ಮೈಸೂರು,ಅಕ್ಟೋಬರ್,12,2022(www.justkannada.in): ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕರ ನೇಮಕ ಪ್ರಸ್ತಾಪವನ್ನ ರಾಜ್ಯ ಸರ್ಕಾರ ತಿರಸ್ಕರಿಸಿದೆ.
ಈ ಸಂಬಂಧ ಕೆಎಸ್ ಒಯುಗೆ ಆದೇಶಿಸಿರುವ ಸರ್ಕಾರದ ಅಧೀನ ಕಾರ್ಯದರ್ಶಿ(ಉನ್ನತಶಿಕ್ಷಣ ಇಲಾಖೆ) ಶೀತಲ್ ಎಂ.ಹಿರೇಮಠ ಅವರು, ವಿಶ್ವವಿದ್ಯಾಲಯವು ವಿವಿಧ ಅಧ್ಯಯನ ಮತ್ತು ಸಂಶೋಧನಾ ವಿಭಾಗಗಳಿಗೆ ಅತಿಥಿ ಉಪನ್ಯಾಸಕರುಗಳನ್ನು 02 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇರೆಗೆ (Contract Basis) ಸಂದರ್ಶನದ ಮೂಲಕ ನೇಮಕ ಮಾಡಿದ್ದು, ಸದರಿ ಅತಿಥಿ ಉಪನ್ಯಾಸಕರುಗಳಿಗೆ ನೇಮಕಾತಿ ಅವಧಿಯನ್ನು 2 ವರ್ಷಗಳ ಬದಲಿಗೆ 05 ವರ್ಷದ ಅವಧಿಗೆ ವಿಸ್ತರಿಸಿಕೊಳ್ಳುವ ಸಂಬಂಧ ಹಾಲಿ ಚಾಲ್ತಿಯಲ್ಲಿರುವ ಪರಿನಿಯಮಕ್ಕೆ ಕರಾಮುವಿ ಕಾಯ್ದೆ 1992ರ ಕಲಂ 23(2) ರನ್ವಯ Karnataka State Open University Employees (General Recruitment) Statute-2004 (Amendment)ರ ಪರಿನಿಯಮದ ಕರಡು ಪ್ರತಿಯನ್ನು ರಚಿಸಿ, ಘನತವತ್ತ ಕುಲಾಧಿಪತಿಗಳ ಅಂಕಿತ ದೊರಕಿಸಿಕೊಡಬೇಕೆಂದು ಕೋರಿರುವುದು ಸರಿಯಷ್ಟೆ.
ಸದರಿ ಕರಡು ಪರಿನಿಯಮವನ್ನು ಪರಿಶೀಲಿಸಲಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಧಿನಿಯಮ 1992ರ 2ನೇ ಅನುಸೂಚಿಯ ಪ್ರಕರಣ 2)9) (iii) ರಲ್ಲಿ 06 ತಿಂಗಳಿಗೆ ಮೀರದ ಅವಧಿಗೆ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಲು ಅವಕಾಶ ಕಲ್ಪಿಸಿರುತ್ತದೆ. ಈ ಹಿನ್ನೆಲೆಯಲ್ಲಿ ಅಧಿನಿಯಮಕ್ಕೆ ವಿರುದ್ಧವಾಗಿರುವ ಉಲ್ಲೇಖಿತ ಪರಿನಿಮಾವಳಿಯನ್ನು ಒಪ್ಪಲು ಸಾಧ್ಯವಿರುವುದಿಲ್ಲ.
ಆದುದರಿಂದ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಧಿನಿಯಮ 1992ರ 2ನೇ ಅನುಸೂಚಿಯ ಪ್ರಕರಣ (2)(9) (iii) ರಲ್ಲಿ ತಿಳಿಸಿರುವಂತೆ (06 ತಿಂಗಳು ಮೀರದೆ) ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲು ಅನುವಾಗುವಂತೆ ಪ್ರಸ್ತುತ ಚಾಲ್ತಿಯಲ್ಲಿರುವ ಪರಿನಿಯಮಕ್ಕೆ ಕರಾಮುವಿ ಕಾಯ್ದೆ 1992ರ ಕಲಂ 23(2) ರನ್ವಯ Karnataka State Open University Employees (General Recruitment) Statute-2004 (Amendment) ರ ಕರಡು ಪರಿನಿಯಮವನ್ನು ಸಿದ್ಧಪಡಿಸಿ ಸರ್ಕಾರದ ಅನುಮೋದನೆಗೆ ಕೂಡಲೇ ಸಲ್ಲಿಸತಕ್ಕದ್ದು.
ಈ ಪತ್ರವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂ. ಆಇ 537 ವೆಚ್ಚ -8/2022 ದಿನಾಂಕ:01.08.2022ರ ಸಹಮತಿಯನ್ನಯ ಹೊರಡಿಸಲಾಗಿರುತ್ತದೆ. ಪ್ರಸ್ತಾವಿಕ ವಿಷಯದ ಕುರಿತು ಆರ್ಥಿಕ ಇಲಾಖೆ ಮತ್ತು ಉನ್ನತ ಶಿಕ್ಷಣ ಇಲಾಖೆಯು ಈ ಪತ್ರದಲ್ಲಿ ನೀಡಿರುವ ನಿರ್ದೇಶನವನ್ನು ಉಲ್ಲಂಘಿಸಿದಲ್ಲಿ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕುಲಸಚಿವರು (ಆಡಳಿತ) ಇವರನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಮತ್ತು ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ(ಉನ್ನತ ಶಿಕ್ಷಣ ಇಲಾಖೆ ) ಶೀತಲ್ ಎಂ.ಹಿರೇಮಠ ತಿಳಿಸಿದ್ದಾರೆ.
Key words: government -rejected – KSOU-proposal – appointment – guest lecturers