ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ: ದುಂದು ವೆಚ್ಚ, ಫಲಿತಾಂಶ ಶೂನ್ಯ – ಹೆಚ್.ವಿಶ್ವನಾಥ್ ಟೀಕೆ

ಮೈಸೂರು,ಏಪ್ರಿಲ್,25,2025 (www.justkannada.in) : ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ನಡೆಯನ್ನ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಟೀಕಿಸಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್.ವಿಶ್ವನಾಥ್, ನಿನ್ನೆ ಸಿಎಂ ಸಿದ್ದರಾಮಯ್ಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಮಾಡಿದ್ದಾರೆ. ಈ ಹಿಂದೆಯೂ ಯಡಿಯೂರಪ್ಪ, ಸಿದ್ದರಾಮಯ್ಯ ಇಬ್ಬರೂ ಕೂಡ ಬೇರೆ ಬೇರೆ ಕಡೆ ಸಚಿವ ಸಂಪುಟ ಸಭೆ ಮಾಡಿದ್ದರು. ಆದರೆ ಫಲಿತಾಂಶ ಮಾತ್ರ ಶೂನ್ಯ. ಸಚಿವ ಸಂಪುಟ ಸಭೆ ಮಾಡಿರುವುದರಿಂದ ದುಂದು ವೆಚ್ಚವಾಗಿದೆ. ಕಾವೇರಿ ಆರತಿ ಮಾಡುವುದಾಗಿ ಹೇಳಿದ್ದಾರೆ. ಇದಕ್ಕಾಗಿ 93 ಕೋಟಿ ನೀಡುವುದಾಗಿ ಘೋಷಿಸಿದ್ದಾರೆ. ಕೆಆರ್ ಎಸ್ ಈ ಹಿಂದೆ ಇದ್ದ ರೀತಿ ಇದೆಯಾ? ಯೋಜನೆಗಳಿಗೆ ಹಣ ನೀಡಿದರೆ ಅಧಿಕಾರಿಗಳು ದುರುಪಯೋಗ ಮಾಡಿಕೊಳ್ಳುತ್ತಾರೆ. ಕೆ ಆರ್ ಎಸ್ ಅನ್ನು ನೀರಾವರಿ ಇಲಾಖೆಗ ಬದಲು ಪ್ರವಾಸೋದ್ಯಮ ಇಲಾಖೆಯ ಸುಪರ್ದಿಗೆ ನೀಡಬೇಕು ಎಂದು ಆಗ್ರಹಿಸಿದರು.

ಮೋದಿ‌ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬೆಂಬಲ ನೀಡಬೇಕು

ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಿಂದ 26 ಮಂದಿ ಸಾವನ್ನಪ್ಪಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್,  ಇಡೀ ಇಸ್ಲಾಮಿಕ್ ರಾಷ್ಟ್ರಗಳು ಜಾಗತೀಕವಾಗಿ ಧರ್ಮಾಧಾರಿತವಾಗಿ ನಡೆದುಕೊಳ್ಳುತ್ತಿವೆ. ನೆರೆಯ ಪಾಕಿಸ್ತಾನ ಕೂಡ ಧರ್ಮಾಧಾರಿತ ದೇಶವಾಗಿದೆ. ಅಲ್ಲಿ ಧರ್ಮದ ಆಧಾರದ ಮೇಲೆ ಆಡಳಿತ ನಡೆಯುತ್ತಿದೆ. ನಮ್ಮದು ಜಾತ್ಯಾತೀತ ರಾಷ್ಟ್ರವಾಗಿದೆ. ಕಾಶ್ಮೀರ ಕಣಿವೆಯಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ. ಮೋದಿ‌ ತೆಗೆದುಕೊಳ್ಳುವ ನಿರ್ಧಾರಕ್ಕೆ ಎಲ್ಲರೂ ಬೆಂಬಲ ನೀಡಬೇಕು ಎಂದರು.

ಹಾಗೆಯೇ ಉಗ್ರರ ದಾಳಿ ಕುರಿತು ರಾಬರ್ಟ್ ವಾದ್ರಾ ನೀಡಿರುವ ಹೇಳಿಕೆ ಅಪ್ರಸ್ತುತ. ಪ್ರಿಯಾಂಕಾ ಗಾಂಧಿ ಪತಿ ಎಂಬ ಕಾರಣಕ್ಕೆ ವಾದ್ರಾ ಏನೇನೋ ಮಾತನಾಡಬಾರದು ಎಂದು ಹೆಚ್.ವಿಶ್ವನಾಥ್ ಕಿಡಿಕಾರಿದರು.

ಮೈಸೂರಿನಲ್ಲಿ  ರಸ್ತೆ ವೈಟ್ ಟ್ಯಾಪಿಂಗ್ ಮಾಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ವಿಶ್ವನಾಥ್, ಲೋ ಲೆವೆಲ್ ಏರಿಯಾದಲ್ಲಿ ವೈಟ್ ಟ್ಯಾಪಿಂಗ್ ಮಾಡಬೇಕು. ಅದನ್ನು ಬಿಟ್ಟು ಮೈಸೂರಿನಲ್ಲಿ ಟ್ಯಾಪಿಂಗ್ ಹೇಗೆ ಮಾಡೋಕೆ ಆಗುತ್ತೆ? ಇದು ಕೂಡ ಲೂಟಿ ಮಾಡುವ ಕೆಲಸ ಅಷ್ಟೆ. ಇದೆಲ್ಲ ಶಾಸಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಘೋಷಣೆ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ ವಿಚಾರ ಕುರಿತು ಮಾತನಾಡಿದ ಹೆಚ್.ವಿಶ್ವನಾಥ್,  ತುಂಬಾ ವರ್ಷಗಳಿಂದ ಸ್ಟೇಡಿಯಂ ಕೂಗು ಕೇಳುತ್ತಿದೆ. ಕ್ರೀಡೆ ದೇಶದ ರಾಜ್ಯದ ಅಭಿವೃದ್ಧಿಗೆ ಸಹಕಾರಿ. ಆರ್ಥಿಕವಾಗಿ ಟೂರಿಸಂ ಬಲಪಡಿಸಲು ಕ್ರೀಡೆ ಬೇಕು ಕ್ರಿಕೆಟ್ ಅನ್ನು ಕೋಟಿ ಕೋಟಿ ಜನ ನೋಡುತ್ತಾರೆ. ಹೀಗಾಗಿ 26 ಎಕರೆ ಭೂಮಿ ಕೊಟ್ಟು ಬೇಗ ಸ್ಟೇಡಿಯಂ ಕೆಲಸ ಆಗಬೇಕು. ಸ್ಟೇಡಿಯಂ ಮಾಡುವ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ಹೆಚ್.ವಿಶ್ವನಾಥ್ ತಿಳಿಸಿದರು.

Key words: Cabinet meeting, Male Mahadeshwara Hill, H. Vishwanath