ತಾನು ಓದಿದ ಸರ್ಕಾರಿ ಶಾಲೆಗೆ ಉಚಿತ ಸುಣ್ಣಬಣ್ಣ ಬಳಿಸಿ ಮಾದರಿಯಾದ ಹಳೇ ವಿದ್ಯಾರ್ಥಿ

ಮೈಸೂರು,ಮಾರ್ಚ್,3,2025 (www.justkannada.in):  ತಾನು ಓದಿದ ಶತಮಾನದ ಹಿಂದಿನ ಸರ್ಕಾರಿ ಶಾಲೆಗೆ ಹಳೇ ವಿದ್ಯಾರ್ಥಿಯೊಬ್ಬರು ಉಚಿತವಾಗಿ 1.40 ಲಕ್ಷ ರೂ. ಮೌಲ್ಯದ  ಸುಣ್ಣ ಬಣ್ಣವನ್ನು ಬಳಿಸುವ  ಮೂಲಕ ಮಾದರಿಯಾಗಿದ್ದಾರೆ.

ಹೌದು, ಎಚ್ ಡಿ ಕೋಟೆ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಮಾದರಿ ಶಾಲೆಗೆ ಅಲ್ಲಿನ ಹಿರಿಯ ವಿದ್ಯಾರ್ಥಿ ನಾಗೇಗೌಡ ಎಂಬುವವರು ಸರಿಸುಮಾರು ಒಂದೂವರೆ ಲಕ್ಷ ರೂಪಾಯಿ ವೆಚ್ಚದಲ್ಲಿ ಬಣ್ಣ  ಬಳಿಸುವ ಮೂಲಕ ಮಾದರಿ ಕೆಲಸ ಮಾಡಿದ್ದಾರೆ. ಪಟ್ಟಣದ ಕಾಳಿದಾಸ ರಸ್ತೆಯ ನಿವಾಸಿ, ವಿನಾಯಕ ಟೈಂಸ್ ಅಂಡ್ ಹಾರ್ಡ್ ವೇರ್  ಅಂಗಡಿ ಮಾಲೀಕ  ನಾಗೇಗೌಡ ಅವರು ಈ ಮಾದರಿ ಕಾರ್ಯ ಮಾಡಿದ್ದು,  ಇದರ ಜೊತೆಗೆ ಕಾರ್ಮಿಕರೂ ಕೂಡಾ  ಉಚಿತವಾಗಿ ಕೆಲಸ ಮಾಡುವ ಮೂಲಕ ಈ ಸಾಮಾಜಿಕ ಕಾರ್ಯಕ್ಕೆ ಕೈಜೋಡಿಸಿದ್ದಾರೆ.

ನಾಗೇಗೌಡ ಅವರಿಗೆ ಪ್ರತಿಷ್ಠಿತ ಬಣ್ಣದ ಕಂಪನಿಯಾದ ಇಂಡಿಗೋ ಸೇವಾ ಉತ್ಸವ ಅವರು ಕೂಡ ಕೈಜೋಡಿಸಿದ್ದು, ಸುಮಾರು 20ಕ್ಕೂ ಹೆಚ್ಚು ಪೈಂಟರ್ ಗಳು  ಬಣ್ಣ ಬಳಿಯುವ ಕೆಲಸ ಮಾಡಿದ್ದಾರೆ.

143 ವರ್ಷದ ಇತಿಹಾಸ ಹೊಂದಿರುವ ಈ ಶಾಲೆ, ಕಳೆದ 25 ವರ್ಷಗಳಿಂದಲೂ ಯಾವುದೇ ರೀತಿಯ ಸುಣ್ಣ ಬಣ್ಣ ಕಂಡಿರಲಿಲ್ಲ. 1882ರಲ್ಲಿ ಸ್ಥಾಪನೆಯಾದ ಈ ಶಾಲೆಯು ತಾಲೂಕಿನವರೇ ಆದ ಎಂ.ಶಿವಣ್ಣ ಅವರು ಸಚಿವರಾಗಿದ್ದಾಗ ಶತಮಾನೋತ್ಸವ ಆಚರಿಸಿತ್ತು.

ತಾಲೂಕಿನಲ್ಲೇ ಪ್ರಥಮ ಸರ್ಕಾರಿ ಶಾಲೆ ಎಂಬ ಕೀರ್ತಿಗೆ ಪಾತ್ರವಾಗಿದ್ದ ಈ ಶಾಲೆಯಲ್ಲಿ  ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದರು.  ತಾಲ್ಲೂಕಿನ ಪ್ರಮುಖ ಶಾಲೆಗಳಲ್ಲಿ ಇದು ಮೊದಲನೇ ಸ್ಥಾನದಲ್ಲಿತ್ತು. ಪಠ್ಯೇತರ ಚಟುವಟಿಕೆಗಳಲ್ಲಿ ಇಲ್ಲಿನ ಮಕ್ಕಳು ಇತರ ಬೇರೆ ಶಾಲೆಗಳ ಮಕ್ಕಳಿಗಿಂತಲೂ  ಮುಂದಿರುತ್ತಿದ್ದರು. ಆದರೆ, ಕ್ರಮೇಣ ಖಾಸಗಿ ಶಾಲೆಗಳ ಪೈಪೋಟಿ ಮತ್ತು ಸರ್ಕಾರವು ಸ್ಥಳೀಯವಾಗಿ ಮತ್ತಷ್ಟು ಶಾಲೆಗಳನ್ನು ತೆರೆದ ಕಾರಣದಿಂದ ದಾಖಲಾತಿ ಕುಸಿದಿದೆ. ಸಾವಿರಾರು ಮಂದಿ ಕಲಿಯುತ್ತಿದ್ದ ಈ ಶಾಲೆಯಲ್ಲಿ ಈಗ ಕೇವಲ 52 ಮಂದಿ ವಿದ್ಯಾರ್ಥಿಗಳು ಇದ್ದಾರೆ.

Key words: Former student, Painting, government school , Mysore