ಬೆಂಗಳೂರು:ಜುಲೈ-7:(www.justkannada.in) ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಶಾಸಕರ ಕ್ಷಿಪ್ರ ಕ್ರಾಂತಿ ಆರಂಭವಾಗಿದ್ದು, ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್-ಜೆಡಿಎಸ್ ನಾಯಕರು ಸಕಲ ಪ್ರಯತ್ನ ನಡೆಸಿದ್ದಾರೆ. ಈ ನಡುವೆ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡುವುದಾದರೆ ಸರ್ಕಾರಕ್ಕೆ ಜೆಡಿಎಸ್ ಬೆಂಬಲ ವಾಪಸ್ ಪಡೆಯುವುದಾಗಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಖಡಕ್ ಆಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಬೆಂಗಳೂರಿನ ಪದ್ಮನಾಭನಗರದ ಎಚ್.ಡಿ.ದೇವೇಗೌಡ ಅವರ ನಿವಾಸಕ್ಕೆ ಟ್ರಬಲ್ ಶೂಟರ್, ಸಚಿವ ಡಿ.ಕೆ.ಶಿವಕುಮಾರ್ ಭೇಟಿ ನೀಡಿ ಸರ್ಕಾರ ಉಳಿವಿನ ಬಗ್ಗೆ ಹಾಗೂ ರೆಬಲ್ ಶಾಸಕರ ಮನವೊಲಿಕೆ ನಿಟ್ಟಿನಲ್ಲಿ ಸಭೆ ನಡೆಸಿದರು. ಈ ವೇಳೆ ಎಚ್.ಡಿ.ದೇವೇಗೌಡರು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಅವರ ಶಿಷ್ಯರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.
ಸಿಎಂ ಹುದ್ದೆ ಬದಲಾವಣೆ ಕುರಿತು ಕೆಲವರು ಹೇಳಿಕೆ ನಿಡುತ್ತಿದ್ದಾರೆ. ಅಲ್ಲದೇ ಕೆಲ ಶಾಸಕರು ಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎನ್ನುತ್ತಿದ್ದಾರೆ ಎಂದು ಸಚಿವ ಡಿ.ಕೆ ಶಿವಕುಮಾರ್, ದೇವೇಗೌಡರ ಮುಂದೆ ವಿಷಯ ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಗೌಡರು, ಸಿದ್ದರಾಮಯ್ಯನವರನ್ನು ಸಿಎಂ ಮಾಡುವುದಾದರೆ ಸರ್ಕಾರಕ್ಕೆ ಜೆಡಿಎಸ್ ಬೆಂಬಲ ನೀಡಲು ಸಾಧ್ಯವೇ ಇಲ್ಲ. ಇಷ್ಟೆಲ್ಲ ಆಗುತ್ತಿರುವುದೇ ಸಿದ್ದರಾಮಯ್ಯರಿಂದ ಎಂದು ಗುಡುಗಿದ್ದಾರೆ.
ಯಾರೋ ನಾಲ್ಕಾರು ಶಾಸಕರು ಹೇಳಿದ ಮಾತ್ರಕ್ಕೆ ಅವರನ್ನು ಸಿಎಂ ಮಾಡಲು ಆಗುತ್ತಾ? ಸಿದ್ದರಾಮಯ್ಯ ಅವರ ಶಿಷ್ಯಂದಿರೇ ಈಗ ರಾಜೀನಾಮೆ ನಿಡಿರುವುದು. ಈಗ ಅವರ ಮೂಲಕ ಸಿದ್ದರಾಮಯ್ಯ ಹೀಗೆ ಹೇಳಿಸ್ತಿದ್ದಾರೆ. ಆರಂಭದಿಂದಲೂ ಇದನ್ನೆಲ್ಲ ಅವರೇ ಮಾಡುತ್ತಿದ್ದಾರೆ ಎಂದೂ ಗೊತ್ತು. ನಮ್ಮವರು ಯಾರೂ ಇದಕ್ಕೆ ಒಪ್ಪಲ್ಲ. ಸಿದ್ದರಾಮಯ್ಯ ಸಿಎಂ ಆಗುವುದಾದರೆ ನಮ್ಮ ಬೆಂಬಲ ವಾಪಸ್ ಪಡೆಯುತ್ತೇವೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.