ನಾಡು ಕಂಡ ಶ್ರೇಷ್ಠ ಮುತ್ಸದ್ಧಿ ರಾಜಕಾರಣಿ ಎಸ್.ಎಂ ಕೃಷ್ಣ: ಅವರ ಆಡಳಿತ ವೈಖರಿ ರಾಜ್ಯಭಾರಕ್ಕೆ ಭೂಷಣ..!

ಬೆಂಗಳೂರು,ಡಿಸೆಂಬರ್,10,2024 (www.justkannada.in): ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಭಾರತ ಅದರಲ್ಲೂ ಕರ್ನಾಟಕ ಕಂಡ ಉತ್ಕೃಷ್ಟ ಮಟ್ಟದ ಶ್ರೇಷ್ಠ ಹಾಗೂ ಅಪರೂಪದ ರಾಜಕಾರಣಿ. ಬಹುಶಃ ಕರ್ನಾಟಕದ ಏಕೈಕ ಬ್ಯಾರಿಷ್ಠರ್ ಆಫ್ ಲಾ. ವೇಳೆ ದೇಶದಲ್ಲಿ ವ್ಯಾಸಂಗ ಮಾಡಿದ್ದ ಎಸ್. ಎಂ, ಕೃಷ್ಣರದ್ದು ಶಿಸ್ತು ಬದ್ದ ಜೀವನಕ್ಕೆ ಹೆಸರುವಾಸಿ. ಅವರ ಅಪಾರ ಜ್ಞಾನ, ಬುದ್ದಿಮತ್ತೆ ಜೊತೆಗೆ ಅವರೊಬ್ಬ ಅತ್ಯುತ್ತಮ ಆಡಳಿತಗಾರರಾಗಿದ್ದರು. ಅವರು ಶ್ರೇಷ್ಠ ಸಂಹವನಕಾರ , ಆಕರ್ಷಕವಾದ ವ್ಯಕ್ತಿತ್ವ.

ಸದಾ ಸೊಗಸಾದ ಧಿರಿಸು ಧರಿಸಿ, ಉತ್ತಮ ಸಂಸ್ಕೃತಿಯ ಸರದಾರ. ಅವರನ್ನು ಕಂಡ ಯಾರಿಗಾದರೂ ಅವರಿಗೆ ಎದ್ದು ನಮಸ್ಕರಿಬೇಕು ಎನಿಸಿದರೆ ಅದು ಉತ್ಪ್ರೇಕ್ಷೆ ಅಲ್ಲ.

ಎಸ್‌ ಎಂ ಕೃಷ್ಣರಲ್ಲಿ ಒಬ್ಬ ಮನೋ ವಿಜ್ಙಾನಿ ಇದ್ದ. ಎಂತಹವರ ಮನಸ್ಸನ್ನೂ ಅರಿಯ ಬಲ್ಲ ಸೂಕ್ಷ್ಮ ಗ್ರಹಿಕೆ ಅವರಲ್ಲಿತ್ತು. ಆ ಕಾರಣದಿಂದಲೇ ಅವರನ್ನು ಕಂಡರೆ ಅಧಿಕಾರಿಗಳಿಗೆ ಗೌರವ, ಪ್ರೀತಿ.  ಕೃಷ್ಣ ಒರ್ವ ಹೃದಯವಂತ ರಾಜಕಾರಣಿ. ಆದರೆ ಆಡಳಿತದ ವಿಷಯದಲ್ಲಿ ಅಷ್ಟೇ ಕಠೋರ. ಅಶಿಸ್ತನ್ನು ಕಿಂಚತ್ತೂ ಸಹಿಸದ ಆಡಳಿತಗಾರ.

ಕೃಷ್ಣರವರ ನಾಲ್ಕುವರೆ ವರ್ಷಗಳ ಮುಖ್ಯಮಂತ್ರಿ ಅವಧಿ ಬಹುಶಃ ಅವರಿಗೆ ಎದುರಾದ ಸವಾಲುಗಳು, ಯಾವ ಮುಖ್ಯಮಂತ್ರಿಯೂ ಎದುರಿಸಿರಲಿಲ್ಲ. ಕಾಡುಗಳ್ಳ ವೀರಪ್ಪನ್ ನಿಂದ ವರನಟ ರಾಜ್ ಕುಮಾರ್ ಅಪಹರಣ, ಮಾಜಿ ಸಚಿವ ಹೆಚ್ ನಾಗಪ್ಪ ಅಪಹರಣ ಹಾಗೂ ಅವರ ಹತ್ಯೆ, ಕಾವೇರಿ ನೀರು ವಿವಾದ, ರಾಜ್ಯದಲ್ಲಿ ಬರ ಪರಿಸ್ಥಿತಿ ಹೀಗೆ ಹತ್ತಾರು. ಆದರೆ ಅವುಗಳೆಲ್ಲವನ್ನೂ ನಿಭಾಯಿಸಿದ ಕೀರ್ತಿ ಕೃಷ್ಣರಿಗೆ ಸಲ್ಲಬೇಕು.

ಇಂಧನ ಇಲಾಖೆಯಲ್ಲಿ ಅವರು ಜಾರಿಗೆ ತಂದ ಸುಧಾರಣೆಗಳು ಇಂದಿಗೂ ಫಲ ಕೊಡುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಡಿಜಿಟಲ್ ಕ್ರಾಂತಿಯ ಬಗ್ಗೆ ಈಗ ಮಾತಾನಾಡುತ್ತಿದೆ.  ಕೃಷ್ಣ ರವರು ಮುಖ್ಯಮಂತ್ರಿ ಯಾಗಿದ್ದ 1999-2004ರ ಅವಧಿಯಲ್ಲಿ ಅವರು ರಾಜ್ಯದ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಲು ಭೂಮಿ ಎಂಬ ಯೋಜನೆಯನ್ನು ಜಾರಿಗೊಳಿಸಿದ್ದರು.

ಸರ್ಕಾರ ಹಾಗೂ ಖಾಸಗಿ ಸಹ ಭಾಗಿತ್ವದಲ್ಲಿ ಬೆಂಗಳೂರು ಅಭಿವೃದ್ಧಿ, ಬ್ರ್ಯಾಂಡ್ ಬೆಂಗಳೂರು ಅನ್ನು ವಿಶ್ವದ ನಕಾಶೆಯಲ್ಲಿ ಸೇರಿಸಿದ ಕೀರ್ತಿ ಸಹ ಇವರಿಗೆ ಸಲ್ಲಬೇಕು.

1932, ಮೇ 1 ರಂದು ಜನಿಸಿದ ಎಸ್ ಎಂ ಕೃಷ್ಣ, ಮೂವತ್ತು ವರ್ಷದ ಪ್ರಾಯದವರಿದ್ದಾಗಲೇ ಪಕ್ಷೇತರ ಅಭ್ಯರ್ಥಿಯಾಗಿ ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಗೆದ್ದು ರಾಜಕೀಯ ರಂಗ ಪ್ರವೇಶ ಮಾಡಿದರು. ಕೃಷ್ಣರವರು ಆಗ ಸೋಲುಸಿದ್ದು ಪ್ರಖ್ಯಾತ ರಾಜಕಾರಣಿ ಕೆ.ವಿ ಶಂಕರೇಗೌಡರನ್ನು.

ತದ ನಂತರ ಕೃಷ್ಣ ರಾಜಕೀಯದಲ್ಲಿ ಹಲವಾರು ಏಳು ಬೀಳುಗಳನ್ನು ಕಂಡಿದ್ದಾರೆ. ತಮ್ಮ ಆರು ದಶಕಗಳಿಗೂ ಮಿಕ್ಕ ರಾಜಕೀಯ ಬದುಕಿನಲ್ಲಿ ಹಲವಾರು ಹುದ್ದೆಗಳನ್ನು ಸಮರ್ಥ ವಾಗಿ ನಿಭಾಯಿಸಿದ್ದಾರೆ. ಇಂದಿರಾ ಗಾಂಧಿ ಸಂಪುಟದಲ್ಲಿ ಸಚಿವ, ಮನಮೋಹನ್ ಸಿಂಗ್ ರವರ ಮಂತ್ರಿ ಮಂಡಲದಲ್ಲಿ ವಿದೇಶಾಂಗ ಸಚಿವ, ಕರ್ನಾಟಕದಲ್ಲಿ ಉಪಮುಖ್ಯಮಂತ್ರಿ, ಸಭಾಧ್ಯಕ್ಷ, ಕೆಪಿಸಿಸಿ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಹುದ್ದೆ.

1994 ರಲ್ಲಿ ರಾಜ್ಯದಲ್ಲಿ ಸೋತು ಸೊರಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಪಾಂಚಜನ್ಯ ಕಹಳೆ ಊದಿ 1999 ರಲ್ಲಿ ಮತ್ತೆ ಅಧಿಕಾರದ ಗದ್ದುಗೆಗೆ ಕೂರಿಸಿದ ಕೀರ್ತಿ ಕೃಷ್ಣ ರವರಿಗೆ.

ಶಾಲಾ ಮಕ್ಕಳಿಗೆ ಅವರು ಉಣ ಬಡಿಸಿದ ಬಿಸಿಯೂಟವನ್ನು ಮಕ್ಕಳು ಇಂದಿಗೂ ಸವಿಯುತ್ತಿದ್ದಾರೆ. ಬಹುಶಃ ಯುಪಿಎ -2 ರಲ್ಲಿ ಕೃಷ್ಣ ರವರನ್ನು ಪ್ರಧಾನ ಮಂತ್ರಿ ಮಾಡಿದ್ದರೆ, ಕಾಂಗ್ರೆಸ್ ಪಕ್ಷಕ್ಕೆ ಬಲ ಬರುತ್ತಿತ್ತು. ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ನವರಿಗೆ ಕಾಂಗ್ರೆಸ್ ಪಕ್ಷ ಸೇರಲು ಸಹಾಯ ಮಾಡುದವರಲ್ಲಿ ಕೃಷ್ಣ ಪ್ರಮುಖರು.

ಕಾಂಗ್ರೆಸ್ ಪಕ್ಷದ ವಿದ್ಯಮಾನಗಳ ಬಗ್ಗೆ ಬೇಸರಿಸಿಕೊಂಡು, 2017 ರಲ್ಲಿ ಆ ಪಕ್ಷಕ್ಕೆ ಗುಡ್ ಬೈ ಹೇಳಿ ಬಿಜೆಪಿ ಸೇರಿದರು. ಆದರೆ ಬಿಜೆಪಿ ಸಹ ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಪ್ರಾಯಶಃ ನರೇಂದ್ರ ಮೋದಿಯವರಿಗೆ ಇದರ ಬಗ್ಗೆ ಪಾಪ ಪ್ರಜ್ಞೆ ಕಾಡಿರಬೇಕು. ಹೀಗಾಗಿ ಅವರ ಸರ್ಕಾರ ಕೃಷ್ಣ ರವರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿತು.

ಎಸ್ ಎಂ ಕೃಷ್ಣ ರವರು ಈ ನಾಡಿಗೆ ಭೂಷಣ. ಅವರ ಆಡಳಿತ ವೈಖರಿ ರಾಜ್ಯಭಾರಕ್ಕೆ ಭೂಷಣ.  ನಾಡು ಕಂಡ ಈ ಶ್ರೇಷ್ಠ ರಾಜಕೀಯ ಚತುರನಿಗೆ ನಾಡು ನುಡಿ ನಮನ ಸಲ್ಲಿಸಿದೆ.

 

 

M.SIDDARAJU, SENIOR JOURNALIST

 ಕೃಪೆ

ಎಂ. ಸಿದ‍್ಧರಾಜು

ಹಿರಿಯ ಪತ್ರಕರ್ತ, ಬೆಂಗಳೂರು

 

 

Key words: greatest, politician, country,S.M. Krishna