ಮೈಸೂರು,ಜುಲೈ,6,2023(www.justkannada.in): ಕೆಎಸ್ ಆರ್ ಟಿಸಿ ಬಸ್ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಚಲುವರಾಯಸ್ವಾಮಿ ರಾಜೀನಾಮೆಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಜಗದೀಶ್ ಸದ್ಯ ವೆಂಟಿಲೇಟರ್ ನಲ್ಲಿ ಇದ್ದಾರೆ. ಸರ್ಕಾರ ಬಂದು ಐವತ್ತು ದಿನ ಆಗಿಲ್ಲ. ವರ್ಗಾವಣೆ ಮಾಡಿಕೊಳ್ಳುವುದಾದರೇ ಮಾಡಿಕೊಳ್ಳಲಿ. ಆದರೆ ಈ ರೀತಿ ಮಾಡುವುದು ಸರಿಯಲ್ಲ. ಜಗದೀಶ್ ಪತ್ನಿ ಪಂಚಾಯತ್ ಸದಸ್ಯರು. ಪಂಚಾಯತ್ ಅಧ್ಯಕ್ಷ- ಉಪಾಧ್ಯಕ್ಷ ಮೀಸಲಾತಿ ಬಂದಿದೆ. ಆದರೆ ಇನ್ನೂ ಒಂದು ತಿಂಗಳಾಗಿಲ್ಲ. ಆಗಲೇ ದ್ವೇಷ ರಾಜಕಾರಣ ಆರಂಭಿಸಿದ್ದಾರೆ. ಊರಿನಲ್ಲಿರುವ ರೌಡಿ, ಚೇಲಾ ಮಹದೇವ ಎಂಬಾತ ಕುಟುಂಬಕ್ಕೆ ಕಿರುಕುಳ ನೀಡಿದ್ದಾನೆ. ಈ ಹೆಣ್ಣು ಮಗಳು ಜೆಡಿಎಸ್ ಪಕ್ಷ ಬಿಡುವಂತೆ, ಕಾಂಗ್ರೆಸ್ ಸೇರುವಂತೆ ಒತ್ತಡ ಹೇರಿದ್ದಾನೆ. ಮತ್ತೊಂದೆಡೆ ಜಗದೀಶ್ ಗೆ ಅಧಿಕಾರಿಗಳ ಮೂಲಕ ಕಿರುಕುಳ ನೀಡಿದ್ದಾನೆ. ಡೆತ್ ನೋಟ್ ನಲ್ಲಿ ಜಗದೀಶ್ ಅವರು ಸ್ಪಷ್ಟವಾಗಿ ಬರೆದಿದ್ದಾರೆ. ಸಚಿವರ ಆದೇಶ ಇದೆ, ಒತ್ತಡ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಅವರನ್ನ ಮಂತ್ರಿ ಸ್ಥಾನದಿಂದ ಕೆಳಗಿಳಿಸಿ. ಮಂತ್ರಿ ಸ್ಥಾನ ಏನು ಶಾಶ್ವತಾನಾ? ಎಂದು ಕಿಡಿಕಾರಿದರು.
ಘಟನೆ ಸಂಬಂಧ ಅಧಿಕಾರಿಗಳನ್ನ ಕೇಳಿದರೆ ಇನ್ನೂ ವ್ಯಕ್ತಿ ಸತ್ತಿಲ್ಲ. ಆ ಕಾರಣಕ್ಕೆ ಎಫ್ ಐಆರ್ ಹಾಕಿಲ್ಲ ಅಂತಾರೆ. ಇವರಿಗೆ ಮತ ಹಾಕಿದ್ದು ಜನರ ಜೀವದ ಜೊತೆ ಚೆಲ್ಲಾಟ ಆಡಲು ಅಲ್ಲ. ನಿನ್ನೆ ಅವರ ಕುಟುಂಬಕ್ಕೆ ಕರೆ ಮಾಡಿದಾಗ ಕುಟುಂಬದವರು ಅಳುತ್ತಿದ್ದರು. ರಾತ್ರಿ 1.30 ಕ್ಕೆ ಮೈಸೂರಿಗೆ ಶಿಫ್ಟ್ ಮಾಡಿದ್ದಾರೆ. ವೈದ್ಯರು ಕೈಲಾದ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ ಎಂದು ಹೆಚ್.ಡಿಕೆ ಹೇಳಿದರು.
ರಾಜ್ಯದಲ್ಲಿ ಹೊಸ ಹೊಸ ಟ್ಯಾಕ್ಸ್ ಗಳು ಆರಂಭವಾಗಿವೆ. ಟ್ಯಾಕ್ಸ್ ನೀಡಿದರೆ ಮಾತ್ರ ಇವರಿಗೆ ಲಾಭ ಎಂದು ಸರ್ಕಾರದ ವಿರುದ್ಧ ಹೆಚ್.ಡಿಕೆ ಗುಡುಗಿದರು.
ಪೆನ್ ಡ್ರೈವ್ ಹೊರಗೆ ಬಂದರೆ ಮಂತ್ರಿ ರಾಜೀನಾಮೆ ನೀಡುತ್ತಾರೆ.
ಭ್ರಷ್ಟಾಚಾರ ಆರೋಪ ಕುರಿತು ದಾಖಲೆ ಇರುವ ಪೆನ್ ಡ್ರೈವ್ ರಹಸ್ಯವನ್ನ ಹೇಳಿದ ಹೆಚ್ ಡಿಕೆ, ಪೆನ್ ಡ್ರೈವ್ ಹೊರಗೆ ಬಂದರೆ ಮಂತ್ರಿ ರಾಜೀನಾಮೆ ನೀಡುತ್ತಾರೆ. ಪೆನ್ ಡ್ರೈವ್ ದಾಖಲೆಯನ್ನ ಸೂಕ್ತ ಸಮಯದಲ್ಲಿ ಮಾತನಾಡುವೆ. ಈ ಸರ್ಕಾರ ಏನು ಮಾತಾಡಬೇಕು ಎಲ್ಲವನ್ನೂ ಮಾತನಾಡಲಿ. ಹಿಟ್ ಅಂಡ್ ರನ್ ಅಂತಾರೆ. ಏನಾದರೂ ಹೇಳಿಕೊಳ್ಳಲಿ ಅಂತಾರೆ. ಅವರು ಹೀಗೆ ಮಾತನಾಡುತ್ತಿರಲಿ. ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡ್ತೀನಿ ಎಂದರು.
ವರ್ಗಾವಣೆ ದಂಧೆ ಸಿಎಂ ನೇತೃತ್ವದಲ್ಲೇ ನಡೆಯುತ್ತಿದೆ. ಅವರ ಮೂಲಕವೇ ವರ್ಗಾವಣೆ ಆದೇಶ ಆಗುತ್ತದೆ. ತಕ್ಷಣ ಅದು ಬದಲಾವಣೆ ಆಗುತ್ತದೆ. ಸರ್ಕಾರ ನಡೆಯಬೇಕಾದರೆ ವರ್ಗಾವಣೆ ಅನಿವಾರ್ಯ. ಆದರೆ ಯಾವ ಅಳತೆಗೋಲು ಇಟ್ಟುಕೊಂಡು ವರ್ಗಾವಣೆ ಮಾಡುತ್ತಿದ್ದೀರಿ. ಇಷ್ಟೊಂದು ಅನುಭವ ಇಟ್ಕೊಂಡು ನಿಮಗೆ ಗೊತ್ತಿಲ್ಲ. ಪ್ರಮುಖ ಎಲ್ಲಾ ಹುದ್ದೆಗಳೆಲ್ಲವೂ ದುಡ್ಡಿನಿಂದಲೇ ವರ್ಗಾವಣೆ ಆಗ್ತಿವೆ ಎಂದು ಹೆಚ್.ಡಿಕೆ ಆರೋಪಿಸಿದರು.
ನನ್ನ ಆಸ್ತಿಯನ್ನು ಕುರಿತು ಇಂಟರ್ನ್ಯಾಷನಲ್ ಸಂಸ್ಥೆಯಿಂದ ತನಿಖೆ ನಡೆಸಲಿ.
ಬಿಜೆಪಿಯವರು ವಿಪಕ್ಷ ಸ್ಥಾನದಲ್ಲಿದ್ದಾರೆ. ನಾವು ಕೂಡ ವಿಪಕ್ಷ ಸ್ಥಾನದಲ್ಲಿ ಇದ್ದೇವೆ. ಹೋರಾಟದಲ್ಲಿ ಒಬ್ಬರಿಗೊಬ್ಬರು ಸಹಕಾರ ಪಡೆಯುತ್ತೇವೆ. ಬಿಜೆಪಿಯಲ್ಲಿ ಹಲವರು ಸಮರ್ಥ ನಾಯಕರಿದ್ದಾರೆ. ಬಿಜೆಪಿಯಲ್ಲಿಯೇ ವಿಪಕ್ಷ ನಾಯಕರು ಆಗುವವರು ಇದ್ದಾರೆ. ನನ್ನ ಆಸ್ತಿಯನ್ನು ಕುರಿತು ಇಂಟರ್ನ್ಯಾಷನಲ್ ಸಂಸ್ಥೆಯಿಂದ ತನಿಖೆ ನಡೆಸಲಿ ಎಂದು ಸರ್ಕಾರಕ್ಕೆ ಹೆಚ್.ಡಿಕೆ ಸವಾಲು ಹಾಕಿದರು.
Key words: government- remove – minister- position-Former CM- H.D kumaraswamy