ಬೆಂಗಳೂರು,ಜುಲೈ,27,2022(www.justkannada.in): ‘ಬಿಜೆಪಿ ಕಾರ್ಯಕರ್ತ ಪ್ರವೀಣ್ ಹತ್ಯೆ ಪ್ರಕರಣ ಸಂಬಂಧ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ಇಲಾಖೆ ಹಾಗೂ ಸರ್ಕಾರದ ವೈಫಲ್ಯಕ್ಕೆ ಸಾಕ್ಷಿಯಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು ಹೇಳಿದಿಷ್ಟು;
‘ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ 32 ಕ್ಕೂ ಹೆಚ್ಚು ಇಂತಹ ಹತ್ಯೆಗಳು ನಡೆದಿವೆ ಇಂದು ಮಾಧ್ಯಮಗಳು ವರದಿ ಮಾಡಿವೆ. ರಾಜ್ಯದಲ್ಲಿ ನೈತಿಕ ಪೊಲೀಸ್ ಗಿರಿಗೆ ಸರ್ಕಾರ ಅವಕಾಶ ಮಾಡಿಕೊಟ್ಟ ಪರಿಣಾಮ ಇಂತಹ ಪ್ರಕರಣಗಳು ಮರುಕಳಿಸುತ್ತಿವೆ. ಬಿಜೆಪಿ ಎಲ್ಲಾ ಪ್ರಕರಣಗಳಲ್ಲೂ ರಾಜಕೀಯ ಮಾಡಲು ಮುಂದಾಗುತ್ತದೆ. ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇಂತಹ ಪ್ರಕರಣಗಳನ್ನು ಬಳಸಿಕೊಳ್ಳುತ್ತದೆ ಎಂದು ಕಿಡಿಕಾರಿದರು.
ಈ ಹತ್ಯೆ ಖಾಸಗಿ ಕಾರಣದಿಂದ ನಡೆದಿದೆಯೋ ಅಥವಾ ರಾಜಕೀಯ ಕಾರಣದಿಂದ ನಡೆದಿದೆಯೋ ಎಂಬ ವಿಚಾರವಾಗಿ ಬಿಜೆಪಿ ಅಥವಾ ಎಸ್ಪಿ ಅವರು ಹೇಳಿಕೆ ನೀಡಬೇಕು. ಗೃಹ ಸಚಿವರು ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡಿ ಅಂಗೈ ತೋರಿಸಿ ಅವಲಕ್ಷಣ ಎನಿಸಿಕೊಳ್ಳುವಂತೆ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಪೊಲೀಸ್ ಅಧಿಕಾರಿಗಳು ಗೃಹ ಸಚಿವರ ಹೇಳಿಕೆಯನ್ನು ಪ್ರಮಾಣಿಕರಿಸಬೇಕಿದೆ. ಗೃಹಮಂತ್ರಿಯಾದವರು ಪಕ್ಷದ ನಿಲುವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿದರೆ ರಾಜ್ಯ ಉಳಿಯಲು ಸಾಧ್ಯವಿಲ್ಲ.
ಈ ಕೊಲೆಯನ್ನು ಯಾರೇ ಮಾಡಿದ್ದರು ತನಿಖೆ ಮಾಡಿ, ಸತ್ಯಾಂಶ ಬಹಿರಂಗಪಡಿಸಿ, ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಬೇಕು. ಈ ಹಿಂದೆ ಇಂತಹ ಹತ್ಯೆಗಳಿಗೆ ನಡೆಸಲಾಗಿದ್ದ ಸಂಚುಗಳ ವಿಚಾರವು ತನಿಖೆ ಆಗಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.
Key words: government -failed – maintain -law – order – state-D.K. Shivakumar