ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳ: ಗ್ರಾಮವ ತೊರೆದ 100ಕ್ಕೂ ಹೆಚ್ಚು ಕುಟುಂಬಗಳು

ಚಾಮರಾಜನಗರ,ಜನವರಿ,11,2025 (www.justkannada.in):  ಮೈಕ್ರೋ ಫೈನಾನ್ಸ್  ಕಂಪನಿಗಳ ಕಿರುಕುಳದಿಂದ ಬೇಸತ್ತು ಚಾಮರಾಜನಗರ ಜಿಲ್ಲೆಯ ಹಲವೆಡೆ  100 ಕ್ಕೂ ಹೆಚ್ಚು ಕುಟುಂಬಗಳು ಗ್ರಾಮ ತೊರೆದಿದ್ದಾರೆ.

ಹೌದು, ಸಾಲ ತೀರಿಸಲಾಗದೆ ಮೈಕ್ರೋ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬೇಸತ್ತು 100ಕ್ಕೂ ಹೆಚ್ಚು ಕುಟುಂಬಗಳು ಮನೆಗೆ ಬೀಗ ಹಾಕಿ ಊರು ಖಾಲಿ ಮಾಡಿದ್ದಾರೆ. ಅಲ್ಲದೆ  ಮಕ್ಕಳನ್ನು ಸಹ ಶಾಲೆ ಬಿಡಿಸಿ ತಮ್ಮ ಜೊತೆ ಪೋಷಕರು ‌ಕರೆದೊಯ್ದಿದ್ದು, ಸಾಲದ ಹೊಡೆತಕ್ಕೆ ಮಕ್ಕಳ ವಿದ್ಯಾಭ್ಯಾಸವೇ ಮೊಟಕಾಗಿದೆ.

ಗ್ರಾಮಗಳಲ್ಲಿನ ಕುಟುಂಬಗಳು ಗೃಹ ಖರ್ಚು ವೆಚ್ಚಗಳಿಗೆ ಮೈಕ್ರೋಫೈನಾನ್ಸ್ ಕಂಪನಿಗಳಿಂದ ಸಾಲ ಪಡೆದಿದ್ದರು.  ಆದರೆ ಸಾಲದ ಕಂತು ಕಟ್ಟುವುದು ಒಂದು ದಿನ ತಡವಾದರೂ ಮೈಕ್ರೋಫೈನಾನ್ಸ್ ಸಿಬ್ಬಂದಿಗಳು ಮನೆ ಬಾಗಿಲಿಗೆ ಬಂದು ಇನ್ನಿಲ್ಲದ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಕಿರುಕುಳಕ್ಕೆ ಬೇಸತ್ತು ಊರು ತೊರೆದಿರುವ ಕುಟುಂಬಗಳು  ಎಲ್ಲಿ ಹೋದರು ಎಂಬುದೇ ಗೊತ್ತಿಲ್ಲ.

ಸಾಲ ತೀರಿಸಲು ದಯವಿಟ್ಟು ಕಿಡ್ನಿ ಮಾರೋಕೆ ಪರ್ಮಿಷನ್ ಕೊಡ್ಸಿ ಸರ್ : ಬಾಲಕನ ಅಳಲು

ಇನ್ನು ಚಾಮರಾಜನಗರ ತಾಲ್ಲೂಕು‌ ಹೆಗ್ಗವಾಡಿಪುರದ ಮೋಹನ್ ಎಂಬ ಬಾಲಕ ಈ ಬಗ್ಗೆ  ಅಳಲು ತೋಡಿಕೊಂಡಿದ್ದಾನೆ.

ನಮ್ಮಮ್ಮನನ್ನು ಚಾಪೆ ಹಾಸಿ ಸಾಲ ಕಟ್ಟು ಅಂತಾರೆ  ಸಾರ್ . ಕೈ ಮುಗಿದು ಕೇಳಿ ಕೊಳ್ಳುತ್ತೇನೆ ನಿ ನನ್ನ ಒಂದು ಕಿಡ್ನಿ ಮಾರೋಕ್ಕೆ ಪರ್ಮಿಷನ್ ಕೊಡ್ಸಿ ಸರ್. ಕಿಡ್ನಿ ಮಾರಿ  ಅಪ್ಪ ಅಮ್ಮನ ಸಾಲ ತೀರಿಸಿ ಹೇಗೋ ಬದುಕಿಕೊಂಡು ಹೋಗುತ್ತೇವೆ . ಸರ್ಕಾರ ಪರ್ಮಿಷನ್ ಕೊಟ್ಟರೆ ನನ್ನ ಕಿಡ್ನಿ ಮಾರಿ ಅಪ್ಪ ಅಮ್ಮನ ಸಾಲ ತೀರಿಸ್ತೀನಿ ಎಂದು  ಖಾಸಗಿ ಮೈಕ್ರೋ ಫೈನಾನ್ಸ್ ಕಂಪನಿಗಳ‌ ಕಿರುಕುಳಕ್ಕೆ ಬೇಸತ್ತ ಬಾಲಕ ಕಣ್ಣೀರು ಹಾಕಿ ಈ ರೀತಿ ಹೇಳಿದ್ದಾನೆ.

ಅಲ್ಲದೆ ಫೈನಾನ್ಸ್ ನವರು ಬಾಯಿಗೆ ಬಂದಂತೆ ಬಯ್ತಾರೆ, ರಾತ್ರಿವೇಳೆ  ಹೊತ್ತಲ್ಲದ ಹೊತ್ತಿನಲ್ಲಿ ಬಂದು ಕೆಟ್ಟದಾಗಿ ಬಯ್ಯುತ್ತಾರೆ, ಕಿರುಕುಳ ಕೊಡುತ್ತಾರೆ. ನಾವು ಸತ್ತೋಗುತ್ತೇವೆ ಬದುಕಲ್ಲ, ನಿಮ್ಮ ಎಜುಕೇಷನ್ ನೀವು ನೋಡಿಕೊಂಡು  ಹೋಗಿ ಅಂತ ಅಪ್ಪ ಅಮ್ಮ ಹೇಳ್ತಿದ್ದಾರೆ. ನಮ್ಮ ಅಪ್ಪ ಅಮ್ಮನನ್ನು ಬಿಟ್ಟು ನಾನು ನನ್ನ ತಂಗಿ ಬದುಕೋಕೆ ಆಗುತ್ತಾ  ಸರ್. ನಾವೆಲ್ಲರೂ ಸಾಯಬೇಕು ಅನ್ನೋ ಪರಿಸ್ಥಿತಿ ಬಂದಿದೆ. ದಯವಿಟ್ಟು ಕಿಡ್ನಿ ಮಾರೋಕೆ ಪರ್ಮಿಷನ್ ಕೊಡ್ಸಿ ಸರ್ ಎಂದು ಬಾಲಕ ಅಳಲು ತೋಡಿಕೊಂಡಿದ್ದಾನೆ.

Key words: Harassment, microfinance companies, 100 families, leave, village