ಮೈಸೂರು,ಆಗಸ್ಟ್,23,2024 (www.justkannada.in): ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಬಂದು ಅರಣ್ಯ ಭವನದಲ್ಲಿ ಬೀಡುಬಿಟ್ಟಿದ್ದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆ ಇಂದು ಮೈಸೂರು ಆರಮನೆಗೆ ಆಗಮಿಸಿದ್ದು ಅದ್ಧೂರಿ ಸ್ವಾಗತ ಕೋರಲಾಯಿತು.
ನಾಡ ಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಆಗಸ್ಟ್ 21 ರಂದು ಗಜಪಯಣದ ಮೂಲಕ ಮೈಸೂರಿಗೆ ಆಗಮಿಸಿದ ಅಭಿಮನ್ಯು ನೇತೃತ್ವದ 9 ಆನೆಗಳು ಮೈಸೂರಿನ ಅರಣ್ಯ ಭವನದಲ್ಲಿ ವಾಸ್ತವ್ಯ ಹೂಡಿದ್ದವು.
ಇಂದು ಬೆಳಗ್ಗೆ ಸಾಂಪ್ರಾದಾಯಿಕ ಪೂಜೆ ಸಲ್ಲಿಸಿ ಅರಣ್ಯ ಭವನದಿಂದ ಬೀಳ್ಕೊಡಲಾಗಿತ್ತು. ಅಲ್ಲಿಂದ ಮೈಸೂರು ನಗರದ ಕೃಷ್ಣಮೂರ್ತಿಪುರಂ, ಡಬ್ಬಲ್ ರೋಡ್ ಮೂಲಕ ಮೈಸೂರು ಅರಮನೆಯನ್ನ ಪ್ರವೇಶಿಸಿದ ಗಜಪಡೆಗೆ ಸಾಂಪ್ರದಾಯಿಕವಾಗಿ ಸ್ವಾಗತ ಕೋರಲಾಯಿತು. ಇಂದು ಬೆಳಗ್ಗೆ 10.10 ರಿಂದ 10.30 ರ ಶುಭ ತುಲಾ ಲಗ್ನದಲ್ಲಿ ಅಭಿಮನ್ಯು ನೇತೃತ್ವದ 9 ಗಜಪಡೆಗೆ ಅರಮನೆ ಮುಂಭಾಗದ ಜಯ ಮಾರ್ತಾಂಡ ದ್ವಾರದ ಬಳಿ ಜಿಲ್ಲಾಡಳಿತದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಪುಷ್ಪಾರ್ಚನೆ ಮಾಡಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಗಜಪಡೆಯನ್ನು ಅರಮನೆಗೆ ಸ್ವಾಗತಿಸಿದರು.
ನಂತರ ಅರಮನೆ ಮುಂಭಾಗದ ಆನೆ ಬಾಗಿಲಿನ ಬಳಿ ಗಜಪಡೆಯನ್ನು ಅರಮನೆ ಆಡಳಿತ ಮಂಡಳಿ ಸ್ವಾಗತ ಮಾಡಿದರು. ಅಲ್ಲೂ ಸಹ ವಿಶೇಷ ಪೂಜೆ ಸಲ್ಲಿಸಲಾಯಿತು. ದಸರಾ ಗಜಪಡೆ , ಮಾವುತರು ತಂಗಲು ಮೈಸೂರು ಅರಮನೆ ಆವರಣದಲ್ಲಿ ವ್ಯವಸ್ಥೆ ಮಾಡಲಾಗಿದೆ.
Key words: grand welcome, Dasara, Gajapade, Mysore Palace