ಮಾದಕವಸ್ತು ಸೇವನೆ ಪತ್ತೆಹಚ್ಚಲು ಕೂದಲು ಪರೀಕ್ಷೆ: ಹಾಗೆಂದರೇನು?

 

ಬೆಂಗಳೂರು, ಆಗಸ್ಟ್ 25,2021 (www.justkannada.in):  ಮಾದಕವಸ್ತು ಸೇವನೆ ಪ್ರಕರಣದಲ್ಲಿ ಸಿಲುಕಿಕೊಂಡಿರುವ ಸ್ಯಾಂಡಲ್‌ ವುಡ್ ನಟಿಯರಾದ ಸಂಜನ ಮತ್ತು ರಾಗಿಣಿ ತ್ರಿವೇದಿ ಅವರಿಗೆ ಮತ್ತೊಮ್ಮೆ ತೊಂದರೆ ಎದುರಾಗಿರುವ ಸುದ್ದಿ ನಿನ್ನೆಯಷ್ಟೆ ಪ್ರಕಟವಾಯಿತು. ಮಾದಕ ವಸ್ತು ಸೇವಿಸಿರುವ ಕುರಿತು ಕೂದಲು ಪರೀಕ್ಷೆ ಮೂಲಕ ಖಾತ್ರಿಯಾಗಿರುವ ಕುರಿತು ವರದಿಯಾಗಿದೆ. ಆದರೆ ಮಾದಕವಸ್ತು ಸೇವಿಸಿರುವುದಕ್ಕೂ, ಅದನ್ನು ಪತ್ತೆಹಚ್ಚಲು ಕೂದಲು ಪರೀಕ್ಷೆ ನಡೆಸಿರುವುದಕ್ಕೂ ಏನು ಸಂಬAಧ? ಇದು ಬಹಳಷ್ಟು ಜನರಲ್ಲಿ ಕೂತುಹಲ ಕೆರಳಿಸಿದೆ.

ಕೂದಲು ಪರೀಕ್ಷೆ ಎಂದರೇನು?

Hair follicle drug test ಎಂದು ಕರೆಯಲ್ಪಡುವ ಈ ಪರೀಕ್ಷೆಯಲ್ಲಿ ಓರ್ವ ವ್ಯಕ್ತಿ ಮಾದಕ ವಸ್ತು ಸೇವಿಸಿರುವರೋ ಇಲ್ಲವೋ ಅಥವಾ ವೈದ್ಯರ ಚೀಟಿಯಲ್ಲಿರುವ ಔಷಧದ ದುರುಪಯೋಗವಾಗಿದೆಯೋ ಎಂದು ತಿಳಿಯಲು ನಡೆಸುವಂತಹ ಪರೀಕ್ಷೆಯಾಗಿದೆ. ಈ ಪರೀಕ್ಷೆ ನಡೆಸಲು ತಲೆಯ ಕೆಲವು ಕೂದಲು ಎಳೆಗಳನ್ನು ಪಡೆಯಲಾಗುತ್ತದೆ. ವ್ಯಕ್ತಿ ಮಾದಕವಸ್ತು ಸೇವಿರಿಸುವ ಸೂಚನೆಗಳು ಕೂದಲಿನಲ್ಲಿ ಸುಮಾರು ೯೦ ದಿನಗಳವರೆಗೂ ಇರುತ್ತದಂತೆ. ಈ ಪರೀಕ್ಷೆಯ ಮೂಲಕ ಆ್ಯಂಫಿಟೆಮೈನ್, ಮೆಥಾಮ್ಫಿಟಮೈನ್, ಎಕ್ಸ್ಟೆಸಿ, ಮಾರಿಜುವಾನ, ಕೋಕೇನ್, ಪಿಸಿಪಿ ಮತ್ತು ಒಪಿಯಾಯ್ಡ್ಗಳಂತಹ ಮಾದಕವಸ್ತುಗಳ ಸೇವನೆಯನ್ನು ಖಾತ್ರಿಪಡಿಸುಬಹುದು.

ಮಾದಕವಸ್ತು ಸೇವಿಸಿರುವ ವ್ಯಕ್ತಿಯ ಮೂತ್ರದಲ್ಲಿ ಮಾದಕವಸ್ತುವಿನ ಅಂಶ ಕೆಲವು ದಿನಗಳವರೆಗೂ ಉಳಿದಿರುತ್ತದಂತೆ. ಆದರೆ ಕೂದಲಿನ ಪರೀಕ್ಷೆಯ ಮೂಲಕ ೯೦ಗಳ ನಂತರವೂ ಪತ್ತೆ ಹಚ್ಚಬಹುದಂತೆ.

ಪರೀಕ್ಷೆ ಹೇಗೆ?

ಕೂದಲಿನ ಪರೀಕ್ಷೆಯನ್ನು ಪ್ರಯೋಗಾಲಯದಲ್ಲಿ ನಡೆಸಲಾಗುತ್ತದೆ. ನೀವು ಸ್ನಾನ ಮಾಡಿಕೊಂಡರೂ, ತಲೆಕೂದಲನ್ನು ಡೈ ಮಾಡಿದರೂ ಅಥವಾ ಮತ್ಯಾವುದಾದರೂ ಕೂದಲಿಗೆ ಸಂಬಂಧಪಟ್ಟ ಸೌಂದರ್ಯವರ್ಧಕ ಸಾಮಗ್ರಿಗಳನ್ನು ಬಳಸಿದ್ದರೂ ಸಹ ಈ ಕೂದಲು ಪರೀಕ್ಷೆ ನಿಖರವಾದ ಫಲಿತಾಂಶವನ್ನು ಒದಗಿಸಬಲ್ಲದು. ಒಂದು ವೇಳೆ ತಲೆಯಲ್ಲಿ ಕೂದಲಿಲ್ಲದಿದ್ದರೆ ದೇಹದ ಇತರೆ ಭಾಗದ ಕೂದಲ ಮೂಲಕವೂ ಈ ಪರೀಕ್ಷೆ ನಡೆಸಬಹುದು.

ಫಲಿತಾಂಶ

ಕೂದಲು ಪಡೆದ ೨೪ ಗಂಟೆಗಳ ಒಳಗೆ ನೆಗೆಟಿವ್ ಫಲಿತಾಂಶವನ್ನು ಪಡೆಯಬಹುದು. ಇದಕ್ಕಾಗಿ ಎಲಿಸಾ (ELISA) ಎಂಬ ಪರೀಕ್ಷೆಯನ್ನು ನಡೆಸಲಾಗುತ್ತದೆ. ಈ ಪರೀಕ್ಷೆಯು ಮಾದಕವಸ್ತು ಸೇವನೆ ನೆಗೆಟಿವ್ ಫಲಿತಾಂಶವನ್ನು ನಿರ್ಧರಿಸಲು ಬಳಸಲಾಗುತ್ತದೆ. ನೆಗೆಟಿವ್ ಫಲಿತಾಂಶ ಎಂದರೆ ಕಳೆದ ೯೦ ದಿನಗಳಲ್ಲಿ ವ್ಯಕ್ತಿ ಮಾದಕವಸ್ತು ಸೇವಿಸಿಲ್ಲ ಎಂದರ್ಥ. ಪಾಸಿಟಿವ್ ಫಲಿತಾಂಶವನ್ನು ದೃಢಪಡಿಸಲು ಮತ್ತೊಂದು ಪರೀಕ್ಷೆ ನಡೆಸಬೇಕಾಗುತ್ತದೆ.

ಪಾಸಿಟಿವ್ ಫಲಿತಾಂಶದ ಬಗ್ಗೆ ತಿಳಿದುಕೊಳ್ಳಲು ಗ್ಯಾಸ್ ಕ್ರೊಮ್ಯಾಟೊಗ್ರಫಿ/ ಮಾಸ್ ಸ್ಪೆಕ್ಟ್ರೋಮೆಟ್ರಿ (ಜಿಸಿ/ಎಂಎಸ್) (gas chromatography/mass spectrometry) ಎಂದು ಕರೆಯಲ್ಪಡುವ ಪರೀಕ್ಷೆಯನ್ನು ನಡೆಸಬೇಕಾಗುತ್ತದೆ. ಇದರಿಂದ ಪರೀಕ್ಷೆಯ ನಿಖರವಾದ ಪಾಸಿಟಿವ್ ಫಲಿತಾಂಶ ದೊರೆಯುತ್ತದೆ. ಈ ಪರೀಕ್ಷೆಯಿಂದ ವ್ಯಕ್ತಿ ನಿಖರವಾಗಿ ಯಾವ ರೀತಿಯ ಮಾದಕವಸ್ತುವನ್ನು ಸೇವಿಸಿದ್ದಾರೆ ಎಂದು ತಿಳಿಯುತ್ತದಂತೆ.

ಕೆಲವು ಪ್ರಕರಣಗಳಲ್ಲಿ ಅಸಮರ್ಪಕ ಕೂದಲಿನ ಮಾದರಿ ಸಂಗ್ರಹಿಸಿದ್ದರೆ ಪರೀಕ್ಷೆ ತಿರಸ್ಕೃತವಾಗುತ್ತದೆ. ಅಂತಹ ಪ್ರಕರಣಗಳಲ್ಲಿ ಮೇಲಿನ ಪರೀಕ್ಷೆಗಳನ್ನು ಪುನರಾವರ್ತಿಸಬೇಕಾಗುತ್ತದೆ.

ಈ ಪರೀಕ್ಷೆಯಿಂದ ಮಾದಕವಸ್ತು ಸೇವಿಸಿರುವ ದಿನಾಂಕ ತಿಳಿಯುತ್ತದೆಯೇ?

ಕಳೆದ ೯೦ ದಿನಗಳಲ್ಲಿ ವ್ಯಕ್ತಿ ಮಾದಕವಸ್ತು ಸೇವಿಸಿದ್ದರೆ ನಿಖರವಾಗಿ ಯಾವ ದಿನದಂದು ಸೇವಿಸಿದ್ದರು ಎಂದು ಈ ಪರೀಕ್ಷೆಯ ಮೂಲಕ ತಿಳಿದುಕೊಳ್ಳಬಹುದು.

ನಿಖರತೆ

ಈ ಪರೀಕ್ಷೆಯಲ್ಲಿ ನಿಖರವಾದ ಮಾಹಿತಿಯನ್ನು ಹೊಂದಲು ನಿರ್ಧಿಷ್ಟವಾದ ಹಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ. ಪರೀಕ್ಷೆ ನಡೆಸುವಾಗ ಸಂಗ್ರಹಿಸಿದ ಕೂದಲನ್ನು ತೊಳೆದು, ಪರೀಕ್ಷೆಯ ಫಲಿತಾಂಶ ಬದಲಾಗುವ ಸಂಭವವಿರುವಂತಹ ಪರಿಸರ ಮಾಲಿನ್ಯವನ್ನು ಪರೀಲಿಸಲಾಗುತ್ತದೆ.

ತಪ್ಪಾದ ಫಲಿತಾಂಶವನ್ನು ತಪ್ಪಿಸಲು ಪ್ರಯೋಗಾಲಯಗಳು ಎರಡು ರೀತಿಯ ಪರೀಕ್ಷೆಗಳನ್ನು ನಡೆಸುತ್ತವೆ. ಎಲಿಸಾ ಇವರೆಡೂ ಅತ್ಯಂತ ನಿಖರವಾದ ಫಲಿತಾಂಶವನ್ನು ಒದಗಿಸುವ ಪರೀಕ್ಷೆಗಳಾಗಿದ್ದು, ಸಾಮಾನ್ಯವಾಗಿ ಎಲ್ಲಾ ಪ್ರಯೋಗಾಲಯಗಳಲ್ಲಿಯೂ ಇವನ್ನೇ ಬಳಸಲಾಗುತ್ತದೆ. ಈ ಪರೀಕ್ಷೆಗಳ ಮೂಲಕ ಒಟ್ಟು ೧೭ ವಿವಿಧ ರೀತಿಯ ಮಾದಕವಸ್ತುಗಳನ್ನು ಪತ್ತೆ ಹಚ್ಚಬಹುದು. ಕೆಲವರು ಈ ಪರೀಕ್ಷೆಯ ಫಲಿತಾಂಶ ತಪ್ಪಾಗಲಿ ಎಂಬ ಉದ್ದೇಶದಿಂದ ಗಸಗಸೆ ಬೀಜ ಅಥವಾ ಸೆಣಬಿನ ಬೀಜಗಳನ್ನು ಸೇವಿಸುತ್ತಾರಂತೆ. ಆದರೆ ಎರಡನೆ ಮಾದರಿ ಪರೀಕ್ಷೆ ಇವುಗಳನ್ನು ಭೇದಿಸಿ ನಿಖರವಾದ ಫಲಿತಾಂಶವನ್ನು ಒದಗಿಸಬಲ್ಲದು.

ಸುದ್ದಿ ಮೂಲ: healthline

Key words: Hair testing – detect –drug- consumption- What is it