ಮೈಸೂರು,ಡಿಸೆಂಬರ್,11,2024 (www.justkannada.in): ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹಿಂದುಳಿದ ವರ್ಗಗಳ ನಿಗಮಗಳಿಗೆ ಹಣ ಬಿಡುಗಡೆ ಮಾಡಿಲ್ಲ ಎಂದು ಬಿಜೆಪಿ ರಾಜ್ಯ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ರಘು ಕೌಟಿಲ್ಯ ಆರೋಪಿಸಿದರು.
ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಘು ಕೌಟಿಲ್ಯ, ಮಾಜಿ ಸಿಎಂ ಎಸ್ ಎಂ ಕೃಷ್ಣ ನಿಧನಕ್ಕೆ ಸಂತಾಪ ಸಲ್ಲಿಸಿದರು. ಬಳಿಕ ಮಾತು ಮುಂದುರೆಸಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆಗಿದೆ. ಕಾಂಗ್ರೆಸ್ ಮತ ಬ್ಯಾಂಕಿನ ಮೇಲೆ ಅಧಿಕಾರ ಮಾಡುವ ಕೆಲಸ ಮಾಡುತ್ತಿದೆ. ಬದುಕು ಕಟ್ಟಿಕೊಡುವ ಯಾವುದೇ ಯೋಜನೆಗಳು ಕಾಂಗ್ರೆಸ್ ನಲ್ಲಿ ಇಲ್ಲ. ದೂರದೃಷ್ಟಿ ಉಳ್ಳ ಯಾವುದೇ ಯೋಜನೆಗಳು ಇಲ್ಲ. ಗ್ಯಾರಂಟಿ ಯೋಜನೆ ಹಣವನ್ನು ಚುನಾವಣೆ ವೇಳೆ ಬಿಡುಗಡೆ ಮಾಡುವ ಕೆಲಸ ಮಾಡುತ್ತಿದೆ. ರಾಜಕಾರಣದಲ್ಲಿ ಅಧಿಕಾರ ಮಾಡಲು, ಅಧಿಕಾರ ಉಳಿಸಿಕೊಳ್ಳಲು ಮಾತ್ರ ಅಹಿಂದ ಬೇಕು. ಆದರೆ ಅಹಿಂದ ಸಮುದಾಯಕ್ಕೆ ಯಾವುದೇ ಯೋಜನೆಗಳನ್ನ ಜಾರಿ ಮಾಡಿಲ್ಲ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಬ್ಯಾಕ್ ವರ್ಡ್ ಕ್ಲಾಸ್ ನ ಚಾಂಪಿಯನ್ ಅಂತಾರೆ. ಆದರೆ ಇದುವರೆಗೂ ಹಿಂದುಳಿದ ವರ್ಗಗಳ ನಿಗಮಗಳಿಗೆ ಹಣ ಬಿಡುಗಡೆ ಮಾಡಿಲ್ಲ. ಈ ಹಿಂದೆ ಬಸವರಾಜ್ ಬೊಮ್ಮಾಯಿ ಸರ್ಕಾರ ಇದ್ದಾಗ 546 ಕೋಟಿ ಅನುದಾನ ವಿವಿಧ ನಿಗಮಗಳಿಗೆ ಬಿಡುಗಡೆ ಮಾಡಿತ್ತು. ಆದರೆ ಸಿದ್ದರಾಮಯ್ಯನವರ ಸರ್ಕಾರ ಅಧಿಕಾರಕ್ಕೆ ಬಂದಾಗ ಕೇವಲ 170 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಸವಿತಾ ಸಮುದಾಯದ ಅಭಿವೃದ್ಧಿಗೆ ಕೇವಲ 2 ಕೋಟಿ ಬಿಡುಗಡೆ ಮಾಡಿದೆ. ಹಿಂದಿನ ಸರ್ಕಾರಗಳು ಬಿಡುಗಡೆ ಮಾಡಿದ್ದಷ್ಟು ಅನುದಾನವನ್ನ ಬಿಡುಗಡೆ ಮಾಡಬೇಕಿತ್ತು. ಈ ಕೆಲಸವನ್ನ ಕೂಡ ಸರ್ಕಾರ ಮಾಡಿಲ್ಲ. ಈಗ ರಾಜ್ಯ ಸರ್ಕಾರದ ಬೊಕ್ಕಸ ಖಾಲಿ ಆಗಿರೋದನ್ನ ಇದು ತೋರಿಸುತ್ತದೆ. ಹಿಂದುಳಿದ ವರ್ಗಗಳ ನಿಗಮಗಳ ಬಾಗಿಲು ಮುಚ್ಚಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಗ್ಯಾರಂಟಿ ಯೋಜನೆ ಬಿಟ್ಟರೆ ಈ ಸರ್ಕಾರಕ್ಕೆ ಏನು ಕಾಣುತ್ತಿಲ್ಲ. ರಾಜ್ಯ ಸರ್ಕಾರದ ಈ ನಡೆ ಖಂಡಿಸಿ ಪ್ರಥಮ ಹಂತದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಮೈಸೂರಿನಲ್ಲೂ ನಾಳೆ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಹೇಳಿದರು.
ಪಂಚಮಸಾಲಿ ಸಮುದಾಯದ ಹೋರಾಟಕ್ಕೆ ನಮ್ಮ ಬೆಂಬಲ
ಪಂಚಮಸಾಲಿ ಸಮುದಾಯ ಹೋರಾಟ ವಿಚಾರ ಕುರಿತು ಪ್ರತಿಕ್ರಿಯಿಸಿದ ರಘು ಕೌಟಿಲ್ಯ, ಪಂಚಮಸಾಲಿ ಸಮುದಾಯದ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಹೋರಾಟಗಾರರ ಮೇಲಿನ ಹಲ್ಲೆಯನ್ನ ಖಂಡಿಸುತ್ತೇವೆ ಎಂದರು.
Key words: Government, not released, money, backward class corporations, Raghu Kautilya