ಹೈಟಿ, ಆಗಸ್ಟ್ 16,2021(www.justkannada.in): ಕೆರೆಬಿಯನ್ ರಾಷ್ಟ್ರ ಹೈಟಿಯಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಸಾವಿರ ದಾಟಿದೆ. ಶನಿವಾರ ಸಂಭವಿಸಿದ ಭೂಕಂಪದಲ್ಲಿ ಇದುವರೆಗೂ 1297 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೈಟಿ ಸಿವಿಲ್ ಪ್ರೊಟೆಕ್ಷನ್ ಏಜೆನ್ಸಿ ಮುಖ್ಯಸ್ಥ ಜೆರ್ರಿ ಚ್ಯಾಂಡ್ಲರ್ ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ 2800ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಸಿಎನ್ಎನ್ ವರದಿ ಮಾಡಿದೆ.
ದೇಶದ ದಕ್ಷಿಣ ಭಾಗದಲ್ಲಿ ಗರಿಷ್ಠ ಪ್ರಮಾಣದಲ್ಲಿ ಸಾವು ಸಂಭವಿಸಿದೆ. ದಕ್ಷಿಣ ಭಾಗವೊಂದರಲ್ಲೇ ಸುಮಾರು ಐನೂರು ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಭೂಕಂಪದಿಂದಾಗಿ 2868 ಮನೆಗಳು ಸಂಪೂರ್ಣ ನಾಶವಾಗಿದ್ದು, 5410 ಮನೆಗಳಿಗೆ ಹಾನಿಯಾಗಿದೆ.
ಹಾನಿಯಾಗಿರುವ ಕಡೆಗಳೆಲ್ಲೆಲ್ಲಾ ವೈದ್ಯಕೀಯ ನೆರವನ್ನು ತ್ವರಿತಗತಿಯಲ್ಲಿ ಪೂರೈಸುತ್ತಿದ್ದೇವೆ ಎಂದು ಪ್ರಧಾನಿ ಏರಿಯಲ್ ಹೆನ್ರಿ ತಿಳಿಸಿದ್ದಾರೆ. ತುರ್ತು ವೈದ್ಯಕೀಯ ಸೇವೆ ಅಗತ್ಯವಿರುವವರಿಗೆ ವಿಶೇಷ ವ್ಯವಸ್ಥೆ ಮೂಲಕ ಆಸ್ಪತ್ರೆಗಳಿಗೆ ಸಾಗಿಸಲಾಗುತ್ತಿದೆ. ಭೂಕಂಪದಿಂದ ಬಾಧಿತವಾಗಿರುವ ನಗರ ಹಾಗೂ ಪಟ್ಟಣಗಳಿಗೆ ಎಲ್ಲಾ ರೀತಿಯ ನೆರವು ನೀಡಲಾಗುತ್ತಿದ್ದು, ಆಸ್ಪತ್ರೆಗಳು ಗಾಯಾಳುಗಳಿಂದ ತುಂಬಿ ತುಳುಕುತ್ತಿವೆ ಎಂದು ಅವರು ಹೇಳಿದ್ದಾರೆ.
ಶನಿವಾರ ಹೈಟಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.2ರಷ್ಟು ತೀವ್ರತೆ ದಾಖಲಾಗಿದ್ದು, ಭೂಕಂಪದಲ್ಲಿ ನೂರಾರು ಕಟ್ಟಡಗಳು ಧರೆಗುರುಳಿವೆ. ಹೈಟಿ ರಾಜಧಾನಿ ಪೋರ್ಟ್-ಔ-ಪ್ರಿನ್ಸ್ ನಿಂದ 160 ಕಿಲೋಮೀಟರ್ ದೂರದಲ್ಲಿ ಭೂಕಂಪ ಸಂಭವಿಸಿದೆ. ಅವಶೇಷಗಳಡಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಇದುವರೆಗೂ 1297 ಮಂದಿ ಸಾವನ್ನಪ್ಪಿದ್ದಾರೆ. ಹಲವರು ತೀವ್ರ ಗಾಯಗೊಂಡಿದ್ದಾರೆ.
ಭೂಕಂಪದಿಂದಾಗಿ ಹೈಟಿಯಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಭೂಕಂಪದಿಂದ ಸಾಕಷ್ಟು ಅನಾಹುತ ಸಂಭವಿಸಿದ್ದು ಹೈಟಿಯಲ್ಲಿ ಒಂದು ತಿಂಗಳು ತುರ್ತು ಪರಿಸ್ಥಿತಿ ಹೇರುತ್ತಿರುವುದಾಗಿ ಅಲ್ಲಿನ ಪ್ರಧಾನಿ ಏರಿಯಲ್ ಹೆನ್ರಿ ಭಾನುವಾರ ಘೋಷಿಸಿದ್ದಾರೆ.
ಅನೇಕ ಪ್ರದೇಶಗಳು ತೀವ್ರ ಸ್ವರೂಪದಲ್ಲಿ ಹಾನಿಗೊಂಡಿದ್ದು ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಕಂಪನದ ಕೇಂದ್ರ ಬಿಂದು ಪೋರ್ಟ್-ಔ-ಪ್ರಿನ್ಸ್ ನಗರದಿಂದ ಪಶ್ಚಿಮ ಭಾಗದ 125 ಕಿಲೋಮೀಟರ್ (78 ಮೈಲಿ) ದೂರದಲ್ಲಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೇ ತಿಳಿಸಿದೆ.
2010ರಲ್ಲಿ ಕೂಡ ಹೈಟಿಯಲ್ಲಿ ಇಂಥದ್ದೇ ತೀವ್ರತರ ಭೂಕಂಪ ಸಂಭವಿಸಿತ್ತು. 7.0 ತೀವ್ರತೆಯ ಭೂಕಂಪ ದಾಖಲಾಗಿದ್ದು, ಲಕ್ಷಾಂತರ ಮಂದಿ ಭೂಕಂಪದಿಂದ ಸಾವನ್ನಪ್ಪಿದ್ದರು. ಇದೀಗ ಮತ್ತೆ ಅಂಥದ್ದೇ ಘಟನೆ ಮರುಕಳಿಸಿದೆ.
Key words: Haiti – Caribbean country – hit – earthquake