ಮೈಸೂರು,ಜೂನ್,19,2024 (www.justkannada.in): ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಹೇಗೆ ನಡೆಯುತ್ತಿವೆ ಹಾಗೂ ರಾಜ್ಯದಲ್ಲಿನ ಸರ್ವಾಂಗೀಣ ಅಭಿವೃದ್ಧಿ ಹೇಗೆ ನಡೆಯುತ್ತಿದೆ ಎಂಬ ವಿಚಾರ ಕುರಿತು ರಾಜ್ಯ ಕಾಂಗ್ರೆಸ್ ಸರ್ಕಾರ ಶ್ವೇತ ಪತ್ರ ಹೊರಡಿಸಲಿ ಎಂದು ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಒತ್ತಾಯಿಸಿದ್ದಾರೆ.
ಇಂದು ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ವಿಶ್ವನಾಥ್, ಸರ್ಕಾರದ ವತಿಯಿಂದ ಯಾವುದೇ ಹುದ್ದೆಗಳು ಭರ್ತಿಯಾಗುತ್ತಿಲ್ಲ. ಖಾಲಿ ಹುದ್ದಗಳ ತುಂಬುವ ಬದಲು ಹೊರ ಗುತ್ತಿಗೆ ಆಧಾರದ ಮೇಲೆ ಲಕ್ಷಾಂತರ ಜನರಿಂದ ಕೆಲಸ ಮಾಡಿಸುತ್ತಿದ್ದಾರೆ. ಇದರ ಟೆಂಡರ್ ಅನನ್ನ ಮಂತ್ರಿಗಳ, ರಾಜಕಾರಣಿಗಳ ಸಂಬಂಧಿಕರಿಗೆ ಕೊಟ್ಟಿದ್ದಾರೆ. ಲೇಬರ್ ಆಕ್ಟ್ ಪ್ರಕಾರ 18 ಸಾವಿರ ಕೊಡಬೇಕು. ಆದರೆ, ಹೊರ ಗುತ್ತಿಗೆಯಲ್ಲಿ ಕೆಲಸ ಮಾಡುವ ನೌಕರನಿಗೆ ಕೊಡೋದೆ 12 ಸಾವಿರ ಉಳಿದ 6 ಸಾವಿರ ಗುತ್ತಿಗೆದಾರನಿಗೆ ಹೋಗುತ್ತೆ. ಇದರಲ್ಲೂ ಸರ್ಕಾರದ ಹಣ ಲೂಟಿ ಮಾಡುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸುವಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದರು.
ಸರ್ಕಾರಕ್ಕೆ ಲಂಗು ಲಗಾಮು ಇಲ್ಲದಂತಾಗಿದೆ. ಜಿಎಸ್ಟಿ ಎನ್ನುವುದು ಪ್ರತಿ ಹೆಜ್ಜೆಯಲ್ಲೂ ಜನ ಸಾಮಾನ್ಯರಿಗೆ ಬೀಳುತ್ತಿದೆ. ನಮ್ಮ ಮುಖ್ಯಮಂತ್ರಿಗಳು ಬುದ್ಧಿವಂತರು ಆದರೂ ಸರ್ಕಾರದ ನೀತಿ ನಿಯಮಗಳನ್ನೇ ಉಲ್ಲಂಘನೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳಿಗೆ ಒತ್ತಾಯ ಮಾಡುತ್ತೇನೆ. ಆರ್ಥಿಕ ಇಲಾಖೆ ಇದೆಲ್ಲದರ ಬಗ್ಗೆ ಒಂದು ಶ್ವೇತ ಪತ್ರ ಹೊರಡಿಸಬೇಕು ಎಂದು ವಿಶ್ವನಾಥ್ ಆಗ್ರಹಿಸಿದರು.
Key words: government, white paper, H. Vishwanath