ಮೈಸೂರು,ಮಾರ್ಚ್,7,2025 (www.justkannada.in): ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಕಂಡರಿತ ಜನತೆಯ ನೋವು, ಸಂಕಷ್ಟ ಅಸಮಾನತೆ ನಿವಾರಿಸಲು ತಮ್ಮ ಈ 16ನೇ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್ಲಾ ಶ್ರಮ ಹಾಕಿರುವುದು ಎದ್ದು ಕಾಣುತ್ತಿದೆ. ಗ್ಯಾರಂಟಿ ಯೋಜನೆಗಳ ನೆರವು ಮತ್ತು ಆಧಾರದೊಂದಿಗೆ ಸರ್ವರನ್ನೂ ಒಳಗೊಂಡ ಕಲ್ಯಾಣ ರಾಜ್ಯ ಕಟ್ಟುವ ಮುಖ್ಯಮಂತ್ರಿಯವರ ಕನಸು ಈ ಬಜೆಟ್ ಮೂಲಕ ನನಸಾಗುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ. ವೆಂಕಟೇಶ್ ನುಡಿದರು.
ರಾಜ್ಯ ಬಜೆಟ್ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಹೆಚ್.ಎ ವೆಂಕಟೇಶ್, ಸಮಾಜದ ಎಲ್ಲಾ ಅಂಗಗಳು, ಎಲ್ಲಾ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧವಾದ ಈ ಬಜೆಟ್ ಗಾತ್ರದಲ್ಲಿಯೂ, ಪರಿಣಾಮ ಮತ್ತು ಗುರಿಯಲ್ಲಿಯೂ ದೊಡ್ಡದಾಗಿದೆ. ಒಬ್ಬ ಯಶಸ್ವೀ ಆಡಳಿತಗಾರನ ದೂರದೃಷ್ಟಿಗೆ ಅನುಗುಣವಾಗಿ ಅಭಿವೃದ್ದಿ ಯೋಜನೆಗಳು ಮತ್ತು ಸಮಭಾವದಿಂದ ತುಂಬಿತುಳುಕುತ್ತಿರುವ ಈ ಬಜೆಟ್ ಕುರಿತು ವಿಪಕ್ಷಗಳ ಟೀಕಾತ್ಮಕ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿವೆ. ಒಳ್ಳೆಯ ಅಂಶಗಳನ್ನು ಶ್ಲಾಘಿಸಬೇಕೆನ್ನುವ ಕನಿಷ್ಠ ಮಾನವೀಯ ಪ್ರಜ್ಞೆಯಿಲ್ಲದಂತೆ ವಿಪಕ್ಷ ನಾಯಕರು ನೀಡುತ್ತಿರುವ ಹೇಳಿಕೆಗಳು ಹಾಸ್ಯಸ್ಪದ. ಆದರೆ ಜನತೆ ಈ ಆಯವ್ಯಯವನ್ನು ಹೃದಯಪೂರ್ವಕವಾಗಿ ಸ್ವಾಗತಿಸಿರುವುದು ಸ್ಪಷ್ಟ ಎಂದು ಹೆಚ್ ಎ ವೆಂಕಟೇಶ್ ಹೇಳಿದ್ದಾರೆ.
ಅನಾರೋಗ್ಯದ ನಡುವೆಯೂ ಮೂರುವರೆ ಗಂಟೆಗಳ ಸುದೀರ್ಘ ಅವಧಿಗೆ ಸಿಎಂ ಬಜೆಟ್ ಮಂಡಿಸಿ ಬದ್ಧತೆ ಮೆರೆದಿದ್ದಾರೆ. ಸಾಮಾಜಿಕ ನ್ಯಾಯಪರವಾಗಿರುವ ಈ ಆಯವ್ಯಯ ಬಂಡವಾಳ ಹೂಡಿಕೆಗೆ ಪೂರಕವಾಗಿದೆ. 4.80 ಲಕ್ಷ ಕೋಟಿ ವೆಚ್ಚದ ಬಜೆಟ್ ನಲ್ಲಿ ಕೇಂದ್ರ ಸರ್ಕಾರದ ತಾರತಮ್ಯವನ್ನು ಸಿಎಂ ಎತ್ತಿ ತೋರಿಸಿದ್ದಾರೆ. ಕೇಂದ್ರದ ಅಸಹಕಾರದ ನಡುವೆಯೂ ದೇಶದಲ್ಲಿ ಬೇರೆಲ್ಲಾ ರಾಜ್ಯಗಳಿಗಿಂತ ಕರ್ನಾಟಕದ ಅಭಿವೃದ್ದಿಯ ವೇಗವು ಹೆಚ್ಚಿದೆ ಎನ್ನುವುದನ್ನು ಸಿಎಂ ಇಲ್ಲಿ ತೋರಿಸಿದ್ದಾರೆ
ಕೃಷಿ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ, ಎಸ್ಸಿ ಎಸ್ಟಿ ಅಭಿವೃದ್ಧಿ, ಅಲ್ಪಸಂಖ್ಯಾತರ ಅಭಿವೃದ್ಧಿ, ನೀರಾವರಿ, ನಗರಾಭಿವೃದ್ಧಿ, ಸಾರಿಗೆ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಸಿಎಂ ಅತ್ಯುತ್ತಮ ಎನಿಸುವ ಯೋಜನೆಗಳನ್ನು ನೀಡಿದ್ದಾರೆ. ತಮ್ಮ ತವರಿಗೆ ರೇಷ್ಮೆ ಮಾರುಕಟ್ಟೆ, ಮತ್ಯದರ್ಶಿನಿ, ಪ್ರೊ. ಎಂಡಿಎನ್ ಅಧ್ಯಯನ ಪೀಠ, ತಗಡೂರು ಆಸ್ಪತ್ರೆ, ಎಂಡೋಕ್ರೈನಾಲಜಿ ಮತ್ತು ಟ್ರಾಮಾ ಕೇರ್ ಸೆಂಟರ್ ಸ್ಥಾಪನೆ, 120 ಕೋಟಿಯ ಹೊಸ ಬಸ್ ನಿಲ್ದಾಣ, ಬುಡಕಟ್ಟು ವಸ್ತು ಸಂಗ್ರಹಾಲಯ ಇನ್ನಿತ್ಯಾದಿ ನೂತನ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಅಪಾರ ಪ್ರೀತಿ ತೋರಿಸಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೆಚ್.ಎ ವೆಂಕಟೇಶ್ ತಿಳಿಸಿದ್ದಾರೆ.
Key words: CM, dream, welfare state, budget, HA Venkatesh