ಮೈಸೂರು,ಮಾರ್ಚ್,15,2025 (www.justkannada.in): ಯತೀಂದ್ರರವರು ರಚಿಸಿದ ಕಾಲಜ್ಞಾನದ ಕೃತಿಯಲ್ಲಿ ಎಲ್ಲಾ ಸಂದೇಶವು ಅಡಗಿದ್ದು, ಅದನ್ನು ಜನರಿಗೆ ತಿಳಿಸಿಕೊಡುವ ನಿರಂತರ ಪ್ರಯತ್ನ ಎಲ್ಲರೂ ಮಾಡಬೇಕೆಂದು ಕೆಪಿಸಿಸಿ ವಕ್ತಾರ ಹಾಗೂ ಶ್ರೀ ಯೋಗಿ ನಾರೇಯಣ ಬಣಜಿಗ(ಬಲಿಜ) ಸಂಘದ ಗೌರವಾಧ್ಯಕ್ಷ ಎಚ್.ಎ.ವೆಂಕಟೇಶ್ ತಿಳಿಸಿದರು.
ಸರಸ್ವತಿಪುರಂನಲ್ಲಿ ರಾಧಾಕೃಷ್ಣ ಮಾರ್ಗದಲ್ಲಿರುವ ಶ್ರೀ ಯೋಗಿ ನಾರೇಯಣ ಬಣಜಿಗ ಸಂಘದ ಕಚೇರಿಯಲ್ಲಿ ಅಯೋಜಿಸಿದ್ದ ಶ್ರೀ ಯೋಗಿ ನಾರಾಯಣ ಯತೀಂದ್ರ (ಕೈವಾರ ತಾತಯ್ಯ) ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಶ್ರೀಮಂತಿಕೆಯೇ ಶ್ರೇಷ್ಠವಲ್ಲ. ಶ್ರೀಮಂತರಿಂದಲೇ ಎಲ್ಲವೂ ಅಲ್ಲ. ಮನುಷ್ಯ ತನ್ನ ಅಂತರಂಗವನ್ನು ಶುದ್ಧಿಯಾಗಿ ಇಟ್ಟುಕೊಳ್ಳಬೇಕು. ಮನುಷ್ಯ ಯಾವ ರೀತಿ ಬದುಕಬೇಕೆಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಸರಳ ಜೀವನವು ಸಾರ್ಥಕ ಬದುಕು ಎಂಬುದನ್ನು ಯತೀಂದ್ರರೂ ತೋರಿಸಿಕೊಟ್ಟಿದ್ದಾರೆ ಎಂದರು.
ಸಮಾಜದಲ್ಲಿ ಏನೆಲ್ಲಾ ನಡೆಯುತ್ತಿದೆ ಅದನ್ನು ಅಂದೆ ಅವರೇ ಕಾಲಜ್ಞಾನ ಕೃತಿಯಲ್ಲಿ ಯತೀಂದ್ರರ ವಾಣಿಯಲ್ಲಿ ಉಲ್ಲೇಖಿಸಿದ್ದಾರೆ. ಈ ಕಾರಣಕ್ಕಾಗಿ ಎಂದೆಂದಿಗೂ ಯತೀಂದ್ರರ ಕಾಲಜ್ಞಾನ ಕೃತಿ ಪ್ರಸ್ತುತವಾಗಿದೆ ಎಂದು ಹೇಳಿದರು.
ವಚನಕಾರರಾಗಿ, ಸಮಾಜ ಚಿಂತಕರಾಗಿ ಅವರ ಜೀವನ ಅನುಕರಣೀಯವಾಗಿದೆ. ಇಂದಿನ ಸಮಾಜ ಯಾವುದರ ಹಿಂದೆ ಸಾಗುತ್ತಿದೆ. ಹಣ ಸಂಪಾದನೆ, ರಾಜಕೀಯ ಅಧಿಕಾರಕ್ಕೆ ಯಾವೆಲ್ಲ ಮಟ್ಟಕ್ಕೆ ಮನುಷ್ಯ ಇಳಿಯಬಹುದೆಂಬದನ್ನು ಅಂದೇ ಯತೀಂದ್ರರೂ ಬರೆದಿಟ್ಟಿದ್ದಾರೆ. ಯತೀಂದ್ರರು ಬಳೆ ಮಾರುವ ಸಮಾಜದಲ್ಲಿ ಜನಿಸಿದರು. ಅವರು ಕೊಟ್ಟ ಸಮಾಜದ ಸುಧಾರಣಾ ಸಂದೇಶ ಎಲ್ಲರಿಗೂ ಅತ್ಯವಶ್ಯಕ ಆಗಿವೆ. ಸಮಾಜ ಸುಧಾರಕರೆಲ್ಲರನ್ನೂ ಒಂದು ಜಾತಿಗೆ ಸೀಮಿತಗೊಳಿಸಿ ನೋಡುವುದು ಸರಿಯಲ್ಲ. ಇವರ ಜ್ಞಾನ, ಜೀವನ ಎಲ್ಲವನ್ನೂ ಎಲ್ಲರೂ ಅರಿತು, ಅವರ ಸಂದೇಶ ಪಾಲನೆ ಮಾಡಬೇಕಿದೆ. ಈ ದೃಷ್ಠಿಯಿಂದ ಈ ಜಾಗದಲ್ಲಿ ಯತೀಂದ್ರರ ಪ್ರತಿಮೆ ಹಾಗೂ ಒಂದು ಆಧ್ಯಾತ್ಮ ಕೇಂದ್ರ ಸ್ಥಾಪನೆ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಯೋಗಿನಾರಾಯಣ ಯತೀಂದ್ರರು ಮೂಲತಃ ಬಳೆಗಾರರಾಗಿದ್ದರು. ಅದೊಂದು ಶ್ರೇಷ್ಠ ವೃತ್ತಿಯಾಗಿತ್ತು.ಆದರೂ ವೃತ್ತಿಯನ್ನು ಲಾಭಕ್ಕಾಗಿ ಅವರು ನೋಡಲಿಲ್ಲ. ಬದಲಿಗೆ ಸಾಂಸರಿಕ ಜೀವನ ತ್ಯಜಿಸಿ ವಚನಕಾರರಾಗಿ ದಾಸ ಸಾಹಿತ್ಯಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಈ ಭಾಗದಲ್ಲಿ ಹೆಚ್ಚು ಪ್ರಚಾರ ಇಲ್ಲದಿದ್ದರೂ ಆಂಧ್ರ ಗಡಿ ಭಾಗದಲ್ಲಿ ಹೆಚ್ವು ಪ್ರಚಾರದಲ್ಲಿದ್ದಾರೆ. ಇಲ್ಲಿಯೂ ಅವರ ಚಿಂತನೆ ತಲುಪಿಸಬೇಕೆಂಬ ಉದ್ದೇಶದಿಂದ ಪ್ರತಿ ಜಿಲ್ಲೆಯಲ್ಲೂ ಅವರ ವಿಚಾರಧಾರ ಪಸರಿಸುವ ಕೆಲಸ ಮಾಡುತ್ತಾ ಬರಲಾಗಿದೆ. ಈಗಾಗಲೇ ಮೈಸೂರು ಮತ್ತು ಮಂಡ್ಯ ವಿಶ್ವವಿದ್ಯಾನಿಲಯ ಸಹಯೋಗದೊಂದಿಗೆ ಒಂದು ದಿನ ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಸಿ ಅವರ ಚಿಂತನೆ ತಿಳಿಸುವ ಕೆಲಸ ಮಾಡಲಾಯಿತು. ಈಗ ಚಾಮರಾಜನಗರದಲ್ಲಿ ಮುಂದಿನ ಕಾರ್ಯಕ್ರಮ ರೂಪಿಸುವ ಚಿಂತನೆಯಿದೆ. ಮುಂದಿನ ಪೀಳಿಗೆಗೆ ಅವರನ್ನು ಪರಿಚಯಿಸುವ ನಿಟ್ಟಿನಲ್ಲಿ ಇಂತಹ ಜಯಂತಿಗಳು ಅತ್ಯವಶ್ಯಕ ಎಂದು ತಿಳಿಸಿದರು.
ಶ್ರೀ ಯೋಗಿ ನಾರೇಯಣ ಬಣಜಿಗ(ಬಲಿಜ) ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಗೋಪಾಲಕೃಷ್ಣ, ಖಜಾಂಚಿ ಕೆ.ಚಂದ್ರಶೇಖರ್, ಲೆಕ್ಕಪರಿಶೋಧಕ ಡಿ.ನಾಗರಾಜ, ನಿರ್ದೇಶಕರಾದ ಎಚ್ ಕೆ ಜಗನ್ನಾಥ್, ಗೋವಿಂದರಾಜು, ಎಚ್.ಕೆ.ಜಗನ್ನಾಥ, ಎಂ.ವಿ.ವೆಂಕಟೇಶ್, ರಮೇಶ್, ಸರ್ಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಚಿನ್ಯ ಜಗದೀಶ್, ಉಪನ್ಯಾಸಕ ಹೇಮಕುಮಾರ್, ವ್ಯವಸ್ಥಾಪಕ ಎಚ್ .ಆರ್. ವೆಂಕಟೇಶ್, ರಘು ಶೆಟ್ಟಿ ಇನ್ನಿತರರು ಉಪಸ್ಥಿತರಿದ್ದರು.
Key words: Sri Yogi Narayana Yatindra (Kaiwara Tataiah) Jayanti, H.A. Venkatesh