ಬೆಂಗಳೂರು ಆಗಸ್ಟ್,4,2023(www.justkannada.in): ಈ ಹೊತ್ತಿನ ತಂತ್ರಜ್ಞಾನ ಮತ್ತು ಉತ್ಪಾದನೆಗೆ ಅಗತ್ಯವಾದ ಕೌಶಲ್ಯ ವೃದ್ಧಿಸಲು ಸರ್ಕಾರ ತೀರ್ಮಾನಿಸಿದೆ. ಆ ಮೂಲಕ ಉದ್ಯಮ ಜಗತ್ತಿಗೆ ಅಗತ್ಯವಾದ ಕೌಶಲ್ಯಾಧಾರಿತ ಯುವ ಸಮೂಹವನ್ನು ಸೃಜಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಜೆ ಡಬ್ಲ್ಯೂ ಮಾರಿಯೆಟ್ ಹೋಟೆಲ್ ನಲ್ಲಿ ನಡೆದ ಶಿಕ್ಷಣ ಕುರಿತ ಕಾರ್ಪೊರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಉದ್ಯಮ ಕ್ಷೇತ್ರದ ಬೆಳವಣಿಗೆಗೆ ಮತ್ತು ಪ್ರಗತಿಗೆ ಅಗತ್ಯವಾದ ಎಲ್ಲಾ ಸಹಕಾರ ಮತ್ತು ನೆರವನ್ನು ನೀಡುತ್ತದೆ. ಕಾರ್ಪೋರೇಟ್ ಸಂಸ್ಥೆಗಳು ಮತ್ತು ಉದ್ಯಮ ಕ್ಷೇತ್ರ ಸರ್ಕಾರದ ಜತೆಗೆ ಸಮಾಜದ ಪ್ರಗತಿಗೆ ಕೈ ಜೋಡಿಸಬೇಕು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ನೀವು ಸಮಾಜದ ಮತ್ತು ಉದ್ಯಮ ಕ್ಷೇತ್ರದ ಆರೋಗ್ಯಕರ ಪ್ರಗತಿಗೆ ಮುಂದಾಗಿ ಎಂದು ಕರೆ ನೀಡಿದರು.
ಬಡವ ಶ್ರೀಮಂತರ ನಡುವಿನ ಅಂತರ ಕಡಿಮೆ ಮಾಡಬೇಕು ಎನ್ನುವ ಉದ್ದೇಶದಿಂದಲೇ ಸಾರ್ವತ್ರಿಕ ಮೂಲ ಆದಾಯ ಎನ್ನುವ ತತ್ವದ ಅಡಿಯಲ್ಲಿ ನಾವು ಐದು ಗ್ಯಾರಂಟಿಗಳನ್ನು ಜಾರಿಗೆ ತಂದೆವು. ಇದೇ ಆಶಯದ ಅಡಿಯಲ್ಲಿ ಆಯವ್ಯಯವನ್ನು ರೂಪಿಸಿದೆವು ಎಂದರು.
ಎಲ್ಲಾ ಜಾತಿ, ಎಲ್ಲಾ ಧರ್ಮ, ಎಲ್ಲಾ ವರ್ಗದವರಿಗೂ ಅನ್ವಯ ಆಗುವ ರೀತಿಯಲ್ಲಿ ಐದು ಗ್ಯಾರಂಟಿಗಳನ್ನು ರೂಪಿಸಿದೆವು. ಇದರಿಂದಾಗಿ ಆರ್ಥಿಕತೆಗೆ ಹೊಸ ಚೈತನ್ಯ ಮತ್ತು ಶಕ್ತಿ ಬಂದಿದೆ. ನಾಡಿನ ಮಹಿಳೆಯರಿಗೆ ಆರ್ಥಿಕ ಸಫಲತೆ ಬಂದಿದೆ. ಹಸಿವಿನಿಂದ ಮಲಗುವವರು ಇಲ್ಲವಾಗಿದೆ. ಬಾಲ ಕಾರ್ಮಿಕ ಪದ್ಧತಿ ನಶಿಸಲು ನಮ್ಮ ಕಾರ್ಯಕ್ರಮ ಮತ್ತು ಗ್ಯಾರಂಟಿಗಳು ನೆರವಾಗುತ್ತಿವೆ ಎಂದರು.
ಡಿಸಿಎಂ ಡಿ.ಕೆ.ಶಿವಕುಮಾರ್, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಗೃಹ ಸಚಿವ ಜಿ.ಪರಮೇಶ್ವರ್, ಸಚಿವರಾದ ಶರಣಪ್ರಕಾಶ್ ಪಾಟೀಲ್, ಡಿ.ಸುಧಾಕರ್ ಹಾಗೂ ಮುಖ್ಯಮಂತ್ರಿಗಳ ಸಲಹೆಗಾರ ಗೋವಿಂದರಾಜ್ ಉಪಸ್ಥಿತರಿದ್ದರು.
Key words: government – stepped up- skill -development – demand – business world-CM Siddaramaiah