ಧಾರವಾಡ:ಜೂ-9: ಭಾರತೀಯ ಋಷಿಮುನಿಗಳು ಏಕೆ ನೂರಾರು ವರ್ಷ ಆರೋಗ್ಯವಂತರಾಗಿ ಬಾಳುತ್ತಿದ್ದರು ಎಂಬ ಪ್ರಶ್ನೆಗೆ ಈವರೆಗೆ ಬಂದ ಸಮರ್ಪಕ ಉತ್ತರ ಯಾವುದು ಗೊತ್ತಾ?. ಅವರು ಕಾಡಿನಲ್ಲಿ ಅಲೆದು ಹುಡುಕಿ ತಿನ್ನುತ್ತಿದ್ದ ಗೆಡ್ಡೆ ಮತ್ತು ಗೆಣಸುಗಳು!
ಹೌದು, ಇಂದು ಭಾರತೀಯರು ಗೆಡ್ಡೆ ಗೆಣಸು ಎಷ್ಟು ತಿನ್ನುತ್ತಾರೋ ಗೊತ್ತಿಲ್ಲ. ಆದರೆ, ಇಂಗ್ಲೆಂಡ್, ಅಮೆರಿಕ ಸೇರಿ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಭಾರತೀಯ ಗೆಡ್ಡೆ ಮತ್ತು ಗೆಣಸಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ. ಅದಕ್ಕಾಗಿ ಧಾರವಾಡದಲ್ಲಿ 52ಕ್ಕಿಂತಲೂ ಹೆಚ್ಚಿನ ತಳಿಯ ಆಹಾರ ಪದಾರ್ಥ ರೂಪದ ಗೆಡ್ಡೆ ಗೆಣಸುಗಳ ಸಂರಕ್ಷಣೆ ಮತ್ತು ಅವುಗಳಿಗೆ ಮೌಲ್ಯವರ್ಧನ ಮಾಡಿ ಬೆಳೆಯುವ ರೈತರಿಗೆ ಉತ್ತಮ ಬೆಲೆ ಕೊಡಿಸುವ ಪ್ರಯತ್ನ ಸದ್ದಿಲ್ಲದೇ ಸಾಗಿದೆ.
ಧಾರವಾಡ ಕೃಷಿ ವಿಶ್ವವಿದ್ಯಾಲಯ ಹಾಗೂ ಬಾಗಲಕೋಟೆಯ ತೋಟಗಾರಿಕೆ ವಿವಿಗಳು, ಅಖೀಲ ಭಾರತ ಗೆಡ್ಡೆ -ಗೆಣಸು ಸಂಶೋಧನಾ ಯೋಜನೆಯಡಿಯಲ್ಲಿ ರಾಜ್ಯದಲ್ಲಿ ಸಿಗುವ ನೂರಕ್ಕೂ ಹೆಚ್ಚು ತಳಿಯ ಗೆಡ್ಡೆ ಗೆಣಸುಗಳನ್ನು ಸಂಗ್ರಹಿಸುತ್ತಿವೆ. ಜತೆಗೆ, ಹೊಸ ತಳಿಗಳ ಶೋಧನೆ ಮತ್ತು ಅವುಗಳಿಂದ ಬರುವ ಉಪ ಉತ್ಪನ್ನಗಳ ಸಿದ್ಧತೆಯಲ್ಲಿ ತೊಡಗಿವೆ.
ಈ ಸಂಬಂಧ ಕೆನಡಾ ಮೂಲದ ನರಿಶ್ ಇಂಕ್ ಎನ್ನುವ ಕಂಪನಿ, ಧಾರವಾಡ ಜಿಲ್ಲೆಯ ನೂರಕ್ಕೂ ಹೆಚ್ಚು ರೈತರಿಗೆ ತಾನೇ ಗೆಣಸು ಬೀಜ ಕೊಡಿಸಿ, ಅವರಿಂದ ನೇರವಾಗಿ ಗೆಣಸು ಖರೀದಿಸುವ ಒಪ್ಪಂದ ಮಾಡಿಕೊಂಡಿದೆ. ಅಷ್ಟೇ ಅಲ್ಲ, ಈ ಸಂಬಂಧ ಇಲ್ಲಿನ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಗೆಣಸಿನ ಉಪ ಉತ್ಪನ್ನಗಳ ತಯಾರಿಕೆಗೆ ದೊಡ್ಡ ಕಾರ್ಖಾನೆ ಸ್ಥಾಪಿಸುತ್ತಿದ್ದು, ವರ್ಷದಲ್ಲಿ ಇದು ಕಾರ್ಯಾರಂಭ ಮಾಡಲಿದೆ.
ರೈತರಿಗೆ ನೇರ ಹಣ: ಗೆಣಸು ಇಂದು ರೈತರ ಆರ್ಥಿಕ ಮಟ್ಟ ಸುಧಾರಿಸುವ ತಳಿಯಾಗಿ ರೂಪುಗೊಂಡಿದೆ. ಸದ್ಯಕ್ಕೆ ರಾಜ್ಯದಲ್ಲಿ ಉತ್ತಮ ತಳಿಯ ಕೆಂಗುಲಾಬಿ ಮತ್ತು ಬಿಳಿ ಬಣ್ಣದ ಗೆಣಸಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದ್ದು, ಪ್ರತಿ ಕೆಜಿಗೆ 30 ರೂ.ಲಭಿಸುತ್ತಿದೆ. ಒಂದು ಹೆಕ್ಟೇರ್‌ಗೆ 20-30 ಟನ್‌ನಷ್ಟು ಬೆಳೆಯುವ ಶ್ರೀಭದ್ರಾ ತಳಿಯನ್ನು ಧಾರವಾಡದ ಗೆಡ್ಡೆ-ಗೆಣಸು ಸಂಶೋಧನಾ ಕೇಂದ್ರ ಉತ್ಪಾದಿಸಿ ರೈತರಿಗೆ ನೀಡಿದೆ. ಕಳೆದ ವರ್ಷ ನೂರು ರೈತರು ಇದನ್ನು ಬೆಳೆದಿದ್ದಾರೆ. ಮುಂದಿನ ವರ್ಷಕ್ಕೆ ಆಯ್ದ ಸಾವಿರ ರೈತರಿಗೆ ಗೆಣಸು ಬೀಜ ಪೂರೈಕೆಗೆ ಕೇಂದ್ರ ಚಿಂತನೆ ನಡೆಸಿದೆ. ಅಲ್ಲದೆ, ಇಲ್ಲಿ ಬೆಳೆದ ಗೆಣಸನ್ನು ನೇರವಾಗಿ ಕಂಪನಿಯೇ ಕೊಂಡುಕೊಳ್ಳಲು ಸಿದ್ಧವಾಗಿದೆ.
52 ಶ್ರೇಷ್ಠ ತಳಿಗಳ ಸಂಗ್ರಹ: ದೇಶದಲ್ಲಿರುವ ವಿಭಿನ್ನ ಬಗೆಯ 139 ತಳಿಯ ಗೆಡ್ಡೆ-ಗೆಣಸುಗಳನ್ನು ಇಲ್ಲಿ ಪ್ರಯೋಗಾತ್ಮಕವಾಗಿ ಬೆಳೆದು, ಅದರ ಬೀಜ ಸಂಗ್ರಹಿಸಲಾಗುತ್ತಿದೆ. ಜತೆಗೆ, ಈ ಕುರಿತು ಸಂಶೋಧನೆ ಕೂಡ ನಡೆಯುತ್ತಿದೆ. ಈ ಪೈಕಿ 4 ವರ್ಷಗಳಲ್ಲಿ (ಹೆಕ್ಟೇರ್‌ಗೆ 20 ಟನ್‌ಗೂ ಅಧಿಕ ಇಳುವರಿ ನೀಡುವ ತಳಿಗಳನ್ನು)ಉತ್ತಮ ಇಳುವರಿ ಮತ್ತು ಉತ್ತಮ ಪೋಷಕಾಂಶಗಳಿರುವ 52 ಅತ್ಯುತ್ತಮ ತಳಿಗಳನ್ನು ಆಯ್ಕೆ ಮಾಡಿ, ರೈತರಿಗೆ ಬೆಳೆಯಲು ನೀಡಲಾಗುತ್ತಿದೆ.
ಪಟಾಕಿಗೆ ಗೆಣಸಿನ ಪುಡಿ: ಪರಿಸರ ಸಂರಕ್ಷಣೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಟಾಕಿ, ನೈಸರ್ಗಿಕ ಬಣ್ಣಗಳ ತಯಾರಿಕೆಗೆ ಗೆಣಸಿನ ಪುಡಿ ಬಳಸುವ ಯತ್ನ ನಡೆಯುತ್ತಿದೆ. ಸಾಬೂನು ಪುಡಿ ಮತ್ತು ಇಸ್ತ್ರಿ ಬಟ್ಟೆಗಳಿಗೆ ಬಳಸುವ ಸ್ಟಾರ್ಚ್ ಅಂದರೆ, ಗಂಜಿಯ ಪುಡಿ, ಸೂಪ್ ಮತ್ತು ಸಾಬುದಾನಿ ತಯಾರಿಕೆ, ಪಿಸ್ತಾ ಸಿದ್ಧಗೊಳಿಸಿ ಅದನ್ನು ಔಷಧಿಗಳ ತಯಾರಿಕೆಗೆ ಬಳಸಿಕೊಳ್ಳುವುದು, ರಟ್ಟು ಮತ್ತು ದಪ್ಪ ಕಾಗದ ತಯಾರಿಕೆಗೆ ಬಳಸಿಕೊಳ್ಳುವುದು, ಬಟ್ಟೆ ತಯಾರಿಕಾ ಕಂಪನಿಗಳಲ್ಲಿ ರಾಸಾಯನಿಕಗಳಿಗೆ ಬದಲಾಗಿ ಗೆಣಸಿನ ಪುಡಿ ಬಳಕೆ, ಪರಿಸರಸ್ನೇಹಿ ಪಟಾಕಿಗಳ ಬಳಕೆಗೆ ಸಹಕಾರಿಯಾಗುವಂತೆ ಗೆಣಸನ್ನು ಅಭಿವೃದ್ಧಿಗೊಳಿಸಲು ಧಾರವಾಡದ ಗೆಡ್ಡೆ ಗೆಣಸು ಸಂಶೋಧನಾ ಕೇಂದ್ರ ತನ್ನ ಸಂಶೋಧನೆಗಳನ್ನು ಮುಂದುವರಿಸಿದೆ.
ಅಮೆರಿಕಕ್ಕೆ ನೆಗೆದ ನೇರಳೆ ಗೆಣಸು: ಭಾರತೀಯ ಆಹಾರ ಪದ್ಧತಿಯಲ್ಲಿ ನಂಬಿಕೆ ಇಟ್ಟಿರುವ ಅಮೆರಿಕನ್ನರು ಕೂಡ ಇಲ್ಲಿನ ಗೆಡ್ಡೆ-ಗೆಣಸಿಗೆ ಮನಸೋತಿದ್ದಾರೆ. 2018ರಲ್ಲಿ ಇದೇ ಕೇಂದ್ರದಲ್ಲಿ ಸಂಗ್ರಹಿಸಿಟ್ಟಿದ್ದ ನೇರಳೆ ತಿರುಳು ಬರುವ ಬಣ್ಣದ ಗೆಣಸೊಂದನ್ನು ಅಮೆರಿಕ ಮೂಲದ ಸಂಶೋಧನಾ ಕಂಪನಿ ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಲಕ್ಷ, ಲಕ್ಷ ಹಣ ಕೊಟ್ಟು ಕೊಂಡುಕೊಂಡಿದೆ. ಅಲ್ಲಿನ ಆಹಾರ ಪೂರೈಕೆ ಕಂಪನಿಯೊಂದು ಇದನ್ನು ಬೆಳೆಸುತ್ತಿದ್ದು, ಇದೇ ಕೇಂದ್ರದಿಂದ ಆರೇಂಜ್ ಮತ್ತು ಅತಿ ಬಿಳಿ ಬಣ್ಣದ ಗೆಣಸಿಗೂ ಬೇಡಿಕೆ ಇಟ್ಟಿದೆ.
ಗೆಣಸು ಬೆಳೆಯುವ ರೈತರಿಗೆ ಉತ್ತಮ ಬೆಳೆ, ಬೆಲೆ ಕೊಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಕರ್ನಾಟಕದ ಗೆಣಸನ್ನು ಇಂಗ್ಲೆಂಡ್, ಅಮೆರಿಕ, ಕೆನಡಾದವರು ಹೆಚ್ಚು ಇಷ್ಟಪಡುತ್ತಿದ್ದಾರೆ. ನಮ್ಮವರೂ ನಮ್ಮ ಮೂಲ ಆಹಾರ ತಿನ್ನಬೇಕು ಎನ್ನುವುದು ನಮ್ಮ ಕಾಳಜಿ.
-ಡಾ| ರಾಮಚಂದ್ರ ನಾಯಕ, ಮುಖ್ಯಸ್ಥರು, ಗೆಡ್ಡೆ-ಗೆಣಸು ಸಂಶೋಧನಾ ಕೇಂದ್ರ, ಧಾರವಾಡ
ಕೃಪೆ:ಉದಯವಾಣಿ