ಗ್ರಾಮ ಸುರಾಜ್ಯ -ಪಂಚಾಯತ್ ರಾಜ್ ಕ್ಷೇತ್ರಕ್ಕೆ ದೊಡ್ಡ ಕೊಡುಗೆ- ಡಾ. ಎಸ್.ಎಸ್. ಮೀನಾಕ್ಷಿ ಸುಂದರಂ

ಬೆಂಗಳೂರು,ಏಪ್ರಿಲ್,26,2023(www.justkannada.in): ಪಂಚಾಯತ್ ರಾಜ್ ಇಲಾಖೆ ನಿವೃತ್ತ ನಿರ್ದೇಶಕ ಎಂ.ಕೆ. ಕೆಂಪೇಗೌಡ ಅವರು ರಚಿಸಿರುವ ಗ್ರಾಮ ಸುರಾಜ್ಯ ಕೃತಿ ಕರ್ನಾಟಕ ಪಂಚಾಯತ್‌ ರಾಜ್ ಕ್ಷೇತ್ರದ ಸಮಗ್ರ ಸಾಹಿತ್ಯವನ್ನೊಳಗೊಂಡ ಆಕರ ಗ್ರಂಥವಾಗಿದೆ. ಎಂ.ಕೆ. ಕೆಂಪೇಗೌಡರು ತಮ್ಮ ಮೂರು ದಶಕಗಳ ಪಂಚಾಯತ್ ರಾಜ್ ಕ್ಷೇತ್ರದ ಅನುಭವ ಹಾಗೂ ಆಳವಾದ ಅಧ್ಯಯನದ ಹಿನ್ನೆಲೆಯಲ್ಲಿ ಕರ್ನಾಟಕ ಪಂಚಾಯತ್‌ ರಾಜ್ ಹಿನ್ನೆಲೆ, ನಡೆದುಬಂದ ದಾರಿ ಹಾಗೂ ಪ್ರಚಲಿತ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲುವ ಅತ್ಯುತ್ತಮ ಪ್ರಯತ್ನ ಮಾಡಿದ್ದಾರೆ ಎಂದು ನಿವೃತ್ತ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಹಿರಿಯ ಪಂಚಾಯತ್ ತಜ್ಞರು ಆದ ಡಾ. ಎಸ್.ಎಸ್. ಮೀನಾಕ್ಷಿ ಸುಂದರಂ ಅವರು ಹೇಳಿದ್ದಾರೆ.

ಡಾ. ಎಸ್‌.ಎಸ್‌. ಮೀನಾಕ್ಷಿ ಸುಂದರಂ ಅವರು ಎಂ.ಕೆ. ಕೆಂಪೇಗೌಡ ಅವರು ರಚಿಸಿರುವ ಗ್ರಾಮ ಸುರಾಜ್ಯ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಕನ್ನಡ ಭಾಷೆಯ ಮೇಲೆ ಅವರಿಗೆ ಒಳ್ಳೆಯ ಹಿಡಿತವಿದ್ದು ಅತ್ಯಂತ ಸರಳವಾದ ಭಾಷೆಯಲ್ಲಿ ಈ ಗ್ರಂಥವನ್ನು ರಚಿಸಿದ್ದಾರೆ. ಗ್ರಾಮ ಸುರಾಜ್ಯ ಗ್ರಂಥವು ಪಂಚಾಯತ್ ರಾಜ್ ಕ್ಷೇತ್ರದಲ್ಲಿ ಕೆಲಸ ಮಾಡುವ ಎಲ್ಲಾ ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಹಾಗೂ ಅಧ್ಯಾಯನಾಸಕ್ತರಿಗೆ ಉಪಯುಕ್ತವಾದ ಪರಮರ್ಶನ ಕೃತಿಯಾಗಿದೆ. ಗ್ರಾಮ ಸುರಾಜ್ಯ ಪುಸ್ತಕವು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು, ಎಲ್ಲಾ ಗ್ರಾಮ ಪಂಚಾಯಿತಿ ಗ್ರಂಥಾಲಯಗಳಲ್ಲಿ ಲಭ್ಯವಿರುವಂತೆ ಮಾಡಿದಲ್ಲಿ ಎಂ.ಕೆ. ಕೆಂಪೇಗೌಡರ ಶಮ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚಾಯತ್ ರಾಜ್ ಅಪರ ಮುಖ್ಯ ಕಾರ್ಯದರ್ಶಿಗಳಾದ ಉಮಾ ಮಹದೇವನ್‌ ಅವರು , ಎಂ.ಕೆ. ಕೆಂಪೇಗೌಡರು ಪಂಚಾಯತ್ ರಾಜ್ ಬಗ್ಗೆ ರಚಿಸಿರುವ ಕೃತಿಯು ರಾಷ್ಟ್ರೀಯ ಪಂಚಾಯತ್  ರಾಷ್ಟ್ರೀಯ ಪಂಚಾಯತ್ ರಾಜ್ ದಿನದಂದು ಬಿಡುಗಡೆಯಾಗುತ್ತಿರುವುದು ಅರ್ಥಪೂರ್ಣವಾಗಿದೆ. ಸಂವಿಧಾನದ 73ನೇ ತಿದ್ದುಪಡಿ ನಂತರ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ಬಂದು ಇಂದಿಗೆ ಮೂರು ದಶಕಗಳು ಕಳೆದಿವೆ. ಮೂರು ದಶಕಗಳಲ್ಲಿ ರಾಜ್ಯದ ಗ್ರಾಮ ಪಂಚಾಯಿತಿಗಳು ಐದು ಅವಧಿಯನ್ನು ಪೂರೈಸಿ ಆರನೇ ಅವಧಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಮೂರು ದಶಕಗಳಲ್ಲಿ ನಮ್ಮ ಪಂಚಾಯತ್‌ಗಳು ಸಶಕ್ತ ಸಂಸ್ಥೆಗಳಾಗಿ ಕಾರ್ಯನಿರ್ವಹಿಸುತ್ತಿವೆ. ಕೋವಿಡ್‌ನಂತಹ ಕಠಿಣ ಸವಾಲನ್ನು ದಕ್ಷತೆಯಿಂದ ಎದುರಿಸುವೆ. ಗ್ರಾಮೀಣ ಗ್ರಂಥಾಲಯಗಳನ್ನು ಪರಿಣಾಮಕಾರಿಯಾಗಿ ನಡೆಸುತ್ತಿವೆ. ಸಂವಿಧಾನದ ಆಶಯದಂತೆ ಐದು ವರ್ಷದ ಅವಧಿಗೆ ದೂರದೃಷ್ಟಿ ಯೋಜನೆಯನ್ನು ತಯಾರಿಸಿಕೊಳ್ಳುತ್ತಿವೆ. ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ನೀಡಿದ್ದು ವಿಕೇಂದ್ರೀಕರಣ ಆಡಳಿತದಲ್ಲಿ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಸಾಮರ್ಥ್ಯ ಪ್ರದರ್ಶಿಸುತ್ತಿದ್ದಾರೆ. ಎಂ.ಕೆ. ಕೆಂಪೇಗೌಡರು ರಚಿಸಿರುವ ಗ್ರಾಮ ಸುರಾಜ್ಯ ಕೃತಿಯಲ್ಲಿ ಈ ಎಲ್ಲಾ ವಿಷಯಗಳನ್ನು ಸವಿವರವಾಗಿ ವಿವರಿಸಿದ್ದಾರೆ. ಈ ಕೃತಿಯು ನಮ್ಮ ರಾಜ್ಯದ ಗ್ರಾಮ ಪಂಚಾಯತ್‌ ಗಳು ಹಾಗೂ ಅಧ್ಯಾಯನಾಸಕ್ತರಿಗೆ ಉಪಯುಕ್ತ ಮಾರ್ಗದರ್ಶಿಯಾಗಿರುತ್ತದೆ ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ಎಲ್‌.ಕೆ. ಅತೀಕ್ ಅವರು ಮಾತನಾಡಿ, ಕರ್ನಾಟಕ ಪಂಚಾಯತ್ ವ್ಯವಸ್ಥೆ ರಾಜ್ ದೇಶದಲ್ಲಿಯೇ ಮಾದರಿಯಾದ ವ್ಯವಸ್ಥೆಯಾಗಿದೆ.

ಸಂವಿಧಾನ ತಿದ್ದುಪಡಿ ಪೂರ್ವದಲ್ಲಿಯೇ ನಮ್ಮಲ್ಲಿ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆ ಜಾರಿಯಲ್ಲಿತ್ತು. ಸಂವಿಧಾನ ತಿದ್ದುಪಡಿ ಆಶಯದಂತೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದಿರುವ ರಾಜ್ಯಗಳಲ್ಲಿ ಕರ್ನಾಟಕವು ಮುಂಚೂಣಿಯಲ್ಲಿದೆ. ಪಂಚಾಯತ್ ರಾಜ್ ಕ್ಷೇತ್ರದಲ್ಲಿ ನಮ್ಮ ರಾಜ್ಯವು ಹಲವಾರು ಉತ್ತಮ ಪ್ರಯೋಗಗಳನ್ನು ಮಾಡಿದೆ. ಇಷ್ಟಾದರು ರಾಜ್ಯದ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸಮಗ್ರವಾಗಿ ಪರಿಚಯಿಸುವ ಪುಸ್ತಕಗಳು ಲಭ್ಯವಿಲ್ಲದಿರುವುದು ದೊಡ್ಡ ಕೊರತೆಯಾಗಿತ್ತು. ಅಂತಹ ಕೊರತೆಯನ್ನು ನೀಗಿಸುವಲ್ಲಿ ಎಂ.ಕೆ. ಕೆಂಪೇಗೌಡರು ಗ್ರಾಮ ಸುರಾಜ್ಯ ಕೃತಿಯ ಮೂಲಕ ಯಶಸ್ವಿ ಪ್ರಯತ್ನ ಮಾಡಿರುತ್ತಾರೆ. ಗ್ರಾಮ ಸುರಾಜ್ಯ ಕೃತಿಯಲ್ಲಿ ರಾಜ್ಯದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ನಡೆದು ಬಂದ ಇತಿಹಾಸ, ಪ್ರಸ್ತುತ ಪಂಚಾಯತ್ ರಾಜ್ ವ್ಯವಸ್ಥೆಯ ಸಮಗ್ರ ಪರಿಚಯ. ಗ್ರಾಮ ಪಂಚಾಯತಿಗಳ ಉತ್ತಮ ಸಾಧನೆಗಳು, ಪ್ರಮುಖ ಗ್ರಾಮೀಣಾಭಿವೃದ್ಧಿ ಯೋಜನೆಗಳ ಪರಿಚಯ, ಗ್ರಾಮೀಣಾಭಿವೃದ್ಧಿ ಇಲಾಖೆಯ ಸಮಗ್ರ ಪರಿಚಯ ಜೊತೆಗೆ ಸ್ವಾತಂತ್ರ್ಯಾನಂತರ ರಾಜ್ಯದಲ್ಲಿ ಆಡಳಿತ ನಡೆಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವರುಗಳ ಪರಿಚಯ ಹಾಗೂ ಸಾಧನೆಗಳನ್ನು ನಿರೂಪಿಸಿದ್ದಾರೆ. ಜೊತೆಗೆ ಮಾಹಿತಿ ಹಕ್ಕು ಅಧಿನಿಯಮದ ಬಗ್ಗೆಯು ಪರಿಚಯಿಸಿದ್ದಾರೆ. ಪಂಚಾಯತ್ ರಾಜ್ ಕ್ಷೇತ್ರದ ಬಗ್ಗೆ ವಿವರವಾದ ಮಾಹಿತಿಯನ್ನೊಳಗೊಂಡ ಗ್ರಾಮ ಸುರಾಜ್ಯ ಕೃತಿಯನ್ನು ರಚಿಸಿರುವ ಎಂ.ಕೆ. ಕೆಂಪೇಗೌಡ ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.

ಗ್ರಾಮ ಸುರಾಜ್ಯ ಕೃತಿಯನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳು, ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳಿಗೆ ಲಭ್ಯವಾಗುವಂತೆ ಮಾಡಬೇಕು. ಅಲ್ಲದೇ ಗ್ರಾಮ ಪಂಚಾಯತ್ ಗ್ರಂಥಾಲಯಗಳಲ್ಲಿಯೂ ದೊರಕುವಂತೆ ಕ್ರಮ ಕೈಗೊಳ್ಳಬೇಕೆಂದು ಕರೆ ನೀಡಿದರು.

ರಾಷ್ಟ್ರೀಯ ಪಂಚಾಯತ್ ರಾಜ್ ದಿನದಂದು ನಡೆದ ಗ್ರಾಮ ಸುರಾಜ್ಯ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಂಚಯತ್ ಆಯುಕ್ತರಾದ ಪ್ರಿಯಾಂಕಾ ಮೇರಿ ಫ‍್ರಾನ್ಸಿಸ್, ಗ್ರಾಮೀಣಾಭಿವೃದ್ದಿ ಆಯುಕ್ತರಾದ ಶಿಲ್ಪಾನಾಗ್, ಸಾಮಾಜಿಕ ಪರಿಶೋಧನಾ ನಿರ್ದೇಶನಯಲದ ನಿರ್ದೇಶಕ ನಲಿನಿ ಅತುಲ್ , ಗ್ರಾಮ ಸುರಾಜ್ಯ ಕೃತಿ ಲೇಖಕ ಹಾಗೂ ಪಂಚಾಯತ್ ರಾಜ್ ಸಲಹೆಗಾರರಾದ ಎಂಕೆ ಕೆಂಪೇಗೌಢರು ವಿಸ್ಮಯ ಬುಕ್ ಹೌಸ್ ನ ಮಾಲೀಕರಾದ ಪ್ರಕಾಶ್ ಚಿಕ್ಕಪಾಳ್ಯ ಖ್ಯಾತ ವಾಗ್ಮಿ ಹಾಗೂ ಸಂಸ್ಕೃತಿ ಚಿಂತಕ ಪ್ರೊ. ಎಂ. ಕೃಷ್ಣೇಗೌಡರು ಹಾಗೂ ಇಲಾಖೆಯ ಹಿರಿಯ  ಅಧಿಕಾರಿಗಳು ಹಾಜರಿದ್ದರು.

Key words: Gram Surajya – big contribution – Panchayat Raj -Constituency – Dr. SS Meenakshi Sundaram