ಡಿಸೆಂಬರ್ ಡೆಡ್​ಲೈನ್: ಸರ್ಕಾರದಿಂದ ಹೊರಬಂದು ಪ್ರತಿಪಕ್ಷದಲ್ಲಿ ಕೂರಲು ಕೈಪಡೆ ತೀರ್ಮಾನ

ಬೆಂಗಳೂರು:ಜೂ-23: ಲೋಕಸಭೆ ಚುನಾವಣೆಯ ಹೀನಾಯ ಸೋಲಿನ ಬಳಿಕ ಜೆಡಿಎಸ್ ಜತೆಗಿನ ದೋಸ್ತಿಗೆ ತೆರೆ ಎಳೆದು ಪ್ರತಿಪಕ್ಷದಲ್ಲಿ ಕೂರುವ ಗಟ್ಟಿ ತೀರ್ವನಕ್ಕೆ ಬಂದಿರುವ ಕಾಂಗ್ರೆಸ್ ಇದಕ್ಕಾಗಿ ಡಿಸೆಂಬರ್ ಡೆಡ್​ಲೈನ್ ಹಾಕಿಕೊಂಡಿದೆ. ಆ ಮೂಲಕ ಸರ್ಕಾರ ಹೆಚ್ಚು ದಿನ ಉಳಿಯಲ್ಲ ಎಂದು ಮಾಜಿ ಪ್ರಧಾನಿ ದೇವೇಗೌಡರು ಎಸೆದಿದ್ದ ಬೌನ್ಸರ್​ಗೆ ಪ್ರತಿಯಾಗಿ ಸದ್ದಿಲ್ಲದೆ ಗೂಗ್ಲಿ ಅಸ್ತ್ರ ಪ್ರಯೋಗಿಸುವ ಪ್ರಯತ್ನ ಆರಂಭಿಸಿದೆ.

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯುವ ಏಕೈಕ ಉದ್ದೇಶದಿಂದ ತರಾತುರಿಯಲ್ಲಿ ಸಮ್ಮಿಶ್ರ ಸರ್ಕಾರಕ್ಕೆ ಒಲವು ತೋರಿಸಿದ್ದ ಕಾಂಗ್ರೆಸ್​ಗೆ ಇದೀಗ ತನ್ನ ತಪ್ಪಿನ ಪಶ್ಚಾತ್ತಾಪವಾಗಿದೆ. ಸರ್ಕಾರ ಇದ್ದರೆಷ್ಟು ಹೋದರೆಷ್ಟು ಎಂಬ ನಿರ್ಧಾರಕ್ಕೆ ಬಂದಿದೆ. ಅದರ ಪರಿಣಾಮವೇ ಸರ್ಕಾರದ ಆಯಸ್ಸು ಎಷ್ಟು ದಿನ ಎಂಬುದನ್ನು ಲೆಕ್ಕ ಹಾಕುವ ಮಟ್ಟಿಗೆ ಸಿಡಿದೆದ್ದಿದೆ. ಈವರೆಗೆ ಒಂದು ವರ್ಷದವರೆಗೆ ಸರ್ಕಾರ ಇರಬಹುದೆಂಬ ಭಾವನೆ ಇತ್ತಾದರೂ ಈಗಿನ ಪರಿಸ್ಥಿತಿಯಲ್ಲಿ ಡಿಸೆಂಬರ್ ದಾಟುವುದೂ ಅನುಮಾನ ಎಂಬ ಸನ್ನಿವೇಶ ಮೂಡಿದೆ. ಸರ್ಕಾರದಲ್ಲಿ ಮುಂದುವರಿಯುವ ಅಥವಾ ಹೊರಬರುವ ವಿಚಾರಕ್ಕೆ ಸಂಬಂಧಿಸಿದಂತೆಯೇ ಕಾಂಗ್ರೆಸ್​ನಲ್ಲಿ ಎರಡು ಗುಂಪುಗಳಿವೆ. ಲೋಕಸಭಾ ಚುನಾವಣೆಯಲ್ಲಿ ಎದ್ದಿರುವ ಪ್ರಧಾನಿ ನರೇಂದ್ರ ಮೋದಿ ಅಲೆ ತಗ್ಗುವ ತನಕ ಸರ್ಕಾರ ಮುಂದುವರಿಸಿಕೊಂಡು ಹೋಗುವುದು ಉತ್ತಮವೆಂಬುದು ಒಂದು ಗುಂಪಿನ ವಾದವಾದರೆ, ಬಿಜೆಪಿ ಅಧಿಕಾರ ಹಿಡಿದರೂ ಸರಿಯೇ ನಾವು ಪ್ರತಿಪಕ್ಷದಲ್ಲಿ ಕುಳಿತೇ ಪಕ್ಷ ಸಂಘಟಿಸಿ ಚುನಾವಣೆಗೆ ಸಿದ್ಧರಾಗೋಣ ಎಂಬುದು ಮತ್ತೊಂದು ಗುಂಪಿನ ಅಭಿಪ್ರಾಯವಾಗಿದೆ.

ಕಾರ್ಯತಂತ್ರವೇನು?: ಆಪರೇಷನ್ ಕಮಲದ ಮೂಲಕ ಬಿಜೆಪಿ ಸರ್ಕಾರ ರಚನೆಗೆ ಪ್ರಯತ್ನ ನಡೆಸುತ್ತಿದ್ದರೂ ಕಾಂಗ್ರೆಸ್ ಈವರೆಗೆ ಆ ಪ್ರಯತ್ನ ತಡೆಯುವಲ್ಲಿ ಯಶಸ್ವಿಯಾಗಿದೆ. ಆದರೆ ಇನ್ನು ಮುಂದೆ ತಡೆಯುವ ಪ್ರಯತ್ನ ನಡೆಸದೆ ಡಿಸೆಂಬರ್ ಅಥವಾ ಮುಂದಿನ ವರ್ಷದ ಮಾರ್ಚ್ ಒಳಗೆ ಬಿಜೆಪಿ ಸರ್ಕಾರ ರಚನೆಯಾಗುವ ಪರಿಸ್ಥಿತಿ ನಿರ್ವಣವಾದರೆ ಪ್ರತಿಪಕ್ಷದಲ್ಲಿ ಕೂರಲು ಕಾಂಗ್ರೆಸ್ ನಿರ್ಧರಿಸಿದೆ.

ಬಿಜೆಪಿ ತಾಳ್ಮೆ ಏಕೆ?: ಬಿಜೆಪಿಯ ಸಂಪರ್ಕದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ಈಗಲೂ ಇದ್ದಾರೆ. ಆದರೆ ರಾಜೀನಾಮೆ ನೀಡುತ್ತಿಲ್ಲ. ಕಾಂಗ್ರೆಸ್​ಗಿಂತ ಮೊದಲು ಜೆಡಿಎಸ್​ನವರೇ ಬಿಜೆಪಿಯತ್ತ ಹೋಗಲು ಸಿದ್ಧರಿದ್ದಾರೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಬಿಜೆಪಿ ಹೈಕಮಾಂಡ್​ಗೆ ಈ ಎಲ್ಲ ಮಾಹಿತಿ ಇದ್ದ ಕಾರಣದಿಂದಲೇ ತಾಳ್ಮೆವಹಿಸುವಂತೆ ರಾಜ್ಯ ನಾಯಕರಿಗೆ ಸೂಚನೆ ನೀಡಿದೆ ಎಂದು ಬಿಜೆಪಿ ಮೂಲಗಳು ಹೇಳುತ್ತವೆ.

ತಗ್ಗಿರುವ ಜೆಡಿಎಸ್: ಸಿಎಂ ಕುಮಾರಸ್ವಾಮಿಗೆ ಸರ್ಕಾರ ಬಂದ ಆರಂಭದಲ್ಲಿದ್ದ ಹುರುಪು ಈಗ ಕಾಣುತ್ತಿಲ್ಲ. ಕಾಂಗ್ರೆಸ್ ಎದುರು ಅವರು ಸಾಕಷ್ಟು ತಗ್ಗಿದ್ದಾರೆ. ಆರಂಭದಲ್ಲಿ ಸರ್ಕಾರ ಇದ್ದರೆಷ್ಟು ಹೋದರೆಷ್ಟು ಎಂಬ ಭಾವನೆಯಲ್ಲಿದ್ದ ಜೆಡಿಎಸ್ ಮುಖಂಡರು ಈಗ ಸರ್ಕಾರ ಇರಬೇಕು ಎಂಬ ನಿಲುವಿಗೆ ಬಂದಿದ್ದಾರೆ. ಆದ್ದರಿಂದಲೇ ಕುಮಾರಸ್ವಾಮಿ ಕಾಂಗ್ರೆಸ್​ನ ಎಲ್ಲ ಬೇಡಿಕೆಗಳಿಗೆ ಒಪು್ಪತ್ತಿದ್ದಾರೆ.

ವಿಸರ್ಜನೆಗೆ ಅವಕಾಶ ಇಲ್ಲ: ಕಾಂಗ್ರೆಸ್ ಸರ್ಕಾರದಿಂದ ಹೊರ ಹೋದರೆ ಸಿಎಂ ಕುಮಾರಸ್ವಾಮಿ ವಿಧಾನಸಭೆ ವಿಸರ್ಜನೆಗೆ ಮುಂದಾಗಬಹುದು. ಆದರೆ ಅದಕ್ಕೆ ಅವಕಾಶ ನೀಡದೆ ಇರುವ ನಿರ್ಧಾರವನ್ನೂ ಕಾಂಗ್ರೆಸ್ ಕೈಗೊಂಡಿದೆ ಎನ್ನಲಾಗಿದೆ.

ಹೊರಬರುವುದು ಹೇಗೆ?: ಒಂದು ವೇಳೆ ಬಿಜೆಪಿಯಿಂದ ಸರ್ಕಾರ ರಚನೆ ಸಾಧ್ಯವಾಗದೇ ಇದ್ದಲ್ಲಿ ಯಾವುದಾದರೂ ಗಟ್ಟಿ ವಿಷಯ ಬಳಸಿಕೊಂಡು ಸರ್ಕಾರಕ್ಕೆ ನೀಡಿರುವ ಬೆಂಬಲ ಹಿಂಪಡೆದು ಹೊರಬರುವುದು ಕಾಂಗ್ರೆಸ್​ನ ತಂತ್ರವಾಗಿದೆ. ಇದೆಲ್ಲ ಗೊತ್ತಾಗಿಯೇ ದೇವೇಗೌಡರು ಮಧ್ಯಂತರ ಚುನಾವಣೆಯ ಗುಮ್ಮ ಬಿಟ್ಟಿರುವುದು ಎಂದು ಕಾಂಗ್ರೆಸ್​ನಲ್ಲಿ ಚರ್ಚೆಯಾಗುತ್ತಿದೆ.

ಸಂಘಟನೆಯತ್ತ ಒತ್ತು: ಪಕ್ಷವನ್ನು ಬಲಿಷ್ಠವಾಗಿ ಕಟ್ಟುವ ಬಗ್ಗೆಯೂ ಕಾಂಗ್ರೆಸ್​ನಲ್ಲಿ ಚರ್ಚೆಯಾಗುತ್ತಿದೆ. ಪದಾಧಿಕಾರಿಗಳು ಹಾಗೂ ವಿವಿಧ ಘಟಕಗಳನ್ನು , ಸಂಘಟನಾಶಕ್ತಿ ಇರುವ ಮುಖಂಡರನ್ನು ಸೇರಿಸಿ ಪುನಾರಚನೆ ಮಾಡುವುದರ ಜತೆಗೆ ಅನ್ಯಪಕ್ಷದಲ್ಲಿರುವ ಕಾರ್ಯಕರ್ತರನ್ನು ಮತ್ತೆ ಪಕ್ಷದತ್ತ ಕರೆತರುವುದಕ್ಕೆ ಒತ್ತು ನೀಡಲಾಗುತ್ತದೆ. ಜಾತಿವಾರು ಸಂಘಟನೆಯ ಜತೆಜತೆಗೆ ಇಂದಿನ ಅಗತ್ಯಕ್ಕೆ ಪೂರಕವಾಗಿ ಆದ್ಯತೆ ನೀಡಿ ಪಕ್ಷ ಕಟ್ಟಲು ಯೋಜನೆ ರೂಪಿಸಲಾಗಿದೆ.

ಮೈತ್ರಿ ಸರ್ಕಾರ ಸುಭದ್ರವಾಗಿ ನಡೆಯಲು ಕಾಂಗ್ರೆಸ್ ಸಹಕಾರ ನೀಡಬೇಕು. ಅನಗತ್ಯ ಟೀಕೆ ಮಾಡುವುದು ಸರಿಯಲ್ಲ. ಶೇ.70 ನಿಗಮ ಮತ್ತು ಮಂಡಳಿಗಳು ಕಾಂಗ್ರೆಸ್ ಕೈಯಲ್ಲಿ ಇವೆ. ಕಾಂಗ್ರೆಸ್​ನವರಿಗೆ ಅಧಿಕಾರದಲ್ಲಿ ಮುಂದುವರಿಯಲು ಇಷ್ಟವಿಲ್ಲದಿದ್ದರೆ ಬಿಟ್ಟು ಹೋಗಲಿ.

| ಎಚ್. ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷ

ಕೈಕಮಾಂಡ್​ಗೆ ಮನವರಿಕೆ

* ಕಾಂಗ್ರೆಸ್​ಗಿಂತ ಜೆಡಿಎಸ್ ಮಂತ್ರಿಗಳೇ ಪವರ್​ಫುಲ್, ಎಲ್ಲದರಲ್ಲೂ ಹಸ್ತಕ್ಷೇಪ
* ಜೆಡಿಎಸ್ ದಿನೇದಿನೆ ಬಲಿಷ್ಠವಾಗುತ್ತಿದೆ, ನಮ್ಮ ಪಕ್ಷ ಸೊರಗುತ್ತಿದೆ
* ಮೈತ್ರಿಯಿಂದಾಗಿ ಕಾರ್ಯಕರ್ತರು ಬಿಜೆಪಿಯತ್ತ ಹೋಗಿದ್ದಾರೆ
* ಸರ್ಕಾರ ಇದ್ದರೂ ಲೋಕಸಭಾ ಚುನಾವಣೆಯಲ್ಲಿ ಅನುಕೂಲವಾಗಲಿಲ್ಲ
* ಆಡಳಿತ ವಿರೋಧಿ ಅಲೆ ನಮ್ಮತ್ತ ಬೀಸುತ್ತದೆ
* ಪಕ್ಷದ ಸ್ಥಳೀಯ ಘಟಕಗಳೆಲ್ಲ ಮೈತ್ರಿಗೆ ವಿರೋಧ ಮುಂದುವರಿಸಿವೆ
* ಪ್ರತಿಪಕ್ಷದಲ್ಲಿ ಕೂತು ಪಕ್ಷ ಸಂಘಟನೆ ಮಾಡೋಣ

ಕಾರಣಗಳೇನು?

ಮೈತ್ರಿಯಿಂದ ಉಪಯೋಗವಾಗುತ್ತದೆ ಎಂಬುದು ಜೆಡಿಎಸ್ ಮುಖಂಡರು ಹಾಗೂ ಕಾಂಗ್ರೆಸ್​ನ ಒಂದು ಗುಂಪಿನ ವಾದವಾಗಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ಮೈತ್ರಿಯಿಂದಾಗಿಯೇ ಮತಗಳು ಪರಸ್ಪರ ವರ್ಗಾವಣೆಯಾಗದೆ ಬಿಜೆಪಿಗೆ ಅನುಕೂಲವಾಯಿತು.

ಮೈತ್ರಿ ಸರ್ಕಾರ ಹೆಚ್ಚು ದಿನ ಮುಂದುವರಿದಷ್ಟೂ ಆಡಳಿತ ವಿರೋಧಿ ಅಲೆ ಜೆಡಿಎಸ್​ಗಿಂತ ಕಾಂಗ್ರೆಸ್ ಕಡೆಗೆ ಹೆಚ್ಚು ತಿರುಗುತ್ತದೆ. ಆದ್ದರಿಂದ ಮುಂದಿನ ಚುನಾವಣೆಗೆ ಪಕ್ಷದ ಸ್ಥಿತಿ ಇನ್ನಷ್ಟು ತಳಮುಟ್ಟುತ್ತದೆ. ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಸರ್ಕಾರದಿಂದ ಹೊರಬರುವ ನಿರ್ಧಾರಕ್ಕೆ ಈಗಾಗಲೇ ಹೈಕಮಾಂಡನ್ನು ಒಪ್ಪಿಸಿರುವುದಾಗಿ ಕಾಂಗ್ರೆಸ್ ಮೂಲಗಳು ಖಚಿತಪಡಿಸಿವೆ.

ದನಿ ಎತ್ತಿದ ಮೊಯ್ಲಿ

ಜೆಡಿಎಸ್ ಜತೆಗಿನ ಮೈತ್ರಿಗೆ ರಾಹುಲ್ ಗಾಂಧಿ ಹಸಿರುನಿಶಾನೆ ತೋರಿದ್ದರಿಂದ ಈವರೆಗೂ ಹಿರಿಯ ಮುಖಂಡರಾರೂ ದನಿ ಎತ್ತಿರಲಿಲ್ಲ. ಆದರೆ ಯಾವಾಗ ಸರ್ಕಾರದಿಂದ ಆದಷ್ಟು ಬೇಗ ಹೊರಬರುವ ನಿರ್ಧಾರಕ್ಕೆ ಬರಲಾಗಿದೆಯೋ ಒಬ್ಬೊಬ್ಬರೇ ಮೈತ್ರಿ ವಿರುದ್ಧ ಗುಡುಗುತ್ತಿದ್ದಾರೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹೈಕಮಾಂಡ್ ಜತೆ ಮಾತನಾಡಿಕೊಂಡು ಬಂದ ನಂತರ ಮೊದಲ ಬಾರಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಸರ್ಕಾರದ ವಿರುದ್ಧ ಒಳ್ಳೆಯ ಅಭಿಪ್ರಾಯವಿಲ್ಲ ಎಂದು ದನಿ ಎತ್ತಿದ್ದಾರೆ.

ಕಳಪೆ ಸಾಧನೆಗೆ ಮೈತ್ರಿಯೇ ಕಾರಣ

ಚಿಕ್ಕಬಳ್ಳಾಪುರ: ‘ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನ ಕಳಪೆ ಸಾಧನೆಗೆ ಜೆಡಿಎಸ್ ಜತೆಗಿನ ಮೈತ್ರಿಯೇ ಕಾರಣ. ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧಿಸಿದ್ದರೆ ಕನಿಷ್ಠ 12ರಿಂದ 16 ಸೀಟು ಗೆಲ್ಲಬಹುದಿತ್ತು. ಇನ್ನೂ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಂಡರೆ ಕಾಂಗ್ರೆಸ್ಗೇ ನಷ್ಟ’ ಇದು ಮಾಜಿ ಸಿಎಂ, ಕಾಂಗ್ರೆಸ್​ನ ಹಿರಿಯ ನಾಯಕ ವೀರಪ್ಪ ಮೊಯ್ಲಿ ಕಟುನುಡಿ. ಶನಿವಾರ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು ಸರ್ಕಾರದ ವಿರುದಟಛಿ ಹರಿಹಾಯ್ದರು. ಸಮ್ಮಿಶ್ರ ಸರ್ಕಾರ ಜನರ ಭಾವನೆಗಳಿಗೆ ಸ್ಪಂದಿಸುತ್ತಿಲ್ಲ. ಅಧಿಕಾರ ಉಳಿಸಿಕೊಳ್ಳುವುದಕ್ಕೆ ಸೀಮಿತವಾಗಿದೆ. ಮೈತ್ರಿಯನ್ನು ಹೆಚ್ಚಿಗೆ ನಂಬಿದ ಹಿನ್ನೆಲೆಯಲ್ಲಿ ನಾನು ಕ್ಷೇತ್ರದಲ್ಲಿ ಸೋಲಬೇಕಾಯಿತು. ಪಕ್ಷದ ನಾಯಕರು ಸೋಲಿನ ಆತ್ಮಾವಲೋಕನ ಮಾಡಿಕೊಳ್ಳುತ್ತಿಲ್ಲ. ಈಗಲಾದರೂ ಲೋಪಗಳನ್ನು ಸರಿಪಡಿಸಿ ಪಕ್ಷ ಸಂಘಟನೆಗೆ ಮುಂದಾಗಬೇಕು. ದೇವೇಗೌಡರು ವರಸೆ ಬದಲಾಯಿಸುವುದರಲ್ಲಿ ನಿಸ್ಸೀಮರು. ಇಂದು ಒಂದು ಮಾತು, ನಾಳೆ ಮತ್ತೊಂದು ಹೇಳಿಕೆ ಕೊಡುತ್ತಾರೆ. ಹಾಗೆಯೇ ವಾಪಸ್ ಕೂಡ ತೆಗೆದುಕೊಳ್ಳುತ್ತಾರೆ. ನಾನು ಕೊಟ್ಟ

ಮುಂದೇನು?

* ಸರ್ಕಾರದಲ್ಲಿ ಪರಸ್ಪರ ಅಪನಂಬಿಕೆ ಇನ್ನಷ್ಟು ಹೆಚ್ಚಬಹುದು
* ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ತೀವ್ರಗೊಳ್ಳಬಹುದು
* ವಿಧಾನಸಭೆ ವಿಸರ್ಜನೆಗೂ ಪ್ರಯತ್ನ ನಡೆಸಬಹುದು
* ಬಿಜೆಪಿ ತನ್ನ ಹಕ್ಕು ಮಂಡಿಸಿ ಸರ್ಕಾರ ರಚನೆಗೆ ಮುಂದಾಗಬಹುದು
* ರಾಷ್ಟ್ರಪತಿ ಆಡಳಿತ ಜಾರಿಯಾದರೂ ಆಗಬಹುದು
* ಜೆಡಿಎಸ್ ಕಾಂಗ್ರೆಸ್​ಗೆ ಸಿಎಂ ಹುದ್ದೆ ಬಿಟ್ಟು ಕೊಡಬಹುದು
* ದಲಿತ ಸಿಎಂ ಹೆಸರಿನಲ್ಲಿ ಖರ್ಗೆ ಅಥವಾ ಪರಮೇಶ್ವರ್ ಕೂರಿಸುವ ದಾಳ ಉರುಳಬಹುದು
ಕೃಪೆ:ವಿಜಯವಾಣಿ

ಡಿಸೆಂಬರ್ ಡೆಡ್​ಲೈನ್: ಸರ್ಕಾರದಿಂದ ಹೊರಬಂದು ಪ್ರತಿಪಕ್ಷದಲ್ಲಿ ಕೂರಲು ಕೈಪಡೆ ತೀರ್ಮಾನ
h-d-kumaraswamy-h-d-devegowda-interim-election-jds-congress-siddaramaiah