ಬೆಂಗಳೂರು, ಆಗಸ್ಟ್ 27,2021(www.justkannada.in): ಉದ್ಯೋಗ ಸೃಜಿಸುವ ಆಭರಣ ಉದ್ದಿಮೆ ಕೌಶಲ್ಯವಿರುವ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೀಗಾಗಿ ಆಧುನಿಕ ತಂತ್ರಜ್ಞಾನದಿಂದ ಆಭರಣ ಉತ್ಪಾದನೆಗೆ ಅನುಕೂಲವಾಗುವಂಥ ಅತ್ಯಾಧುನಿಕ ಜ್ಯುವೆಲರಿ ಪಾರ್ಕ್ ನಿರ್ಮಾಣಕ್ಕೆ ಅಗತ್ಯ ಇರುವ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜುವೆಲ್ಲರಿ ಸಂಸ್ಥೆಗೆ ಸಲಹೆ ನೀಡಿದರು.
ಇಂದು ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸೌತ್ ಜ್ಯುವೆಲ್ಲರಿ ಶೋ ಉದ್ಘಾಟಿಸಿ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಬ್ಯುಲಿಯನ್ ವಿನಿಮಯ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಭಾರತದ ಆಭರಣ ವ್ಯಾಪಾರ ಅಂತರರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ಮಾಡಬೇಕಾದ ಸಂದರ್ಭವಿದೆ. ಗೋಲ್ಡ್ ಕಂಟ್ರೋಲ್ ಕಾಯ್ದೆ ತೆಗೆದುಹಾಕಿದ ನಂತರ ಮುಕ್ತ ವಾತಾವರಣ ನಿರ್ಮಾಣವಾಗಿದೆ. ಚಿನ್ನದ ವ್ಯಾಪಾರ ಉದ್ದಿಮೆಯಾಗಿ ಬೆಳೆದಿದೆ ಎಂದು ಹೇಳಿದರು.
ಭಾರತೀಯ ಆರ್ಥಿಕತೆಯಲ್ಲಿ ಉಳಿತಾಯ ಸಂಸ್ಕೃತಿ ಇದೆ. ನಮ್ಮ ಜನರ ಉಳಿತಾಯ ಮನೋಭಾವ ಆಭರಣ ಉದ್ದಿಮೆಗೆ ಸಹಕಾರಿಯಾಗಿದೆ. ಬ್ಯಾಂಕ್ ದಿವಾಳಿಯಾದರೂ ಚಿನ್ನ ನಮ್ಮ ಆಪತ್ಭಾಂದವ ಎಂದರು.
ಒಡವೆ ಎಂದರೆ ಒಂದು ಆತ್ಮೀಯತೆ, ಆಭರಣದ ವಹಿವಾಟು ಅಂತಃಕರಣವುಳ್ಳ ವ್ಯಾಪಾರ, ಇದು ಬಹಳ ಪುರಾತನ ವೃತ್ತಿಯಾಗಿದ್ದು ಭಾವನಾತ್ಮಕ ಸಂಬಂಧ ಬೆಸೆಯುವಂಥದ್ದು. ಆಭರಣ ಮಾಡುವ ಕಲೆ ಸೂಕ್ಷ್ಮವಾದುದು. ಆಭರಣ ತಯಾರಿ ಕರ್ನಾಟಕದ ಪಾರಂಪರಿಕ ಕಲೆಯಾಗಿದ್ದು, ಇದನ್ನು ಉಳಿಸಿ ಬೆಳೆಸಬೇಕು ಎಂದು ಬೊಮ್ಮಾಯಿ ತಿಳಿಸಿದರು.
ಚಿನ್ನದ ವ್ಯಾಪಾರಿಗಳು ಸಮಾಜದ ಗೌರವ ಮತ್ತು ಬಾಂಧವ್ಯ ಕಾಪಾಡುವ ಬಂಧುಗಳು. ದೇಶಕ್ಕೆ ಆದಾಯ ತರುವ ನಿಟ್ಟಿನಲ್ಲಿ ಕೆಲಸ ಮಾಡಬೇಕಲ್ಲದೆ, 2 ನೇ ಮತ್ತು 3 ನೇ ಸ್ತರದ ನಗರಗಳಲ್ಲಿ ವ್ಯಾಪಾರ ವೃದ್ಧಿಸುವಂತೆ ತಿಳಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಟಿ.ಎ.ಸವರಣ, ಗ್ಲೋಬಲ್ ಎಕ್ಸಿಬಿಷನ್ ಅಂಡ್ ಸರ್ವಿಸಸ್ ನ ಶ್ರೀಕಾಂತ್ ಉಪಸ್ಥಿತರಿದ್ದರು.
Key words: Government -support – construction – state-art Jewelery Park- CM Basavaraja Bommai