ಮೈಸೂರು,ಜೂ,11,2020(www.justkannada.in): ಶೇಕಡಾ 10ರಷ್ಟು ಮೀಸಲಾತಿ ನೀಡಿರುವ ಹಿನ್ನೆಲೆಯಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರದ ಅವಶ್ಯಕತೆ ಇದೆ. ಹೀಗಾಗಿ ಬ್ರಾಹ್ಮಣ ಜಾತಿಯ ಪ್ರಮಾಣ ಪತ್ರ ವಿತರಿಸಬೇಕು ಎಂದು ಸರ್ಕಾರಕ್ಕೆ ಶಾಸಕ ಎಸ್.ಎ ರಾಮದಾಸ್ ಮನವಿ ಮಾಡಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶಾಸಕ ಎಸ್.ಎ ರಾಮದಾಸ್, ಇನ್ನು ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇಕಡಾ 10ರಷ್ಟು ಮೀಸಲಾತಿ ನೀಡಿರುವ ಹಿನ್ನೆಲೆಯಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಜಾತಿ ಪ್ರಮಾಣಪತ್ರದ ಅವಶ್ಯಕತೆ ಇದೆ. ಜಾತಿ ಪ್ರಮಾಣಪತ್ರ ನೀಡುವಲ್ಲಿ ತಹಸೀಲ್ದಾರ್ ಕಛೇರಿಯಲ್ಲಿ ಸಾಕಷ್ಟು ತೊಂದರೆಯಾಗುತ್ತಿದೆ. ಬ್ರಾಹ್ಮಣ ಜಾತಿಯ ಪ್ರಮಾಣ ಪತ್ರವನ್ನು ನೀಡದಿರುವುದು ನನ್ನ ಗಮನಕ್ಕೆ ಬಂದಿದೆ. ಆದ್ದರಿಂದ ಸರ್ಕಾರ ಈ ಕೂಡಲೇ ರಾಜ್ಯದ ಎಲ್ಲಾ ತಹಶೀಲ್ದಾರ್ ರವರಿಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಸೂಚಿಸಲಿ ಎಂದು ಮನವಿ ಮಾಡಿದರು.
ಕುರುಬಾರಹಳ್ಳಿ ಗ್ರಾಮದ ಸರ್ವೆ ನಂ 4 ರಲ್ಲಿ ಬರುವ ಸುಮಾರು 350 ಎಕರೆ ಭೂಮಿಯನ್ನು ‘ಬಿ’ ಖರಾಬಿನಿಂದ ತೆರವುಗೊಳಿಸಿ ಮೈಸೂರು ನಗರಾಭಿವೃದ್ಧಿ ಪಾಧಿಕಾರಕ್ಕೆ ಮಂಜೂರು ಮಾಡುವ ಕುರಿತು ಮಾತನಾಡಿದ ಶಾಸಕ ಎಸ್.ಎ ರಾಮದಾಸ್, ಸರ್ವೆ ನಂ 4 ರಲ್ಲಿ ಬರುವ ಕೆಲ ಜಮೀನಿನ ವಿಷಯಗಳಿಲ್ಲ ಕೆಲವು ಗೊಂದಲಗಳಿದ್ದವು. ಇದರಿಂದ 25000 ಕುಟುಂಬಗಳಿಗೆ ತೊಂದರೆಯಾಗಿತ್ತು. ಭೂಮಿಯ ಪೂರ್ಣ ಹಕ್ಕು ಭೂಮಿ ಮಾಲೀಕರಿಗಿರಲಿಲ್ಲ. ಆಸ್ತಿಯನ್ನು ಪರಭಾರೆ ಹಾಗೂ ಅಡಮಾನ ಇಡುವ ಹಾಗಿರಲಿಲ್ಲ. ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯಕ್ಕೆ ಈ ಆಸ್ತಿಯನ್ನು ಪರಿಗಣಿಸುತ್ತಿರಲಿಲ್ಲ. ಜಮೀನಿನ ವಿಷಯದಲ್ಲಿ ಇದ್ದ ಗೊಂದಲಗಳು ಬಗೆಹರಿದಿದ್ದು ಜಮೀನಿನ ಪೂರ್ಣ ಹಕ್ಕನ್ನು ಮಾಲೀಕರಿಗೆ ನೀಡುವ ಆದೇಶವನ್ನು ಜೂನ್ ತಿಂಗಳಲ್ಲಿ ಕೊನೆಯಲ್ಲಿ ನೀಡುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಸಾಮಾನ್ಯ ಕಾರ್ಯಕರ್ತರಿಗೆ ಬಿಜೆಪಿಯಲ್ಲಿ ಮಾತ್ರ ಟಿಕೆಟ್…
ರಾಜ್ಯಸಭೆಯಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಎಸ್,ಎ ರಾಮದಾಸ್, ಸಾಮಾನ್ಯ ಕಾರ್ಯಕರ್ತರಿಗೆ ಬಿಜೆಪಿಯಲ್ಲಿ ಮಾತ್ರ ಟಿಕೆಟ್ ನೀಡಲಾಗುತ್ತದೆ. ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ಟಿಕೆಟ್ ತೀರ್ಮಾನ ಮಾಡುತ್ತಾರೆ. ಪಕ್ಷ ಕಟ್ಟಿದ್ದ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದು ಖುಷಿಯ ವಿಚಾರ ಎಲ್ಲರಿಗೂ ನಮ್ಮ ಪಕ್ಷ ಸ್ಥಾನಮಾನ ನೀಡುತ್ತದೆ, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿಯೇ ಹೈಕಮಾಂಡ್ ಈ ನಿರ್ಧಾರ ತೆಗೆದುಕೊಂಡಿದೆ. ಬಿಜೆಪಿ ಸರ್ಕಾರ ಬರಲಿಕ್ಕೆ ಕಾರಣರಾದವರಿಗೆ ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಬಿಎಸ್ ವೈ ಬದಲಾವಣೆಯ ಮಾತೇ ಇಲ್ಲ…
ಮುಖ್ಯಮಂತ್ರಿ ಬಿಎಸ್ ವೈ ಬದಲಾವಣೆಯ ಮಾತೇ ಇಲ್ಲ. ಯಡಿಯೂರಪ್ಪ ಬದಲಾವಣೆ ಕೇವಲ ಊಹಾಪೋಹ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಪಕ್ಷ ನನಗೆ ಮಾತೃ ಸಮಾನ ಎಂದು ಶಾಸಕ ರಾಮದಾಸ್ ನುಡಿದರು.
Key words: Government –issue -caste certificate – Brahmin community –mysore- MLA-SA Ramadas