ಖಾಸಗಿ ಶಾಲೆಗಳ ಲಾಬಿಗೆ ಮಣಿದ ಸರ್ಕಾರ?

ತುಮಕೂರು:ಜೂನ್-2: ರಾಜ್ಯದ ಸಾವಿರ ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುವುದಾಗಿ ಘೊಷಿಸಿದ್ದ ಸರ್ಕಾರ ಈಗ ಉಲ್ಟಾ ಹೊಡೆದಿದೆ. ಆರಂಭದಲ್ಲಿ ಎಷ್ಟೇ ಮಕ್ಕಳು ಬಂದರೂ ಪ್ರವೇಶ ನೀಡುವಂತೆ ಆದೇಶಿಸಿದ್ದ ಸರ್ಕಾರ, ಈಗ 30 ಮಕ್ಕಳಿಗೆ ಅವಕಾಶ ಕಲ್ಪಿಸುವಂತೆ ಜೂ.1ರಂದು ಮರು ಆದೇಶಿಸಿದ್ದು, ಖಾಸಗಿ ಶಾಲೆಯ ಲಾಬಿಗೆ ಒಳಗಾಗಿದೆ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.

ಸರ್ಕಾರದ ಈ ಆದೇಶ ಮಕ್ಕಳ ಶಿಕ್ಷಣ ಹಕ್ಕು ಕಸಿಯುವಂತಿದ್ದು ಸರ್ಕಾರಿ ಶಾಲೆ ಉಳಿಸುವ ಉದ್ದೇಶಕ್ಕೆ ಪೆಟ್ಟು ನೀಡಿದೆ. ಸರ್ಕಾರಿ ಶಾಲೆಯಲ್ಲಿ ಶಿಕ್ಷಕ-ವಿದ್ಯಾರ್ಥಿ ಅನುಪಾತಕ್ಕೆ ಅನುಗುಣವಾಗಿ 30 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಲು ಸೂಚಿಸಿರುವುದು ಆಶ್ಚರ್ಯ ಮೂಡಿಸಿದೆ.

ಅರ್ಜಿ ಸಲ್ಲಿಸಿದ ಮಕ್ಕಳಲ್ಲಿ 30 ಮಕ್ಕಳನ್ನು ಮಾತ್ರ ಲಾಟರಿ ಮೂಲಕ ಆಯ್ಕೆ ಮಾಡಿಕೊಂಡು ಉಳಿದ ಮಕ್ಕಳನ್ನು ಕನ್ನಡ ಮಾಧ್ಯಮಕ್ಕೆ ಸೇರಿಸಿಕೊಂಡು ನಲಿ-ಕಲಿ ಚಟುವಟಿಕೆಯಲ್ಲಿ ಇಂಗ್ಲಿಷ್ ಕಲಿಸಲು ಸೂಚಿಸಿರುವುದು ಅವೈಜ್ಞಾನಿಕ ತೀರ್ವನವಾಗಿದ್ದು, ಪಾಲಕರು ಹಾಗೂ ಶಿಕ್ಷಕರಲ್ಲಿ ಗೊಂದಲ ಮೂಡಿಸಿದೆ.

ತಡವಾಗಿ ಬಂದ ಆದೇಶ, ಶಿಕ್ಷಕರಿಗೆ ಧರ್ಮಸಂಕಟ!: ಪ್ರಾಥಮಿಕ ಶಾಲೆಗಳಲ್ಲಿ ಮೇ 29ರಿಂದ ದಾಖಲಾತಿ ಆಂದೋಲನ ಆರಂಭವಾಗಿ ನಾಲ್ಕು ದಿನ ಕಳೆದಿದೆ. ಶಾಲೆಗೆ ಬರುವ ಎಲ್ಲ ಮಕ್ಕಳಿಗೂ ಇಂಗ್ಲಿಷ್ ಮಾಧ್ಯಮಕ್ಕೆ ಪ್ರವೇಶ ನೀಡಲಾಗುವುದು ಎಂದು ಭರ್ಜರಿ ಪ್ರಚಾರ ನಡೆಸಿದ್ದ ಶಿಕ್ಷಕರಿಗೆ, ಸರ್ಕಾರದ ಈ ಹೊಸ ಆದೇಶದ ಪಾಲನೆ ಕಷ್ಟವಾಗಿದೆ. ಸರ್ಕಾರಿ ಶಾಲೆ ಉಳಿಸಲು ಮುಂದಾದ ಪಾಲಕರಿಗೆ ಉತ್ತರ ಹೇಳಲಾಗದ ಸ್ಥಿತಿಯಲ್ಲಿ ಶಿಕ್ಷಕರಿದ್ದಾರೆ.

ಪಾಲಕರಿಗೆ ನಿರಾಸೆ: ಇಂಗ್ಲಿಷ್ ಮಾಧ್ಯಮ ಶಾಲೆಗೆ ರಾಜ್ಯಾದ್ಯಂತ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ತಮ್ಮ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಲಿದೆ ಎಂದು ರೈತರು, ಬಡವರು, ಕೂಲಿ ಕಾರ್ವಿುಕರು ಸರದಿಯಲ್ಲಿ ನಿಂತು ಅರ್ಜಿ ಸಲ್ಲಿಸಿದ್ದರು. ಆದರೆ ಸರ್ಕಾರದ ದಿಢೀರ್ ನಿರ್ಧಾರ ಲಕ್ಷಾಂತರ ಪಾಲಕರಿಗೆ ನಿರಾಸೆ ತಂದಿದೆ.

1, 2ನೇ ತರಗತಿ ಹೋಂ ವರ್ಕ್ ನಿಷೇಧ

ಬೆಂಗಳೂರು: ಶಿಕ್ಷಣ ಇಲಾಖೆ 1 ಮತ್ತು 2ನೇ ತರಗತಿಯ ಮಕ್ಕಳಿಗೆ ಹೋಂ ವರ್ಕ್ ನೀಡುವುದ್ನು ರದ್ದುಪಡಿಸಿದೆ. ಅಲ್ಲದೆ, 1 ರಿಂದ 5ನೇ ತರಗತಿವರೆಗೆ ಎನ್​ಸಿಇಆರ್​ಟಿ ನಿಗದಿಪಡಿಸಿರುವ ಪಠ್ಯಕ್ರಮ ಹೊರತುಪಡಿಸಿ ಬೇರೆ ಪಠ್ಯಕ್ರಮ ಬೋಧಿಸದಂತೆ ಶಾಲೆಗಳಿಗೆ ಎಚ್ಚರಿಕೆ ನೀಡಿದೆ. ಇನ್ನಾವುದೇ ಪಠ್ಯಕ್ರಮ ಬೋಧಿಸುವ ಶಾಲೆಗಳ ಮೇಲೆ ನಿಗಾ ವಹಿಸಲು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದಾರೆ.

ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಪಾಲಕರು ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆಗಳತ್ತ ಮುಖ ಮಾಡಿದ್ದರು. ಈಗ 30 ಮಕ್ಕಳಿಗಷ್ಟೇ ಅವಕಾಶ ನೀಡಿದರೆ ಅದು ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ ಉಲ್ಲಂಘನೆ ಆಗಲಿದೆ. ಇದರಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳ ಲಾಬಿ ಇದ್ದರೂ ಇರಬಹುದು.

| ಕಾಡಶೆಟ್ಟಿಹಳ್ಳಿ ಸತೀಶ್, ರಾಜ್ಯಾಧ್ಯಕ್ಷ, ಗ್ರಾಪಂ ಸದಸ್ಯರ ಮಹಾ ಒಕ್ಕೂಟ

ಕೃಪೆ:ವಿಜಯವಾಣಿ

ಖಾಸಗಿ ಶಾಲೆಗಳ ಲಾಬಿಗೆ ಮಣಿದ ಸರ್ಕಾರ?
Government, private schools lobby,tumkur