ಮೈಸೂರು,ಫೆಬ್ರವರಿ,18,2025 (www.justkannada.in): ರಾಜ್ಯದ 9 ವಿಶ್ವ ವಿದ್ಯಾನಿಲಯಗಳನ್ನು ಮುಚ್ಚುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತ. ಯುಜಿಸಿ ನಿಯಮದ ಪ್ರಕಾರ ಈ ವಿಶ್ವ ವಿದ್ಯಾನಿಲಯಗಳು ಸ್ಥಾಪನೆ ಆಗಿಲ್ಲ. ಹೀಗಾಗಿ ನಾನೂ ಕೂಡ ವಿವಿಗಳನ್ನು ಮುಚ್ಚಲು ಒತ್ತಾಯ ಮಾಡುತ್ತೇನೆ ಎಂದು ಕೆಪಿಸಿಸಿ ವಕ್ತಾರ ಹೆಚ್ ಎ ವೆಂಕಟೇಶ್ ತಿಳಿಸಿದರು.
ಮೈಸೂರಿನ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಎ ವೆಂಕಟೇಶ್, ಬಿಜೆಪಿ ಆಡಳಿತದ ಅವಧಿಯಲ್ಲಿ ಯುಜಿಸಿ ನಿಯಮವನ್ನ ಗಾಳಿಗೆ ತೂರಿ ವಿವಿಗಳನ್ನ ಸ್ಥಾಪಿಸಲಾಗಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ವಿಶ್ವ ವಿದ್ಯಾನಿಲಯಗಳನ್ನ ಮುಚ್ಚಬೇಕು. ಈಗಾಗಲೇ ಇದು ಪರಿಶೀಲನೆ ಹಂತದಲ್ಲಿದ್ದು, ನಾವು ಕೂಡ ಸರ್ಕಾರವನ್ನ ಒತ್ತಾಯ ಮಾಡುತ್ತೇವೆ. ಸಿದ್ದರಾಮಯ್ಯ ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ. ಹೀಗಾಗಿ ಕೂಡಲೇ ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳಲಿ ಎಂದು ಆಗ್ರಹಿಸಿದರು.
ಉನ್ನತ ಶಿಕ್ಷಣ ಪ್ರತಿಯೊಬ್ಬರಿಗೂ ಅತ್ಯಂತ ಮಹತ್ವದ್ದು, 2035ರ ವೇಳೆಗೆ ಒಟ್ಟು ದಾಖಲಾತಿ ಅನುಪಾತ ಶೇಕಡ 50ರಷ್ಟು ತಲುಪಬೇಕು ಎಂಬುದು ವಿಶ್ವವಿದ್ಯಾಲಯ ಅನುದಾನ ಆಯೋಗ ಹಾಗೂ ಕೇಂದ್ರ ಸರ್ಕಾರದ ನಿಲುವು. ಈ ಹಿನ್ನೆಲೆಯಲ್ಲಿ ನೂತನ ವಿವಿಗಳನ್ನು ಸ್ಥಾಪಿಸಿಯೇ ಉನ್ನತ ಶಿಕ್ಷಣವನ್ನು ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣ ಹೆಚ್ಚಿಸಬೇಕು ಎಂಬುದೇನಿಲ್ಲ. ದೇಶದ ಉನ್ನತ ಶಿಕ್ಷಣದಲ್ಲಿ ಒಟ್ಟಾರೆ ವಿದ್ಯಾರ್ಥಿಗಳ ದಾಖಲಾತಿ ಅನುಪಾತ 2024 -25ರ ಸರ್ವೇ ಪ್ರಕಾರ 28.4%. ಕರ್ನಾಟಕದಲ್ಲಿ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಅನುಪಾತ 36.2% . ಯಾವುದೇ ನೂತನ ವಿವಿಗಳ ಸ್ಥಾಪಿಸುವಾಗ ಆ ಭಾಗದ ಶೈಕ್ಷಣಿಕ ಅನಾನುಕೂಲದ ಬಗ್ಗೆ ಮೊದಲು ಗಮನಹರಿಸಬೇಕು. ಆನಂತರ ವಿದ್ಯಾರ್ಥಿಗಳ ಸೇರ್ಪಡೆ, ಅಫೀಲಿಯೇಟೆಡ್ ಕಾಲೇಜುಗಳು, ಬೋಧಕ , ಬೋಧಕೇತರ ಸಿಬ್ಬಂದಿ ಇವೆಲ್ಲವೂ ಗಮನಹರಿಸಬೇಕಾದ ಅತಿ ಮುಖ್ಯವಾದ ವಿಚಾರಗಳು. ವಿಶ್ವವಿದ್ಯಾಲಯಗಳ ಆರಂಭಕ್ಕೂ ಮುನ್ನ ಡಿಪಿಆರ್( ಡೀಟೈಲ್ ಪ್ರೊಜೆಕ್ಟ್ ರಿಪೋರ್ಟ್) ಮಾಡಬೇಕು. ಅದರ ಪ್ರಕಾರ ಯುನಿವರ್ಸಿಟಿ ಆರಂಭಿಸುವ ಅವಶ್ಯಕತೆ , ಸ್ಥಳ, ಆ ವ್ಯಾಪ್ತಿಯ ಜನಸಂಖ್ಯೆ, ಆ ಭಾಗದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ, ಯೂನಿವರ್ಸಿಟಿ ವ್ಯಾಪ್ತಿಯ ಅಫೀಲೇಟೆಡ್ ಕಾಲೇಜ್ ಗಳು, ಅಲ್ಲಿನ ವಿದ್ಯಾರ್ಥಿಗಳ ದಾಖಲಾತಿ ಪೂರ್ಣ ವಿವರಗಳನ್ನು ಸಂಗ್ರಹಿಸಬೇಕು.
ನೂತನ ವಿಶ್ವವಿದ್ಯಾಲಯಗಳ ಸ್ಥಾಪನೆ ಸಮರ್ಥಿಸಿಕೊಳ್ಳಲು ವಿಷನ್ , ಮಿಷನ್, ವ್ಯಾಲ್ಯೂಸ್, ಆಬ್ಜೆಕ್ಟೀವ್ಸ್ ಹಾಗೂ ಗೋಲ್ಸ್ ಏನೆಂಬುದು ಸ್ಪಷ್ಟ ಕಲ್ಪನೆ ಇರಬೇಕು. ಯುಜಿಸಿ ನಿಯಮಾವಳಿ ಪ್ರಕಾರ ನೂತನ ವಿಶ್ವವಿದ್ಯಾಲಯ ಸ್ಥಾಪನೆಗೆ 100 ಎಕರೆ ಜಾಗವಿರಬೇಕು. ಯುಜಿಸಿ ನಿಯಮಾವಳಿ ಪ್ರಕಾರ 5 ಸ್ನಾತಕ 5 ಸ್ನಾತಕೋತ್ತರ ಕೋರ್ಸ್ ಗಳು ಇದ್ದಲ್ಲಿ ಮೊದಲ ವರ್ಷ ಕನಿಷ್ಠ 450 ಮಂದಿ ದಾಖಲಾತಿ ಆಗುವಷ್ಟು ಮಟ್ಟಿಗಿರಬೇಕು. ಸುಮಾರು 25 ಕೋರ್ಸ್ ಗಳು ಇದ್ದಲ್ಲಿ ಕನಿಷ್ಠ ಪಕ್ಷ 3500 ರಿಂದ 4000 ವಿದ್ಯಾರ್ಥಿಗಳಿರಬೇಕು. ಪ್ರತಿ ಡಿಪಾರ್ಟ್ ಮೆಂಟ್ ಗೆ ಪ್ರೊಫೆಸರ್ ,ಇಬ್ಬರು ಅಸೋಸಿಯೇಟ್ ಪ್ರೊಫೆಸರ್ ,ನಾಲ್ವರು ಅಸಿಸ್ಟೆಂಟ್ ಪ್ರೊಫೆಸರ್ ಇರಬೇಕು ಎಂದು ಹೆಚ್.ಎ ವೆಂಕಟೇಶ್ ತಿಳಿಸಿದರು.
ಆದರೆ ಬಿಜೆಪಿಯವರು ವಿವಿ ಸ್ಥಾಪಿಸಲು ಯಾವುದೇ ರೀತಿಯ ಡಿಪಿಆರ್ ಮಾಡಿಸಿಲ್ಲ. ಚುನಾವಣೆ ಮುಂದಿಟ್ಟುಕೊಂಡು ವಿವಿಗಳನ್ನು ರಚಿಸಿದ್ದಾರೆ. ಆ ತುರ್ತು ಅವಶ್ಯಕತೆ ಏನಿತ್ತು ? ವಿವಿಗಳ ಸ್ಥಾಪನೆ ವೇಳೆ ಯುಜಿಸಿ ನಿಯಮಾವಳಿ ಪಾಲಿಸಿಲ್ಲ, ಈ ನಿರ್ಧಾರದಿಂದಾಗಿ ಖಾಸಗಿ ವಿವಿಗಳಿಗೆ, ಖಾಸಗಿ ಪದವಿ ಕಾಲೇಜುಗಳಿಗೆ ಉತ್ತೇಜಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಒಂದು ವಿವಿ ಮಾಡುವಾಗ ಸರ್ಕಾರ ವಿಶೇಷ ಅಧಿಕಾರಿಯನ್ನು ನೇಮಕ ಮಾಡಬೇಕು. ಅದು ಮಾಡಿಲ್ಲ ವಿವಿಗಳ ರಚನೆಗೆ ಸ್ಥಳ ಹಾಲಿ ಇರುವ ವಿಶ್ವವಿದ್ಯಾಲಯಗಳ ಅಂತರ ಇವೆಲ್ಲದರ ಬಗ್ಗೆ ಗಮನಹರಿಸಬೇಕು. ಉದಾಹರಣೆ ಮೈಸೂರು ವಿವಿಗೆ ಒಂದು ಇತಿಹಾಸವಿದೆ. ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಕೇವಲ 35 ರಿಂದ 40 ಕಿಲೋ ಮೀಟರ್ ಗಳ ದೂರಕ್ಕೆ ಮಂಡ್ಯ ಚಾಮರಾಜನಗರ ಹಾಸನ ವಿಶ್ವವಿದ್ಯಾಲಯಗಳ ಅವಶ್ಯಕತೆ ಇದೆಯೇ ಎಂಬುದನ್ನು ನೋಡಬೇಕಿದೆ. ಹಾವೇರಿ, ಕೊಪ್ಪಳ ಬೀದರ್, ಬಾಗಲಕೋಟೆ, ಕೊಡಗು ಮಹಿಳಾ ಕ್ಲಸ್ಟರ್ ಹಾಗೂ ನೃಪತುಂಗ ಇವು ಕೂಡ ಇದಕ್ಕೆ ಹೊರತಾಗಿಲ್ಲ ಎಂದು ಟೀಕಿಸಿದರು.
ಮುಕ್ತ ಅವಕಾಶ
ಮಂಡ್ಯ, ಚಾಮರಾಜನಗರ ಹಾಸನ ವಿವಿಗಳನ್ನ ಮುಚ್ಚುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಮುಕ್ತವಾಗಿ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸೇರಿಕೊಳ್ಳಬಹುದು. ಆದರೆ ಈಗ ಅಲ್ಲಿಯೂ ವಿವಿ ಇರುವುದರಿಂದ ಹೊರ ವಿಶ್ವ ವಿದ್ಯಾಲಯಗಳಲ್ಲಿ ಓದಲು ಎರಡೇ ಸೀಟುಗಳಿರುತ್ತವೆ. ಹೀಗಾಗಿ ಪ್ರತಿಷ್ಠಿತ ಮೈಸೂರು ವಿವಿಯಲ್ಲಿ ಓದಬೇಕೆನ್ನುವ ಆಕಾಂಕ್ಷೆ ಹೊಂದಿರುವ ವಿದ್ಯಾರ್ಥಿಗಳು ಇದರಿಂದ ಅವಕಾಶ ವಂಚಿತರಾಗುತ್ತಾರೆ. ಹೀಗಾಗಿ ಅಲ್ಲಿನ ವಿವಿಗಳನ್ನ ಮುಚ್ಚಿ ಮೈಸೂರಿಗೆ ಸೇರಿಸುವುದರಿಂದ ಅಲ್ಲಿನ ವಿದ್ಯಾರ್ಥಿಗಳೂ ಸಹ ಪ್ರತಿಷ್ಠಿತ ಮೈಸೂರು ವಿವಿಯಲ್ಲಿ ವ್ಯಾಸಂಗ ಮಾಡಬಹುದು ಎಂದು ಹೆಚ್.ಎ ವೆಂಕಟೇಶ್ ತಿಳಿಸಿದರು.
ಹಳೇ ಮೈಸೂರು ಪಾರಂಪಾರಿಕ ವಿವಿಯನ್ನು ನಿರ್ನಾಮ ಮಾಡುವುದು ಇವರ ಉದ್ದೇಶವೇ..?
ವಿಶ್ವವಿದ್ಯಾಲಯಗಳನ್ನು ಮಾಡಲಿಕ್ಕೆ ಇವರು ಹೊರಡಿಸಿರುವ ಆದೇಶದ ಪ್ರತಿಯನ್ನು ನೋಡಿದರೆ ಇವರ ಉದ್ದೇಶ ಶಾಲೆ ಮಾಡುವುದಿತ್ತೋ ಹೊರತು ವಿಶ್ವವಿದ್ಯಾಲಯ ಮಾಡುವ ಕಲ್ಪನೆಯ ಇವರಿಗೆ ಇರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಹಾಗಾದರೆ ಇವರ ಉದ್ದೇಶವೇನು? ಹಳೇ ಮೈಸೂರು ಪಾರಂಪಾರಿಕ ವಿವಿಯನ್ನು ನಿರ್ನಾಮ ಮಾಡುವುದು, ಈ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಪ್ರಗತಿಯನ್ನು ಕುಂಠಿತಗೊಳಿಸುವುದು. ಹಾಗೆಯೇ ಉಳಿದ ವಿಶ್ವವಿದ್ಯಾಲಯಗಳಿಗೂ ಇದು ಅನ್ವಯಿಸುತ್ತದೆ ಎಂದು ಹೆಚ್.ಎ ವೆಂಕಟೇಶ್ ಕಿಡಿಕಾರಿದರು.
ರಾಜ್ಯದಲ್ಲಿ 32 ಸರ್ಕಾರಿ ವಿಶ್ವವಿದ್ಯಾಲಯಗಳಿವೆ.15 ಡೀಮ್ಡ್ ವಿಶ್ವವಿದ್ಯಾಲಯಗಳಿವೆ. 29 ಖಾಸಗಿ ವಿಶ್ವವಿದ್ಯಾಲಯಗಳಿವೆ ಏಳು ಸೆಂಟ್ರಲ್ ವಿಶ್ವವಿದ್ಯಾಲಯಗಳಿವೆ. ಇವೆಲ್ಲವನ್ನೂ ನೋಡಿದರೆ ಸರ್ಕಾರದ ವಿಶ್ವವಿದ್ಯಾಲಯಗಳ ಸಂಖ್ಯೆ ಕೇವಲ 30%. ಬಿಜೆಪಿ ಆಡಳಿತ ಅವಧಿಯಲ್ಲಿ 17 ವಿಶ್ವವಿದ್ಯಾನಿಲಯಗಳಿಗೆ ಅನುಮತಿ ನೀಡಲಾಗಿದೆ. ಸಂಗೀತ, ಜನಪದ, ಸಂಸ್ಕೃತ ಇವುಗಳಿಗೆಲ್ಲ ಒಂದೊಂದು ವಿಶ್ವವಿದ್ಯಾನಿಲಯಗಳನ್ನು ಮಾಡಿದ ಖ್ಯಾತಿಯು ಇವರಿಗೆ ಸಲ್ಲಬೇಕು. ಆದರೆ ಇವುಗಳನ್ನು ಉತ್ತೇಜಿಸುವ ಬಗ್ಗೆ ಯಾವುದೇ ನಿರ್ಧಾರಗಳನ್ನು ದೂರದೃಷ್ಟಿಯನ್ನು ಬಿಜೆಪಿ ಸರ್ಕಾರ ಹೊಂದಿರಲಿಲ್ಲ ಎಂಬುದು ಅವುಗಳ ಇಂದಿನ ಸ್ಥಿತಿಯಿಂದ ಗೊತ್ತಾಗುತ್ತದೆ. ವಿಶ್ವವಿದ್ಯಾಲಯಗಳು ಶೈಕ್ಷಣಿಕ ಪ್ರಗತಿಯ ಸಂಶೋಧನೆಯ ಧ್ಯಾನದ ಕೇಂದ್ರಗಳು. ವಿಸಿ, ರಿಜಿಸ್ಟರ್ ಮಾಡುವ ಕೇಂದ್ರಗಳಲ್ಲ . ವಿಸಿ ನೇಮಕಗಳಿಗಾಗಿಯೇ ವಿಶ್ವವಿದ್ಯಾಲಯ ರಚಿಸುವುದು ಯಾವ ಮಾನದಂಡ ? ಎಂದು ಹೆಚ್.ಎ ವೆಂಕಟೇಶ್ ಪ್ರಶ್ನಿಸಿದರು.
ಈಗಾಗಲೇ ರಾಜ್ಯದಲ್ಲಿ ಖಾಸಗಿ ವಿಶ್ವವಿದ್ಯಾಲಯಗಳು ತಲೆ ಎತ್ತಿವೆ , ಎತ್ತುತ್ತಿವೆ. ಇವುಗಳ ಜೊತೆಗೆ ವಿದೇಶಿ ವಿಶ್ವವಿದ್ಯಾಲಯಗಳಿಗೂ ಮುಕ್ತ ಆಹ್ವಾನ ನೀಡಲಾಗಿದ್ದು ಗುಜರಾತ್ ದೆಹಲಿ ಸೇರಿದಂತೆ 11 ವಿದೇಶಿ ವಿಶ್ವವಿದ್ಯಾಲಯಗಳು ಈಗಾಗಲೇ ದೇಶಕ್ಕೆ ಕಾಲಿಟ್ಟಿವೆ. ಮೋದಿಯವರು ಮೊನ್ನೆ ಅಮೆರಿಕಾಗೆ ಹೋಗಿದ್ದಾಗ ಅಲ್ಲಿಯ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿ ಬಂದು ವಿವಿ ಸ್ಥಾಪಿಸುವಂತೆ ಮುಕ್ತ ಅವಕಾಶ ನೀಡಿದ್ದಾರೆ. ನಮ್ಮ ಸಂಸ್ಕೃತಿಗೆ ನಮ್ಮ ಸಂವಿಧಾನಕ್ಕೆ ಬದ್ಧವಾದ ಶಿಕ್ಷಣ ನಮ್ಮ ಉದ್ದೇಶ ಆಗಿರಬೇಕು. ಜಗತ್ತಿಗೆ ಶೈಕ್ಷಣಿಕವಾಗಿ ಈ ದೇಶ ಮತ್ತು ಈ ರಾಜ್ಯ ಸಾಕಷ್ಟು ಮೇದಾವಿಗಳನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ನೀಡಿದೆ ಎಂಬುದನ್ನು ನಾವು ಮರೆಯಬಾರದು. ಆದರೆ ದೇಶದ ಸರ್ಕಾರಿ ವಿಶ್ವವಿದ್ಯಾಲಯಗಳನ್ನು ಖಾಸಗೀಕರಣಗೊಳಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಇತಿಶ್ರೀ ಹಾಡುವ ಹುನ್ನಾರ ಕೇಂದ್ರ ಸರ್ಕಾರದ ಧೋರಣೆಯಾದಂತಿದೆ. ಹಾಗಾಗಿಯೇ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿರುವ ಕಡೆ ಈ ರೀತಿ ಅನಾಹುತಗಳನ್ನು ಸೃಷ್ಟಿಸಲು ಹೊರಟಿದೆ ಎಂದು ಹೆಚ್.ಎ ವೆಂಕಟೇಶ್ ವಾಗ್ದಾಳಿ ನಡೆಸಿದರು.
ಒಂದು ವಿಶ್ವವಿದ್ಯಾಲಯಕ್ಕೆ ಹಾಸ್ಟೆಲ್ ಇರಬೇಕು, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡುವ ಶಕ್ತಿ ಇರಬೇಕು. ಮೂಲಭೂತ ಸೌಕರ್ಯಗಳಿರಬೇಕು ಅದು ಯಾವುದನ್ನೂ ಕಲ್ಪಿಸದೆ ಹೆಸರಿಗೊಂದು ವಿಶ್ವವಿದ್ಯಾಲಯ ರಚನೆ ನ್ಯಾಯ ಬದ್ಧವಲ್ಲ. ಇದರಿಂದ ನಮ್ಮ ಪಾರಂಪರಿಕ ವಿಶ್ವವಿದ್ಯಾಲಯಗಳ ಮೇಲು ಬಾರಿ ಪರಿಣಾಮ ಬೀಳತೊಡಗಿದೆ. ಅವುಗಳ ಅಸ್ತಿತ್ವಗಳು ಕಳೆದುಹೋಗುವ ಮುನ್ನ ಸರ್ಕಾರ ಎಚ್ಚೆತ್ತುಕೊಂಡು ಕಾರ್ಯಪ್ರವೃತ್ತರಾಗುವುದು ಒಳಿತು ಎಂದು ಸಲಹೆ ನೀಡಿದರು.
ಈ ಹೊಸ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯತೊಡಗಿದೆ. ಮೂಲಭೂತ ಸೌಕರ್ಯಗಳಿಲ್ಲದೆ , ವಿದ್ಯಾರ್ಥಿಗಳಿಗೆ ಬೋಧಕ ಸಿಬ್ಬಂದಿ ಇಲ್ಲದೆ ತೊಂದರೆಗಳಾಗಿವೆ. ಈ ನಿಟ್ಟಿನಲ್ಲಿ ಈ ಒಂಬತ್ತು ವಿಶ್ವವಿದ್ಯಾಲಯಗಳನ್ನು ಸರ್ಕಾರ ಮುಚ್ಚುವುದೇ ಆದರೆ ಆದಷ್ಟು ಬೇಗ ಮುಚ್ಚಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುವಂತೆ ಪಾರಂಪರಿಕ ವಿಶ್ವವಿದ್ಯಾಲಯಗಳ ಆರ್ಥಿಕ ಸ್ಥಿತಿಗತಿಗಳಿಗೆ ಬಲ ತುಂಬಬೇಕು ಎಂದರು.
Key words: Government, decision, close, 9 universities, welcome, H.A. Venkatesh, mysore