ಮೈಸೂರು,ಡಿಸೆಂಬರ್,30,2021(www.justkannada.in): ಡಾ.ಹಾಮಾ ನಾಯಕ್ ಮತ್ತು ಎಚ್ಚೆಸ್ಕೆ ಅವರು ನಮ್ಮ ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿದವರು ಎಂಬುದೇ ಹೆಮ್ಮೆಯ ಸಂಗತಿ ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ತಿಳಿಸಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಹಾಗೂ ಅಖಿಲ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಸಹಯೋಗದೊಂದಿಗೆ ಮಾನಸ ಗಂಗೋತ್ರಿಯ ಬಿಎಂಶ್ರೀ ಸಭಾಂಗಣದಲ್ಲಿ ಪರಿಷತ್ತಿನ ಬೆಳ್ಳಿಹಬ್ಬದ ಸಮಾರಂಭ ಹಾಗೂ ಎಚ್ಚೆಸ್ಕೆ ಅವರ ನಕ್ಷತ್ರ ಮುಡಿದವರು ಮತ್ತು ಡಾ.ಹಾಮಾನಾ ಅವರ ನೆನಪಿನ ನಮಸ್ಕಾರ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಹೇಳಿದಿಷ್ಟು…
ಡಾ. ಹಾ.ಮಾ.ನಾಯಕ ಅವರು ಕನ್ನಡದ ಖ್ಯಾತ ಕವಿ, ಅಂಕಣಕಾರ ಮತ್ತು ಜಾನಪದ ವಿದ್ವಾಂಸರು. ಕನ್ನಡ ನನ್ನ ಮೊದಲ ಪ್ರೀತಿ ಮಾತ್ರವಲ್ಲ ಎರಡನೇ ಪ್ರೀತಿಯೂ ಕೂಡ ಎಂದು ಹೇಳುತ್ತ ಕನ್ನಡವನ್ನು ಕಟ್ಟುವ ಕೆಲಸದಲ್ಲಿ ಬದುಕು ಸವೆಸಿದ ಹೋರಾಟಗಾರ ಇವರು. ಇವರು ಉತ್ತಮ ಸಾಹಿತಿ ಮಾತ್ರವಲ್ಲದೆ ದಕ್ಷ ಆಡಳಿತಗಾರರೂ ಆಗಿದ್ದರು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿಯೂ, ಗುಲ್ಬರ್ಗ ವಿಶ್ವವಿದ್ಯಾನಿಲಯದ ಕುಲಪತಿಗಳಾಗಿಯೂ ಸೇವೆ ಸಲ್ಲಿಸಿದ್ದರು. ‘ಹಾಮಾನಾ’ ಎಂದೇ ಪ್ರಸಿದ್ಧರಾಗಿರುವ ಇವರು ಹಲವಾರು ಕೃತಿಗಳ ಮುಖಾಂತರ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ರೀತಿಯಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.
ಮೈಸೂರಿನವರಾದ ಎಚ್.ಎಸ್. ಕೃಷ್ಣಸ್ವಾಮಿ ಅಯ್ಯಂಗಾರ ಅವರು ಮೈಸೂರಿನ ಡಿ.ಬನುಮಯ್ಯ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ, ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಕನ್ನಡ ವಿಶ್ವಕೋಶದ ಮಾನವಿಕ ವಿಭಾಗದ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ಬ್ಯಾಂಕಿಂಗ್ ಪ್ರಪಂಚ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಹಾಗೆಯೇ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ದೇಶ-ವಿದೇಶಗಳಲ್ಲಿ ಹಲವಾರು ವ್ಯಕ್ತಿಗಳ ಮೇಲೆ 1167 ಅಕ್ಷರ ರೇಖಾಚಿತ್ರಗಳನ್ನು ರಚಿಸಿದ ಹೆಗ್ಗಳಿಕೆಯೂ ಇವರಿದೆ ಎಂದರು.
ಅಖಿಲ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ಡಾ.ಎಂ.ಶಿವಕುಮಾರಸ್ವಾಮಿ, ಹಿರಿಯ ಜಾನಪದ ವಿದ್ವಾಂಸ ಡಾ.ಪಿ.ಕೆ.ರಾಜಶೇಖರ, ಕೆಎಸ್ ಒಯು ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ ಡಾ.ಶೆಲ್ವಪಿಳ್ಳೆ ಅಯ್ಯಂಗಾರ, ಜಗನ್ಮೋಹನ ಅರಮನೆ ಸೂಪರಿಡೆಂಟ್ ಎಂ.ಜಿ.ನರಸಿಂಹನ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಎಂ.ಜಿ.ಮಂಜುನಾಥ ಸೇರಿದಂತೆ ಇತರರು ಇದ್ದರು.
Key words: Hamana-HSK- literary –world- contribution- Mysore university- Prof.G.Hemanth Kumar