ಮೈಸೂರು,ಮೇ,29,2021(www.justkannada.in): ಹೆಚ್ಚುತ್ತಿರುವ ಕೊರೋನಾ ಸೋಂಕು ತಡೆಗಟ್ಟಲು ಮೈಸೂರು ಜಿಲ್ಲೆಯಲ್ಲಿ ಇಂದಿನಿಂದ ಕಠಿಣ ಲಾಕ್ ಡೌನ್ ಜಾರಿ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಮೈಸೂರು ನಗರ ಸಂಪೂರ್ಣ ಸ್ತಬ್ಧವಾಗಿದೆ.
ವಾರದಲ್ಲಿ ಐದುದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿ ಮಾಡಲಾಗಿದ್ದು, ಉಳಿದ ಎರಡು ದಿನಗಳು ಅಂದರೆ ಸೋಮವಾರ ಮತ್ತು ಗುರುವಾರ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಇಂದಿನಿಂದ ಈ ಕಠಿಣ ಲಾಕ್ ಡೌನ್ ಜಾರಿಯಾಗಿದ್ದು ಈ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳು ಖಾಲಿ ಖಾಲಿಯಾಗಿವೆ.
ದೇವರಾಜ ಮಾರುಕಟ್ಟೆ ನಿಶಬ್ದವಾಗಿದ್ದು, ಸುತ್ತಲೂ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ನಗರದ ಹೃದಯಭಾಗ ಕೆ.ಆರ್.ವೃತ್ತದಲ್ಲಿ ಸಂಚಾರ ವಿರಳವಾಗಿದ್ದು,ಗೂಡ್ಸ್ ವಾಹನ, ಹಾಲಿನ ವಾಹನ, ಆರೋಗ್ಯ ಸೇವೆ, ಮೆಡಿಕಲ್ ಎಮರ್ಜೆನ್ಸಿ ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಿದೆ. ಇನ್ನು ಟಫ್ ರೂಲ್ಸ್ ಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.
ಸಂಪೂರ್ಣ ಲಾಕ್ಡೌನ್ ಹಿನ್ನೆಲೆ ಜಿಲ್ಲೆಯಲ್ಲೂ ಪೊಲೀಸರು ಅಲರ್ಟ್ ಆಗಿದ್ದು, ಬೆಳ್ಳಂಬೆಳಗ್ಗೆ ರಸ್ತೆಗಿಳಿದು ತಪಾಸಣೆ ನಡೆಸುತ್ತಿದ್ದಾರೆ. ಅನಗತ್ಯವಾಗಿ ಓಡಾಡುತ್ತಿರುವವರನ್ನು ಪೊಲೀಸರು ಮನೆಗೆ ಕಳುಹಿಸುತ್ತಿದ್ದಾರೆ. ಹುಲ್ಲಹಳ್ಳಿ ರಾಂಪುರ ಚೆಕ್ ಪೋಸ್ಟ್ನಲ್ಲಿ, ನಂಜನಗೂಡು ತಾಲ್ಲೂಕಿನ ಚೆಕ್ಪೋಸ್ಟ್ ನಲ್ಲಿ ಪೊಲೀಸರು ತಪಾಸಣೆ ನಡೆಸುತ್ತಿದ್ದು, ಅನಗತ್ಯವಾಗಿ ಓಡಾಡುವರಿಗೆ ತರಾಟೆ ತೆಗೆದುಕೊಂಡು ವಾಪಸ್ಸು ಕಳುಹಿಸುತ್ತಿದ್ದಾರೆ. ಅಲ್ಲದೆ ಸವಾರರಿಗೆ ದಂಡ ವಿಧಿಸುತ್ತಿದ್ದಾರೆ.
ಮೈಸೂರಿ ನಂಜುಮಳಿಗೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ಕುಂಟು ನೆಪ ಹೇಳಿಕೊಂಡು ಬರುತ್ತಿರುವ ಜನರಿಗೆ ವಾರ್ನಿಂಗ್ ನೀಡುತ್ತಿದ್ದಾರೆ. ಒಟ್ಟಾರೆ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ನಿಂದಾಗಿ ಜನರ ಓಡಾಟಕ್ಕೆ ಕಡಿವಾಣ ಬಿದ್ದಿದ್ದು, ವಾಹನ ಸಂಚಾರ ವಿರಳವಾಗಿದೆ.
Key words: Hard lockdown – today-Mysore- city -completely -quiet.