೇಶದ ಜಿಡಿಪಿ ಕುಸಿತದ ಬಗ್ಗೆ ಚರ್ಚೆ ಮಾಡುವುದಿಲ್ಲ. ದೇಶದ ಜಿಡಿಪಿ ಕಳೆದ 11 ವರ್ಷದಲ್ಲಿಯೇ ಅತಿ ಕೆಳಮಟ್ಟಕ್ಕೆ ಇಳಿದಿದೆ. ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ದೇಶಗಳ ಜಿಡಿಪಿ ನಮಗಿಂತ ಹೆಚ್ಚಿದೆ. ಕಳೆದ ವರ್ಷ 3.1% ಕ್ಕೆ ಇಳಿದಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಟೀಕಿಸಿದರು.

ರಾಜ್ಯ ಬಿಜೆಪಿಯಲ್ಲಿ ಅಸಮಾಧಾನ ಬಗ್ಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಜೊತೆಗೆ ಮಹೇಶ್ ಕುಮಟಳ್ಳಿ ಬಿಟ್ಟರೇ ಬೇರೆ ಯಾರೂ ಹೋಗಿಲ್ಲ. ಈ ಸರ್ಕಾರ ಬಿಜೆಪಿಯವರ ಕಚ್ಚಾಟದಿಂದಲೇ ಬಿದ್ದು ಹೋದರೆ ನಮ್ಮದೇನು ತಕರಾರು ಇಲ್ಲ. ಇಂಥ ಕೆಟ್ಟ ಸರ್ಕಾರವನ್ನು ಇತಿಹಾಸದಲ್ಲಿ ನೋಡಿಲ್ಲ. ರಾಜ್ಯದ ದೃಷ್ಟಿಯಿಂದ ಈ ಸರ್ಕಾರ ಹೋಗಬೇಕು ಎಂದು ಸಿದ್ಧರಾಮಯ್ಯ ಹರಿಹಾಯ್ದರು.

Key words: Government -failed – control –Corona- former CM -Siddaramaiah