ಮುಡಾ ಆಡಳಿತ ಮಂಡಳಿ ವಿಸರ್ಜನೆಗೆ ಸರ್ಕಾರ ಚಿಂತನೆ..?

ಮೈಸೂರು,ಅಕ್ಟೋಬರ್,18,2024 (www.justkannada.in): ಮೈಸೂರು ನಗರಾಭಿವೃದ್ದಿ ಪ್ರಾಧಿಕಾರದಲ್ಲಿ  50:50 ಸೈಟ್ ಹಂಚಿಕೆ ಅಕ್ರಮ ಎಫೆಕ್ಟ್‌ ನಿಂದಾಗಿ ಮುಡಾ ಆಡಳಿತ ಮಂಡಳಿ ವಿಸರ್ಜನೆಗೆ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಭ್ರಷ್ಟಾಚಾರದ ಕೂಪವಾದ ಮುಡಾ ಸ್ವಚ್ಚ ಮಾಡಲು ಸಿಎಂ ಸಿದ್ದರಾಮಯ್ಯ  ಮುಂದಾಗಿದ್ದು, ಮುಡಾಗೆ ದಕ್ಷ ಆಡಳಿತಾಧಿಕಾರಿ ನೇಮಿಸುವ ಮೂಲಕ ಸ್ವಚ್ಚಗೊಳಿಸಲು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.   ಅಕ್ಟೋಬರ್ 25 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಮಾಡುವ ಸಾಧ್ಯತೆ ಇದೆ.

ಮೊನ್ನೆಯಷ್ಟೇ ಮುಡಾ  ಅಧ್ಯಕ್ಷ ಸ್ಥಾನಕ್ಕೆ ಕೆ. ಮರಿಗೌಡ ರಾಜೀನಾಮೆ ನೀಡಿದ್ದು, ಅಕ್ಟೋಬರ್ 25ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ರಾಜೀನಾಮೆ ಅಂಗೀಕಾರವಾಗುವ ಸಾಧ್ಯತೆ ಇದೆ.  ಹಗರಣದ ತನಿಖೆ ಮುಗಿಯೋವರೆಗೂ ಆಡಳಿತ ಮಂಡಳಿ ವಿಸರ್ಜನೆಗೆ ಸರ್ಕಾರ ಮುಂದಾಗಿದ್ದು, ಆಡಳಿತ ಮಂಡಳಿ ವಿಸರ್ಜನೆಯಾದಲ್ಲಿ ಆಡಳಿತಾಧಿಕಾರಿ ನೇತೃತ್ವದಲ್ಲಿ ಮುಡಾ ಸಭೆ ನಡೆಯಲಿದೆ.

ಸಿಎಂ ಸಿದ್ದರಾಮಯ್ಯ, ಶಾಸಕರಾದ ತನ್ವೀರ್ ಸೇಠ್, ಜಿ ಟಿ ದೇವೇಗೌಡ, ಕೆ ಹರೀಶ್ ಗೌಡ, ಶ್ರೀವತ್ಸ, ಎ ಹೆಚ್ ವಿಶ್ವನಾಥ್, ದರ್ಶನ್ ಧ್ರುವನಾರಾಯಣ್, ರಮೇಶ್ ಬಂಡಿಸಿದ್ದೇಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ ಡಿ. ತಿಮ್ಮಯ್ಯ, ಸಿ ಎನ್ ಮಂಜೇಗೌಡ, ಮಧು ಜಿ ಮಾದೇಗೌಡ, ದಿನೇಶ್ ಗೂಳಿಗೌಡ ಅವರು ಪ್ರಸ್ತುತ ಮುಡಾ ಸದಸ್ಯರಾಗಿದ್ದು, ಎಲ್ಲಾ ಸದಸ್ಯರು, ಪದಾಧಿಕಾರಿಗಳ ವಿಸರ್ಜನೆ ಮಾಡಿ ಆಡಳಿತಾಧಿಕಾರಿ ಮೂಲಕ ಮುಡಾ ಕಾರ್ಯಚಟುವಟಿಕೆಗಳ ಪುನರಾರಂಭಕ್ಕೆ ಸರ್ಕಾರ ಪ್ಲಾನ್ ರೂಪಿಸಿದೆ ಎನ್ನಲಾಗಿದೆ.

Key words: government, thinking,  Muda, management board