ಬೆಂಗಳೂರು,ಜನವರಿ,6,2025 (www.justkannada.in): ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೌಲ್ಯಮಾಪನ ಸೇರಿದಂತೆ ವಿವಿಧ ಸೇವೆಗಳನ್ನು ರೈಟ್ ಪೀಪಲ್ ಸಂಸ್ಥೆಯಿಂದ 9.25 ಕೋಟಿ ವೆಚ್ಚದಲ್ಲಿ ಪಡೆದಿರುವ ಕಾಂಗ್ರೆಸ್ ಸರ್ಕಾರವು, ಇದಕ್ಕೆ ಸಂಬಂಧಿಸಿದ ಕಡತವನ್ನು 300 ದಿನಗಳಾದರೂ ಆರ್‌ಟಿಐ ಅಡಿಯಲ್ಲಿ ಬಹಿರಂಗಗೊಳಿಸುತ್ತಿಲ್ಲ.
ಸದ್ಯ ಈ ಕಡತವು ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆಗಿರುವ ಆರ್ಥಿಕ ಇಲಾಖೆಯ ಎಸಿಎಸ್ ಎಲ್ ಕೆ ಅತೀಕ್ ಅವರ ಬಳಿ 2024ರ ಅಗಸ್ಟ್ ನಿಂದಲೂ ಇದೆ. ಅತೀಕ್ ಅವರು ಈ ಕಡತವನ್ನು ಕೆಳ ಹಂತದ ಅಧಿಕಾರಿಗಳಿಗೆ ಹಿಂದಿರುಗಿಸಿಲ್ಲ.
ರೈಟ್ ಪೀಪಲ್ ಪ್ರಸ್ತಾವನೆಗೆ ಸಂಬಂಧಿಸಿದ ಕಡತವನ್ನು ಆರ್‌ಟಿಐ ಅಡಿಯಲ್ಲಿ ಪಡೆಯಲು ‘ದಿ ಫೈಲ್ 2024ರ ಮಾರ್ಚ್ 21ರಂದೇ ಅರ್ಜಿ ಸಲ್ಲಿಸಿತ್ತು ಈ ಅರ್ಜಿಯನ್ನು 4 ತಿಂಗಳವರೆಗೆ ಇಲಾಖೆಯ ಕಾರ್ಯದರ್ಶಿ ಡಾ ಪಿ.ಸಿ ಜಾಫರ್ ಅವರು ತಮ್ಮ ಬಳಿಯೇ ಇರಿಸಿಕೊಂಡಿದ್ದರು.
ಜುಲೈ ನಂತರ ಈ ಕಡತವು ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್ ಕೆ ಅತೀಕ್ ಅವರಿಗೆ ರವಾನೆ ಆಗಿದೆ. ಆದರೆ ಈ ಕಡತವು ಎಲ್ ಕೆ ಅತೀಕ್ ಅವರ ಲಾಗಿನ್‌ನಲ್ಲಿಯೇ ಕಳೆದ 10 ತಿಂಗಳಿನಿಂದಲೂ ಇದೆ.
ಈ ಕಡತವನ್ನು ಆರ್‌ಟಿಐ ಅಡಿಯಲ್ಲಿ ಒದಗಿಸಲು ಸರ್ಕಾರವು ಅನುಸರಿಸುತ್ತಿರುವ ವಿಳಂಬ ಧೋರಣೆಯು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ.
ಪ್ರಕರಣದ ವಿವರ
ಗ್ಯಾರಂಟಿ ಯೋಜನೆಗಳ ಸಮೀಕ್ಷೆ ನಡೆಸಲು ಎಂ2ಎಂ ಮೀಡಿಯಾ ನೆಟ್ವರ್ಕ್ ಸಂಸ್ಥೆಯು ನೀಡಿದ್ದ ಪ್ರಸ್ತಾವನೆಯನ್ನು ಯಥಾವತ್ತಾಗಿ ಒಪ್ಪಿಕೊಂಡಿತ್ತು. ಇದರ ಬೆನ್ನಲ್ಲೇ ರೈಟ್ ಪೀಪಲ್ ಹೆಸರಿನ ಸಂಸ್ಥೆಯು ನೀಡಿದ್ದ 9.25 ಕೋಟಿ ರು. ಅಂದಾಜು ವೆಚ್ಚದ ಪ್ರಸ್ತಾವನೆಯನ್ನೂ ಆರ್ಥಿಕ ಇಲಾಖೆ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಅನುಮೋದಿಸಿದ್ದರು.
ವಿಶೇಷವೆಂದರೇ 9.25 ಕೋಟಿ ರುಗಳನ್ನು ಒದಗಿಸಲು ಸರ್ಕಾರದ ಬಳಿ ಅನುದಾನವೇ ಇರಲಿಲ್ಲ. ಅನುದಾನ ಕೊರತೆ ಇದ್ದರೂ ರೈಟ್ ಪೀಪಲ್ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಒಪ್ಪಿಕೊಂಡಿದ್ದ ಸರ್ಕಾರವು ಹೆಚ್ಚುವರಿ ಅನುದಾನ ಮಂಜೂರು ಮಾಡಿತ್ತು.
ಗ್ಯಾರಂಟಿ ಯೋಜನೆ ಕುರಿತಾಗಿ ಮೌಲ್ಯಮಾಪನ, ನಿರಂತರ ನಿಗಾವಣೆ ಸೇರಿದಂತೆ ಮತ್ತಿತರೆ ಸೇವೆಗಳನ್ನು ಪಡೆಯಲು ಸ್ಪರ್ಧಾತ್ಮಕ ಟೆಂಡರ್ ಆಹ್ವಾನಿಸಲು ಸಾಕಷ್ಟು ಅವಕಾಶಗಳಿದ್ದವು. ಅಲ್ಲದೇ ಈ ಕುರಿತು ನುರಿತ ಮತ್ತು ಅನುಭವವುಳ್ಳ ಕಂಪನಿ, ಸಂಸ್ಥೆಗಳಿಂದ ಆಸಕ್ತಿ ವ್ಯಕ್ತಪಡಿಸುವಿಕೆಯ (ಇಒಐ) ಅರ್ಜಿ ಆಹ್ವಾನಿಸಬಹುದಿತ್ತು. ಅಂದಾಜು ವೆಚ್ಚವನ್ನು ದರ ಸಂಧಾನದ ಮೂಲಕ ನಿಗದಿಪಡಿಸಬಹುದಿತ್ತು ಆದರೆ ಸರ್ಕಾರವು ಈ ಯಾವ ಪ್ರಕ್ರಿಯೆಗಳನ್ನೂ ನಡೆಸಿಲ್ಲ. ಬದಲಿಗೆ ರೈಟ್ ಪೀಪಲ್ ಗೆ ನೇರವಾಗಿ 4(ಜಿ) ವಿನಾಯಿತಿ ನೀಡಿತ್ತು.
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೌಲ್ಯಮಾಪನ, ನಿರಂತರ ಮೇಲ್ವಿಚಾರಣೆ, ಫಲಾನುಭವಿ ಕೇಂದ್ರಿತ ನೇರ ಮತ್ತು ನಿರಂತರ ಸಂವಹನ ವ್ಯವಸ್ಥೆಗೆ ಸಂಬಂಧಿಸಿದ ಯೋಜನೆ ಕುರಿತು ಸರ್ಕಾರವು ಯಾವುದೇ ಪ್ರಸ್ತಾವನೆ ಆಹ್ವಾನಿಸದಿದ್ದರೂ ರೈಟ್ ಪೀಪಲ್ ಸರ್ಕಾರಕ್ಕೆ ನೇರವಾಗಿ ಹಣಕಾಸನ್ನೂ ಒಳಗೊಂಡಂತೆ ಪ್ರಸ್ತಾವ ಸಲ್ಲಿಸಿತ್ತು. ಇದನ್ನಾಧರಿಸಿ ವಾರ್ತಾ ಇಲಾಖೆಯ ಆಯುಕ್ತರು 41ಜಿ) ವಿನಾಯಿತಿ ಕೋರಿದ್ದರು.
ಈ ಪ್ರಸ್ತಾವನೆಯನ್ನು ಪರಿಶೀಲಿಸಿದ್ದ ಕನ್ನಡ, ಸಂಸ್ಕೃತಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಚಿವಾಲಯವೂ ಮರು ಮಾತಿಲ್ಲದೇ ಮಂಜೂರಾತಿ ನೀಡಿದೆ. ಟೆಂಡರ್ ಆಹ್ವಾನಿಸುವ ಕುರಿತು ವಾರ್ತಾ ಮತ್ತು ಆರ್ಥಿಕ ಇಲಾಖೆಯು ತುಟಿ ಬಿಚ್ಚಿಲ್ಲ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸಹ ಈ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದರು.
ಹಣಕಾಸು ಪ್ರಸ್ತಾವನೆಯಲ್ಲೇನಿದೆ?
ವಿಷಯ ಅಧ್ಯಯನ ತಂಡದಲ್ಲಿ 5 ಸದಸ್ಯರಿಗೆ ಒಟ್ಟಾರೆ 10.00 ಲಕ್ಷ, ಸುದ್ದಿ ಸಂಗ್ರಹಣಾ ತಂಡದಲ್ಲಿನ 10 ಸದಸ್ಯರಿಗೆ 10.00 ಲಕ್ಷ, ಬರಹಗಾರರ ತಂಡದಲ್ಲಿ 10 ಸದಸ್ಯರಿಗೆ 15.00 ಲಕ್ಷ, ಸಂವಹನ ತಂಡದಲ್ಲಿನ 10 ಸದಸ್ಯರಿಗೆ 15.00 ಲಕ್ಷ, ಛಾಯಾಗ್ರಹಣ ತಂಡದ 10 ಸದಸ್ಯರಿಗೆ 30.00 ಲಕ್ಷ ವಿನ್ಯಾಸ ತಂಡದಲ್ಲಿನ 15 ಸದಸ್ಯರಿಗೆ 20 ಲಕ್ಷ, ಸಲಕರಣೆಗಳ ಬಾಡಿಗೆಗೆ 50.00 ಲಕ್ಷ, ಸಹಾಯಕರ ತಂಡದಲ್ಲಿನ 30 ಸದಸ್ಯರಿಗೆ 50.00 ಲಕ್ಷ, ತಳ ಮಟ್ಟದ ಅನುಷ್ಠಾನ ತಂಡದಲ್ಲಿನ 5 ಸದಸ್ಯರಿಗೆ 20.00 ಲಕ್ಷ, ಸಂಸ್ಥೆಗೆ 11.25 ಲಕ್ಷ ರು ಸಂಭಾವನೆ ಸೇರಿ ತಿಂಗಳಿಗೆ 2,31,25,000.00 ರು. ನಂತೆ ನಾಲ್ಕು ತಿಂಗಳಿಗೆ 9.25 ಕೋಟಿ ರು ಅಂದಾಜು ವೆಚ್ಚದ ಹಣಕಾಸು ಪ್ರಸ್ತಾವನೆಯನ್ನು 2024ರ ಜನವರಿ 29ರಂದು ಸಲ್ಲಿಸಿತ್ತು.
ವಾರ್ತಾ ಇಲಾಖೆಯು ಸಲ್ಲಿಸಿದ್ದ ಪ್ರಸ್ತಾವನೆಗೆ 2 ತಿಂಗಳಿನೊಳಗೇ ಆರ್ಥಿಕ ಇಲಾಖೆಯೂ ಸಹ 41ಜಿ) ವಿನಾಯಿತಿ ನೀಡಿ 2024ರ ಮಾರ್ಚ್ 11ರಂದು ಅಧಿಸೂಚನೆಯನ್ನೂ ಹೊರಡಿಸಿತ್ತು.
ಆರ್ಥಿಕ ಇಲಾಖೆಯು 2024ರ ಮಾರ್ಚ್ 11ರಂದು ಹೊರಡಿಸಿದ್ದ ಅಧಿಸೂಚನೆಯಲ್ಲಿ ರೈಟ್ ಪೀಪಲ್ ಕಂಪನಿಯೇ,
ಸ್ವಯಂ ಸೇವಾ ಸಂಸ್ಥೆಯೇ, ಎಲ್‌ಎಲ್‌ಪಿ ಮಾದರಿಯೇ, ಸಹಕಾರ ಸಂಸ್ಥೆಯೇ ಎಂಬ ಬಗ್ಗೆ ಪ್ರಾಥಮಿಕ ಮಾಹಿತಿಯನ್ನೂ ಉಲ್ಲೇಖಿಸಿರಲಿಲ್ಲ.
ರೈಟ್ ಪೀಪಲ್ ಸಲ್ಲಿಸಿರುವ ಪ್ರಸ್ತಾವನೆಯಲ್ಲಿ ಪ್ರಶಾಂತಕುಮಾರ ಬಿ ಎಂಬುವರು ಸಹಿ ಮಾಡಿದ್ದಾರೆ. ಜಿಎಸ್‌ಟಿ ದಾಖಲೆಗಳ ಪ್ರಕಾರ ರೈಟ್ ಪೀಪಲ್ ಪ್ರೊಪ್ರೈಟರ್‌ಶಿಪ್ ಸಂಸ್ಥೆಯಾಗಿದೆ. ದಾಖಲೆಗಳಲ್ಲಿ ಲತಾ ಪ್ರಶಾಂತಕುಮಾರ ಎಂಬುವರ ಹೆಸರಿದೆ.
ಬೆಂಗಳೂರಿನ ಕೆಂಗೇರಿಯ ಮೈಲಸಂದ್ರದ ಮೂಕಾಂಬಿಕ ಲೇಔಟ್‌ನ ಮೊದಲನೇ ಅಡ್ಡ ರಸ್ತೆಯಲ್ಲಿ ನಂ 44ರ ವಿಳಾಸವನ್ನು ಪ್ರಸ್ತಾವನೆಯಲ್ಲಿ ನಮೂದಿಸಿದೆ.
ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಪ್ರಸ್ತಾವನೆ ಪ್ರಕಾರ ರೈಟ್ ಪೀಪಲ್ ಸಂಸ್ಥೆಯು ಹದಿಮೂರು ವರ್ಷಗಳಿಂದ ಬರವಣಿಗೆ, ವಿನ್ಯಾಸ, ರೀಸರ್ಚ್, ಸಮೀಕ್ಷೆಗಳ ಕೆಲಸದಲ್ಲಿ ತೊಡಗಿದೆ. ಆದರೆ ಯಾವ ರೀತಿಯ ಬರವಣಿಗೆ, ವಿನ್ಯಾಸ, ಯಾವ ಕಾರ್ಯಗಳಲ್ಲಿ ರೀಸರ್ಚ್, ಯಾವ ಬಗೆಯ ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದೆ ಎಂಬ ಕನಿಷ್ಠ ಮಾಹಿತಿಗಳೂ ಪ್ರಸ್ತಾವನೆಯಲ್ಲಿ ಉಲ್ಲೇಖಿಸಿಲ್ಲ. ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಮತ್ತು ಆರ್ಥಿಕ ಇಲಾಖೆಯೂ ಈ ಅಂಶಗಳ ಬಗ್ಗೆ ಚಕಾರವೆತ್ತಿಲ್ಲ.
ಈ ಕುರಿತು ‘ದಿ ಫೈಲ್ ಮಾಹಿತಿ ಕೋರಿ ರೈಟ್ ಪೀಪಲ್ ಸಂಸ್ಥೆಗೆ ಪ್ರಶ್ನಾವಳಿಯನ್ನು ಇ-ಮೈಲ್ ಮೂಲಕ 2024ರ ಏಪ್ರಿಲ್ 6ರಂದು ರವಾನಿಸಿತ್ತು.
- ರೈಟ್ ಪೀಪಲ್ ಕಳೆದ 13 ವರ್ಷಗಳಲ್ಲಿ ರೈಟ್ ಪೀಪಲ್ ಸಂಸ್ಥೆಯು ನಿರ್ವಹಿಸಿರುವ ಅಥವಾ ಅನುಷ್ಠಾನಗೊಳಿಸಿರುವ ಮತ್ತು ಕಾರ್ಯಗತಗೊಳಿಸಿರುವ ಪ್ರಮುಖ ಕೆಲಸಗಳು ಯಾವುವು?
- ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ಸರ್ಕಾರದ ಆದೇಶ ಸಂಖ್ಯೆ ಕೆಸಿಐ-ಪಿಐಪಿ/97/2024 ಬೆಂಗಳೂರು , ದಿನಾಂಕ: 13/3/2024 ರ ಅನ್ವಯ ರೈಟ್ ಪೀಪಲ್‌ಗೆ ನೀಡಲಾದ ಕಾರ್ಯಾದೇಶದಂತೆ ಈ ಯೋಜನೆಯಲ್ಲಿ ಎಷ್ಟು ಜನ ಕಾರ್ಯನಿರ್ವಹಿಸುತ್ತಿದ್ದಾರೆ? ಇದರ ವಿವರ ನೀಡುವುದು.
- ರೈಟ್ ಪೀಪಲ್ ಸಂಸ್ಥೆಯ ಕೇಂದ್ರ ಕಚೇರಿ, ಶಾಖಾ ಕಚೇರಿಗಳ ವಿವರ ಹಾಗೂ ವಿಳಾಸಗಳನ್ನು ನೀಡುವುದು.
- ರೈಟ್ ಪೀಪಲ್ ಸಂಸ್ಥೆಯು ಸರ್ಕಾರದ ಈ ಕಾರ್ಯಾದೇಶದ ಅನುಷ್ಠಾನದ ಜವಾಬ್ದಾರಿ ಹೊರುವಷ್ಟು ಹಣಕಾಸಿನ ಸಂಪನ್ಮೂಲ ಹಾಗೂ ಸಾಮರ್ಥ್ಯವನ್ನು ಹೊಂದಿದೆಯೇ?
- ರೈಟ್ ಪೀಪಲ್ ಸಂಸ್ಥೆಯ ಡಿಜಿಟಲ್ ಪ್ರೆಸೆನ್ಸ್ ಕುರಿತಂತೆ (ವೆಬ್‌ಸೈಟ್, ನ್ಯೂಸ್ ಪೋರ್ಟಲ್, ಆರ್ಕೆನ್ಸ್ ಇತ್ಯಾದಿ) ಬಗ್ಗೆ ಡಿಜಿಟಲ್ ವೇದಿಕೆ ಹೊಂದಿದೆಯೇ? ಇದ್ದರೆ ಅದರ ಕುರಿತು ವಿವರಗಳನ್ನು ನೀಡಲು ಕೋರಿದೆ.
- ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮೌಲ್ಯಮಾಪನ ಮಾಡಲು ರೈಟ್ ಮೀಡಿಯಾ ಸಂಸ್ಥೆಯು ಅಳವಡಿಸಿಕೊಂಡಿರುವ ಮಾನದಂಡಗಳು ಯಾವುವು?
- ಗ್ಯಾರಂಟಿ ಯೋಜನೆಗಳ ನಿರಂತರ ನಿಗಾವಣೆಗಾಗಿ ಫಲಾನುಭವಿ ಕೇಂದ್ರಿತ ನೇರ ಮತ್ತು ನಿರಂತರ ಸಂವಹನ ವ್ಯವಸ್ಥೆಗಾಗಿ ಅಳವಡಿಸಿಕೊಂಡಿರುವ ವಿಧಾನಗಳು ಯಾವುವು?
ಈ ಕುರಿತು ಪ್ರತಿಕ್ರಿಯೆ ನೀಡಿದ್ದ ರೈಟ್ ಪೀಪಲ್ ಸಂಸ್ಥೆಯ ಪ್ರಶಾಂತ ಕುಮಾರ್ ಎಂಬುವರು ‘ದಿ ಫೈಲ್ ಕೋರಿರುವ ಮಾಹಿತಿ ಕುರಿತು ‘ನಮ್ಮ ಕಾನೂನು ತಂಡ ನಿಮ್ಮ ಉತ್ತರವನ್ನು ಪರಿಶೀಲಿಸುತ್ತಿದೆ. ಆದಷ್ಟು ಬೇಗ ನಿಮಗೆ ಪ್ರತಿಕ್ರಿಯೆ ನೀಡಲು ಪ್ರಯತ್ನಿಸುತ್ತೇವೆ’ ಎಂದು 2024ರ ಏಪ್ರಿಲ್ 10ರಂದು ಇ-ಮೈಲ್ ಮೂಲಕ ಪ್ರತಿಕ್ರಿಯೆ ನೀಡಿದೆ. ಆದರೆ ವರದಿ ಪ್ರಕಟವಾಗುವ ಈ ದಿನದವರೆಗೂ ಯಾವುದೇ ಮಾಹಿತಿಯನ್ನೂ ರೈಟ್ ಪೀಪಲ್ ಸಂಸ್ಥೆಯು ನೀಡಿಲ್ಲ.
ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಮೂಲಕ ಸಮೀಕ್ಷೆಗೆ ರಾಜ್ಯ ಸರ್ಕಾರವು 12 ಕೋಟಿ ರು. ವೆಚ್ಚ ಮಾಡಿದೆ. ಎಂ2ಎಂ ಮಾಧ್ಯಮ ಸಂಸ್ಥೆಗೆ ಸಮೀಕ್ಷೆ ನಡೆಸಲು 1 ಕೋಟಿ ರು, ಮುಂಬೈ ಮೂಲದ ಎಕ್ಸ್ ಕೆಡಿಆರ್ ಸಂಸ್ಥೆಗೆ ಅಧ್ಯಯನದ ಹೆಸರಿನಲ್ಲಿ 1.03 ಕೋಟಿ ರು.ಗಳನ್ನು ನೀಡಿದೆ. ಈ ಎರಡೂ ಸಂಸ್ಥೆಗಳು ಈಗಾಗಲೇ ಮುಂಗಡ ಹಣ ಪಡೆದು ಸಮೀಕ್ಷೆ ಕಾರ್ಯವನ್ನೂ ಕೈಗೆತ್ತಿಕೊಂಡಿತ್ತು.
ಈ ಎರಡೂ ಖಾಸಗಿ ಸಂಸ್ಥೆಗಳು ಈಗಾಗಲೇ ಸಮೀಕ್ಷೆ ಮತ್ತು ಅಧ್ಯಯನ ನಡೆಸುತ್ತಿರುವಾಗಲೇ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಮೂಲಕ ನಡೆಸಲಿರುವ ಸಮೀಕ್ಷೆಗೆ 12 ಕೋಟಿ ರು ವೆಚ್ಚ ಮಾಡುತ್ತಿರುವುದು ದುಂದುವೆಚ್ಚಕ್ಕೆ ದಾರಿಮಾಡಿಕೊಟ್ಟಂತಾಗಿತ್ತು.
ಗೃಹಲಕ್ಷ್ಮಿ ಸೇರಿದಂತೆ 4 ಗ್ಯಾರಂಟಿ ಯೋಜನೆಗಳ ಸಮೀಕ್ಷೆ ನಡೆಸಲು ಎಂ2ಎಂ ಮೀಡಿಯಾ ನೆಟ್ ವರ್ಕ್ ಕಂಪನಿಗೆ 4(ಜಿ) ವಿನಾಯಿತಿ ನೀಡುವ ಮುನ ಆರ್ಥಿಕ ಇಲಾಖೆಯ ಅಧಿಕಾರಿಗಳು ಆಡಳಿತಾತಕ ಪ್ರಕ್ರಿಯೆಗಳನೇ ನಡೆಸಿರಲಿಲ್ಲ.
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪೂರ್ಣ ಬಹುಮತ ಬರಲಿದೆ ಎಂದು ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿಯ ಈದಿನ.ಕಾಮ್ ವೆಬ್‌ಸೈಟ್ ಚುನಾವಣೆ ಪೂರ್ವ ಸಮೀಕ್ಷೆ ಹೇಳಿತ್ತು. ಕಾಂಗ್ರೆಸ್ ಪಕ್ಷವು ಸರ್ಕಾರ ರಚಿಸಿದ ಎರಡೇ ಎರಡು ತಿಂಗಳಲ್ಲಿ ಇದೇ ಕಂಪನಿಗೇ 58 ಸಾವಿರ ಕೋಟಿ ರು. ವೆಚ್ಚದ ಗ್ಯಾರಂಟಿಗಳ ಸಮೀಕ್ಷೆ ನಡೆಸಲು 1 ಕೋಟಿ ರು. ನೀಡಿದು ಚರ್ಚೆಗೆ ಗ್ರಾಸವಾಗಿತು.
ಗ್ಯಾರಂಟಿಗಳ ಕುರಿತಾಗಿ ಐಸೆಕ್, ಮೌಲ್ಯಮಾಪನ ಪ್ರಾಧಿಕಾರಗಳಿಂದ ಸಮೀಕ್ಷೆ ನಡೆಸಬೇಕಿತ್ತು ಎಂದು ಪ್ರತಿಪಾದಿಸಿರುವ ಹಲವು ಅಧಿಕಾರಿಗಳು, ಕೇವಲ ಪ್ರಕಾಶನ, ಮುದ್ರಣದಂತಹ ಸೇವೆಗಳನ್ನು ಒದಗಿಸುತ್ತಿರುವ ಎಂ2ಎಂ ಮೀಡಿಯಾ ನೆಟ್‌ವರ್ಕ್ ಕಂಪನಿಗೆ ವಹಿಸಿರುವುದಕ್ಕೆ ಆಕ್ಷೇಪಗಳನ್ನು ವ್ಯಕ್ತಪಡಿಸಿದ್ದರು.
ಗ್ಯಾರಂಟಿಗಳ ಅನುಷ್ಠಾನಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಪ್ರಕ್ರಿಯೆಗಳು ಜೂನ್, ಜುಲೈವರೆಗೂ ಚಾಲ್ತಿಯಲ್ಲಿದ್ದವು. ಇದಾದ ನಂತರವೂ ಯೋಜನೆ ಅನುಷ್ಠಾನದಲ್ಲಿ ಗೊಂದಲ ಮುಂದುವರೆದಿತ್ತು. ಬಹುತೇಕ ಫಲಾನುಭವಿಗಳಿಗೆ ಹಣವೂ ಇದುದವರೆಗೂ ಪಾವತಿಯಾಗಿಲ್ಲ. ಮಾರ್ಗಸೂಚಿಗಳ ಸಂಬಂಧ ಆಗಸ್ಟ್‌ವರೆಗೂ ತಿದ್ದುಪಡಿಗಳು ಮುಂದುವರೆದಿದ್ದವು. ಕೆಎಸ್‌ಆರ್‌ಟಿಸಿಯು 20 ಲಕ್ಷ ರು.ಗಳನ್ನು ನೀಡಿದ್ದರೂ ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನೇ ಒದಗಿಸಿರಲಿಲ್ಲ.
ಅಲ್ಲದೇ ಬೆಸ್ಕಾಂ ಕೂಡ ಸಮಗ್ರ ಕಡತವನ್ನೇ ಮುಚ್ಚಿಟ್ಟಿತ್ತು.
ಅದೇ ರೀತಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಸಹ ಎಂ2ಎಂ ಕಂಪನಿಯೊಂದಿಗೆ ಎಂಒಯು ಸೇರಿ ಹಲವು ದಾಖಲೆಗಳೇ ಲಭ್ಯವಿಲ್ಲ ಎಂದು ಆರ್‌ಟಿಐ ಅಡಿಯಲ್ಲಿ ಮಾಹಿತಿ ಒದಗಿಸಿತ್ತು.
ಇದರ ನಡುವೆಯೇ ಸರ್ಕಾರವು ಗ್ಯಾರಂಟಿಗಳನ್ನು ಅಧ್ಯಯನ ನಡೆಸಲು ಮುಂಬೈ ಮೂಲದ ಸಂಸ್ಥೆಗೆ 1.03 ಕೋಟಿ ರು. ವೆಚ್ಚ ಮಾಡಲು 4(ಜಿ) ವಿನಾಯಿತಿ ನೀಡಿತ್ತು.
ಗ್ಯಾರಂಟಿ ಯೋಜನೆಗಳನ್ನು ಏಕಕಾಲಕ್ಕೆ ಐದಾರು ಸಮಿತಿಗಳು ಸಮೀಕ್ಷೆ ನಡೆಸುತ್ತಿರುವುದು ಮತ್ತು ಇದಕ್ಕಾಗಿ ಕೋಟ್ಯಂತರ ರುಪಾಯಿ ವೆಚ್ಚ ಮಾಡುತ್ತಿರುವುದು ಸಾರ್ವಜನಿಕ ವಲಯದಲ್ಲಿ ಆಕ್ಷೇಪಗಳು ವ್ಯಕ್ತವಾಗಿವೆ.
ಕೃಪೆ : ದಿ ಫೈಲ್
Key words: government, money,”Right People, Guarantee Plan