ಹುಬ್ಬಳ್ಳಿ, ಮಾರ್ಚ್,2,2024(www.justkannada.in): ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆರೋಪಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ನಿನ್ನೆ ನಡೆದ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ನಿನ್ನೆ ನಾನು ಬೆಂಗಳೂರುಗೆ ಹೋಗಿ ಗಾಯಾಳುಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದೆ. ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಒಬ್ಬ ಮಹಿಳೆ ತನ್ನ ಒಂದು ಕಣ್ಣಿನ ದೃಷ್ಟಿ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ, ಹಾಗಾಗದಿರಲಿ ಅಂತ ಭಗವಂತನನ್ನು ಪ್ರಾರ್ಥಸುತ್ತೇನೆ ಎಂದು ತಿಳಿಸಿದರು.
ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರ ಮೇಲೆ ಯಾವುದೇ ಕ್ರಮ ಇಲ್ಲ. ರಾಜ್ಯದ ಸಾಮಾನ್ಯ ಜನರ ಬದುಕು ಅಸುರಕ್ಷಿತವಾಗಿದೆ. ಕಟರ್ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ರಾಜ್ಯ ಸರ್ಕಾರ ಸಹಕಾರ ನೀಡುತ್ತಿದೆ. ಇದಕ್ಕೆ ನೇರವಾಗಿ ಸಿಎಂ ಸಿದ್ದರಾಮಯ್ಯ ಅವರೇ ಕಾರಣ. ಎಲ್ಲಾ ಗಾಯಳುಗಳ ಆರೋಗ್ಯ ಬೇಗ ಸುಧಾರಿಸಲಿ ಎಂದರು.
ಇಂಥ ಘಟನೆಗಳು ನಡೆದಾಗ ರಾಜ್ಯ ಸರ್ಕಾರದ ಹೇಳಿಕೆಗಳು ದುಷ್ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಕುಮ್ಮಕ್ಕು ನೀಡುವಂತಿರುತ್ತವೆ. ನಾವೇನೇ ಮಾಡಿದರೂ ರಕ್ಷಣೆ ಸಿಗುತ್ತದೆ ಎಂಬ ನಿರಾಳ ಭಾವ ಅವರಲ್ಲಿ ಹುಟ್ಟಿಕೊಂಡಿದೆ ಎಂದು ಪ್ರಹ್ಲಾದ್ ಜೋಶಿ ಅಸಮಾಧಾನ ವ್ಯಕ್ತಪಡಿಸಿದರು.
Key words: Government – Rameswaram Cafe -bomb blast- case- Union Minister -Prahlad Joshi.