ಗುಲ್ಬರ್ಗ:ಆ-27:ವಿಶಿಷ್ಟ ಸ್ವಾದ, ಗುಣಮಟ್ಟ ಮತ್ತು ಆರೋಗ್ಯಕರ ಅಂಶಗಳನ್ನು ಹೊಂದಿರುವ ಕಲಬುರಗಿ ಜಿಲ್ಲೆಯ ತೊಗರಿಗೆ ‘ಜಿಐ ಟ್ಯಾಗ್’ (ಭೌಗೋಳಿಕ ವಿಶೇಷತೆ ಗುರುತಿಸುವಿಕೆ) ಮಾನ್ಯತೆಯ ಪ್ರಮಾಣಪತ್ರ ಲಭಿಸಿದೆ. ಇದರಿಂದಾಗಿ ಇಷ್ಟುದಿನ ಯಾವುದೇ ಮಾನ್ಯತೆ ಇಲ್ಲದೆ ಹೆಸರು ಮಾಡಿದ್ದ ತೊಗರಿ ಕಣಜ ಮತ್ತೊಂದು ಕಿರೀಟ ಮುಡಿಗೇರಿಸಿ ಕೊಂಡಿದೆ. ಹೀಗಾಗಿ ಇನ್ನುಂದೆ ಗುಲ್ಬರ್ಗ ತೊಗರಿ ಬೇಳೆಯನ್ನು ದೇಶ- ವಿದೇಶಗಳ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ಮಾಡಲು ಸಹಕಾರಿ ಆಗಲಿದೆ.
ಕಮಲಾಪುರದ ಕೆಂಪು ಬಾಳೆ, ಬ್ಯಾಡಗಿ ಮೆಣಸಿನಕಾಯಿ, ಮೈಸೂರಿನ ಪಚ್ಚ ಬಾಳೆಹಣ್ಣು, ಬಾಸುಮತಿ ಅಕ್ಕಿ ಮೊದಲಾದವುಗಳ ರೀತಿಯಲ್ಲೇ ಗುಲ್ಬರ್ಗ ತೊಗರಿ ಬೇಳೆಗೆ ಜಿಯೋಗ್ರಾಫಿಕಲ್ ಇಂಡಿಕೇಷನ್ (ಭೌಗೋಳಿಕ ಗುರುತಿಸುವಿಕೆ) ನೋಂದಣಿ ಪ್ರಮಾಣೀಕೃತಗೊಂಡಿದೆ. ಇದರಿಂದಾಗಿ ತೊಗರಿ ಬೆಳೆಗಾರರ ಮತ್ತು ತೊಗರಿ ಉದ್ಯಮಿಗಳ ದಶಕದ ಬೇಡಿಕೆ ಕೈಗೂಡಿದಂತಾಗಿದೆ. ಅಲ್ಲದೆ ತೊಗರಿ ಬೇಳೆ ಉದ್ಯಮಕ್ಕೆ ಹೊಸ ಚೈತನ್ಯ ಸಿಗುವ ಸಾಧ್ಯತೆ ಇದೆ. ಕರ್ನಾಟಕ ತೊಗರಿ ಅಭಿವೃದ್ಧಿ ಮಂಡಳಿ ಮತ್ತು ರಾಯಚೂರು ಕೃಷಿ ವಿಶ್ವವಿದ್ಯಾಲಯ ಜತೆಗೂಡಿ ಗುಲ್ಬರ್ಗ (ಕಲಬುರಗಿ) ತೊಗರಿ ಬೇಳೆಗೆ ಜಿಐ ಟ್ಯಾಗ್ ನೀಡುವಂತೆ ಕೋರಿ 2017ರ ಸೆ.26ರಂದು ಚೆನ್ನೈನಲ್ಲಿರುವ ಕೇಂದ್ರ ಸರ್ಕಾರದ ರಿಜಿಸ್ಟ್ರಾರ್ ಆಫ್ ಜಿಯೋಗ್ರಾಫಿಕಲ್ ಇಂಡಿಕೇಷನ್ಗೆ ಪ್ರಸ್ತಾವನೆ ಸಲ್ಲಿಸಿದ್ದರು. ಅದನ್ನು ಪರಿಶೀಲಿಸಿ ತಜ್ಞರ ಅಭಿಪ್ರಾಯ ಪಡೆದು ಪರೀಕ್ಷಿಸಿದ ಬಳಿಕ 2019ರ ಆ.14ರಂದು ಗುಲ್ಬರ್ಗ ತೊಗರಿ ಬೇಳೆ ಎಂದು ಜಿಐ ಟ್ಯಾಗ್ ನೀಡಲು ಅನುಮೋ ದನೆ ನೀಡಿದ್ದು, ಪ್ರಮಾಣಪತ್ರ ಇತ್ತೀಚೆಗಷ್ಟೇ ಇಲ್ಲಿನ ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ಕೈ ಸೇರಿದೆ.
ಕಲಬುರಗಿ ತೊಗರಿಯ ವೈಶಿಷ್ಟ್ಯ
ದೇಶದಲ್ಲೇ ಅತಿ ವಿಸ್ತಾರ ಪ್ರದೇಶದಲ್ಲಿ ಕಲಬುರಗಿ ಜಿಲ್ಲೆಯಲ್ಲಿ ತೊಗರಿ ಬೆಳೆಯುವುದರಿಂದ ಈ ಪ್ರದೇಶವನ್ನು ತೊಗರಿ ಕಣಜ ಎನ್ನಲಾಗುತ್ತದೆ. ಇಲ್ಲಿನ ಮಣ್ಣಿನ ಗುಣ, ಬಿಸಿಲಿನ ವಾತಾವರಣ ಇತ್ಯಾದಿಗಳಿಂದಾಗಿ ಅತ್ಯಂತ ಶ್ರೇಷ್ಠ ತೊಗರಿ ಇಲ್ಲಿ ಬೆಳೆಯುತ್ತದೆ. ಈ ತೊಗರಿ ಬೇಳೆಗೆ ಬೇಗನೆ ಕುದಿಯುವ ಗುಣವಿದ್ದು, ಬಾಳಿಕೆ ದೀರ್ಘವಾಗಿದೆ. ಬೇಯಿಸಿದ ನಂತರ 2-3 ದಿನಗಳ ಕಾಲ ಬಳಕೆಗೆ ಬರಲಿದ್ದು, ಹಳಸುವುದಿಲ್ಲ. ಜಿಲ್ಲೆಯಲ್ಲಿ ಅತಿ ಹೆಚ್ಚಿನ ಸುಣ್ಣದ ಕಲ್ಲು (ಲೈಮ್್ಟೋನ್) ಇರುವುದರಿಂದ ಮಣ್ಣಿನಲ್ಲಿ ಕ್ಯಾಲ್ಸಿಯಂ ಮತ್ತು ಪೋಟ್ಯಾಷಿಯಂ ಅಧಿಕವಿದೆ. ಹೀಗಾಗಿ ಈ ತೊಗರಿ ವಿಶಿಷ್ಟ ಸ್ವಾದ, ಸುವಾಸನೆ ಹೊಂದಿದ್ದು ಆರೋಗ್ಯಕರವಾಗಿಯೂ ಇದೆ ಎಂಬಿತ್ಯಾದಿ ಅಂಶಗಳ ಮೇಲೆ ಜಿಐ ಟ್ಯಾಗ್ ನೀಡಲು ಕೋರಿದ್ದೆವು ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯ ಕಲಬುರಗಿ ವಲಯ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕರಾಗಿರುವ ಕೃಷಿ ವಿಜ್ಞಾನಿ ಡಾ.ಜೆ.ಆರ್.ಪಾಟೀಲ್ ತಿಳಿಸಿದರು. ಈ ತೊಗರಿಯಲ್ಲಿ ಪ್ರೊಟೀನ್ ಅಂಶ ಅಧಿಕವಿದೆ. ಬೇರೆ ದಾಲ್ ಹೆಚ್ಚು ಸೇವಿಸಿದಾಗ ಪಿತ್ತ ಇನ್ನಿತರ ಆರೋಗ್ಯ ಸಮಸ್ಯೆಯಾಗುತ್ತದೆ. ಆದರೆ ಈ ಬೇಳೆಯಿಂದ ಅಂಥ ಸಮಸ್ಯೆ ಬರುವುದಿಲ್ಲ ಎಂದು ಡಾ. ಜಯಪ್ರಕಾಶ ವಿವರಿಸಿದರು.
ಕಲಬುರಗಿ ಜಿಲ್ಲೆಯಲ್ಲಿ ಬೆಳೆಯುವ ತೊಗರಿಗೆ ಜಿಐ ಟ್ಯಾಗ್ ಪ್ರಮಾಣಪತ್ರ ಲಭಿಸಿದ್ದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಲ್ಬರ್ಗ ತೊಗರಿ ಬೇಳೆ ಎಂದು ಬ್ರ್ಯಾಂಡಿಂಗ್ ಮಾಡಲು ಸಹಕಾರಿಯಾಗಲಿದೆ. ಮುಂದಿನ ದಿನಗಳಲ್ಲಿ ರೈತರು, ದಾಲ್ ಮಿಲ್ನವರು ಹಾಗೂ ತೊಗರಿ ಮಂಡಳಿ ಜತೆಗೂಡಿ ಯಾವ ತೆರನಾಗಿ ಕೆಲಸ ಮಾಡಬೇಕು ಎಂಬುದರ ಕುರಿತು ವಿಸõತ ಯೋಜನೆ ರೂಪಿಸಲಾಗುವುದು.
| ಡಾ.ಜೆ.ಆರ್.ಪಾಟೀಲ್
ಕಲಬುರಗಿ ವಲಯ ಸಂಶೋಧನಾ ಕೇಂದ್ರದ ಸಂಶೋಧಕರು
ಕೃಪೆ:ವಿಜಯವಾಣಿ