900 ಕೋಟಿ ರೂ. ಬೆನ್ನು ಹತ್ತಿದ ರೇವಣ್ಣ: ಅಧಿಕಾರಿಗಳ ಸಮಜಾಯಿಷಿಯಿಂದಲೂ ತೃಪ್ತರಾಗದ ಸಚಿವ

ಬೆಂಗಳೂರು:ಜೂ-15: ಲೋಕೋಪಯೋಗಿ ಇಲಾಖೆಯಲ್ಲಿ 900 ಕೋಟಿ ರೂ. ತಮ್ಮ ಕಣ್ಣುತಪ್ಪಿ ಹೆಚ್ಚು ಪಾವತಿ ಯಾಗಿದ್ದು ಹೇಗೆ? ಇಂಥದ್ದೊಂದು ಅನುಮಾನದ ಹುಳು ಸಚಿವ ಎಚ್.ಡಿ.ರೇವಣ್ಣ ತಲೆ ಹೊಕ್ಕಿದೆ. ಅಲ್ಲದೆ, ಏನೋ ಹೇರಾಪೇರಿ ನಡೆದಿದೆೆ ಎಂಬ ಅನುಮಾನದಲ್ಲಿ ಅವರು ಅಧಿಕಾರಿಗಳಿಂದ ವರದಿಯನ್ನೂ ಕೇಳಿದ್ದಾರೆ.

ರಾಜ್ಯದ ಹೆದ್ದಾರಿ ಅಭಿವೃದ್ಧಿಗೆ ಮೂರು ಪ್ಯಾಕೇಜ್​ಗಳಲ್ಲಿ 6,438 ಕೋಟಿ ರೂ.ಗೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿತ್ತು. ಅಂತಿಮವಾಗಿ ಈ ಕೆಲಸಕ್ಕಾಗಿ 7,961 ಕೋಟಿ ರೂ. ಪಾವತಿಸಿತ್ತು. ಅಂದರೆ ಬರೋಬ್ಬರಿ 900 ಕೋಟಿ ರೂ. ಹೆಚ್ಚುವರಿ ನೀಡಿಕೆ. ಈ ಸಂಬಂಧ ಇಲಾಖೆಯಲ್ಲಿ ಚರ್ಚೆಯಾಗಿತ್ತಲ್ಲದೆ, ಚುನಾವಣೆ ವೆಚ್ಚಕ್ಕೆ ಬಳಕೆಯಾಗಿರಬಹುದು, ಕಿಕ್ ಬ್ಯಾಕ್ ಆಗಿರಬಹುದು ಎಂದು ಎಂಬಿತ್ಯಾದಿ ಮಾತುಗಳೂ ಕೇಳಿಬಂದಿದ್ದವು. ಸರ್ಕಾರದ ಮೈತ್ರಿ ಪಕ್ಷ ಕಾಂಗ್ರೆಸ್ ಗಮನಕ್ಕೂ ಬಂದು, ಕೈ ನಾಯಕರ ನಾಲಿಗೆಯಲ್ಲಿ 900 ಕೋಟಿ ರೂ. ಮಾತುಗಳು ಹರಿದಾಡಿತ್ತು. ಇದರಿಂದ ಎಚ್.ಡಿ. ರೇವಣ್ಣ ಸಿಡಿಮಿಡಿಗೊಂಡಿದ್ದಾರೆ ಎನ್ನಲಾಗಿದೆ.

ಅಧಿಕಾರಿಗಳು ಹಾಗೂ ಕಾಂಗ್ರೆಸ್ ಸಚಿವರು ಒಟ್ಟಿಗಿದ್ದ ಸಂದರ್ಭದಲ್ಲೇ ಈ ವಿಚಾರ ಪ್ರಸ್ತಾಪವಾಗಿದ್ದು, ಇದು ನನ್ನ ಅವಧಿಯಲ್ಲಿ ಆಗಿದ್ದಲ್ಲ. ಏಕೆ 900 ಕೋಟಿ ರೂ. ಹೆಚ್ಚುವರಿಯಾಗಿ ಖರ್ಚಾಗಿದೆ ಎಂದು ವರದಿ ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ರೇವಣ್ಣ ಹೇಳಿಕೊಂಡಿದ್ದರು. ವಿಶೇಷವೆಂದರೆ, ಸಮಗ್ರ ತನಿಖೆ ನಡೆಸಿ ಸಿಎಂಗೆ ವರದಿ ಕಳಿಸುವುದಕ್ಕೂ ಸಿದ್ಧತೆ ನಡೆಸಿದ್ದರೆಂದು ಉನ್ನತ ಮೂಲಗಳು ತಿಳಿಸಿವೆ.

ಇಲಾಖೆಯಲ್ಲಿ ನನ್ನ ಗಮನಕ್ಕೆ ಬಾರದೆ ಹಣ ಪಾವತಿ ಆಗಿದ್ದೇಗೆ ಎಂಬ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿರುವ ರೇವಣ್ಣ, ಇದು ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಾದ ತೀರ್ಮಾನ ಎಂಬ ಸ್ಪಷ್ಟ ನಿಲುವು ಹೊಂದಿದ್ದಾರೆ. ರೇವಣ್ಣರ ಈ ಗೊಂದಲ ಮುಖ್ಯಕಾರ್ಯದರ್ಶಿ ಗಮನಕ್ಕೂ ಬಂದಿದ್ದು, ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಗಳಿಂದ ಖರ್ಚಿನ ವಿವರ ಕೊಡಿಸಿದ್ದಾರೆ. ರಸ್ತೆ ನಿರ್ವಣದ ವೇಳೆ ಮೂಲಸೌಕರ್ಯ ಅಭಿವೃದ್ಧಿ, ಭೂ ಸ್ವಾಧೀನ, ಬೀದಿಬದಿ ವಿದ್ಯುತ್ ಕಂಬಗಳು ಹಾಗೂ ಕೇಬಲ್ ವರ್ಗಾವಣೆಯಂಥ ಕೆಲಸಕ್ಕೆ ಹೆಚ್ಚು ವೆಚ್ಚವಾಗಿದೆ. ಇದರಲ್ಲಿ ಯಾವುದೇ ಗೊಂದಲ ಬೇಡ ಎಂದು ತಿಳಿಸಲು ಪ್ರಯತ್ನಿಸಿದ್ದಾರೆ. ಆದರೆ, ರೇವಣ್ಣರ ತಲೆಯಿಂದ ಅನುಮಾನದ ಹುಳು ಮಾತ್ರ ಇನ್ನೂ ಹೋಗಿಲ್ಲ ಎನ್ನಲಾಗಿದೆ.
ಕೃಪೆ:ವಿಜಯವಾಣಿ

900 ಕೋಟಿ ರೂ. ಬೆನ್ನು ಹತ್ತಿದ ರೇವಣ್ಣ: ಅಧಿಕಾರಿಗಳ ಸಮಜಾಯಿಷಿಯಿಂದಲೂ ತೃಪ್ತರಾಗದ ಸಚಿವ
h-d-revanna-pwd-department-kick-back-road-construction-state-govt-road-project