ಸ್ಕಿಮ್ಮಿಂಗ್ ಬಿಟ್ಟು ವೆಬ್​ಸೈಟ್​ಗೇ ಕನ್ನ!

ಬೆಂಗಳೂರು:ಆ-19: ಗ್ರಾಹಕರಿಗೆ ಗೊತ್ತಾಗದಂತೆ ಎಟಿಎಂ ಕೇಂದ್ರಗಳಲ್ಲಿ ಸ್ಕಿಮ್ಮಿಂಗ್ ಯಂತ್ರ ಅಳವಡಿಸಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್​ಗಳ ಗೌಪ್ಯ ವಿವರ ಕದ್ದು ಖಾತೆಗೆ ಕನ್ನ ಹಾಕುತ್ತಿದ್ದ ಆನ್​ಲೈನ್ ವಂಚಕರ ಕಣ್ಣೀಗ ಇ-ಕಾಮರ್ಸ್ ವೆಬ್​ಸೈಟ್​ಗಳ ಮೇಲೆ ಬಿದ್ದಿದೆ. ಎಲ್ಲೋ ಕುಳಿತು ವೆಬ್​ಸೈಟ್​ಗಳನ್ನು ಹ್ಯಾಕ್ ಮಾಡಿ ಮಾಹಿತಿ ಎಗರಿಸುವ ಇವರ ತಂತ್ರಗಾರಿಕೆಯಿಂದಾಗಿ ಡಿಜಿಟಲ್ ವ್ಯವಹಾರವೇ ಅತಂತ್ರವಾಗಲಾರಂಭಿಸಿದೆ.

ಹೆಚ್ಚುತ್ತಿರುವ ಇ ಕಾಮರ್ಸ್ ವೆಬ್​ಸೈಟ್ ಹ್ಯಾಕಿಂಗ್ ಪ್ರಕರಣಗಳ ಬಗ್ಗೆ ಚಿತ್ತ ಹರಿಸಿರುವ ಕೇಂದ್ರ ಸರ್ಕಾರ ಅಧೀನದ ಭಾರತೀಯ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ (ಸಿಇಆರ್​ಟಿ-ಇನ್) ಗ್ರಾಹಕರು ಹಾಗೂ ವೆಬ್​ಸೈಟ್ ಸಂಸ್ಥೆಗಳು ಎಚ್ಚರಿಕೆ ವಹಿಸಬೇಕೆಂದು ಎಚ್ಚರಿಕೆ ಕೊಟ್ಟಿದೆ. ಕಳೆದ 7 ತಿಂಗಳಲ್ಲಿ ಬೆಂಗಳೂರು ಕಮಿಷನರ್ ಕಚೇರಿ ಆವರಣದಲ್ಲಿರುವ ಸೈಬರ್ ಕ್ರೖೆಂ ಠಾಣೆಯೊಂದರಲ್ಲೇ ಆನ್​ಲೈನ್ ವಂಚನೆ ಪ್ರಕರಣಗಳ ಸಂಖ್ಯೆ (ಆ.17) 6900ಕ್ಕೆ ಮುಟ್ಟಿದೆ. ಪ್ರತಿನಿತ್ಯ ಸರಾಸರಿ 985 ಕೇಸ್​ಗಳು ದಾಖಲಾಗುತ್ತಿವೆ ಎಂದು ಸೈಬರ್ ಅಧಿಕಾರಿಗಳು ಮಾಹಿತಿ ಕೊಟ್ಟಿದ್ದಾರೆ.

ಫಿಶಿಂಗ್, ದುರ್ಬಲ ಪ್ಲಗಿನ್ ಹಾಗೂ ಸಾಮಾಜಿಕ ಇಂಜಿನಿಯರಿಂಗ್ ತಂತ್ರಗಾರಿಕೆ ಸೇರಿ ಹಲವು ರೀತಿಯಲ್ಲಿ ದೋಷಪೂರಿತ ಕೋಡ್​ಗಳನ್ನು ಕಳುಹಿಸುವ ಮೂಲಕ ಹ್ಯಾಕರ್ಸ್ ಗಳು ವೆಬ್​ಸೈಟ್ ಹ್ಯಾಕ್ ಮಾಡುತ್ತಿದ್ದಾರೆ. ಒಮ್ಮೆ ವೆಬ್​ಸೈಟ್ ಹ್ಯಾಕ್ ಮಾಡಿದರೆ ನಿಮ್ಮ ಯೂಸರ್ ನೇಮ್ ಪಾಸ್​ವರ್ಡ್, ಹೆಸರು, ಇ ಮೇಲ್ ವಿಳಾಸ, ಫೋನ್ ನಂಬರ್, ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್​ಗಳ ಗೌಪ್ಯ ವಿವರ ಹಾಗೂ ಬಿಲ್ಲಿಂಗ್ ವಿಳಾಸ ಸುಲಭವಾಗಿ ಸಿಕ್ಕಿ, ಹಣವನ್ನು ಎಗರಿಸುತ್ತಿದ್ದಾರೆ.

ಹೀಗಾದ್ರೆ ವೈರಸ್ ಪತ್ತೆ ಕಷ್ಟ : ಇ ಕಾಮರ್ಸ್ ವೆಬ್​ಸೈಟ್​ಗಳು ಅಥವಾ ಸಾಫ್ಟ್​ವೇರ್ ಸೇವಾ ವ್ಯವಸ್ಥೆ (ಥರ್ಡ್ ಪಾರ್ಟಿ ಸಾಫ್ಟ್ ವೇರ್ ಲೈಬ್ರರಿ) ಮುಖಾಂತರ ಹ್ಯಾಕ್ ಮಾಡಲಾಗುತ್ತದೆ. ಒಂದು ವೇಳೆ ಸಾಫ್ಟ್​ವೇರ್ ಸೇವಾ ವ್ಯವಸ್ಥೆ ಹ್ಯಾಕ್ ಮಾಡುವಲ್ಲಿ ಯಶಸ್ವಿಯಾದರೆ ಒಂದೇ ಬಾರಿಗೆ ಹಲವು ವೆಬ್​ಸೈಟ್​ಗಳಿಗೆ ವೈರಸ್ ಇಂಜೆಕ್ಟ್ ಮಾಡಿ ಹ್ಯಾಕ್ ಮಾಡಬಹುದು. ಆಗ ವೈರಸ್ ಪತ್ತೆಹಚ್ಚಿ ಸರಿಪಡಿಸುವುದು ಅತ್ಯಂತ ಕಷ್ಟವಾಗುತ್ತದೆ ಎಂದು ಸೈಬರ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕ್ರೆಡಿಟ್ ಕಾರ್ಡ್ ಬಳಕೆ ಸೂಕ್ತ : ಆನ್​ಲೈನ್ ಖರೀದಿಗೆ ಡೆಬಿಟ್ ಕಾರ್ಡ್​ಗಿಂತ ಕ್ರೆಡಿಟ್ ಕಾರ್ಡ್ ಬಳಕೆಯೇ ಸೂಕ್ತ. ಕ್ರೆಡಿಟ್ ಕಾರ್ಡ್​ಗಳ ಹಣಕಾಸಿಗೆ ಇಂತಿಷ್ಟು ಮಿತಿ ಇರುತ್ತದೆ. ಹ್ಯಾಕ್ ಮಾಡಿದರೂ ಕೂಡ ಮಿತಿಗಿಂತ ಹೆಚ್ಚಿನ ಹಣ ಲಪಟಾಯಿಸಲು ಸಾಧ್ಯವಿಲ್ಲ. ಡೆಬಿಟ್ ಕಾರ್ಡ್ ಹ್ಯಾಕ್ ಆದರೆ ಅದರಲ್ಲಿರುವ ಅಷ್ಟೂ ಹಣ ಹ್ಯಾಕರ್ಸ್ ಪಾಲಾಗುತ್ತದೆ.

ಇ ಕಾಮರ್ಸ್ ವೆಬ್​ಸೈಟ್​ಗಳು ಆಂಟಿ ವೈರಸ್ ಸೇರಿ ಹೈ ಸೆಕ್ಯುರಿಟಿ ವ್ಯವಸ್ಥೆ ಅಳವಡಿಸಿಕೊಳ್ಳಬೇಕು. ಹ್ಯಾಕ್ ಆದರೂ ತ್ವರಿತವಾಗಿ ಸರಿಪಡಿಸಲು ಪರ್ಯಾಯ ಬ್ಯಾಕಪ್ ವ್ಯವಸ್ಥೆ ಇಟ್ಟುಕೊಂಡಿರಬೇಕು. ಹ್ಯಾಕ್ ಆದ ಕೂಡಲೇ ಸರಿಪಡಿಸಿದರೆ ಮತ್ತೆ ಹ್ಯಾಕ್ ಮಾಡುವ ಧೈರ್ಯ ಮಾಡುವುದಿಲ್ಲ.

| ಯಶವಂತ ಕುಮಾರ್, ಸೈಬರ್ ಕ್ರೖೆಂ ಅಧಿಕಾರಿ

ಟಾರ್ಗೆಟ್ ಯಾರು?

ಇ-ಕಾಮರ್ಸ್ ವ್ಯವಹಾರದ ಶೇ.40ಕ್ಕಿಂತ ಹೆಚ್ಚು ವಂಚನೆಗಳು ಸುರಕ್ಷಿತ ಪಾಸ್​ವರ್ಡ್ ಹಾಕದಿರುವುದರಿಂದ ನಡೆಯುತ್ತದೆ. ಹೆಸರು, ಜನ್ಮ ದಿನಾಂಕ, ಮೊಬೈಲ್ ನಂಬರ್, ಮದುವೆ ದಿನಾಂಕದಂಥ ಸಂಖ್ಯೆಗಳನ್ನು ಪಾಸ್​ವರ್ಡ್​ಗಳಾಗಿ ಕೊಟ್ಟರೆ ಸುಲಭವಾಗಿ ಹ್ಯಾಕ್ ಮಾಡಲು ಸಾಧ್ಯ. ಹೀಗಾಗಿ ವಿಶೇಷ ಕ್ಯಾರೆಕ್ಟರ್​ಗಳು ಹಾಗೂ ಊಹಿಸಲು ಸಾಧ್ಯವಾಗದ ರೀತಿ ಅಂಕಿಗಳನ್ನು ಕೊಡಬೇಕು.

ಹ್ಯಾಕಿಂಗ್ ತಡೆ ಹೇಗೆ?

* ಅಡ್ರೆಸ್ ಬಾರ್ https:// ರೀತಿಯಲ್ಲಿ ಆರಂಭವಾಗಿರಬೇಕು. http:// ಎಂದಿದ್ದರೆ ಬಳಸಬೇಡಿ.
* ವೆಬ್​ಸರ್ವರ್, ಡಾಟಾ ಬೇಸ್ ಸರ್ವರ್​ಗಳನ್ನು ಇತ್ತೀಚೆಗಿನ ವರ್ಷನ್ ಸಾಫ್ಟ್​ವೇರ್ ಬಳಸಬೇಕು. – ವ್ಯವಹಾರ ಆರಂಭಿಸುವ ಮುನ್ನ ಭದ್ರತಾ ಏಜೆನ್ಸಿ ನೀಡಿರುವಪ್ರಮಾಣ ಪತ್ರವನ್ನು ಗಮನಿಸಬೇಕು. – ಆಂಟಿ ವೈರಸ್ ಹಾಕಿಸಿಕೊಳ್ಳಿ. ಸೈಬರ್ ಕೆಫೆಗಳಲ್ಲಿ ಇ ಕಾಮರ್ಸ್ ವ್ಯವಹಾರ ಮಾಡುವುದು ಬೇಡ. -ಪಿನ್ ನಂಬರ್ ಹಂಚಿಕೊಳ್ಳಬೇಡಿ. ಕಾರ್ಡ್ ಹಿಂದಿರುವ ಸಿವಿವಿ ನಂಬರ್ ಸಹ ಹಂಚಿಕೊಳ್ಳಬೇಡಿ.
* ವೆಬ್​ಸೈಟ್​ಗಳಲ್ಲಿ ನಿಮ್ಮ ಮಾಹಿತಿ ಸಂಗ್ರಹಿಸಿಡುವ ವ್ಯವಸ್ಥೆಯನ್ನು ಸಾಧ್ಯವಾದಷ್ಟು ತಿರಸ್ಕರಿಸಿ.
ಕೃಪೆ:ವಿಜಯವಾಣಿ

ಸ್ಕಿಮ್ಮಿಂಗ್ ಬಿಟ್ಟು ವೆಬ್​ಸೈಟ್​ಗೇ ಕನ್ನ!
hackers-try-to-hack-e-commerce-websites