ಮೈಸೂರು,ನವೆಂಬರ್,11,2020(www.justkannada.in) : ಸರಕಾರ ಸಿನಿಮಾ ಹಾಲ್, ಮದುವೆ, ವ್ಯಾಯಾಮ ಮುಂತಾದವುಗಳಿಗೆ ಅನುಮತಿ ನೀಡಿದಂತೆ ಜಿಆರ್ ಎಸ್ ಫ್ಯಾಂಟಸಿ ಪಾರ್ಕ್ ಗೂ ಅನುಮತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಆರ್ ಎಸ್ ಫ್ಯಾಂಟಸಿ ಪಾರ್ಕ್ ಎಂಪ್ಲಾಯೀಸ್ ಯೂನಿಯನ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಜಮಾವಣೆಗೊಂಡ ಪ್ರತಿಭಟನಕಾರರು ಬೇಡಿಕೆ ಈಡೇರಿಸುವಂತೆ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶವ್ಯಕ್ತಪಡಿಸಿದರು.
ಯೂನಿಯನ್ ಅಧ್ಯಕ್ಷ ಜಿ.ಜಯರಾಂ ಮಾತನಾಡಿ, ಜಿಆರ್ ಎಸ್ ಫ್ಯಾಂಟಸಿ ಪಾರ್ಕ್ ಆರಂಭವಾಗಿ 21ವರ್ಷ ತುಂಬಿದ್ದು, ಅಂದಿನಿಂದ ಇಲ್ಲಿ ದುಡಿಯುತ್ತಿದ್ದೇವೆ. ಕಳೆದ ಮಾರ್ಚ್ 20ರಿಂದ ಕೋವಿಡ್-19ನಿಂದಾಗಿ ಅಲ್ಲಿ ದುಡಿಯುತ್ತಿದ್ದ ಸುಮಾರು 300ಗೂ ಹೆಚ್ಚು ಕಾರ್ಮಿಕರಿಗೆ ಕೆಲಸವಿಲ್ಲವಾಗಿದೆ ಎಂದು ಬೇಸರವ್ಯಕ್ತಪಡಿಸಿದರು.
ಇಂದಿನ ಬೆಲೆಯೇರಿಕೆಯ ದಿನಗಳಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ಬಡ ಕಾರ್ಮಿಕರು ಈ ಕೆಲಸವನ್ನೇ ನಂಬಿ ಜೀವನ ನಡೆಸುತ್ತಿದ್ದು, ಕೋವಿಡ್ 19ನಿಂದ ಸರಕಾರ ಅನುಮತಿ ನೀಡದಿರುವುದರಿಂದ ಇದನ್ನೇ ನೆಪಮಾಡಿಕೊಂಡು 21ವರ್ಷಗಳಿಂದ ದುಡಿದುಕೊಂಡು ಬಂದ ಕಾರ್ಮಿಕರಿಗೆ ತಿಂಗಳಿಗೆ 75%, ನಂತರ 60% ವೇತನ ನೀಡುತ್ತಿದ್ದಾರೆ ಎಂದು ದೂರಿದರು.
ಏಪ್ರೀಲ್ ನಿಂದ ಕಡಿತವಾಗಿರುವ ವೇತನವನ್ನು ಕೊಡಿಸಿ, 2019-20ನೇ ಸಾಲಿನ ತುಟ್ಟಿಭತ್ಯೆ ಸೌಲಭ್ಯವನ್ನು ಒದಗಿಸಿ, ಗುತ್ತಿಗೆದಾರರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಿ, ನೌಕರರ ಕೆಲವು ಮೂಲ ಸೌಲಭ್ಯಗಳನ್ನು ಮುಂದುವರಿಸಿ, ಪಾರ್ಕ್ ನಲ್ಲಿ ಜಲಕ್ರೀಡೆ ಆಡಲು ಸರಕಾರ ಶೀಘ್ರ ಅನುಮತಿ ನೀಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಯೂನಿಯನ್ ಉಪಾಧ್ಯಕ್ಷ ಎಂ.ಕುಮಾರ್, ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಜಗದೀಶ್, ಜಂಟಿಕಾರ್ಯದರ್ಶಿ ಯು.ಎಸ್.ಶ್ರೀನಿವಾಸ್, ಸಂಘಟನಾಕಾರ್ಯದರ್ಶಿ ಕೆ.ಎಂ.ರಮೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.
key words : Grant-GRS-Fantasy-Park-permitted-cinema-hall- wedding-gym-GRS Fantasy Park-Employees-Union-protest