ಬಿಜೆಪಿ ಜನಪರವಾಗಿದ್ದರೆ ಮೊದಲು ಬೆಲೆ ಏರಿಕೆಗೆ ಕುಮ್ಮಕ್ಕು ನೀಡಿರುವ ಕೇಂದ್ರದ ವಿರುದ್ದ ಪ್ರತಿಭಟಿಸಲಿ- ಹೆಚ್.ಎ ವೆಂಕಟೇಶ್

ಮೈಸೂರು,ಏಪ್ರಿಲ್,2,2025 (www.justkannada.in): ರಾಜ್ಯ ಸರ್ಕಾರ ವಿವಿಧ ಬೆಲೆಗಳಲ್ಲಿ ಏರಿಕೆ ಮಾಡಿದೆ ಎಂದು ಆರೋಪ ಮಾಡಿ ಬಿಜೆಪಿಯವರು ನಡೆಸಲು ಹೊರಟಿರುವ ಆಹೋರಾತ್ರಿ ಧರಣಿ ಮತ್ತು ಜನಾಕ್ರೋಶ ರ್ಯಾಲಿಗೆ ಯಾವುದೇ ಮಹತ್ವವಿಲ್ಲ. ಬಿಜೆಪಿ ನಾಯಕರು ನಿಜವಾಗಿಯೂ ಜನಪರವಾಗಿದ್ದರೆ ಬೆಲೆ ಏರಿಕೆಗೆ ಕುಮ್ಮಕ್ಕು ನೀಡಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗಿತ್ತು ಎಂದು ಕೆಪಿಸಿಸಿ ವಕ್ತಾರ ಹೆಚ್.ಎ ವೆಂಕಟೇಶ್ ವಾಗ್ದಾಳಿ ನಡೆಸಿದರು.

ಬಿಜೆಪಿ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ಹೆಚ್.ಎ ವೆಂಕಟೇಶ್,  ಸಾಮಾನ್ಯವಾಗಿ ಎಲ್ಲರಿಗೂ ಅರ್ಥವಾಗುವಂತೆ ಹೈನುಗಾರಿಕೆಯ ಮೂಲವಸ್ತುಗಳ ಬೆಲೆ ಹೆಚ್ಚಳವಾಗಿದೆ. ಈ ಪರಿಸ್ಥಿತಿಯಲ್ಲಿ ಅನ್ನದಾತದ ನೆರವಿಗೆ ನಿಲ್ಲಲು ಹಾಲಿನ ದರ ಏರಿಕೆ ಅನಿವಾರ್ಯ. ಇಂತಹ ಪರಿಸ್ಥಿತಿಯಲ್ಲಿ ದರ ಏರಿಕೆ ವಿರೋಧಿಸುತ್ತಿರುವ ಬಿಜೆಪಿ ನಾಯಕರು ರೈತ ವಿರೋಧಿಗಳೇ ಸರಿ.

ಬಿಜೆಪಿ ನಾಯಕರು ಮನಸ್ಸು ಮಾಡಿದರೆ ಪಶು ಆಹಾರ, ಬೂಸಾ, ಚಿಕಿತ್ಸಾ  ವ್ಯವಸ್ಥೆ ಇತ್ಯಾದಿಗಳಿಗೆ ಕೇಂದ್ರದ ನೆರವು ಹೆಚ್ಚಿಸಿ, ಬೆಲೆ ಏರಿಕೆಗೆ ಕಡಿವಾಣ ಹಾಕಬಹುದು, ಆದರೆ ಇದರ ಬದಲು ಬೀದಿಯಲ್ಲಿ ಧರಣಿಯ ನಾಟಕವಾಡಿ ಅನುಕಂಪಗಿಟ್ಟಿಸಲು ನಾಯಕರು ಮುಂದಾಗಿರುವುದು ಸರಿಯಲ್ಲ ಎಂದು ಕಿಡಿಕಾರಿದರು.

ಕೇಂದ್ರ ಸರ್ಕಾರದ ಪೆಟ್ರೋಲ್ ಡೀಸಲ್ ಮೇಲೆ ಅನಗತ್ಯವಾಗಿ ಹೊರಿಸುತ್ತಿರುವ ತೆರಿಗೆ ಹೊರೆ ಬಗ್ಗೆ ಬಿಜೆಪಿ ನಾಯಕರು ತುಟಿಬಿಚ್ಚುತ್ತಿಲ್ಲ ಉದ್ಯಮಿಗಳ ಪರವಾಗಿರುವ ಕೇಂದ್ರ ಸರ್ಕಾರ ಬಡವರ ಜೇಬಿಗೆ ಕೈಹಾಕಿ ತೆರಿಗೆ ಭಯೋತ್ಪಾದನೆ ಮೂಲಕ ರಾಜ್ಯಗಳ ಹಕ್ಕನ್ನೂ ಕಸಿದುಕೊಳ್ಳುತ್ತಿರುವ ಬಗ್ಗೆ ಇವರು ಉಸಿರೆತ್ತುತ್ತಿಲ್ಲ. ಆದರೂ ರಾಜ್ಯದ ವಿರುದ್ಧ ಪ್ರತಿಭಟನೆಗಿಳಿದಿರುವುದು ನಾಚಿಕೆಗೇಡು . ಮೋದಿ ಸರ್ಕಾರದ ಬಂಡವಾಳಶಾಹಿ ಪರ ಧೋರಣೆಯಿಂದ ದೇಶ ಅಧೋಗತಿಗೆ ಹೋಗಿದೆ. ಈ ಅನ್ಯಾಯ ಸರಿಮಾಡಿ ರಾಜ್ಯಕ್ಕೆ ನ್ಯಾಯಯುತವಾಗಿ ದಕ್ಕ ಬೇಕಾಗಿರುವ ತೆರಿಗೆಯ ಪಾಲನ್ನು ನೀಡಿದರೆ ಬೆಲೆ ಏರಿಕೆಯ ಒತ್ತಡವನ್ನು ರಾಜ್ಯ ಸರ್ಕಾರ ತಗ್ಗಿಸಬಹುದು. ಆದರೆ ಈ ಬಿಸಿ  ಸತ್ಯ ಮುಚ್ಚಿಟ್ಟು ಬಿಜೆಪಿ ನಾಯಕರು ಬೀದಿಯಲ್ಲಿ ಪ್ರತಿಭಟನೆಗಿಳಿಯಲು ಮುಂದಾಗಿರುವುದು ನಾಚಿಕೆಗೇಡು ಎಂದು ಹೆಚ್.ಎ ವೆಂಕಟೇಶ್ ಹರಿಹಾಯ್ದಿದ್ದಾರೆ.

ಇಷ್ಟಕ್ಕೂ ಬೆಲೆ ಏರಿಕೆ ನಡುವೆಯೂ ಸಹ ಹಾಲು ಮೊಸರಿನ ದರ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ಕಡಿಮೆಯೇ ಇದೆ. ಬಿಜೆಪಿ ನಾಯಕರು ರಾಜ್ಯದತ್ತ ಬೊಟ್ಟುಮಾಡುವುದಕ್ಕೂ ಮೊದಲು, ಕೇಂದ್ರದ ಎನ್‌ ಡಿಎ ಸರ್ಕಾರಕ್ಕೆ ಪೆಟ್ರೋಲ್ ಡೀಸಲ್ ದರ ಇಳಿಸಲು ಆಗ್ರಹಿಸಬೇಕಿದೆ. ನಮ್ಮ ರಾಜ್ಯಕ್ಕೆ ಬರಬೇಕಾದ ತೆರಿಗೆಯ ನ್ಯಾಯಯುತ ಪಾಲು ಒದಗಿಸಲು, ಹೆದ್ದಾರಿ ಟೋಲ್ ಕಡಿಮೆ ಮಾಡಲು, ಬೆಂಗಳೂರು ಕಸ ಸಾಗಿಸಲು ವಿಧಿಸಿರುವ ದುಬಾರಿ ಸೆಸ್ ತೆರವುಮಾಡಲೂ ಸಹ ಬಿಜೆಪಿ ನಾಯಕರು ತನ್ನ ಎನ್‌ಡಿಎ ಸರ್ಕಾರವನ್ನು ಆಗ್ರಹಿಸುವುದು ಒಳಿತು ಎಂದು ಹೆಚ್.ಎ ವೆಂಕಟೇಶ್ ಹೇಳಿದರು.

Key words: BJP, protest, against, Center, price hike, HA Venkatesh