ತೃತೀಯ ಲಿಂಗಿಗಳಿಗೂ ಬಂತು ‘ಗೃಹಲಕ್ಷ್ಮಿ’ ಭಾಗ್ಯ: ಮೊದಲ ಕಂತು ಜಮೆ

ಮೈಸೂರು,ಡಿಸೆಂಬರ್,14,2024 (www.justkannada.in):  ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯನ್ನು ಈಗ ತೃತೀಯ ಲಿಂಗಿಗಳಿಗೂ ವಿಸ್ತರಣೆ ಮಾಡಲಾಗಿದೆ.

ಯೋಜನೆಯಡಿ ಪ್ರತಿತಿಂಗಳು ಮನೆ ಯಜಮಾನಿಗೆ ಮಾಸಿಕ 2 ಸಾವಿರ ಧನ ಸಹಾಯ ಮಾಡಲಾಗುತ್ತಿದೆ. ತೃತೀಯ ಲಿಂಗಿಗಳಿಗೂ ಗೃಹಲಕ್ಷ್ಮಿ ಯೋಜನೆ ವಿಸ್ತರಿಸುವ ಕುರಿತು ಆರಂಭದಲ್ಲೇ ರಾಜ್ಯ ಸರ್ಕಾರ ಆಶ್ವಾಸನೆ ಕೊಟ್ಟಿತ್ತು.  ಆದರೆ ಕೆಲವು ತೊಡಕುಗಳಿಂದ ಅದನ್ನು ತಡೆ ಹಿಡಿಯಲಾಗಿತ್ತು.ಈಗ ಅಧಿಕೃತವಾಗಿ ತೃತೀಯ ಲಿಂಗಿಗಳ ಖಾತೆಗೂ ಗೃಹಲಕ್ಷ್ಮಿ ಹಣ ಜಮಾವಣೆ ಮಾಡಲಾಗಿದ್ದು, ಡಿಬಿಟಿ ಮೂಲಕ  ತೃತೀಯ ಲಿಂಗಿಗಳಿಗೆ ಮೊದಲ ಕಂತು ಬಂದಿದೆ.

ಈ ಮೂಳಕ ಲೈಂಗಿಕ ಅಲ್ಪ ಸಂಖ್ಯಾತರು ಗೃಹ ಲಕ್ಷ್ಮೀ ಯೋಜನೆಯ ಮೊದಲ ಕಂತು ಪಡೆದ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ತೃತೀಯ ಲಿಂಗಿಗಳ ಸಂಘದ ರಾಜ್ಯ ಸಂಚಾಲಕಿ ಪ್ರಣತಿ ಪ್ರಕಾಶ್,  “ಸಮಾಜದ ಮುಖ್ಯವಾಹಿನಿಗೆ ಬರಲು, ಐದು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಲು ಅವಕಾಶ ಮಾಡಿಕೊಟ್ಟ ರಾಜ್ಯ ಸರ್ಕಾರಕ್ಕೆ ನಮ್ಮ ಸಮುದಾಯದ ಪರವಾಗಿ ಧನ್ಯವಾದ ಅರ್ಪಿಸುತ್ತೇವೆ. ನಮಗೆ ಈ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಎರಡು ಸಾವಿರ ರೂಪಾಯಿ ಹಣ ಬಂದಿದೆ. ಶಕ್ತಿ ಯೋಜನೆಯ ಉಚಿತ ಪ್ರಯಾಣದ ವ್ಯವಸ್ಥೆಯನ್ನೂ ನಮಗೆ ಮಾಡಿಕೊಡಲಾಗಿದೆ. ರಾಜ್ಯದಲ್ಲಿ 800 ರಿಂದ 900 ಮಂದಿ ಎಂಎಸ್​ಎಂ, ಎಂಎಸ್​ಡಬ್ಲ್ಯೂ, ಟ್ರಾನ್ಸ್‌ಜೆಂಡರ್‌, ಜೋಗಪ್ಪ ಹಾಗೂ ಜೋಗಮ್ಮಗಳು ಇದ್ದೇವೆ. ಇದರಲ್ಲಿ 200 ರಿಂದ 300 ಜನ ಟಿಜಿ ಕಾರ್ಡ್​ ಮಾಡಿಸಿದ್ದಾರೆ.  ಈ ಕಾರ್ಡ್ ಹೊಂದಿರುವವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬಂದಿದೆ. ಮೊನ್ನೆ ನನಗೆ ಮೊದಲ ಕಂತಿನ ಗೃಹಲಕ್ಷ್ಮಿ ಹಣ ಬಂದಿದೆ. ಸಮುದಾಯದ ಇತರರಿಗೂ ಹಣ  ಬಂದಿದೆ ಎಂದರು.

ಈಗಾಗಲೇ ನಮ್ಮ ಫೋಟೋ, ಆಧಾರ್​ ಕಾರ್ಡ್, ಮೊಬೈಲ್‌ ನಂಬರ್‌ ಹಾಗೂ ಟಿಜೆ ಕಾರ್ಡ್‌ ಅಪ್ರೂವಲ್ ಮಾಡಿದ್ದು, ನಮ್ಮ ಖಾತೆಗೆ ನೇರವಾಗಿ ಹಣ ಬರುತ್ತದೆ. ಗೃಹಲಕ್ಷ್ಮಿ ಹಣ ಬಂದಿರುವುದು ನಮಗೆ ಸಂತಸ ತಂದಿದೆ. ಭಿಕ್ಷಾಟನೆ ಹಾಗೂ ಮತ್ತಿತರ ಕೆಲಸ ಮಾಡದೇ ನಾವು ಸ್ವಾವಲಂಬಿಗಳಾಗಿ ದುಡಿಯಲು ಈ ಯೋಜನೆ ಸಹಕಾರಿಯಾಗಿದೆ ಎಂದು ತೃತೀಯ ಲಿಂಗಿಗಳ ಮುಖಂಡೆ ಪ್ರಣತಿ ಪ್ರಕಾಶ್ ಸಂತಸ ಹಂಚಿಕೊಂಡರು.

Key words:   Grihalakshmi, Money, Congress government