ಮೈಸೂರು, ಜೂನ್ 23,2019 (www.justkannada.in): ಇಷ್ಟ ಇದ್ರೆ ಇರಿ, ಹೋಗೋದಾದರೆ ಹೋಗಿ ಎಂಬ ಹೇಳಿಕೆ ನೀಡುವ ಅಧಿಕಾರ ಯಾರಿಗೂ ಇಲ್ಲ ಎಂದು ಸಚಿವ ಜಿ.ಟಿ.ದೇವೇಗೌಡ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ಜೆಡಿಎಸ್ ಅಧ್ಯಕ್ಷ ಎಚ್.ವಿಶ್ವನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಮ್ಮಿಶ್ರ ಸರ್ಕಾರ ನಾಲ್ಕು ವರ್ಷ ಸುಭದ್ರವಾಗಿರಲಿದೆ. ಕುಮಾರಸ್ವಾಮಿಯವರೇ ಮುಖ್ಯಮಾಂತ್ರಿಯಾಗಿರುತ್ತಾರೆ. ಸಿಎಂ ಕೂಡ ಸರ್ಕಾರ ಸುಭದ್ರ ಎಂದು ಹೇಳಿದ್ದಾರೆ. ಪಕ್ಷದ ಸಂಘಟನೆಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಎಚ್.ಡಿ.ದೇವೇಗೌಡರು ಚಿಂತನೆ ಮಾಡುತ್ತಿದ್ದಾರೆ.
ಎಚ್.ವಿಶ್ವನಾಥ್ ಅವರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಈಗ ಏನೇನೋ ಹೇಳಿಕೆ ಕೊಟ್ಟು ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಿದೆ. ದೇಶದ ಅಭಿವೃದ್ಧಿ ಮಾಡಲು ಅವರು ಮುಂದಾಗಿದ್ದಾರೆ. ಇತ್ತ ರಾಜ್ಯದಲ್ಲಿ ಸರ್ಕಾರ ಉರುಳಿಸುವ ಯತ್ನವನ್ನು ಬಿಜೆಪಿ ಕೈಬಿಟ್ಟಿದೆ.
ಹೀಗಾಗಿರುವಾಗ ಕಾಂಗ್ರೆಸ್-ಜೆಡಿಎಸ್ನವರು ಅಣ್ಣ-ತಮ್ಮಂದಿರಂತೆ ಇರಬೇಕು. ಏನೇ ಸಮಸ್ಯೆಗಳಿದ್ದರೂ ನಾಲ್ಕು ಗೋಡೆಗಳ ಮಧ್ಯೆ ಕುಳಿತು ಬಗೆಹರಿಸಿಕೊಳ್ಳಬೇಕೇ ಹೊರತು ಏನೇನೋ ವಿವಾದಾತ್ಮಕ ಹೇಳಿಕೆಗಳನ್ನು ಯಾರೂ ಕೂಡಾ ನೀಡಬಾರದು ಎಂದು ಜಿ.ಟಿ.ದೇವೇಗೌಡ ಹೇಳಿದರು.