ಮೈಸೂರು,ಏಪ್ರಿಲ್,6,2025 (www.justkanna.in): ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಸರ್ಕಾರಿ ಭೂಮಿ ಮೇಲೆ ಖಾಸಗಿ ಕಂಪನಿಯು ನೂರಾರು ಕೋಟಿ ಸಾಲ ಪಡೆದಿದ್ದು ಅಧಿಕಾರಿಗಳು ಆರ್ ಟಿಸಿಯನ್ನೇ ಬದಲಾಯಿಸಿ ಖಾಸಗಿ ಕಂಪನಿಗೆ ಆಸ್ತಿ ಪರಭಾರೆ ಮಾಡಿಕೊಟ್ಟು ಯಡವಟ್ಟು ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಾವೇರಿ ನೀರಾವರಿ ನಿಗಮಕ್ಕೆ ಸೇರಿದ ಸರ್ವೆ ನಂ.160, 162ರಲ್ಲಿರುವ 13 ಎಕರೆ ಭೂಮಿಯನ್ನ ಸುಭಾಷ್ ಪವರ್ ಕಾರ್ಪೊರೇಷನ್ ಲಿ. ಹೆಸರಿಗೆ ಅಧಿಕಾರಿಗಳು ಆರ್ ಟಿಸಿ ಮಾಡಿಸಿಕೊಟ್ಟಿದ್ದಾರೆಂಬ ಆರೋಪ ಕೇಳಿ ಬಂದಿದೆ.
ಈ ಭೂಮಿಯನ್ನ ಕಾವೇರಿ ನೀರಾವರಿ ನಿಗಮವು ರೈತರಿಂದ ಮುಳುಗಡೆ ಭೂಮಿ ಎಂದು ವಶಕ್ಕೆ ಪಡೆದುಕೊಂಡಿದ್ದು ರೈತರಿಂದ ಭೂಮಿ ಪಡೆದು ಉಳ್ಳವರಿಗೆ ನೀಡಲು ಹುನ್ನಾರ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆಯ ಬೀಚನಹಳ್ಳಿಯಲ್ಲಿರವ ಕಬಿನಿ ಡ್ಯಾಂನಲ್ಲಿ ವಿದ್ಯುತ್ ಉತ್ಪಾದಿಸಲು ಸುಭಾಷ್ ಪವರ್ ಕಾರ್ಪೊರೇಷನ್ ಲಿ. ಸಂಸ್ಥೆಯು 30 ವರ್ಷಕ್ಕೆ ಗುತ್ತಿಗೆ ಪಡೆದುಕೊಂಡಿದೆ. 2028 ಕ್ಕೆ ಗುತ್ತಿಗೆಯ ಅವಧಿ ಮುಕ್ತಾಯವಾಗಲಿದೆ.
ಈ ಮಧ್ಯೆ ಸಂಸ್ಥೆಯು ಕಬಿನಿ ಜಾಗದ ಹೆಸರಲ್ಲಿ 2023 ರಲ್ಲಿ ಎಸ್ ಬಿಐ ಬ್ಯಾಂಕಿನಿಂದ ಬರೋಬ್ಬರಿ 95 ಕೋಟಿ ಸಾಲ ಮಾಡಿದೆ ಎನ್ನಲಾಗಿದ್ದು, ಈ ನಡುವೆ ಸರಗೂರು ತಹಶಿಲ್ದಾರ್ ಅವರಿಂದ ಸುಭಾಷ್ ಪವರ್ ಕಾರ್ಪೊರೇಷನ್ ಲಿ. ಸಂಸ್ಥೆಗೆ ಆರ್ ಟಿಸಿ ಬದಲಾವಣೆ ಮಾಡಲಾಗಿದೆ. ಆದರೂ ಸಹ ನೀರಾವರಿ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಅಧಿಕಾರಿಗಳು ಹಾಗೂ ಖಾಸಗಿ ಕಂಪನಿಗಳ ವಿರುದ್ಧ ದಸಂಸ, ರೈತ ಹೋರಾಟಗಾರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮದಲ್ಲಿ ವರದಿಯಾಗಿದ್ದು, ಖಾತೆ ಬದಲಾವಣೆ ಮಾಡುವಂತೆ ಸರಗೂರು ತಹಶಿಲ್ದಾರ್ ಗೆ ಸುಭಾಷ್ ಕಬಿನಿ ಕಾರ್ಪೊರೇಷನ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ದಸಂಸ ಹಾಗು ರೈತ ಮುಖಂಡರು ಬಿಡುಗಡೆ ಮಾಡಿದ್ದಾರೆ.
24-11-2023 ರಲ್ಲೇ ಹೆಸರು ಬದಲಾವಣೆಗೆ ಕಂಪನಿ ಅರ್ಜಿ ಸಲ್ಲಿಸಿದ್ದು, ಸುಭಾಷ್ ಕಬಿನಿ ಕಾರ್ಪೊರೇಷನ್ ಲಿ ಹೆಸರಿಗೆ ಬದಲಾವಣೆ ಮಾಡಿಕೊಡಿ ಎಂದು ಅರ್ಜಿ ಸಲ್ಲಿಕೆಯಾಗಿದೆ. ಆದರೆ ವಿಷಯ ಗೊತ್ತಿದ್ದರೂ ಅಧಿಕಾರಿಗಳು ಕಳ್ಳಾಟ ಆಡಿದ್ದಾರೆಯೇ ಎಂಬ ಶಂಕೆ ವ್ಯಕ್ತವಾಗಿದೆ. ಸುಭಾಷ್ ಪವರ್ ಕಾರ್ಪೊರೇಷನ್ ಲೀಸ್ ಪಡೆದ ಮೇಲೆ ನೂರಾರು ಕೋಟಿ ಸಾಲ ಪಡೆದು ಸರ್ಕಾರಕ್ಕೂ ವಂಚನೆ ಮಾಡಿದ್ದು ಆರ್ ಟಿಸಿಯಲ್ಲಿ ಹೆಸರು ಬದಲಾಯಿಸಿ ಸರ್ಕಾರ, ಅಧಿಕಾರಿಗಳನ್ನ ಯಾಮಾರಿಸಿದೆ ಎಂಬ ಆರೋಪ ಕೇಳಿ ಬಂದಿದೆ.
Key words: mysore, Kabini, government land, RTC changes