ಮೈಸೂರು,ಮೇ,5,2023(www.justkannada.in): ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆ ಪ್ರತಿಯನ್ನ ಸುಟ್ಟು ಹಾಕಿದ ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ವಕ್ತಾರ ಎಚ್.ಎ ವೆಂಕಟೇಶ್ ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿರುವ ಹೆಚ್.ಎ ವೆಂಕಟೇಶ್, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ಬಿಡುಗಡೆ ಮಾಡಿದ ಪ್ರಣಾಳಿಕೆಯನ್ನು ಕಲ್ಬುರ್ಗಿಯ ಪತ್ರಿಕಾ ಗೋಷ್ಠಿಯಲ್ಲಿ ಪ್ರಣಾಳಿಕೆಯನ್ನು ಸುಟ್ಟುಹಾಕುತ್ತಿದ್ದೇನೆ ಎಂದು ಹೇಳಿರುವುದು ಚುನಾವಣೆ ನೀತಿ ಸಂಹಿತೆ ಮತ್ತು ಪ್ರಜಾಪ್ರತಿನಿಧಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಒಂದು ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಟೀಕಿಸಬಹುದೇ ಹೊರತು ಪತ್ರಕರ್ತರು ಎದುರೇ ಸುಟ್ಟಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಡಾ ಜಿ ಪರಮೇಶ್ವರ್ ನೇತೃತ್ವದ ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅನುಭವವನ್ನು ಆಧರಿಸಿ ತಯಾರು ಮಾಡಿದ ಚುನಾವಣಾ ಪ್ರಣಾಳಿಕೆ.
ಬಿಜೆಪಿಯವರು ಚುನಾವಣೆ ಪ್ರಣಾಳಿಕೆಯಲ್ಲಿರುವ ಬಜರಂಗದಳದ ವಿಷಯ ಮಾತ್ರ ಪ್ರಸ್ತಾಪಿಸುತ್ತಿದ್ದಾರೆ. ಆದರೆ ಬಿಜೆಪಿಯವರಿಗೆ ನಿಜವಾದ ಭಯವಿರುವುದು ಕಾಂಗ್ರೆಸ್ ನೀಡಿದ ಗ್ಯಾರಂಟಿ ಕಾರ್ಡುಗಳ ಬಗ್ಗೆ. ಭಾರತದ ಚುನಾವಣೆ ವ್ಯವಸ್ಥೆಯಲ್ಲಿ ಮತದಾರರಿಗೆ ಚುನಾವಣೆ ಪ್ರಣಾಳಿಕೆಯಲ್ಲಿ ಗ್ಯಾರಂಟಿ ಕಾರ್ಡ್ ಗಳ ಮೂಲಕ ಭರವಸೆಯನ್ನು ಮೂಡಿಸಿ ರಾಜ್ಯದಲ್ಲಿ ಕಾಂಗ್ರೆಸ್ ವಾತಾವರಣ ಸೃಷ್ಟಿ ಆಗಿರುವುದನ್ನು ಮನಗೊಂಡು ಬಿಜೆಪಿಯವರಿಗೆ ಹತಾಶೆ ಭಾವನೆ ಮೂಡಿದೆ. ಬಿಜೆಪಿ ಸಂಸ್ಕೃತಿಯಾದ ಹೊಡಿ ಬಡಿ , ಸುಡು ಸಂಸ್ಕೃತಿಗೆ ಚುನಾವಣಾ ಆಯೋಗ ಕಡಿವಾಣ ಹಾಕಬೇಕಾಗಿದೆ ಎಂದು ಮನವಿ ಮಾಡಿದರು.
ಹಾಗೆಯೇ ಈ ಕೂಡಲೇ ಕೆ ಎಸ್ ಈಶ್ವರಪ್ಪ ವಿರುದ್ಧ ಚುನಾವಣಾ ಚುನಾವಣಾ ಪ್ರಚಾರದಿಂದ ನಿರ್ಬಂಧನೆ ಮಾಡಿ ಈ ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ. ಇಂಥ ಪದ ಪ್ರಯೋಗಗಳು ಈಶ್ವರಪ್ಪ ಬಾಯಲ್ಲೇ ಅನೇಕ ಬಾರಿ ಪ್ರಚೋದನಾತ್ಮಕ ನೀಡಿರುವುದನ್ನು ಗಮನಿಸಬೇಕಾಗಿದೆ. ಚುನಾವಣಾ ಪ್ರಣಾಳಿಕೆ ಸುಡುವುದು ಸಾಧಾರಣವಾದಂತ ವಿಚಾರ ಅಲ್ಲ. ಕಾಂಗ್ರೆಸ್ ಪಕ್ಷವು ಮತದಾರ ಪ್ರಭುಗಳಿಗೆ ನೀಡಿದ ಭರವಸೆಗಳನ್ನು ಸುಟ್ಟು ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡಿದ ಘಟನೆ ಆಗಿರುವುದರಿಂದ ಈ ಕೂಡಲೇ ಈಶ್ವರಪ್ಪ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಆಯೋಗದ ಕರ್ತವ್ಯವಾಗಿದೆ ಎಂದು ಎಚ್.ಎ.ವೆಂಕಟೇಶ್ ತಿಳಿಸಿದ್ದಾರೆ.
Key words: HA Venkatesh – action -against -KS Eshwarappa – burning -Congress -manifesto